ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊಗಿಂತ ವೇಗ, ಕಡಿಮೆ ಪ್ರಯಾಣ ದರ

Last Updated 14 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿ ಮತ್ತು ಸುತ್ತಮುತ್ತಲಿನ ನಗರಗಳ ನಡುವೆ ಮೆಟ್ರೊ ರೈಲಿಗಿಂತ ಹೆಚ್ಚು ವೇಗ ಮತ್ತು ಕಡಿಮೆ ಪ್ರಯಾಣ ದರದಲ್ಲಿ ಸಂಚರಿಸಬಹುದಾದ `ಪ್ರಯಾಣಿಕ ರೈಲು ಸೇವೆ~ (ಕಮ್ಯುಟರ್ ರೈಲ್ ಸರ್ವೀಸ್) ಎಂಬ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ರಾಜ್ಯ ಸರ್ಕಾರದ ನಗರ ಭೂ ಸಾರಿಗೆ ನಿರ್ದೇಶನಾಲಯವು (ಡಲ್ಟ್) ರೂಪಿಸಿದೆ.

ಮುಂಬೈ, ಚೆನ್ನೈ ಮಹಾನಗರಗಳಲ್ಲಿ ಜನಪ್ರಿಯವಾಗಿರುವ ಸ್ಥಳೀಯ ರೈಲು ಅಥವಾ ನಗರ ರೈಲು ಸಾರಿಗೆ ಮಾದರಿಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಇದಕ್ಕೆ ಭಾರಿ ಮೊತ್ತದ ಬಂಡವಾಳವೇನೂ ಬೇಕಿಲ್ಲ. ಅತಿ ಕಡಿಮೆ ಅವಧಿಯಲ್ಲಿ ಅಂದರೆ ಎರಡು ವರ್ಷಗಳಲ್ಲಿ ಈ ಯೋಜನೆಯನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಬಹುದಾಗಿದೆ.

ಈಗಾಗಲೇ ಇರುವ ರೈಲ್ವೆ ಮೂಲ ಸೌಕರ್ಯವನ್ನು ಬಳಸಿಕೊಂಡು ಮಹಾನಗರದ ಒಳಭಾಗ ಹಾಗೂ ಹೊಸೂರು, ಬಂಗಾರಪೇಟೆ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ ಮೊದಲಾದ ನಗರಗಳ ನಡುವೆ ಒಟ್ಟು 405 ಕಿಲೋ ಮೀಟರ್ ಉದ್ದದ ರೈಲ್ವೆ ಸೌಕರ್ಯ ಕಲ್ಪಿಸುವ ಯೋಜನೆ ಇದಾಗಿದೆ.

`ಡಲ್ಟ್~ಗಾಗಿ ಯೋಜನೆಯ ಕರಡು ವರದಿಯನ್ನು ಕೇಂದ್ರ ಸರ್ಕಾರದ `ರೈಲ್ ಇಂಡಿಯಾ ಟೆಕ್ನಿಕಲ್ ಮತ್ತು ಎಂಜಿನಿಯರಿಂಗ್ ಸರ್ವೀಸಸ್~ (ರೈಟ್ಸ್) ಕಂಪೆನಿಯು ಈಗಾಗಲೇ ಸಿದ್ಧಪಡಿಸಿದೆ. ಯೋಜನೆಯ ಅಂತಿಮ ವರದಿಯನ್ನು ಕಂಪೆನಿಯು ಆಗಸ್ಟ್ ಮೊದಲ ವಾರದಲ್ಲಿ ಸಲ್ಲಿಸುವ ನಿರೀಕ್ಷೆ ಇದೆ.

139 ಪುಟಗಳ ಕರಡು ವರದಿಯಲ್ಲಿ ಪ್ರಯಾಣಿಕ ರೈಲು ಸೇವೆಯನ್ನು ಆರಂಭಿಸಬೇಕಾದ ಅಗತ್ಯವನ್ನು ಅಂಕಿ ಅಂಶಗಳ ಸಹಿತ ಪ್ರತಿಪಾದಿಸಲಾಗಿದೆ.

ಮಹಾನಗರದ ಒಳಗೆ ಮತ್ತು ಹೊರವಲಯದಲ್ಲಿ ಮನೆಯಿಂದ ಕೆಲಸದ ಸ್ಥಳ ಅಥವಾ ಕಾಲೇಜುಗಳಿಗೆ ಹೋಗಿ ಬರುವವರಿಗಾಗಿ `ಪ್ರಯಾಣಿಕ ರೈಲು ಸೇವೆ~ಯು ಅತ್ಯಂತ ಅಗ್ಗದ ಮತ್ತು ವಿಶ್ವಾಸಾರ್ಹ ಸಾರಿಗೆ ಸೌಕರ್ಯವಾಗಲಿದೆ. ಉದ್ದೇಶಿತ ಪ್ರಯಾಣಿಕ ರೈಲುಗಳು 70ರಿಂದ 100 ಕಿ.ಮೀ. ದೂರದ ಸ್ಥಳಗಳಿಂದ ನಾಗರಿಕರನ್ನು ಮಹಾನಗರಕ್ಕೆ ಒಂದರಿಂದ ಒಂದೂವರೆ ಗಂಟೆ ಅವಧಿಯಲ್ಲಿ ತಲುಪಿಸಲಿವೆ ಅಥವಾ ಮಹಾನಗರದಿಂದ ಅವರವರ ಸ್ಥಳಗಳಿಗೆ ಕರೆದೊಯ್ಯಲಿವೆ.

ಯೋಜನೆ ಪೂರ್ಣಗೊಂಡರೆ ಎಲ್ಲ ಮಾರ್ಗಗಳಲ್ಲಿ ಪ್ರತಿ 5ರಿಂದ 10 ನಿಮಿಷಕ್ಕೆ ಒಂದರಂತೆ ರೈಲುಗಳು ದಿನದ 24 ಗಂಟೆಗಳ ಕಾಲವೂ ಸಂಚರಿಸಲಿವೆ.

ಮಹಾನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ರಸ್ತೆ ವಿಸ್ತರಣೆ, ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆ, ಹೆಚ್ಚು ಬಸ್‌ಗಳ ಸಂಚಾರ, `ನಮ್ಮ ಮೆಟ್ರೊ~ ಮತ್ತು ಮಾನೊ ರೈಲು ಯೋಜನೆಗಳ ಜಾರಿ- ಮೊದಲಾದ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸದ್ಯ ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳು ಪ್ರತಿ ದಿನ 45 ಲಕ್ಷ ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸುತ್ತಿವೆ. ಲಕ್ಷಾಂತರ ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವಿರುವುದು ರೈಲ್ವೆ ವ್ಯವಸ್ಥೆಗೆ ಮಾತ್ರ.

ಮಹಾನಗರದ ಒಳಭಾಗದಲ್ಲಿರುವ 4 ದಿಕ್ಕುಗಳಲ್ಲಿರುವ ರೈಲು ಮಾರ್ಗಗಳನ್ನು ವರ್ತುಲ ರೈಲ್ವೆ ಮಾರ್ಗದ ಮೂಲಕ ಜೋಡಿಸಬಹುದು. ಇದರಿಂದ ನಗರದ ಒಳಗೂ ರೈಲ್ವೆ ಸೌಕರ್ಯ ದೊರಕಲಿದೆ.

ಯೋಜನೆಯ ಹಿನ್ನೆಲೆ: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸಮಗ್ರ ಸಂಚಾರ ವ್ಯವಸ್ಥೆಗಾಗಿ 2011ರಲ್ಲಿ ವಿಲ್ಬರ್ ಸ್ಮಿತ್ ಅಸೋಸಿಯೇಟ್ಸ್ ಮತ್ತು ರೈಟ್ಸ್ ಕಂಪೆನಿಯಿಂದ ಎರಡು ಪ್ರತ್ಯೇಕ `ಮಾಸ್ಟರ್ ಪ್ಲಾನ್~ಗಳನ್ನು ಸಿದ್ಧಪಡಿಸಲಾಗಿತ್ತು.

ವಿಲ್ಬರ್ ಸ್ಮಿತ್ ಅಸೋಸಿಯೇಟ್ಸ್, ಬೆಂಗಳೂರು ಮಹಾನಗರ ಪ್ರದೇಶ ವ್ಯಾಪ್ತಿಯಲ್ಲಿ ಸಮಗ್ರ ಸಂಚಾರ ವ್ಯವಸ್ಥೆಗಾಗಿ 21 ವರ್ಷಗಳ ಅವಧಿಯಲ್ಲಿ ವಿವಿಧ ಹಂತಗಳಲ್ಲಿ ಕೈಗೊಳ್ಳಬೇಕಾದ ರೂ 73,000 ಕೋಟಿಗಳ ಬೃಹತ್ ಯೋಜನೆ ರೂಪಿ ಸಿತ್ತು. ಇಷ್ಟು ಭಾರಿ ಪ್ರಮಾಣದ ಯೋಜನೆಯಾದರೂ ಅದರಲ್ಲಿ `ಪ್ರಯಾಣಿಕ ರೈಲು ಸೇವೆ~ಯ ಪ್ರಸ್ತಾಪವೇ ಇರಲಿಲ್ಲ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನ ನಡೆಸಿದ ರೈಟ್ಸ್ ಕಂಪೆನಿಯು 161 ಕಿ.ಮೀ. ಉದ್ದದ `ಪ್ರಯಾಣಿಕ ರೈಲು ಸೇವೆ~ಯ ಯೋಜನೆಯನ್ನು ಶಿಫಾರಸು ಮಾಡಿತ್ತು.

ಬೆಂಗಳೂರು ವೇಗವಾಗಿ ಬೆಳವಣಿಗೆ ಹೊಂದುತ್ತಿರುವುದನ್ನು ಗಮನಿಸಿದ `ಡಲ್ಟ್~, ಮತ್ತೊಂದು ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ರೈಟ್ಸ್ ಕಂಪೆನಿಯು ಜೂನ್ ತಿಂಗಳಲ್ಲಿ ಕರಡು  ವರದಿಯನ್ನು ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT