ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ರೀಚ್-1: ಕನಿಷ್ಠ ರೂ 10, ಗರಿಷ್ಠ ರೂ 15

Last Updated 20 ಜನವರಿ 2011, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗಿನ 6.7 ಕಿ.ಮೀ. ಉದ್ದದ ರೀಚ್- 1ರ ಮಾರ್ಗದಲ್ಲಿ ಸಂಚರಿಸುವ ‘ನಮ್ಮ ಮೆಟ್ರೊ’ದ ರೈಲಿನಲ್ಲಿ ಪ್ರಯಾಣ ದರ ಕನಿಷ್ಠ ರೂ 10 ಮತ್ತು ಗರಿಷ್ಠ ರೂ 15 ಇರಲಿದೆ’.

ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಉಪ ಸಮಿತಿ ಶಿಫಾರಸು ಮಾಡಿರುವ ಈ ದರ ಪಟ್ಟಿಗೆ ನಿಗಮದ ಆಡಳಿತ ಮಂಡಳಿ ಒಪ್ಪಿಗೆ ನೀಡಿದ್ದು, ಅಂತಿಮ ಪ್ರಕಟಣೆಯಷ್ಟೇ ಬಾಕಿ ಉಳಿದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ತಿಂಗಳ 24ರಿಂದ ಪರೀಕ್ಷಾರ್ಥ ಸಂಚಾರ ಆರಂಭಿಸಲಿರುವ ಮೆಟ್ರೊ ರೈಲು, ಮಾರ್ಚ್ ಎರಡನೇ ವಾರದಿಂದ ವಾಣಿಜ್ಯ ಸಂಚಾರ ಆರಂಭಿಸುವ ನಿರೀಕ್ಷೆ ಇದೆ. ಮೆಟ್ರೊ ರೈಲು ಮತ್ತು ನಗರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ‘ಮೆಟ್ರೊ ಬಸ್ ಟಿಕೆಟ್’ (ಎಂಬಿಟಿ) ಹೆಸರಿನ ದೈನಿಕ ಪಾಸ್‌ಗಳನ್ನು ಪರಿಚಯಿಸಲಿದ್ದು, ಈ ಸಂಬಂಧ ಪರಸ್ಪರ ಒಡಂಬಡಿಕೆ ಪತ್ರಕ್ಕೆ ಬಿಎಂಆರ್‌ಸಿಎಲ್ ಮತ್ತು ಬಿಎಂಟಿಸಿ ಮುಖ್ಯಸ್ಥರು ಜ. 24ರಂದು ಸಹಿ ಹಾಕಲಿದ್ದಾರೆ.

ಮೆಟ್ರೊ ರೈಲಿನ ಜತೆ ಸಾಮಾನ್ಯ ನಗರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಲು ರೂ 70 ಮೌಲ್ಯದ ಎಂಬಿಟಿ ಹಾಗೂ ವೋಲ್ವೊ ಸೇರಿದಂತೆ ಎಲ್ಲ ನಗರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಲು ರೂ 110 ಮೌಲ್ಯದ ಎಂಬಿಟಿ ಪಡೆದುಕೊಳ್ಳಬೇಕಾಗುತ್ತದೆ.

ಭರದ ಸಿದ್ಧತೆ: ಬಿಎಂಆರ್‌ಸಿಎಲ್ ವಕ್ತಾರ ಬಿ.ಎಲ್.ಯಶವಂತ್ ಚವಾಣ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸೋಮವಾರ (ಜ. 24) ರೀಚ್- 1ರ ಮಾರ್ಗದಲ್ಲಿ ಪರೀಕ್ಷಾರ್ಥ ರೈಲು ಸಂಚಾರ ನಡೆಯಲಿದ್ದು, ಅಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ನಗರಾಭಿವೃದ್ಧಿ ಸಚಿವ ಕಮಲ್‌ನಾಥ್ ಖುದ್ದು ಹಾಜರಿದ್ದು ಪರಿಶೀಲಿಸಲಿದ್ದಾರೆ’ ಎಂದರು.

‘ಮಾರ್ಚ್ ಎರಡನೇ ವಾರದಲ್ಲಿ ಅಧಿಕೃತವಾಗಿ ಮೆಟ್ರೊ ರೈಲಿನ ಸಂಚಾರ ಉದ್ಘಾಟನೆ ಆಗುವವರೆಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ’ ಎಂದು ಅವರು ತಿಳಿಸಿದರು.

‘ರೀಚ್- 1ರ ಮಾರ್ಗದಲ್ಲಿ ಹಳಿಗಳಿಗೆ ವಿದ್ಯುತ್ ಪೂರೈಸುವ ಥರ್ಡ್ ರೈಲ್ ಅಳವಡಿಕೆ ಸೇರಿದಂತೆ ಅಂತಿಮ ಹಂತದ ಕಾಮಗಾರಿಗಳು ಶುಕ್ರವಾರ ರಾತ್ರಿ ಅಥವಾ ಶನಿವಾರ ಮಧ್ಯಾಹ್ನದೊಳಗೆ ಪೂರ್ಣಗೊಳ್ಳಲಿವೆ. ಸೋಮವಾರದ ಅಧಿಕೃತ ಪರೀಕ್ಷಾರ್ಥ ಸಂಚಾರಕ್ಕೆ ಮುನ್ನ ಐದಾರು ಬಾರಿ ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು’ ಎಂದು ಅವರು ಹೇಳಿದರು.

‘ತಲಾ 3 ಬೋಗಿಗಳನ್ನು ಒಳಗೊಂಡ ಮೂರು ರೈಲು ಗಾಡಿಗಳು ಬೈಯಪ್ಪನಹಳ್ಳಿ ಡಿಪೋದಲ್ಲಿವೆ. ಫೆ. 15ರೊಳಗೆ ಇನ್ನು ಎರಡು ರೈಲು ಗಾಡಿಗಳಿಗೆ ಬೇಕಾದ 6 ಬೋಗಿಗಳು ದಕ್ಷಿಣ ಕೊರಿಯಾದಿಂದ ನಗರಕ್ಕೆ ಬರಲಿವೆ’ ಎಂದು ಅವರು ತಿಳಿಸಿದರು.

‘ಪ್ರಾರಂಭದಲ್ಲಿ ಒಂದು ರೈಲು ಗಾಡಿಯಲ್ಲಿ ಮೂರು ಬೋಗಿಗಳು ಇರಲಿವೆ. ಅದರಲ್ಲಿ ಒಂದು ಸಲ ಸುಮಾರು ಸಾವಿರ ಪ್ರಯಾಣಿಕರು ಸಂಚರಿಸಬಹುದು. ಕ್ರಮೇಣ ಆಯಾ ಮಾರ್ಗದಲ್ಲಿ ಉಂಟಾಗುವ ಬೇಡಿಕೆಗೆ ಅನುಸಾರವಾಗಿ ಬೋಗಿಗಳ ಸಂಖ್ಯೆಯನ್ನು 3ರಿಂದ 6ತನಕ ಹೆಚ್ಚಿಸಲಾಗುವುದು’ ಎಂದು ಅವರು ಹೇಳಿದರು.

‘ಮೆಟ್ರೊ ನಿಲ್ದಾಣಗಳಿಂದ ನಗರದ ವಿವಿಧ ಬಡಾವಣೆಗಳಿಗೆ ಬಿಎಂಟಿಸಿ ಬಸ್ ಸೇವೆ ಆರಂಭಿಸಲಿದೆ. ಈಗಾಗಲೇ  ಮಾರ್ಗಗಳನ್ನು ಗುರುತಿಸಲಾಗಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರೀಚ್- 1ರ ವೆಚ್ಚ ರೂ 1400 ಕೋಟಿ
ಬೆಂಗಳೂರು: ‘ನಮ್ಮ ಮೆಟ್ರೊ’ದ ಕನಸು ಸಾಕಾರಕ್ಕೆ ಆಗಿರುವ ಹಾಗೂ ಆಗಲಿರುವ ವೆಚ್ಚವೆಷ್ಟು?

ಮೊದಲನೇ ಹಂತದಲ್ಲಿ ಒಟ್ಟು 40 ಕಿ.ಮೀ ಉದ್ದದ ಮೆಟ್ರೊ ಮಾರ್ಗ ನಿರ್ಮಾಣದ ಅಂದಾಜು ವೆಚ್ಚ ರೂ 11,609 ಕೋಟಿ.
ಬೆಂಗಳೂರು ಮೆಟ್ರೊ ರೈಲು ನಿಗಮದ ಮೂಲಗಳ ಪ್ರಕಾರ ಪ್ರತಿ ಕಿ.ಮೀ.ಗೆ ಸರಾಸರಿ ನಿರ್ಮಾಣ ವೆಚ್ಚ: ಎತ್ತರಿಸಿದ ಮಾರ್ಗಕ್ಕೆ ರೂ 275 ಕೋಟಿ. ಸುರಂಗ ಮಾರ್ಗಕ್ಕೆ ರೂ 420 ಕೋಟಿ.

ಈಗ ಬಹುತೇಕ ಪೂರ್ಣಗೊಂಡಿರುವ ಸುಮಾರು 6.7 ಕಿ.ಮೀ. ಉದ್ದದ ರೀಚ್- 1ರ ಮಾರ್ಗದ ನಿರ್ಮಾಣಕ್ಕೆ ರೂ 1400 ಕೋಟಿ ವೆಚ್ಚ ಆಗಿದೆ. ಈ ವೆಚ್ಚದಲ್ಲಿ ಐದು ರೈಲುಗಾಡಿಗಳಿಗೆ ರೂ 150 ಕೋಟಿ, ಆರು ನಿಲ್ದಾಣಗಳಿಗೆ ರೂ 250 ಕೋಟಿ, ಎತ್ತರಿಸಿದ ಮಾರ್ಗದ ಸಿವಿಲ್ ಕಾಮಗಾರಿ/ ಜೋಡಿ ಹಳಿ ಮಾರ್ಗ/ ಸಿಗ್ನಲ್, ವಿದ್ಯುತ್ ಮತ್ತಿತರ ವ್ಯವಸ್ಥೆಗಳಿಗೆ ರೂ 1000 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT