ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಸ್ಸಿ ಎಂಬ ರೋಮಾಂಚನ

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮೆಸ್ಸಿ, ಮೆಸ್ಸಿ...!
ಇಡೀ ನಗರವೇ ಮೆಸ್ಸಿಮಯವಾಗಿ ಹೋಗಿತ್ತು.
ಈ ನಗರವೇ ಹಾಗೇ, ಇದೊಂದು ಕ್ರೀಡಾ ಪ್ರೇಮಿಗಳ ನಗರ. ಪ್ರತಿ ಕ್ರೀಡೆಗೆ ಇಲ್ಲಿ ಸಿಗುವ ಅದ್ಭುತ ಪ್ರತಿಕ್ರಿಯೆಯೇ ಅಚ್ಚರಿ ಮೂಡಿಸುವಂಥದ್ದು.
 
ಸೌರವ್ ಗಂಗೂಲಿ ಅವರನ್ನು ಇಷ್ಟಪಟ್ಟಷ್ಟೇ ಬೈಚುಂಗ್ ಭುಟಿಯಾ ಅವರನ್ನು ಆರಾಧಿಸುತ್ತಾರೆ. ಕ್ರಿಕೆಟ್ ಪಂದ್ಯ ನಡೆದರೇ ಲಕ್ಷ ಜನ ಸೇರುತ್ತಾರೆ. ಫುಟ್‌ಬಾಲ್ ಪಂದ್ಯ ನಡೆದರೇ ಆ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ.

ಅದು `ಸಿಟಿ ಆಫ್ ಜಾಯ್~ ಖ್ಯಾತಿಯ ನಗರಿ ಕೋಲ್ಕತ್ತ. ಈ ನಗರ ಮತ್ತೊಮ್ಮೆ ಗಮನ ಸೆಳೆಯಲು ಕಾರಣ `ಫುಟ್‌ಬಾಲ್ ದೇವರು~ ಖ್ಯಾತಿಯ ಲಿಯೊನೆಲ್ ಮೆಸ್ಸಿ ಅವರ ಆಗಮನ.

ಫುಟ್‌ಬಾಲ್ ಜಗತ್ತಿನ ಈ ಜಾದೂಗಾರನ ಆಟವನ್ನು ಪ್ರತಿ ಕಣ್ಣುಗಳು ಸಂಭ್ರಮದಿಂದ ತುಂಬಿಕೊಂಡವು. ಅಭಿಮಾನಿಗಳಲ್ಲಿ ಹೊಸ ತರದ ತಳಮಳ, ರೋಮಾಂಚನಕ್ಕೆ ಕಾರಣವಾಯಿತು.

ಈ ದುನಿಯಾದಲ್ಲಿ ಬೇರೆ ಯಾವುದೇ ಕ್ರೀಡೆಗಳಿಗಿಂತ ಹೆಚ್ಚು ಇಷ್ಟವಾಗುವ ಆಟ ಫುಟ್‌ಬಾಲ್. ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಇದರ ಸೊಬಗೇ ಮನಮೋಹಕ. ಆಟ ನೋಡುವಾಗ ಪ್ರತಿ ನಿಮಿಷ ಮನದಂಗಳದಲ್ಲಿ ಕಚಗುಳಿ ಇಟ್ಟ ಅನುಭವ.

ಬ್ರೆಜಿಲ್, ಅರ್ಜೆಂಟೀನಾದಂತಹ ತಂಡಗಳು ಆಡುವಾಗ ತನ್ನ ರೆಪ್ಪೆಯನ್ನು ಕಣ್ಣು ಇಷ್ಟಪಡಲಾರದು! ಪೀಲೆ, ಮರಡೋನಾ, ರೊನಾಲ್ಡೊ, ಜಿದಾನ್, ಮೆಸ್ಸಿ ಅವರ ಅದ್ಭುತ ಆಟದ ಸೊಬಗೇ ಇದಕ್ಕೆ ಕಾರಣ.

ಭಾರತದ ಜನರು ಕೂಡ ಫುಟ್‌ಬಾಲ್ ಮೇಲೆ ತುಂಬಾ ಪ್ರೀತಿ, ವಿಪರೀತ ಅಭಿಮಾನ, ಅಷ್ಟೇ ಅಕ್ಕರೆ ಹೊಂದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 2010ರ ವಿಶ್ವಕಪ್ ಫುಟ್‌ಬಾಲ್ ನಡೆದಾಗ ಭಾರತದ ಅರ್ಧಕ್ಕೂ ಹೆಚ್ಚು ಮಂದಿ ಮಧ್ಯರಾತ್ರಿಯವರೆಗೆ ಎಚ್ಚರವಿದ್ದು ವೀಕ್ಷಿಸಿದ್ದರು.

ಅಲ್ಲಿನ ದೇಶದ ಜನರಿಗಿಂತ ಇಲ್ಲಿನ ಅಭಿಮಾನಿಗಳಿಗೆ ಹೆಚ್ಚು ಕುತೂಹಲ ಇತ್ತು. ಸೋಲು ಗೆಲುವುಗಳ ಬಗ್ಗೆ ಜನ ಭಾವುಕರಾಗಿದ್ದರು. ಉಳಿದ ನಗರಗಳಿಗಿಂತ ಕೋಲ್ಕತ್ತದಲ್ಲಿ ಇದು ಮತ್ತಷ್ಟು ಅಧಿಕ ಅಷ್ಟೇ.

ಇನ್ನೂ ಆ ದೇಶದ ಆಟಗಾರರು ಇಲ್ಲಿಯೇ ಬಂದು ಆಡಿದಾಗ ಅದೆಷ್ಟು ಖುಷಿ, ಸಂತೋಷ ಆಗಿರಬಹುದು ಊಹಿಸಿ?  ಅರ್ಜೆಂಟೀನಾ ತಂಡದ ಮೆಸ್ಸಿ ಆಗಮನ ಸೃಷ್ಟಿಸಿದ್ದ ಅದ್ಭುತ ಕ್ರೇಜ್ ಅದಕ್ಕೊಂದು ಸಾಕ್ಷಿ.

ಸ್ಟ್ರೈಕರ್ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ಫಿಫಾ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ವೆನಿಜುವೆಲಾ ಎದುರು ಆಡಿದಾಗ ಸಾಲ್ಟ್ ಲೇಕ್‌ನ ಯುವ ಭಾರತಿ ಕ್ರೀಡಾಂಗಣ ಕಿಕ್ಕಿರಿದು ತುಂಬಿ ಹೋಗಿತ್ತು.

ಎಲ್ಲರ ಹೃದಯ ಫುಟ್‌ಬಾಲ್‌ನತ್ತ ಜಾರಿತ್ತು. ಮನಸ್ಸಿನಿಂದ ಹೃದಯದವರೆಗೆ ಕಚಗುಳಿಯಿಟ್ಟ ಅನುಭವ!

ಕೋಲ್ಕತ್ತಕ್ಕೂ ಫುಟ್‌ಬಾಲ್‌ಗೂ ಅದೊಂದು ಅದ್ಭುತ ಸಂಬಂಧ. ಫುಟ್‌ಬಾಲ್ ದಂತಕತೆಗಳು ಎನಿಸಿದ ಪೀಲೆ, ಡಿಯಾಗೊ ಮರಡೋನಾ, ಆಲಿವರ್ ಕಾಹ್ನಾ, ಗೆರ್ಡ್ ಮುಲ್ಲಾರ್, ಡಿಯಾಗೊ ಫೋರ್ಲಾನ್ ಅವರಂತಹ ಶ್ರೇಷ್ಠರು ಇಲ್ಲಿಗೆ ಬಂದು ಹೋಗಿದ್ದಾರೆ. ಜನರ ಮನದಲ್ಲಿ ಅಚ್ಚಳಿಯದ ನೆನಪುಗಳ ಗೂಡು ಕಟ್ಟಿ ಹೋಗಿದ್ದಾರೆ.

ನಿಜ, 1977ರಲ್ಲಿ ಪಶ್ಚಿಮ ಬಂಗಾಳದ ರಾಜಧಾನಿಗೆ ಪೀಲೆ ಬಂದಾಗ ಸೃಷ್ಟಿಯಾಗಿದ್ದ ಕ್ರೇಜ್‌ಗೆ ಇದನ್ನು ಹೋಲಿಸಲು ಅಸಾಧ್ಯ. ಅದೇನೇ ಇರಲಿ, ಫುಟ್‌ಬಾಲ್ ಅಭಿಮಾನದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಎಂದು ಕೋಲ್ಕತ್ತದ ಕ್ರೀಡಾ ಪ್ರೇಮಿಗಳು ಮತ್ತೆ ತೋರಿಸಿಕೊಟ್ಟಿದ್ದಾರೆ.

ಯಾರೀ ಮೆಸ್ಸಿ...?

`ವರ್ಷದ ವಿಶ್ವಶ್ರೇಷ್ಠ ಫುಟ್‌ಬಾಲ್ ಆಟಗಾರ~ ಎಂಬ ಗೌರವ ಅರ್ಜೆಂಟೀನಾದ ಮೆಸ್ಸಿಗೆ ಈಗಾಗಲೇ ಎರಡು ಬಾರಿ ಒಲಿದಿದೆ. ಆದರೆ ಅವರಿಗಿನ್ನೂ ಕೇವಲ 24 ವರ್ಷ ವಯಸ್ಸು.
ರೊಸಾರಿಯೊದ ಈ ಪ್ರತಿಭೆ ಐದನೇ ವರ್ಷದಲ್ಲೇ ಸ್ಥಳೀಯ ಫುಟ್‌ಬಾಲ್ ತಂಡದ ಪರ ಆಡಿದ್ದರು ಎಂಬುದು ವಿಶೇಷ. ಆದರೆ ಇವರು ಪೋಷಕರು ಕೂಲಿ ಕಾರ್ಮಿಕರು.

ಮೆಸ್ಸಿ ತಮ್ಮ 11ನೇ ವಯಸ್ಸಿನಲ್ಲೇ ಬೆಳವಣಿಗೆ ಕಾರಣವಾಗುವ ಹಾರ್ಮೊನ್‌ಗಳ ಕೊರತೆಯಿಂದ ಬಳಲುತ್ತಿದ್ದರು. ಪೋಷಕರು ಪ್ರತಿ ತಿಂಗಳು ಆಸ್ಪತ್ರೆಗಾಗಿ 900 ಡಾಲರ್ ಖರ್ಚು ಮಾಡಬೇಕಾಗುತಿತ್ತು.

ಆಗಲೇ ಅವರು ಬಾರ್ಸಿಲೋನಾ ಫುಟ್‌ಬಾಲ್ ಕ್ಲಬ್‌ನೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದ್ದರು. ಕಾರಣ ಆಸ್ಪತ್ರೆ ಖರ್ಚನ್ನು ಭರಿಸಲು ಆ ಕ್ಲಬ್ ಮುಂದಾಗಿತ್ತು. ಹಾಗಾಗಿ ಅವರ ಕುಟುಂಬ ಅರ್ಜೆಂಟೀನಾದಿಂದ ಸ್ಪೇನ್‌ಗೆ ತೆರಳಬೇಕಾಯಿತು.

ಈಗ ಮೆಸ್ಸಿ ಬಾರ್ಸಿಲೋನಾ ಕ್ಲಬ್‌ನ ಶ್ರೇಷ್ಠ ಆಟಗಾರ ಮಾತ್ರವಲ್ಲ; ವಿಶ್ವದ ನಂಬರ್ ಒನ್ ಆಟಗಾರರಾಗಿ ಬೆಳೆದಿದ್ದಾರೆ. ರೊಸಾರಿಯೊದ ಈ ಪ್ರತಿಭೆ ಈಗ ವಿಶ್ವ ಫುಟ್‌ಬಾಲ್‌ನಲ್ಲಿ ವಿಸ್ಮಯ ಮೂಡಿಸಿದೆ.

ಇವರ ಆಟದ ಶೈಲಿಯನ್ನು ಮರಡೋನಾ ಆಟದ ಜೊತೆ ಹೋಲಿಸಲಾಗುತ್ತದೆ. ಮರಡೋನಾ ಕೂಡ ಒಮ್ಮೆ ಈ ಮಾತು ಹೇಳಿದ್ದರು. ವಿಶೇಷವೆಂದರೆ ಮೆಸ್ಸಿ ಜರ್ಸಿ ಸಂಖ್ಯೆ ಕೂಡ 10.

ಅಂತರರಾಷ್ಟ್ರೀಯ ಮಟ್ಟದಲ್ಲಿ ಅರ್ಜೆಂಟೀನಾ ತಂಡ ಈಗ ಅಂತಹ ಅದ್ಭುತ ಪ್ರದರ್ಶನವನ್ನೇನೂ ತೋರುತ್ತಿಲ್ಲ. ಕಳೆದ ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮರಡೋನಾ ಈ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಆದರೂ ಯಶಸ್ವಿಯಾಗಲಿಲ್ಲ.

ಒಬ್ಬ ಶ್ರೇಷ್ಠ ಆಟಗಾರ ಇದ್ದ ಮಾತ್ರಕ್ಕೆ ತಂಡ ಯಶಸ್ಸು ಕಾಣುತ್ತದೆ ಎನ್ನುವುದು ಸುಳ್ಳು. ಆದರೆ ಕ್ಲಬ್ ಫುಟ್‌ಬಾಲ್‌ನಲ್ಲಿ ಯಶಸ್ವಿಯಾದ ಮೆಸ್ಸಿ ದೇಶದ ವಿಷಯ ಬಂದಾಗ ಸಫಲರಾಗಲಿಲ್ಲ.

ಅದೇನೇ ಇರಲಿ, ಕ್ರಿಕೆಟ್ ಕ್ರೇಜ್ ದೇಶದಲ್ಲಿ ಮೆಸ್ಸಿ ಆಗಮನ ಒಂದು ಅದ್ಭುತ ಪ್ರತಿಕ್ರಿಯೆ ಸೃಷ್ಟಿಸಿತು. ಹಿಂದೆ ಪೀಲೆ ಇಲ್ಲಿಗೆ ಬಂದಾಗ ಕ್ಲಬ್ ಪರ ಆಡಿದ್ದರು ಅಷ್ಟೆ. ಹಾಗೇ, ಮರಡೋನಾ ಫುಟ್‌ಬಾಲ್ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿದ್ದರು.

ಆದರೆ ಮೆಸ್ಸಿ ಅವರಂತಹ ದಿಗ್ಗಜ ಆಟಗಾರರನ್ನು ಒಳಗೊಂಡ ಅಂತರರಾಷ್ಟ್ರೀಯ ಪಂದ್ಯವೊಂದು ಇಲ್ಲಿ ನಡೆದಿದ್ದು ಇದೇ ಮೊದಲು. ಈ ಪಂದ್ಯ 152 ದೇಶಗಳಲ್ಲಿ ನೇರ ಪ್ರಸಾರವಾಗಿದೆ. ಇದು ಭಾರತದಲ್ಲಿ ಫುಟ್‌ಬಾಲ್ ಕ್ರೀಡೆ ಬೆಳೆಯಲು ನೆರವಾಗಬಹುದು. 

ನಿಮಗೆ ಗೊತ್ತಿರಬಹುದು, ಬೆಂಗಳೂರಿನ ಗೌತಮಪುರ ಪ್ರದೇಶ ಒಂದು ರೀತಿಯ `ಮಿನಿ ಬ್ರೆಜಿಲ್~ ಇದ್ದಂತೆ. ಅಲ್ಲೊಂದು ಪೀಲೆ ಪ್ರತಿಮೆ ನಿರ್ಮಿಸಿದ್ದಾರೆ. ಅದಕ್ಕೆ ಪೂಜೆ ಕೂಡ ಮಾಡುತ್ತಾರೆ. ಕಾರಣ ಅವರು ಬ್ರೆಜಿಲ್ ಫುಟ್‌ಬಾಲ್ ತಂಡದ ಪರಮ ಅಭಿಮಾನಿಗಳು. ವಿಶ್ವಕಪ್ ಫುಟ್‌ಬಾಲ್ ನಡೆಯುವಾಗ ಅಲ್ಲಿ ಬ್ರೆಜಿಲ್ ಧ್ವಜಗಳದ್ದೇ ಅಬ್ಬರ! ಫುಟ್‌ಬಾಲ್ ಆಟವೆಂದರೆ ಅವರಿಗೆ ಅಷ್ಟೊಂದು ಅಭಿಮಾನ.

ಇಷ್ಟೆಲ್ಲಾ ಆಸಕ್ತಿ ಇಲ್ಲಿದ್ದರೂ ಭಾರತವೇಕೇ ಫುಟ್‌ಬಾಲ್‌ನಲ್ಲಿ ಇಷ್ಟೊಂದು ಹಿಂದೆ ಉಳಿದಿದೆ ಎನ್ನುವ ವಿಷಯ ಅಚ್ಚರಿ ಮೂಡಿಸುತ್ತದೆ. ಭಾರತದ ಒಂದು ರಾಜ್ಯದ ಗಾತ್ರ ಇರುವ ದೇಶಗಳು ಫುಟ್‌ಬಾಲ್ ಚಾಂಪಿಯನ್ ಆಗಿವೆ.

ಮೆಸ್ಸಿ ಅವರಂತಹ ಅದ್ಭುತ ಆಟಗಾರನ ಆಗಮನ ಇಲ್ಲಿನ ಯುವಕರಿಗೆ ಸ್ಫೂರ್ತಿ ಆಗಿರಬಹುದೇನೊ?! `ಭಾರತ ಕೂಡ ಒಮ್ಮೆ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಆಡಲಿದೆ~ ಎಂದು ಇತ್ತೀಚೆಗೆ ಬೈಚುಂಗ್ ಭುಟಿಯಾ ವಿದಾಯ ಪ್ರಕಟಿಸಿದಾಗ ಹೇಳಿದ ಮಾತು ನಿಜವಾಗುತ್ತದಾ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT