ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ನಿಲ್ದಾಣಕ್ಕೆ ಮಹಾತ್ಮ ಗಾಂಧಿ ಸ್ಪರ್ಶ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಮ್ಮ ಮೆಟ್ರೊ~ ರೈಲಿನ ಮೂಲಕ ನಗರದ ಎಂ.ಜಿ.ರಸ್ತೆ ನಿಲ್ದಾಣಕ್ಕೆ ಬಂದಿಳಿದರೆ ನಿಮಗೆ ರಾಷ್ಟ್ರಧ್ವಜಗಳ ರಾಶಿಯೇ ಗೋಚರಿಸಲಿದೆ. ಇದೇನಿದು ರಾಷ್ಟ್ರಧ್ವಜಗಳು ರೈಲು ನಿಲ್ದಾಣದಲ್ಲಿ ಎಂದು ಅಚ್ಚರಿಯಾಗಬಹುದು. ಆದರೆ ಈ ಅಚ್ಚರಿ ನವೆಂಬರ್ ಕೊನೆಯ ವಾರದಲ್ಲಿ ವಾಸ್ತವ ರೂಪಕ್ಕಿಳಿಯಲಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಮತ್ತು ಹುಬ್ಬಳ್ಳಿ ತಾಲ್ಲೂಕಿನ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘಗಳು ಜಂಟಿಯಾಗಿ ಒಪ್ಪಂದವೊಂದಕ್ಕೆ ಬಂದಿದ್ದು, ಮಹಾತ್ಮ ಗಾಂಧಿ ರಸ್ತೆಯ ಈ ನಿಲ್ದಾಣದಲ್ಲಿ ಖಾದಿ ರಾಷ್ಟ್ರಧ್ವಜಗಳ ಪ್ರದರ್ಶನ ಮತ್ತು ಮಾರಾಟ ಘಟಕವನ್ನು ಸ್ಥಾಪಿಸಿ ಗಾಂಧೀಜಿಯವರ ಸ್ವಾವಲಂಬನೆ ತತ್ವದ ಪ್ರತೀಕವಾದ ಚಕದ ಮಹತ್ವ ತಿಳಿಸಲು ಮುಂದಾಗಿವೆ. 

ಅಕ್ಟೋಬರ್ 5ರಂದು ಬಿಎಂಆರ್‌ಸಿಎಲ್‌ನ ಪ್ರಧಾನ ವ್ಯವಸ್ಥಾಪಕ (ಹಣಕಾಸು) ಯು.ವಿ.ವಸಂತರಾವ್ ಮತ್ತು ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಕಾರ್ಯದರ್ಶಿ ವಿ.ಟಿ.ಹುಡೇದ ಅವರು ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿದ್ದು, ನಿಗಮವು ನಿಲ್ದಾಣದ ಒಂದು ಭಾಗವನ್ನು ರಾಷ್ಟ್ರಧ್ವಜ ಮಾರಾಟ ಮಳಿಗೆ ತೆರೆಯಲು ಉಚಿತವಾಗಿ ನೀಡಲಿದೆ.
 
ಇದು ಮೂರು ವರ್ಷಗಳ ಆರಂಭಿಕ ಅವಧಿಯ ಒಪ್ಪಂದವಾಗಿದ್ದು, ಕಾಲಕಾಲಕ್ಕೆ ನಿಯಮಕ್ಕೊಳಪಟ್ಟು ಇದರ ಅವಧಿಯನ್ನು ನವೀಕರಿಸುವ ಉದ್ದೇಶವನ್ನು ಹೊಂದಲಾಗಿದೆ. ಅಕ್ಟೋಬರ್ 20ರಿಂದ ರೀಚ್ 1ರಲ್ಲಿ (ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿ) ಮೆಟ್ರೊ ರೈಲು ತನ್ನ ಓಡಾಟವನ್ನು ಆರಂಭಿಸಲಿದೆ.

ಒಪ್ಪಂದ ಏರ್ಪಟ್ಟ ದಿನದಿಂದ ಎಂಟು ವಾರಗಳ ಒಳಗಾಗಿ ರಾಷ್ಟ್ರಧ್ವಜ ಮಾರಾಟ ಕೇಂದ್ರ ಆರಂಭವಾಗಬೇಕು ಎಂದು ಒಪ್ಪಂದದಲ್ಲಿ ಸೂಚಿಸಲಾಗಿದ್ದು, ನವೆಂಬರ್ ಕೊನೆಯ ವಾರದಲ್ಲಿ ಆರಂಭವಾಗುವ ಸಂಭವವಿದೆ.


ಆ ಮೂಲಕ ಎಂ.ಜಿ.ರಸ್ತೆಯಲ್ಲಿ ಮಹಾತ್ಮರ ಆದರ್ಶವಾದ ಚರಕ ಮತ್ತು ಅದರ ಉತ್ಪನ್ನದ ಬಗ್ಗೆಯೂ ಪ್ರಯಾಣಿಕರಲ್ಲಿ ತಿಳಿವಳಿಕೆ ಮೂಡಿದಂತಾಗುತ್ತದೆ ಎಂಬ ನಂಬಿಕೆಯನ್ನು ನಿಗಮ ಮತ್ತು ಸಂಘಗಳು ಹೊಂದಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT