ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಪರಿಶೀಲನೆ ಅಂತ್ಯ

Last Updated 8 ಸೆಪ್ಟೆಂಬರ್ 2011, 19:40 IST
ಅಕ್ಷರ ಗಾತ್ರ

ಬೆಂಗಳೂರು: ರೈಲ್ವೆ ಸುರಕ್ಷತಾ ಆಯುಕ್ತ ದೀಪಕ್‌ಕುಮಾರ್ ಸಿಂಗ್ ನೇತೃತ್ವದ ತಜ್ಞ ಅಧಿಕಾರಿಗಳ ತಂಡ ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗಿನ `ನಮ್ಮ ಮೆಟ್ರೊ~ದ ರೀಚ್-1ರ ಮಾರ್ಗದಲ್ಲಿನ ಪರಿಶೀಲನಾ ಕಾರ್ಯವನ್ನು ಗುರುವಾರ ಪೂರ್ಣಗೊಳಿಸಿತು. ಆದರೆ, `ನಮ್ಮ ಮೆಟ್ರೊ~ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಕುರಿತ ನಿರ್ಧಾರ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.

ಮೆಟ್ರೊ ಮಾರ್ಗದ ಪರಿಶೀಲನಾ ಕಾರ್ಯ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಇನ್ನು ಮೂರ್ನಾಲ್ಕು ದಿನಗಳಲ್ಲಿ ವರದಿಯನ್ನು ಸಿದ್ಧಪಡಿಸುವ ಮೂಲಕ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಶಿಫಾರಸುಗಳನ್ನೂ ಮಾಡಲಿದ್ದಾರೆ.

`ನಮ್ಮ ಮೆಟ್ರೊ~ದ ರೀಚ್-1ರ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸುವ ಮುನ್ನ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ರೈಲ್ವೆ ಸುರಕ್ಷತಾ ಆಯುಕ್ತರು ಮಾಡುವ ಎಲ್ಲ ಶಿಫಾರಸುಗಳನ್ನು ಒಪ್ಪಬೇಕಾಗುತ್ತದೆ. ಅಲ್ಲದೆ, ಮುಖ್ಯ ರೈಲು ಸುರಕ್ಷತಾ ಆಯುಕ್ತರಿಂದ ಅಂತಿಮವಾಗಿ ಸುರಕ್ಷತಾ ನಿರಾಕ್ಷೇಪಣಾ ಪತ್ರ ಪಡೆಯಬೇಕಿದೆ.

`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ರೈಲ್ವೆ ಸುರಕ್ಷತಾ ಆಯುಕ್ತ ದೀಪಕ್‌ಕುಮಾರ್ ಸಿಂಗ್, `ಯೋಜನೆಯಲ್ಲಿ ತಂಡವು ಕೆಲವು ನ್ಯೂನತೆಗಳನ್ನು ಪತ್ತೆ ಮಾಡಿದೆ. ಸಾರ್ವಜನಿಕ ಸಂಚಾರಕ್ಕೆ ಮೆಟ್ರೊ ರೈಲನ್ನು ಮುಕ್ತಗೊಳಿಸುವ ಮುನ್ನ ಈ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕಿದೆ~ ಎಂದರು.

`ಮಾರ್ಗದ ತಿರುವುಗಳಲ್ಲಿ ಸಂಚರಿಸುವಾಗ ರೈಲು ಗಾಡಿಗಳ ವೇಗವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಅಗತ್ಯವಿದೆ. ಇವೇ ಮೊದಲಾದ ಸೂಚನೆಗಳನ್ನು  ನಿಗಮಕ್ಕೆ ಕೊಡಲಾಗುವುದು~ ಎಂದು ಅವರು ತಿಳಿಸಿದರು.

ರೈಲು ಸುರಕ್ಷತಾ ವ್ಯವಸ್ಥೆ, ಸಿಗ್ನಲ್, ವೇಗ ಪರೀಕ್ಷೆ ಮತ್ತಿತರ ವ್ಯವಸ್ಥೆಗಳನ್ನು ಸಿಂಗ್ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಪರಿಶೀಲನೆ ನಡೆಸಿತು. ರೈಲ್ವೆ ಸುರಕ್ಷತಾ ಆಯುಕ್ತರ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದರ ಜತೆಗೆ, ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರಿಂದ ನಿರಾಕ್ಷೇಪಣಾ ಪತ್ರ ಪಡೆದ ನಂತರವಷ್ಟೇ ಬಿಎಂಆರ್‌ಸಿಎಲ್ ರೈಲು ಸಂಚಾರ ಆರಂಭಿಸುವ ಕುರಿತು ದಿನಾಂಕ ನಿಗದಿಪಡಿಸಬಹುದು.

ಇದಲ್ಲದೆ, ರೈಲ್ವೆ ಮಂಡಳಿ ಕೂಡ `ನಮ್ಮ ಮೆಟ್ರೊ~ ರೈಲು ಸಂಚಾರ ಮುಕ್ತಗೊಳಿಸುವ ಕುರಿತು ಘೋಷಣೆ ಮಾಡಬೇಕಿದೆ. ಈ ಪ್ರಕ್ರಿಯೆ ಅಂತಿಮಗೊಳ್ಳಬೇಕಾದರೆ ರೈಲ್ವೆ ಸುರಕ್ಷತಾ ಆಯುಕ್ತರು ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಶಿಫಾರಸು ವರದಿ ಸಲ್ಲಿಸಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT