ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಹಂದಿ ಹಚ್ಚುವ ಮಂದಿ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಮಲ್ಲೇಶ್ವರಂ 8ನೆಯ ಕ್ರಾಸನ್ನು ದಾಟಿ ಸಂಪಿಗೆ ರಸ್ತೆಯಲ್ಲಿ ಮುಂದೆ ಸಾಗಿದರೆ ಸಿಟಿ ಸೆಂಟ್ರಲ್ ಲೈಬ್ರರಿಯ ಕಟ್ಟಡವಿದೆ. ಅದರ ಬಲ ಮಗ್ಗುಲಿನಲ್ಲಿ ಹಲವಾರು ಹೆಂಗಳೆಯರು ಕೈ ನೀಡಿ ಕುಳಿತಿರುವ ದೃಶ್ಯ ಸರ್ವೇಸಾಮಾನ್ಯ. ಅವರ ಹಸ್ತದ ಮೇಲೆ ಚಿತ್ತಾರ ಬರೆಯುತ್ತಾ ಕುಳಿತ ಕೆಲವರನ್ನು ಕಾಣಬಹುದು. ಹತ್ತಿರ ಹೋಗಿ ನೋಡಿದರೆ ತಿಳಿಯುತ್ತದೆ ಅವರ ಕೋಮಲ ಹಸ್ತಗಳ ಮೇಲೆ ಮೆಹಂದಿ ಹಾಕುವ ಮಂದಿಯನ್ನು.

ರಾಜಸ್ತಾನ್ ಮೂಲದ ಅಮರಸಿಂಗ್ ಮತ್ತು ತಂಡದವರು ಮೆಹಂದಿ ಹಾಕುವುದರಲ್ಲಿ ಎತ್ತಿದ ಕೈ. ಹತ್ತು ವರ್ಷದ ಅನುಭವವಿರುವ ಈ ತಂಡ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬೀಡುಬಿಟ್ಟು ಐದು ವರ್ಷಗಳಾಗುತ್ತ ಬಂದಿದೆ. ಇದಕ್ಕೆ ಇವರು ತೆಗೆದುಕೊಳ್ಳುವ ಶುಲ್ಕವು ಕಡಿಮೆ. ಮೆಹಂದಿಯಲ್ಲಿ ಇಂಡಿಯನ್ ಮತ್ತು ಅರೇಬಿಕಾ ಎಂದು ಎರಡು ವಿಧಗಳಿವೆ. ಅರೇಬಿಕಾ ವಿನ್ಯಾಸದ ಕನಿಷ್ಠ ಶುಲ್ಕ ರೂ 50, ಇಂಡಿಯನ್ ವಿನ್ಯಾಸದ್ದು ರೂ. 100. ಉಳಿದಂತೆ ಇದರ ಶುಲ್ಕ ಮೆಹಂದಿಯ ವಿನ್ಯಾಸವನ್ನು ಅವಲಂಬಿಸಿರುತ್ತದೆ.

ಮೆಹಂದಿ ಹಚ್ಚಿಸಿಕೊಂಡವರು ಮನೆ ತಲಪುವವರೆಗೂ ಎಲ್ಲೂ ಕೈ ತಾಗಿಸುವಂತಿಲ್ಲ. ಹಾಗೇನಾದರೂ ಆದರೆ ನಾಜೂಕಾಗಿ ಹಚ್ಚಿದ ಮೆಹಂದಿ ಹಸ್ತ ತುಂಬಾ ಹರಡಿ ಗೋಜಲು ಗೋಜಲಾಗುತ್ತದೆ. ಒಣಗಿದ ಮೇಲೆ ನೀರನ್ನು ಉಪಯೋಗಿಸದೆ ಅಂಟಿದ ಪುಡಿಯನ್ನು ತೆಗೆಯಬೇಕು. ಅದರ ನಂತರ ತೆಂಗಿನೆಣ್ಣೆ ಹಚ್ಚಿ ತವದಲ್ಲಿ ಲವಂಗವನ್ನು ಬಿಸಿ ಮಾಡಿ ಅದರ ಹೊಗೆಯಲ್ಲಿ ಹಸ್ತವನ್ನು ಒಡ್ಡಿದರೆ ಮೆಹಂದಿಯ ಚಿತ್ತಾರದ ಬಣ್ಣ ಮತ್ತಷ್ಟು ಗಾಢವಾಗುತ್ತದೆ.

‘ಬ್ಯೂಟಿ ಪಾರ್ಲರ್‌ನಲ್ಲಿ ಸಾವಿರಾರು ರೂಪಾಯಿಗಳನ್ನು ತೆತ್ತು. ಹಣ ಕಳೆದುಕೊಳ್ಳುವುದಕ್ಕಿಂತಲೂ ಇಲ್ಲಿ ಹಚ್ಚಿಸಿಕೊಂಡರೆ ತುಂಬಾ ಹಣ ಉಳಿತಾಯವಾಗುತ್ತದೆ’ ಎನ್ನುತ್ತಾರೆ ಮೆಹಂದಿ ಹಚ್ಚಿಸಿಕೊಳ್ಳಲು ಬಂದಿದ್ದ ಮಲ್ಲೇಶ್ವರಂ ನಿವಾಸಿ ಪಲ್ಲವಿ ಮತ್ತು ಅವರ ತಾಯಿ.

ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೂ ಅಮರ್‌ಸಿಂಗ್ ಮತ್ತು ತಂಡದವರು ಇಲ್ಲಿ ಕುಳಿತಿರುತ್ತಾರೆ. ಮದುವೆ ಸಮಾರಂಭಗಳಿಗೂ ಇವರನ್ನು ಕರೆಸಿ ಮೆಹಂದಿ ಹಚ್ಚಿಸಿಕೊಳ್ಳುವವರಿದ್ದಾರೆ. ಮೆಹಂದಿ ಹಾಕುವ ಇವರಿಗೆ ಊರಿನಲ್ಲಿರುವ ತಮ್ಮ ಸಂಬಂಧಿಕರ ನೆನಪಾಗುತ್ತಿರುತ್ತದೆ. ತಮ್ಮ ಮುಂದೆ ಕುಳಿತು ಮೆಹಂದಿ ಹಚ್ಚಿಸಿಕೊಳ್ಳುತ್ತಿರುವ ಮಹಿಳೆಯರನ್ನು ಕಂಡಾಗ ದೂರದೂರಿನಲ್ಲಿರುವ ತಮ್ಮ ತಾಯಿ, ಅಕ್ಕ- ತಂಗಿ ಅತ್ತಿಗೆಯರ ನೆನಪಾಗದಿರದು.

ಹಾಗೆಂದು, ಇವರು ಊರ ಕಡೆ ಮನಸ್ಸು ಹರಿಯಬಿಟ್ಟರೆ ಕೋಮಲ ಹಸ್ತದ ಮೇಲಿನ ಚಿತ್ತಾರ ದಾರಿ ತಪ್ಪಿ ವಿಚಿತ್ರ ರೂಪು ಪಡೆದುಬಿಡುತ್ತದೆ. ಅದರಿಂದ ಅವರ ಸಂಪಾದನೆಯಲ್ಲೂ ಏರುಪೇರುಂಟಾಗುತ್ತದೆ. ಮದುವೆಯ ಸೀಸನ್ ಬಂತೆಂದರೆ ಇವರ ಸಂಪಾದನೆ ಇಮ್ಮಡಿಯಾಗುತ್ತದೆ. ಅಂತಹ ಸಂದರ್ಭದಲ್ಲಿ ಬೇಕೆನಿಸಿದರೆ ಊರಿನಿಂದ ಮತ್ತಷ್ಟು ಮಂದಿಯನ್ನು ಕರೆಸಿಕೊಳ್ಳುತ್ತಾರೆ. ವಿಶೇಷ ಸಂದರ್ಭದಲ್ಲಿ ಅಮರ್‌ಸಿಂಗ್‌ರವರ ತಂಡವನ್ನು ಮನೆಗಳಿಗೂ ಕರೆಸಿ ಮೆಹಂದಿ ಹಾಕಿಸಿಕೊಳ್ಳಬಹುದು. ಕನ್ನಡವನ್ನೂ ಬಲ್ಲ ಅಮರ್‌ಸಿಂಗ್‌ನ ಬಳಿ ಬೇರೆ ಬೇರೆ ವಿನ್ಯಾಸವುಳ್ಳ ಕ್ಯಾಟಲಾಗ್ ಇದೆ. ಅದರಲ್ಲಿ ಇಷ್ಟವಾದುದನ್ನು ಆರಿಸಿಕೊಳ್ಳುವ ಹಕ್ಕು ಗ್ರಾಹಕರಿಗಿದೆ. ಅಮರಸಿಂಗ್‌ರನ್ನು ಸಂಪರ್ಕಿಸಬಹುದಾದ ಮೊಬೈಲ್ ನಂಬರ್: 9980407354.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT