ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಲುದನಿಯ ಮಾತು, ತಲಸ್ಪರ್ಶಿ ಉತ್ತರ

ಸಮ್ಮೇಳನಾಧ್ಯಕ್ಷರ ಜತೆ ಸಂವಾದ
Last Updated 10 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ವಿಜಾಪುರ: ಧ್ವನಿವರ್ಧಕದ ಅಸಹಕಾರ, ಸರ್ಕಾರಿ ನೌಕರರ ಒ.ಒ.ಡಿ ಪತ್ರಕ್ಕಾಗಿ ಗಲಾಟೆ, ಹೀಗೆ ಒಳಗೆ ಬಂದು ಹಾಗೆ ಹೊರಗೆ ಹೋಗುತ್ತಿದ್ದ ಜನಸಾಗರ, ಧ್ವನಿವರ್ಧಕ ಸರಿಹೋಗುವವರೆಗೆ ಸಂವಾದ ನಿಲ್ಲಿಸಿ ಎಂಬ ಜನರ ಹಕ್ಕೊತ್ತಾಯದ ನಡುವೆ ಸಮ್ಮೇಳನಾಧ್ಯಕ್ಷರ ಸಂವಾದ ನಡೆಯಿತು.

`ಸರ್ಕಾರ ಕನ್ನಡ ಶಾಲೆ ಮುಚ್ಚುವುದು ಸರಿಯೇ? ಕಾವೇರಿ ಸಮಸ್ಯೆಗೆ ಪರಿಹಾರವೇನು? ಸ್ತ್ರೀಯರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆಯೇ? ಆಡಳಿತಾತ್ಮಕವಾಗಿ ಕರ್ನಾಟಕವನ್ನು ಇಬ್ಭಾಗ ಮಾಡಿದರೆ ಮಾತ್ರ ಉತ್ತರ ಕರ್ನಾಟಕದ ಅಭಿವೃದ್ಧಿ ಸಾಧ್ಯ, ರಾಜ್ಯ ಇಬ್ಭಾಗವಾದರೂ ಕನ್ನಡಿಗರ ಮನಸ್ಸು ಒಂದಾಗಿಯೇ ಇರಬಹುದಲ್ಲ? ಇಂದಿನ ಯುವಕರು ಗಾಂಧಿ ಆದರ್ಶದಿಂದ ದೂರವಾಗುತ್ತಿದ್ದಾರೆ. ಅವರಿಗೆ ಮೌಲ್ಯ ಶಿಕ್ಷಣ ಕೊಡುವ ಬಗೆ ಯಾವುದು?' ಸಂವಾದದಲ್ಲಿ ತೇಲಿ ಬಂದ ಪ್ರಶ್ನೆಗಳಿವು. `ಪ್ರತಿ ಪ್ರಶ್ನೆಗೂ ಉತ್ತರ ಹೇಳುತ್ತೇನೆ. ತಾರ್ಕಿಕ ಅಂತ್ಯ ಮುಟ್ಟಿಸುತ್ತೇನೆ' ಎಂಬ ಆತ್ಮವಿಶ್ವಾಸದಿಂದ ಕೋ.ಚೆ. ಉತ್ತರ ಹೇಳಿದರು.

- ಕನ್ನಡ ಕಲಿತರೆ ಉದ್ಯೋಗ ಸಿಗುವುದಿಲ್ಲ ಎಂಬ ಕಾರಣಕ್ಕೆ ಪೋಷಕರು ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸುತ್ತಿಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತ ಎಷ್ಟು ಮಂದಿಗೆ ಉದ್ಯೋಗ ಸಿಕ್ಕಿದೆ ಎಂಬ ಮಾಹಿತಿ ಬಹಿರಂಗಪಡಿಸಿದರೆ ಕನ್ನಡ ಶಾಲೆಗೆ ಸೇರುವವರ ಸಂಖ್ಯೆ ಹೆಚ್ಚಾಗಬಹುದು.

- ತಮಿಳುನಾಡಿನ ಶೇ 50ರಷ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯವಿದೆ. ಕರ್ನಾಟಕದಲ್ಲಿ ಈ ಪ್ರಮಾಣ ಶೇ 30. ಈ ವಿಚಾರವನ್ನು ಸಮರ್ಥವಾಗಿ ಸುಪ್ರಿಂ ಕೋರ್ಟ್ ಗಮನಕ್ಕೆ ತರಬೇಕು. ಮೊದಲು ಕುಡಿಯುವ ನೀರು- ನಂತರ ದನಗಳಿಗೆ ನೀರು- ಆಮೇಲೆ ಬೆಳೆಗಳಿಗೆ ನೀರು ಎಂಬ ವಾದವನ್ನು ಅಂಕಿ ಅಂಶಗಳ ಸಮೇತ ಮಂಡಿಸಬೇಕು. ಕಾವೇರಿ ಸಮಸ್ಯೆಗೆ ಅದೊಂದೇ ಪರಿಹಾರ.

- ಬಹಳಷ್ಟು ಸಂದರ್ಭದಲ್ಲಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಕ್ಕಳು ಮರ್ಯಾದೆಗೆ ಅಂಜಿ ಪೊಲೀಸರಿಗೆ ದೂರು ನೀಡುವುದಿಲ್ಲ. ಅಂಥವರಲ್ಲಿ ಸ್ಥೈರ್ಯ ತುಂಬುವುದು ಅಗತ್ಯ. ಮನುಷ್ಯನ ತಲೆ ತೆಗೆಯುವುದಕ್ಕಿಂತ ಹೃದಯದ ಭಾವನೆ ಬದಲಿಸುವುದು ಮುಖ್ಯ. ಅಪರಾಧದ ತೀವ್ರತೆಯನ್ನು ಗಮನಿಸಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು.

- ಉತ್ತರ ಕರ್ನಾಟಕದ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳನ್ನು ಕಡೆಗಣಿಸಿ ದಕ್ಷಿಣ ಕರ್ನಾಟಕದ ಹಾರಂಗಿ- ಹೇಮಾವತಿ ಯೋಜನೆಗಳನ್ನು ರಾಜ್ಯ ಸರ್ಕಾರ ಪೂರ್ಣಗೊಳಿಸಿತು. ಹೀಗಾಗಿಯೇ ಉತ್ತರ ಕರ್ನಾಟಕದ ಜನರಿಗೆ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಭಾವನೆ ಬಂದಿದೆ. ಇದೀಗ 371ನೇ ವಿಧಿಯನ್ವಯ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದೆ.

ಅಲ್ಲಿನವರ ಭಾವನೆ ಬದಲಾಗಿದೆ. ಇಬ್ಭಾಗದ ಮಾತನ್ನು ಆಡುತ್ತಾ ಹಿಂದಕ್ಕೆ ಹೋಗೋದು ಬೇಡ, ಇನ್ನು ಮುಂದಾದರೂ ಮನಸ್ಸು ಬೆಸೆಯುವ ಮಾತನ್ನು ಆಡೋಣ. ಎಲ್ಲ ಕನ್ನಡಿಗರೂ ಮನಸ್ಸಿಗೆ ಪ್ರೇಮದ ಕ್ವಿಕ್ ಫಿಕ್ಸ್ ಹಚ್ಚಿಕೊಂಡು  ಕೂಡಿಬಾಳೋಣ.

- ಇಂದಿನ ಯುವಕರು ನಮಗಿಂತ ಜ್ಞಾನಿಗಳಿದ್ದಾರೆ. ಹೇಗೆ ಬದುಕಬೇಕು? ಎಂಬ ಅವರ ಪ್ರಶ್ನೆಗೆ ಉತ್ತರ ನೀಡುವಂತೆ ನಮ್ಮ ಬದುಕು ಇಲ್ಲ. ಹಣ- ಅಧಿಕಾರದ ಆದರ್ಶವನ್ನೇ ಅವರೆದುರು ಇಟ್ಟಿದ್ದೇವೆ. ನಮಗೆ ಬೇಕಾದ್ದಕ್ಕಿಂತ ಹೆಚ್ಚಿಗೆ ಬಯಸೋದು ಕಳ್ಳತನಕ್ಕೆ ಸಮ ಎಂಬ ಗಾಂಧಿ ವಿಚಾರವನ್ನು ಇನ್ನಾದರೂ ಅರಿತು, ಅದರಂತೆ ಬಾಳಬೇಕು. ಹಿರಿಯರಾದ ನಾವು ಒಳ್ಳೆಯ ಬದುಕು ಬದುಕಿದರೆ ಕಿರಿಯರಾದವರು ಸುಧಾರಿಸುತ್ತಾರೆ. ಡಾ.ವಸುಂಧರ ಭೂಪತಿ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT