ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಣಸಿನಕಾಯಿ ಮೇಳ: ಭರ್ಜರಿ ಆರಂಭ

Last Updated 22 ಜನವರಿ 2011, 9:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಇತಿಹಾಸದಲ್ಲಿಯೇ ಮೊದಲ ಮೆಣಸಿನಕಾಯಿ ಮೇಳ ನೆಹರು ಮೈದಾನದಲ್ಲಿ ಶುಕ್ರವಾರ ಆರಂಭಗೊಂಡಿತು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಇದುವರೆಗೆ ಮೆಣಸಿನಕಾಯಿ ಕುರಿತು ವಿಚಾರ ಸಂಕಿರಣಗಳನ್ನು ಏರ್ಪಡಿಸಿತ್ತು. ಆದರೆ ಮೆಣಸಿನಕಾಯಿ ಮೇಳ ಏರ್ಪಡಿಸಿದ್ದು ಇದೇ ಮೊದಲು.

ಕುತೂಹಲಕ್ಕೆ ನಗರದ ನೆಹರು ಮೈದಾನಕ್ಕೆ ಕಾಲಿಟ್ಟವರು ಖಾಲಿ ಕೈಯಲ್ಲಿ ಹೋದವರೇ ಇಲ್ಲ. ಇದುವರೆಗೆ ಒಂದೊಂದೇ ಕಿಲೋ ಮೆಣಸಿನಕಾಯಿ ಕೊಂಡು ಒಯ್ಯುತ್ತಿದ್ದವರು ಕನಿಷ್ಠ ಮೂರರಿಂದ 10 ಕಿಲೋದವರೆಗೆ ಮೆಣಸಿನಕಾಯಿ ಒಯ್ಯುತ್ತಿರುವುದು ಸಾಮಾನ್ಯವಾಗಿತ್ತು. ‘ಇದರಿಂದ ಮೇಳದ ಮೊದಲ ದಿನವೇ 30 ಕ್ವಿಂಟಲ್ ವ್ಯಾಪಾರವಾಗಿದೆ. ಎಲ್ಲ ರೈತರಿಗೆ ಉಚಿತವಾಗಿ ಮಳಿಗೆ ಕೊಟ್ಟಿದ್ದೇವೆ ಜೊತೆಗೆ ಎಪಿಎಂಸಿಯವರು ಉಚಿತವಾಗಿ ತೂಕ ಹಾಗೂ ಕಲ್ಲುಗಳನ್ನು ಕೊಟ್ಟಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ, ಹುಬ್ಬಳ್ಳಿ, ನವಲಗುಂದ ತಾಲ್ಲೂಕಿನ ರೈತರು ಹಾಗೂ ಗದಗ ಜಿಲ್ಲೆಯ ಅಂತೂರಬೆಂತೂರಿನ ರೈತರು ಮಳಿಗೆಗಳನ್ನು ಹಾಕಿದ್ದಾರೆ’ ಎಂದು ವಿವರಣೆ ನೀಡಿದರು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಉಮೇಶ ಮಿರ್ಜಿ.

ಮೆಣಸಿನಕಾಯಿ ಬೆಳೆದ ರೈತರಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರ ಮಾರಾಟಕ್ಕೆ ಅವಕಾಶ ಒದಗಿಸುವ ಸಲುವಾಗಿ ಹಾಗೂ ಗ್ರಾಹಕರಿಗೆ ನ್ಯಾಯಯುತ ಬೆಲೆಯಲ್ಲಿ ಯೋಗ್ಯ ಮೆಣಸಿನಕಾಯಿ ಒದಗಿಸುವುದಕ್ಕಾಗಿ ಶುರುವಾದ ಮೇಳದಲ್ಲಿ 31 ಮಳಿಗೆಗಳಿವೆ. ಇವು ಶನಿವಾರ 50ಕ್ಕೆ ಏರಲಿವೆ. ಕುಂದಗೋಳ ತಾಲ್ಲೂಕಿನ ಅಲ್ಲಾಪುರದ ಜೈ ಹನುಮಾನ ಸಾವಯವ ಕೃಷಿ ರೈತರ ಸ್ವಸಹಾಯ ಸಂಘ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ಹಳ್ಯಾಳದ ವೀರಸೋಮೇಶ್ವರ ಸ್ವಸಹಾಯ ಸಂಘದ ಸಾವಯವ ಮೆಣಸಿನಕಾಯಿ ಮಾರಾಟವೂ ಅಲ್ಲಿತ್ತು.

ವೈವಿಧ್ಯಮಯ ಮೆಣಸಿನಕಾಯಿ ಕಿಲೋಗೆ 100 ರೂಪಾಯಿದಿಂದ 220 ರೂಪಾಯಿವರೆಗೆ ಮಾರಾಟಕ್ಕೆ ಲಭ್ಯವಿದ್ದು, ಖಾರದಪುಡಿ ಮಾರುವ ನಂದಿ ಮಳಿಗೆಯೂ ಇದೆ. ಜೊತೆಗೆ ಹಸಿಮೆಣಸಿನಕಾಯಿಯ ಉಪ್ಪಿನಕಾಯಿಯನ್ನು 65 ರೂಪಾಯಿ ಕಿಲೋಗೆ ಮಾರುವ ಬೇಲೂರಿನ ಕಮಲ್ ಇಂಡಸ್ಟ್ರೀಜ್ ಮಳಿಗೆ ಜೊತೆಗೆ ಹುಬ್ಬಳ್ಳಿಯ ಗೋಪುನಕೊಪ್ಪದ ಸಿದ್ಧೇಶ್ವರ ರೈತ ಮಹಿಳೆಯರ ಸ್ವಸಹಾಯ ಸಂಘದವರು ಮೆಣಸಿನಕಾಯಿಯಿಂದ ಮಾಡಿದ ರಂಜಕವೂ ಮಾರಾಟಕ್ಕಿತ್ತು.

ಇವುಗಳೊಂದಿಗೆ ಧಾರವಾಡದ ಸರ್ಪನ್ ಹೈಬ್ರೀಡ್ ಸೀಡ್ಸ್ ಕಂಪೆನಿಯ ವಿವಿಧ ಮೆಣಸಿನ ತಳಿಗಳ ಪ್ರದರ್ಶನ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹಸಿರುಮನೆಯಲ್ಲಿ ಬೆಳೆದ ಕೆಂಪು, ಹಳದಿ ಹಾಗೂ ಹಸಿರು ಬಣ್ಣದ ಡೊಣ್ಣಮೆಣಸಿನಾಯಿ, ಮೆಣಸಿನಕಾಯಿ ಹಾಗೂ ಖಾರದಪುಡಿಯ ಗಾಳಿರಹಿತ ಪ್ಯಾಕಿಂಗ್ ಪರಿಚಯ ಮತ್ತು ಸುಧಾರಿತ ತಳಿಗಳ ಪ್ರದರ್ಶನವಿತ್ತು. ಮೆಣಸಿನಕಾಯಿ ಬೆಳೆಗೆ ಸಂಬಂಧಿಸಿ ಸಮಸ್ಯೆ ಪರಿಹಾರ ಕೊಡಲು ಕೃಷಿ ವಿಶ್ವವಿದ್ಯಾಲಯದ ಡಾ. ಎಸ್.ಜಿ. ಅಂಗಡಿ ಹಾಗೂ ಡಾ.ಆರ್.ಎಂ. ಹೊಸಮನಿ ಮಳಿಗೆಯಲ್ಲಿ ಹಾಜರಿದ್ದರು.

ಒಣಮೆಣಸಿನಕಾಯಿ ಜೊತೆಗೆ ತಾರಿಹಾಳದ ರೈತ ಮಲ್ಲಿಕಾರ್ಜುನ ಗುಳಗಣ್ಣವರ ಹಸಿಮೆಣಸಿನಕಾಯಿ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರು.‘ಮಾರ್ಕೆಟ್‌ನಲ್ಲಿ ಇಷ್ಟೊಂದು ಬೇರೆ ಬೇರೆ ಮೆಣಸಿನಕಾಯಿ ಸಿಗಲ್ಲ. ಈ ಬಗ್ಗೆ ಗೊತ್ತಾ ಯಿತು. ಜೊತೆಗೆ ದರಗಳೂ ಗೊತ್ತಾದವು. ಒಳ್ಳೆಯ ಪ್ರಯೋಗ’ ಎಂದು ಖುಷಿಯಾದರು ಸ್ಟಾಕ್ ಮಾರ್ಕೆಟ್ ಆಡಳಿತಾಧಿಯಾಗಿರುವ, ಮುಂಡ ಗೋಡದ ವಿನುತಾ ಮೋರೆ.‘ಗುಣಮಟ್ಟ, ಯೋಗ್ಯ ದರ ಹಾಗೂ ಸರಿಯಾಗಿ ತೂಕ ಮಾಡಿ ಕೊಡುವುದರಿಂದ ಒಂಬತ್ತು ಕಿಲೋ ತಗೊಂಡೆವು’ ಎಂದು ನಕ್ಕರು ಅಜ್ಜಿ ಶೀಲಾ ದೇವಧರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT