ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಣಗನಹಳ್ಳಿ: ರಸ್ತೆಗಳೇ ಇಲ್ಲ!

Last Updated 25 ಜನವರಿ 2012, 3:30 IST
ಅಕ್ಷರ ಗಾತ್ರ

ಹೊಳೆನರಸೀಪುರ:ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿಯ ದೊಡ್ಡಕಾಡನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಒಂದು ಪುಟ್ಟಗ್ರಾಮ ಮೆಣಗನಹಳ್ಳಿ. ಈ ಗ್ರಾಮದಲ್ಲಿ ಸುಮಾರು 250 ಮನೆಗಳು 1 ಸಾವಿರ ಮೀರಿ ಜನಸಂಖ್ಯೆ.

ಗ್ರಾಮದ ಕೆಲವು ಕುಟುಂಬಗಳು ಜೀವನ ನಿರ್ವಹಣೆಗೆ ಉದ್ಯೋಗ ಅರಸಿಕೊಂಡು ಪರ ಊರಿಗೆ ಹೊಗಿದ್ದಾರೆ. ಒಂದಿಷ್ಟು ಹಣ ಸಂಪಾದಿಸಿ ಮತ್ತೆ ಮೆಣಗನಹಳ್ಳಿಗೆ ಬರುತ್ತಾರೆ. ಗ್ರಾಮದಲ್ಲಿ ಎಲ್ಲವೂ ಹಳೆಯ ಮನೆಗಳು ಕೆಲವು ಬೀಳುವ ಸ್ಥಿತಿಯಲ್ಲಿವೆ. ಜನ ಅಂಥ ಮನೆಗಳಲ್ಲೇ ವಾಸವಿದ್ದಾರೆ. ರಸ್ತೆಗಳೇ ಇಲ್ಲ. (ಈಗ ಇಲ್ಲಿನ ಒಂದು ರಸ್ತೆಗೆ ಮಾತ್ರ ಜಲ್ಲಿ ಹರಡಿದ್ದಾರೆ. ಅದೂಕೂಡ ನಿಯಮದಂತಿಲ್ಲ)

ಗ್ರಾಮದಲ್ಲಿನ ಕೊಳಚೆ ನೀರು ಹರಿಯಲು ಒಂದು ಚರಂಡಿ ಇಲ್ಲ. ಕೊಳಚೆ ನೀರೆಲ್ಲಾ ಮನೆಗಳ ಮುಂದೆಯೇ ಹರಿಯುತ್ತದೆ. `ಊರಿಗೆ ಚಂರಡಿ ಮಾಡಿಸಿ ಎಂದು ನಾವು ಹತ್ತಾರು ಬಾರಿ ಗ್ರಾಮಪಂಚಾಯ್ತಿಯಲ್ಲಿ ಪ್ರಸ್ತಾಪಿ ಸಿದ್ದರೂ ಏನೂ ಪ್ರಯೋಜನವಾಗಿಲ್ಲ~ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯರಾದ ಕುಮಾರ್ ಮತ್ತು ಗುರುಮೂರ್ತಿ.

ನಮ್ಮೂರಲ್ಲಿ ನೀರಿನ ಪೈಪ್ ಒಡೆದು ಎರಡು ವರ್ಷ ಕಳೆಯುತ್ತಾ ಬಂದಿದೆ. ಇದನ್ನು ಸರಿಪಡಿಸಿ ಎಂದು ನಾವು ಹತ್ತಾರು ಬಾರಿ ಕೇಳಿಕೊಂಡಿದ್ದೇವೆ. ಆದರೆ ಇನ್ನೂ ದುರಸ್ತಿ ಆಗಿಲ್ಲ. ಅಂದಿನಿಂದಲೂ ಕೊಳೆಚೆ ನೀರು ಕುಡಿಯುವ ನೀರಿಗೆ ಬೆರೆಯುತ್ತಿದೆ. ಗ್ರಾಮಸ್ಥರೆಲ್ಲ ಅದೇ ನೀರನ್ನು ಕುಡಿಯುತ್ತಿದ್ದೇವೆ ಎನ್ನುತ್ತಾರೆ ಗ್ರಾಮದ ಜನರು.

ನಮ್ಮೂರಲ್ಲಿ ನೀರು ಗಂಟಿ ಸರಿಯಾಗಿ ಕೆಲಸ ಮಾಡಲ್ಲ. ಒಮ್ಮಮ್ಮೆ ಟ್ಯಾಂಕ್ ತುಂಬಿ ಮೇಲಿಂದ ನೀರು ರಾತ್ರಿಯೆಲ್ಲ ಹರಿಯುತ್ತಿದ್ದರೂ ನೀರು ನಿಲ್ಲಿಸಲ್ಲ. ಅವರಿಗೆ ಬೇಕಾದಾಗ ಕುಡಿಯುವ ನೀರು ಬಿಡುತ್ತಾರೆ ಎನ್ನುವ ಆರೋಪ ಇದೆ. ಗ್ರಾಮದಲ್ಲಿ ಕರೆಂಟ್ ಇಲ್ಲದಾಗ ನೀರು ಬಿಡುವ ವೇಳೆ ವ್ಯತ್ಯಾಸವಾಗುತ್ತದೆ ಎನ್ನುತ್ತಾರೆ ಸದಸ್ಯ ಕುಮಾರ್.

ಗ್ರಾಮಕ್ಕೆ ಬರಲು ಎರಡು ಮಾರ್ಗಗಳಿವೆ. ಮೈಸೂರು ರಸ್ತೆ ಕಡೆಯಿಂದ ಮತ್ತು ಲಕ್ಕೂರು ಮಾರ್ಗದ ಕಡೆಯಿಂದ ಆದರೆ ಎರಡೂ ಕಡೆ ಗ್ರಾಮಕ್ಕೆ ಮಾರ್ಗ ಸೂಚಿ ಫಲಕ ಇಲ್ಲ. ಗ್ರಾಮದಲ್ಲಿ ಒಂದು ಉತ್ತಮ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ.
 
ಆದರೆ ಇಲ್ಲಿನ ಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡ ಉದ್ಘಾಟನೆಗೆ ಮುನ್ನವೇ ಸೋರುತ್ತಿದೆ. ಗ್ರಾಮದಲ್ಲಿ ಅನೇಕರಿಗೆ ಉದ್ಯೋಗ ಖಾತರಿ ಯೋಜನೆ ಎಂದರೇನೆಂದು ತಿಳಿದಿಲ್ಲ. ಜಾಬ್ ಕಾರ್ಡ್ ಸಹ ಮಾಡಿಸಿಲ್ಲ. ಆಶ್ರಯ ಮನೆಗಳ ಬಗ್ಗೆ ಇಲ್ಲಿನ ಜನರಿಗೇ ಗೊತ್ತೇ ಇಲ್ಲ.
 
ನಾಲ್ಕೈದು ಮನೆಗಳಲ್ಲಿ ಮಾತ್ರ ಶೌಚಾಲಯ ಇದೆ. ಉಳಿದವರಿಗೆ ಬಯಲೇ ಶೌಚಾಲಯ. ಈ ಗ್ರಾಮಕ್ಕೆ ತಾತನಹಳ್ಳಿ 2 ಕಿ.ಮೀ. ದೂರದಲ್ಲಿದೆ. ದೊಡ್ಡಕಾಡನೂರು 6 ಕಿ.ಮೀ ಇದೆ. ಆದರೆ ಈ ಗ್ರಾಮವನ್ನು ತಾತನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿಸದೆ ದೂರದ ದೊಡ್ಡಕಾಡನೂರು ಗ್ರಾಮ ಪಂಚಾಯ್ತಿಗೆ ಸೇರಿಸಿ ನಮ್ಮೂರಿಗೆ ಯಾವುದೇ ಸೌಲಭ್ಯ ದೊರೆಯ ದಂತಾಗಿದೆ ಎನ್ನುತ್ತಾರೆ ಗ್ರಾಮದ ಯುವಕ ಪುರುಷೋತ್ತಮ್. ಇಲ್ಲಿನ ಸರ್ಕಾರಿ ಶಾಲೆಯ ಜಾಗಕ್ಕೆ ಬೇರೊಬ್ಬರು ಬೇಲಿ ಹಾಕಿಕೊಂಡು ಇದು ನಮ್ಮದೇ ಜಾಗ ಎಂದು ವಾದಿಸುತ್ತಿದ್ದಾರಂತೆ ಇದನ್ನು ಶಾಲೆಗೆ ಬಿಡಿಸಿಕೊಡಲಿ ಎನ್ನುವುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT