ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ: ಬಲೂನು ನಿಷಿದ್ಧ; ಮದ್ಯಕ್ಕಿಲ್ಲ ನಿರ್ಬಂಧ!

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಮ್ಮ ಮೆಟ್ರೊ~ ನಿಲ್ದಾಣದೊಳಗೆ ನೀವು ನಿಮ್ಮ ಮಕ್ಕಳ ಬಲೂನನ್ನು ಕೊಂಡೊಯ್ಯಲು ಸಾಧ್ಯವಾಗದಿರಬಹುದು. ಆದರೆ ಮದ್ಯದ ಬಾಟಲಿಕೊಂಡೊಯ್ದರೆ ಕೇಳುವವರೇ ಇಲ್ಲ!

 ಇದು ಸೋಜಿಗ ಅನಿಸಿದರೂ ಅಕ್ಷರಶಃ ಸತ್ಯ. ಪತ್ರಿಕಾ ಪ್ರತಿನಿಧಿ ಬ್ಯಾಗ್‌ನಲ್ಲಿ ಮೆಟ್ರೊ ನಿಲ್ದಾಣದೊಳಗೆ ಬಿಯರ್ ಬಾಟಲಿ ಕೊಂಡೊಯ್ದು ಹೊರಬರುವ ಮೂಲಕ `ನಮ್ಮ ಮೆಟ್ರೊ~ದ ಭದ್ರತಾ ವೈಫಲ್ಯ ಅನಾವರಣಗೊಳಿಸಿದ್ದಾರೆ.

  ಇಷ್ಟಕ್ಕೂ ಈ `ರಿಯಾಲಿಟಿ ಚೆಕ್~ ನಡೆದದ್ದು ಹೀಗೆ. 36 ವರ್ಷದ ಸರ್ಜಿತ್ ಎಂಬ ಮಹಿಳೆ ತನ್ನ 6 ವರ್ಷದ ಮಗ ಜೋಶುವಾಗೆ ಮನೆಯಿಂದ ತಂದಿದ್ದ ಬಲೂನನ್ನು ರೈಲಲ್ಲಿ ಕೊಂಡೊಯ್ಯಲು ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ. ಆದರೆ ತನ್ನ ಕಣ್ಣೆದುರೇ ವ್ಯಕ್ತಿಯೊಬ್ಬರಿಗೆ ಬಿಯರ್ ಬಾಟಲಿ ತರಲು ಅವಕಾಶ ನೀಡಲಾಯಿತೆಂಬುದು ಆಕೆಯ ಆರೋಪ. ಇದು ನಿಜವೋ ಅಥವಾ ಸುಳ್ಳೋ ಎಂದು ಖಚಿತಪಡಿಸಿಕೊಳ್ಳಲು ಪತ್ರಿಕಾ ಪ್ರತಿನಿಧಿ `ರಿಯಾಲಿಟಿ ಚೆಕ್~ ನಡೆಸಿದಾಗ ಮೆಟ್ರೊ ನಿಲ್ದಾಣ ಭದ್ರತಾ ವೈಫಲ್ಯ ಎದ್ದು ಕಂಡಿತು. ಪ್ರತಿನಿಧಿಯು ಮದ್ಯದ ಬಾಟಲಿ ಬ್ಯಾಗ್‌ನೊಳಗಿಟ್ಟುಕೊಂಡು ಮೆಟ್ರೊ ನಿಲ್ದಾಣ ಪ್ರವೇಶಿಸಿದಾಗ ಬ್ಯಾಗ್ ಪರಿಶೀಲಿಸಿದ ನಂತರವೂ ಭದ್ರತಾ ಸಿಬ್ಬಂದಿ ಸಲೀಸಾಗಿ ಒಳ ಪ್ರವೇಶಿಸಲು ಅವಕಾಶ ನೀಡಿದರು.

ಹೊಸ ವರ್ಷದ ಅಂಗವಾಗಿ ಭಾನುವಾರ ಮೆಟ್ರೊ ನಿಲ್ದಾಣದಲ್ಲಿ ಪ್ರಯಾಣಿಕರ ನೂಕುನುಗ್ಗಲು ಹೆಚ್ಚಿತ್ತು.

ಜನದಟ್ಟಣೆಯನ್ನು ನಿಯಂತ್ರಿಸುವುದಕ್ಕಾಗಿ ಬಿಎಂಆರ್‌ಸಿಎಲ್  ಹೆಚ್ಚುವರಿ ಸಿಬ್ಬಂದಿಯನ್ನೂ ನಿಯೋಜಿಸಿಕೊಂಡಿತ್ತು. ಆದರೂ ಟಿಕೆಟ್ ಖರೀದಿಸುವುದಕ್ಕಾಗಿ ಪ್ರಯಾಣಿಕರು ಉದ್ದನೆಯ `ಕ್ಯೂ~ನಲ್ಲಿ ನಿಂತ ದೃಶ್ಯ ಕಂಡು ಬಂದಿತು. ಇದರಿಂದ ಪ್ರವೇಶ ದ್ವಾರದಲ್ಲಲ್ಲದೆ ಬೇರೆ ಕಡೆಗಳಿಂದ ನಿಲ್ದಾಣದೊಳಗೆ ನುಸುಳುವ ಪ್ರಯಾಣಿಕರನ್ನು ನಿಯಂತ್ರಿಸಲು ನಿಲ್ದಾಣದ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಇಂತಹ ನೂಕು ನುಗ್ಗಲಿನ ಮಧ್ಯೆ ಲಗೇಜು ಬ್ಯಾಗ್‌ಗಳನ್ನು ಕೂಲಂಕಷವಾಗಿ ತಪಾಸಣೆಗೊಳಪಡಿಸಲು ಸಿಬ್ಬಂದಿಗೆ ಅಸಾಧ್ಯ ಎನಿಸಿತು.

 ಹೀಗಾಗಿ ನಿಲ್ದಾಣಕ್ಕೆ ಆಕ್ಷೇಪಣಾರ್ಹ ವಸ್ತುಗಳನ್ನು ಪ್ರಯಾಣಿಕರು ತಂದರೂ ಭದ್ರತಾ ಮಹಿಳೆ ಕಂಪ್ಯೂಟರ್‌ನಲ್ಲಿ ಕೂಲಂಕಷ ಪರಿಶೀಲಿಸಲು ಸಾಧ್ಯವಾಗಲಿಲ್ಲ.ಒಂದು ವೇಳೆ ಕಂಪ್ಯೂಟರ್ ಪರದೆ ಮೇಲೆ ಅಪಾಯದ ವಸ್ತುಗಳು ಕಂಡು ಬಂದರೂ ಸೂಕ್ಷ್ಮ ಗಮನಿಸಲು ಅವಕಾಶ ಅಥವಾ ಪರಿಸ್ಥಿತಿಯೂ ಇರಲಿಲ್ಲ. ಹೀಗಾಗಿ ನೂಕುನುಗ್ಗಲಿನ ಜನಸಂದಣಿ ವೇಳೆ ಯಾರು ಬೇಕಾದರೂ ಭದ್ರತಾ ಸಿಬ್ಬಂದಿ ಗಮನಕ್ಕೆ ಬಾರದೆ ಅಪಾಯಕಾರಿ ವಸ್ತುಗಳನ್ನು ಮೆಟ್ರೊ ನಿಲ್ದಾಣಕ್ಕೆ ಕೊಂಡೊಯ್ಯಬಹುದು ಎಂಬುದು ಸಾಬೀತಾಯಿತು.

  ಬಿಯರ್ ಬಾಟಲಿ ಮೆಟ್ರೊ ನಿಲ್ದಾಣ ಭದ್ರತಾ ವ್ಯವಸ್ಥೆ ಪರಿಶೀಲಿಸಲು ಪತ್ರಿಕೆ ನಡೆಸಿದ ಒಂದು `ರಿಯಾಲಿಟಿ ಚೆಕ್~ ಅಷ್ಟೆ.ಆದರೆ ಬೆಂಕಿ ಹೊತ್ತಿಕೊಳ್ಳುವಂಥ ಅಪಾಯಕಾರಿ ದ್ರವರೂಪದ ಬಾಟಲಿಗಳನ್ನೂ ಮೆಟ್ರೊ ನಿಲ್ದಾಣದೊಳಗೆ ಕೊಂಡೊಯ್ದರೂ ಕೇಳುವವರೇ ಇಲ್ಲ ಎಂಬುದು ಕೂಡ ಸ್ಪಷ್ಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT