ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮೆಷಿನ್ ಮನುಷ್ಯ' ಪ್ರದರ್ಶನ ಆರಂಭ

Last Updated 2 ಸೆಪ್ಟೆಂಬರ್ 2013, 8:23 IST
ಅಕ್ಷರ ಗಾತ್ರ

ಮೈಸೂರು: ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರ `ಮೆಷಿನ್ ಮನುಷ್ಯ' ಚಿತ್ರಕಲಾ ಪ್ರದರ್ಶನ ನಗರದ ಸರಸ್ವತಿಪುರಂನ ಸಬ್‌ರಂಗ್ ಕಲಾ ಗ್ಯಾಲರಿಯಲ್ಲಿ ಭಾನುವಾರ ಆರಂಭವಾಯಿತು.

ಯಂತ್ರಯುಗದಲ್ಲಿ ಮನುಷ್ಯ ಹೇಗೆ ಮುಳುಗಿ ಹೋಗಿದ್ದಾನೆ ಎಂಬುದನ್ನು ಬಾದಲ್ ರಚಿಸಿದ್ದ ಚಿತ್ರಕಲೆಗಳು ಬಿಂಬಿಸಿದವು. ಮಾನವನ ಜೀವನದಲ್ಲಿ ಯಂತ್ರಗಳು ನರನಾಡಿಗಳಂತೆ ಮುಳುಗಿ ಹೋಗಿರುವುದನ್ನು ಚಿತ್ರ ಬಿಂಬಿಸಿತು. ಮತ್ತೊಂದು ಚಿತ್ರದಲ್ಲಿ ಮಹಾನಗರದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು, ಪೈಪ್‌ಲೈನ್‌ಗಳು, ಕೇಬಲ್, ನೀರಿನ ಸಂಪರ್ಕ ಬಿಡಿಸಲಾಗಿತ್ತು. ವೇಗದ ಬದುಕಿನಲ್ಲಿ ಮನುಷ್ಯ ಎಲ್ಲವನ್ನೂ ಮರೆಯುತ್ತಿದ್ದಾನೆ ಎಂಬ ಅಂಶ ಈ ಚಿತ್ರ ಸಾರುವಂತಿತ್ತು. ಹಳ್ಳಿಯಲ್ಲಿ ಸಾಮಾನ್ಯ ರೈತರ ಬದುಕು ಹೇಗೆ ಇರುತ್ತದೆ ಮತ್ತೊಂದು ಚಿತ್ರ ಬಿಂಬಿಸಿತು. ಗ್ಯಾಲರಿಯಲ್ಲಿ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಇದ್ದರೂ ಪ್ರೇಕ್ಷಕರನ್ನು ಅವು ಚಿಂತನೆಗೆ ಹಚ್ಚಿದವು.
ಶಾಸಕ ವಾಸು, ಕಲಾವಿದರಾದ ಕೆ.ಟಿ. ಶಿವಪ್ರಸಾದ್, ಡಾ.ಬಿ.ಎ. ಉಪಾಧ್ಯ, ರಂಗಕರ್ಮಿ ಕೆ. ಮುದ್ದುಕೃಷ್ಣ ಚಿತ್ರ ಪ್ರದರ್ಶನ ವೀಕ್ಷಿಸುವ ಮೂಲಕ ಚಾಲನೆ ನೀಡಿದರು.

ಉಪಾಧ್ಯ ಅವರು ಮಾತನಾಡಿ, `ಯಂತ್ರಗಳು ಎಲ್ಲ ಕಾಲಕ್ಕೂ ಮನುಷ್ಯರ ಮೇಲೆ ಪ್ರಭಾವ ಬೀರುತ್ತವೆ. ಯಂತ್ರಗಳು-ಮಾನವ ಎಂಬ ಪುಸ್ತಕವನ್ನು ಕಲಾವಿದನೊಬ್ಬ ಈ ಹಿಂದೆಯೇ ರಚಿಸಿದ್ದಾನೆ. ಪರಿಸರ ಮನುಷ್ಯನ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಪ್ರಭಾವಕ್ಕೆ ಒಳಗಾದ ಕೆಲವರು ಚಿತ್ರಕಲೆಗಳನ್ನು ಪ್ರದರ್ಶಿಸುತ್ತಾರೆ. ಹೀಗೆಯೇ ಬರಬೇಕು ಎಂದು ಕಲಾವಿದ ಕಲೆಯನ್ನು ರಚಿಸಿದರೆ ಅದು ಆಗುವುದಿಲ್ಲ. ಒಟ್ಟಾರೆ ಚಿತ್ರಕಲೆಯಲ್ಲಿ ಸಮಾಜಕ್ಕೆ ಸಂದೇಶ ಇರಬೇಕು' ಎಂದು ತಿಳಿಸಿದರು.

ಶಿವಪ್ರಸಾದ್ ಮಾತನಾಡಿ, `ನಿರೀಕ್ಷೆ ಇಟ್ಟುಕೊಂಡು ಬಹಳ ದೂರದಿಂದ ಇಲ್ಲಿಗೆ ಬಂದೆ. ಆದರೆ ಚಿತ್ರಕಲೆ ಅಷ್ಟು ಸಮಾಧಾನ ತರಲಿಲ್ಲ. ಮೊದಲು ಮಾಡಿದ್ದ ಪ್ರದರ್ಶನಕ್ಕಿಂತ ಬಾದಲ್ ಹೊಸತನ್ನು ಮಾಡಿರುತ್ತಾನೆ ಅಂದುಕೊಂಡಿದ್ದೆ. ಆದರೆ ಅದು ಬೇರೆಯದೇ ಆಗಿದೆ. ಪೇಂಟಿಂಗ್ ಬೇರೆ ರೀತಿಯಲ್ಲೇ ಇರುತ್ತದೆ. ನಾವು ಬರೆದದ್ದೆಲ್ಲ ಪೇಂಟಿಂಗ್ ಎಂದು ಹೇಳಲಾಗುವುದಿಲ್ಲ. ಪ್ರೇಕ್ಷಕರ ನೋಟ ಬೇರೆಯದ್ದೆ ಆಗಿರುತ್ತದೆ. ಪ್ರೇಕ್ಷಕ ಒಪ್ಪುವುದೇ ನಿಜವಾದ ಚಿತ್ರಕಲೆ' ಎಂದು ಹೇಳಿದರು.

ಬಾದಲ್ ಮಾತನಾಡಿ, `ಈ ಚಿತ್ರಕಲೆಯನ್ನು ಮಾಡಲು ಸಾಕಷ್ಟು ಬೆವರು ಹರಿಸಿದ್ದೇನೆ. ಕಟ್ಟಕಡೆಯ ಮನುಷ್ಯನಿಗೂ ಚಿತ್ರಕಲೆ ತಲುಪಬೇಕು ಎಂಬುದು ನನ್ನ ಉದ್ದೇಶ. ರಾಜಧಾನಿ ಬೆಂಗಳೂರು ದೊಡ್ಡ ನಗರ. ಅಲ್ಲಿ ಒಬ್ಬರನ್ನೊಬ್ಬರು ಮಾತನಾಡಿ ಸುವುದಿಲ್ಲ. ಅವರ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಸ್ನೇಹ-ಪ್ರೀತಿಗೆ ಬೆಲೆ ಇಲ್ಲ. ರೈಲಿನಲ್ಲಿ ಪ್ರಯಾಣ ಮಾಡುವಾಗ ಅವರಷ್ಟಕ್ಕೆ ಅವರು ಇರುತ್ತಾರೆ. ಇವೆಲ್ಲವು ನನ್ನ ತಲೆಯಲ್ಲಿ ಕೊರೆಯುತ್ತಿತ್ತು. ಅಲ್ಲದೇ ಮರಗಳು ಇರಬೇಕಾದ ಜಾಗವನ್ನು ಯಂತ್ರಗಳು (ಕೈಗಾರಿಕೆಗಳು) ನುಂಗಿಹಾಕಿವೆ. ಪ್ರಕೃತಿ ನಾಶ ಆಗುತ್ತಿದೆ. ಮನುಷ್ಯನ ದೈನಂದಿನ ಬದುಕು ಯಂತ್ರಗಳೊಡನೆ ಮೇಳೈಸಿದೆ. ನಾನು ಕಲಿತದ್ದನ್ನು, ತೋಚಿದ್ದನ್ನು ಮಾಡಿದ್ದೇನೆ' ಎಂದು ಹೇಳಿದರು.

ಕೆ. ಮುದ್ದುಕೃಷ್ಣ ಶುಭ ಹಾರೈಸಿದರು. ಸೆ. 5ರವರೆಗೆ ಬೆಳಿಗ್ಗೆ 10.30 ರಿಂದ ರಾತ್ರಿ 8 ಗಂಟೆವರೆಗೆ ಈ ಪ್ರದರ್ಶನ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT