ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ ದಿನ: ಅವಳಿನಗರದಲ್ಲಿ ಕೆಂಬಾವುಟದ ಅಲೆ

Last Updated 2 ಮೇ 2012, 7:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ನಗರದಲ್ಲಿ ಮಂಗಳವಾರ ಬೀಡಿ, ಆಟೋರಿಕ್ಷಾ, ಕಟ್ಟಡ, ಸಿನಿಮಾ, ಅಂಗನವಾಡಿ, ಸಾರಿಗೆ ಹಾಗೂ ಅಸಂಘಟಿತ ಕಾರ್ಮಿಕರು, ಕೃಷಿ ಮಹಿಳೆಯರು ಹಾಗೂ ಯುವಜನರು ಒಟ್ಟಾಗಿ ತಮ್ಮದೇ ಆದ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಹಳೇ ಹುಬ್ಬಳ್ಳಿಯ ಎ.ಜೆ. ಮುಧೋಳ ಭವನದಿಂದ ಬೆಳಿಗ್ಗೆ 11.30ರ ಸುಮಾರಿಗೆ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪಾಲಿಕೆ ಪಕ್ಕದ ಉದ್ಯಾನದಲ್ಲಿ ಕೊನೆಗೊಂಡಿತು. ಮೆರವಣಿಗೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಯುವಕರು ಬೈಕ್ ರ‌್ಯಾಲಿ ನಡೆಸಿದರೆ, ರಿಕ್ಷಾ ಚಾಲಕರು ತಮ್ಮ ಆಟೋರಿಕ್ಷಾಗಳ ಜೊತೆ ಆಗಮಿಸಿದ್ದರು.

ಕುದುರೆಗಳ ಮೇಲೆ ಯುವಕರು ಕೆಂಬಾವುಟ ಧ್ವಜದೊಂದಿಗೆ ಸಾಗಿದರೆ, ಮೆರವಣಿಗೆಯಲ್ಲಿ ಪಾಲ್ಗೊಂಡ ಕಾರ್ಮಿಕರನ್ನು ಹುರಿದುಂಬಿಸಲು ಝಾಂಜ್ ಮೇಳ ಆಗಮಿಸಿತ್ತು. ಬೀಡಿ ಹಾಗೂ ಆಟೋರಿಕ್ಷಾ ಕಾರ್ಮಿಕರು ನಿವೇಶನಗಳಿಗಾಗಿ ಬೇಡಿಕೆ ಮೊಳಗಿಸಿದರೆ ಸಾರಿಗೆ ಕಾರ್ಮಿಕರು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ನಿವೃತ್ತ ಕಾರ್ಮಿಕರು ಕೇಂದ್ರ ಸರ್ಕಾರ ಘೋಷಿಸಿದ ಸಾವಿರ ರೂಪಾಯಿ ಪಿಂಚಣಿ ಜಾರಿಗೊಳಿಸುವಂತೆ ಆಗ್ರಹಿಸಿದರು.

ಮೆರವಣಿಗೆ ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು ಮಾತ್ರವಲ್ಲದೆ ರಾಷ್ಟ್ರೀಯ ಕನಿಷ್ಠ ಕೂಲಿ, ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನ ಹಾಗೂ ಬರ ಪರಿಹಾರ ಕಾಮಗಾರಿಗೆ ಒತ್ತಾಯಿಸಲಾಯಿತು.

ಕಾರ್ಮಿಕ ನಾಯಕರಾದ ಬಿ.ಎ. ಮುಧೋಳ, ದೇವಾನಂದ ಜಗಾಪುರ, ದಾದಾಪೀರ್ ಬೇಪಾರಿ, ಗೋವಿಂದ ಫೀರ್‌ಜಾದೆ, ಬಾಬಾಜಾನ ಮುಧೋಳ, ಎನ್.ಎ. ಖಾಜಿ, ಪ್ರಭಾಕರ ಬಿಡ್ನಾಳ, ಎಫ್.ಎಚ್. ಕವಳಿಕಾಯಿ, ರಾಜಶೇಖರ ಮೆಣಸಿನಕಾಯಿ, ಹನುಮಂತಪ್ಪ ಚಲವಾದಿ, ಗೀತಾ ಕಟಗಿ, ಭುವನೇಶ್ವರಿ ಬೇವಿನಕಟ್ಟಿ, ಬಾಲಚಂದ್ರ ಗಂಗೂರ ಮತ್ತಿತರರು ಪಾಲ್ಗೊಂಡಿದ್ದರು.

ಹಮಾಲಿ ಕಾರ್ಮಿಕರ ಒಕ್ಕೂಟ

ನಗರದ ಎಪಿಎಂಸಿ ಹಮಾಲಿ ಕಾರ್ಮಿಕರ ಒಕ್ಕೂಟದ ವತಿಯಿಂದ ಮೇ ದಿನ ಆಚರಿಸಲಾಯಿತು. ರಾಜ್ಯ ಹಮಾಲಿ ಕಾರ್ಮಿಕರ ಒಕ್ಕೂಟದ ಉಪಾಧ್ಯಕ್ಷ ದುರಗಪ್ಪ ಚಿಕ್ಕ ತುಂಬಳ ಮಾತನಾಡಿ, ಕಾರ್ಮಿಕ ದಿನಾಚರಣೆ ಹಿನ್ನೆಲೆ ವಿವರಿಸಿದರು. ಸಮಾರಂಭಕ್ಕೂ ಮುನ್ನ ಮಾರುಕಟ್ಟೆ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು.

30 ವರ್ಷಗಳಿಂದ ಕೆಲಸ ಮಾಡುತ್ತಿರುವ ಸಂಗಪ್ಪ ಕೋಲಾರ, ಹುಸೇನಸಾಬ್ ತಾಂಬೋಲಿ, ಅಹ್ಮದಸಾಬ್ ಶಿಗ್ಲಿ, ಸರದಾರಸಾಬ್ ಹಾಸಿಂನವರ, ರೆಹಮಾನ್‌ಸಾಬ್ ನದಾಫ್ ಅವರನ್ನು ಸನ್ಮಾನಿಸಲಾಯಿತು.
ಹಮಾಲಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಇಮಾಮಸಾಬ್ ದುಂಡಸಿ, ಬಸವಣ್ಣೆಪ್ಪ ನೀರಲಗಿ, ಹನುಮಂತಪ್ಪ ಜಾಲಗಾರ, ಕರೆಪ್ಪ ದಳವಾಯಿ, ಮಂಜುನಾಥ ಹುಜರಾತಿ, ಗುರುಸಿದ್ದಪ್ಪ ಅಂಬಿಗೇರ, ಗಾಳೆಪ್ಪ ಮುತ್ಯಾಳ, ನಾಗಮ್ಮ ಹಿರೇಮನಿ, ಯಲ್ಲವ್ವ ವರೂರ, ಮುಡಿಯಪ್ಪ ಸಕ್ರಣ್ಣವರ, ಇಮಾಮ್ ಹುಸೇನ್ ಹೆಬ್ಬಳ್ಳಿ ಹಾಜರಿದ್ದರು.

ಮಜ್ದೂರ್ ಕಾಂಗ್ರೆಸ್
ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಹುಬ್ಬಳ್ಳಿ-ಧಾರವಾಡ ಘಟಕದಿಂದ ಮಂಗಳವಾರ ಕಾರ್ಮಿಕ ದಿನಾಚರಣೆ ಅಂಗವಾಗಿ ರೈಲು ನಿಲ್ದಾಣದ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಘಟಕದ ಅಧ್ಯಕ್ಷ ಯುಸೂಫ್‌ಖಾನ್ ಬಳ್ಳಾರಿ, ಸದಾನಂದ ಡಂಗನವರ, ಮೋಹನ ಅಸುಂಡಿ, ಮೋಹನ ಹಿರೇಮನಿ, ಸುದರ್ಶನ ಶೆಟ್ಟಿ, ದೊರೆರಾಜ ಮಣಿಕುಂಟ್ಲಾ ಮತ್ತಿತರರು ಭಾಗವಹಿಸಿದ್ದರು.

ಕಿರ್ಲೋಸ್ಕರ್ ನೌಕರರ ಸಂಘ
ನಗರದ ಕಿರ್ಲೋಸ್ಕರ್ ಇಲೆಕ್ಟ್ರಿಕ್ ಕಂಪನಿ ನೌಕರರ ಸಂಘದಿಂದ ಕಾರ್ಮಿಕರ ದಿನಾಚರಣೆ ಏರ್ಪಡಿಸಲಾಗಿತ್ತು. ಆರ್.ಎಚ್. ದೇಶಪಾಂಡೆ, ಎಂ.ಎಸ್. ಕಬಡರ, ಸಿ.ಸುಬ್ರಣಿಯಮ್, ಎಸ್.ಎಸ್. ಅರಿಕೇರಿ ಮತ್ತಿತರರು ಪಾಲ್ಗೊಂಡಿದ್ದರು.

`ಕಾರ್ಮಿಕರಿಗೆ ವರ್ಗ ಸಂಘರ್ಷವೇ ಹಾದಿ~
`ವಿಶ್ವದಾದ್ಯಂತ ವ್ಯಾಪಿಸಿರುವ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಶೋಷಿತ ಕಾರ್ಮಿಕ ವರ್ಗಕ್ಕೆ ಕ್ರಾಂತಿಕಾರಿ ವರ್ಗ ಸಂಘರ್ಷವೇ ಮಾರ್ಗೋಪಾಯ~ ಎಂದು ಹಿರಿಯ ಕಾರ್ಮಿಕ ಮುಖಂಡ ಡಾ.ಕೆ.ಎಸ್. ಶರ್ಮಾ ಅಭಿಪ್ರಾಯಪಟ್ಟರು.

ಭಾರತೀಯ ಕ್ರಾಂತಿಕಾರಿ ಕಾರ್ಮಿಕ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಗರದ ಗೋಕುಲ ರಸ್ತೆಯ ವಿಶ್ವಶ್ರಮ ಚೇತನ ಸಭಾಭವನದಲ್ಲಿ ಏರ್ಪಡಿಸಿದ್ದ ಮೇ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಭಾರತದಲ್ಲಿ ಅನೇಕ ಕಾರ್ಮಿಕ ಸಂಘಟನೆಗಳು ಆರ್ಥಿಕವಾದಕ್ಕೆ ತಮ್ಮ ಎಲ್ಲ ಚಟುವಟಿಕೆಗಳನ್ನು ಮೀಸಲಾಗಿರಿಸಿ ಪ್ರತಿಗಾಮಿ ದಿಶೆಯಲ್ಲಿ ಹೊರಟಿವೆ. ಎಡ ಪಕ್ಷಗಳೊಡನೆ ಸಮ್ಮಿಲಿತಗೊಂಡ ಕಾರ್ಮಿಕ ಸಂಘಗಳಲ್ಲೂ ಈ ಆರ್ಥಿಕವಾದ ಬೇರೂರಿದೆ. ಕ್ರಾಂತಿಕಾರಿ ಹೋರಾಟ ಪಥವನ್ನು ಈ ಕಾರ್ಮಿಕ ಸಂಘಟನೆಗಳು ಕೈಬಿಟ್ಟಿವೆ. ಎಡ ರಾಜಕೀಯ ಪಕ್ಷಗಳೂ ಆ ಸಿದ್ಧಾಂತವನ್ನು ಮರೆತಿವೆ~ ಎಂದು ಅವರು ವಿಷಾದಿಸಿದರು.

ಭಾರತೀಯ ಕಾರ್ಮಿಕ ಸಂಘಗಳು ಸಮಾಜವಾದಿ ಸಮಾಜದ ಸ್ಥಾಪನೆಗೆ ಬದ್ಧವಾದ ಕ್ರಾಂತಿಕಾರಿ ಎಡ ರಾಜಕೀಯ ಪಕ್ಷದೊಡನೆ ಹೊಂದಾಣಿಕೆ ಮಾಡಿಕೊಂಡು ಕಾರ್ಯೋನ್ಮುಖ ಆಗಬೇಕು. ಈ ಸ್ಥಿತಿ ಇಲ್ಲದಿದ್ದರೆ ಹೊಸ ಮಾರ್ಕ್ಸ್‌ವಾದಿ ರಾಜಕೀಯ ಪಕ್ಷ ಕಟ್ಟಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

`ಅಮೆರಿಕದಲ್ಲಿ 2008ರಲ್ಲಿ ಸಂಭವಿಸಿದ ಆರ್ಥಿಕ ಹಿಂಜರಿತದ ಬಳಿಕ ಸಾಮ್ರಾಜ್ಯಶಾಹಿ ವ್ಯವಸ್ಥೆ ಕುಸಿಯುತ್ತಿದೆ. ಕಾರ್ಮಿಕ ಸಂಘಗಳು ಇದರ ಪ್ರಯೋಜನ ಪಡೆಸಯ, ಬಂಡವಾಳಶಾಹಿ ವಿಷಮಸ್ಥಿತಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.

ಡಾ.ಕೆ.ಎಸ್. ಶರ್ಮಾ ಅವರ `ಮೇ 1, 127ನೇ ವಿಶ್ವ ಕಾರ್ಮಿಕ ದಿನಾಚರಣೆ~ ಕೃತಿಯನ್ನು ಹಿರಿಯ ರಾಜ್ಯಶಾಸ್ತ್ರಜ್ಞ ಡಾ.ಕೆ. ರಾಘವೇಂದ್ರರಾವ್ ಬಿಡುಗಡೆ ಮಾಡಿ ದರು. `ಬಂಡವಾಳಶಾಹಿ ವ್ಯವಸ್ಥೆ ಪರಿಸರ ನಾಶ ಮಾಡುತ್ತಾ ಮಾನವ ಜನಾಂಗಕ್ಕೇ ವಿನಾಶಕಾರಿಯಾಗಿ ಕಾರ್ಯ ಮಾಡುತ್ತಿದೆ ಎಂದು ಅವರು ವಿಷಾದಿಸಿದರು.

ಸಾಹಿತಿ ಜಗದೀಶ ಮಂಗಳೂರುಮಠ, ವೆಂಕಟೇಶ ದಾಸರ, ಅಪ್ಪಾಜಪ್ಪ, ಶಿವಣ್ಣ ಹತ್ತಿಯವರ, ಸುಭಾಷ ಷಾ, ರಮೇಶ ಕಾತರಕಿ, ರಾಮಚಂದ್ರ ಸಾಳುಂಕೆ, ವೈ.ಎನ್. ಜೋಶಿ ಮತ್ತಿತರರು ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ  ಅವರನ್ನು ಸನ್ಮಾನಿಸಲಾಯಿತು. ಪ್ರೊ. ರವಿ ಶಿರೋಳ್ಕರ್ ನಿರೂಪಿಸಿದರು. ಸಂಜಯ ತ್ರಾಸದ ವಂದಿಸಿದರು.

`ಶೋಷಣೆಗೆ ಕಾರ್ಮಿಕರ ಕ್ರಾಂತಿಯೇ ಪರಿಹಾರ~

ಧಾರವಾಡ: 1886ರಲ್ಲಿ ಅಮೆರಿಕದ ಚಿಕ್ಯಾಗೋ ನಗರದ ಕಾರ್ಮಿಕರು ಎಂಟು ಗಂಟೆಗಳ ದುಡಿಮೆಯ ಅವಧಿಗೆ ಒತ್ತಾಯಿಸಿ ಮಾಡಿದ ರಕ್ತರಂಜಿತ ಹೋರಾಟವನ್ನು ನೆನೆಯುವ ಮೇ ದಿನದ ಅಂಗವಾಗಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳಲ್ಲಿ ಒಂದಾದ `ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್~ (ಎಐಯುಟಿಯುಸಿ) ವತಿಯಿಂದ ನಗರದ ಕಡಪಾ ಮೈದಾನದಲ್ಲಿ ಮಂಗಳವಾರ ಸಭೆಯನ್ನು ಸಂಘಟಿಸಲಾಗಿತ್ತು.

ಸಭೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ, `ಮೇ ದಿನಾಚರಣೆ ಕಾರ್ಮಿಕರ ಪಾಲಿಗೆ ಹೊಸ ಹುಮ್ಮಸ್ಸಿನಿಂದ ಹೋರಾಡುವ ಸಂಕಲ್ಪದ ದಿನವಾಗಿದೆ. ಬಂಡವಾಳಗಾರರ ಸತತ ಶೋಷಣೆಯಿಂದ ನಲುಗಿಹೋಗಿದ್ದ ಕಾರ್ಮಿಕ ವರ್ಗ ಎದೆ ಸೆಟೆದು ಹೋರಾಡುವ ಮೂಲಕ ಹೊಸ ಇತಿಹಾಸ ಬರೆದ ದಿನವಾಗಿದೆ~ ಎಂದರು,

`ಇಂದು ಮತ್ತೆ ಬಂಡವಾಳಶಾಹಿ, ಸಾಮ್ರೋಜ್ಯಶಾಹಿಗಳ ಶೋಷಣೆಗೆ ಒಳಗಾಗಿರುವ ಕಾರ್ಮಿಕರು ತಾವು ಮುಕ್ತಿ ಪಡೆಯಲು ಈ ವ್ಯವಸ್ಥೆಯನ್ನು ಕಿತ್ತೊಗೆದು ಘನತೆಯ ಜೀವನ ಒದಗಿಸುವ ವ್ಯವಸ್ಥೆಯನ್ನು ಸ್ಥಾಪಿಸಬೇಕು. ಅದಕ್ಕೆ ಕಾರ್ಮಿಕ ವರ್ಗದ ಕ್ರಾಂತಿಯೇ ಅಂತಿಮ ಪರಿಹಾರವಾಗಿದೆ. ಅಂಥ ಕ್ರಾಂತಿಯನ್ನು ನೆರವೇರಿಸಲು ಮೇ ದಿನ ಮತ್ತೆ ಮತ್ತೆ ಕಾರ್ಮಿಕ ವರ್ಗಕ್ಕೆ ಸ್ಫೂರ್ತಿ ನೀಡುತ್ತದೆ~ ಎಂದು ಹೇಳಿದರು.

ಆಲ್ ಇಂಡಿಯಾ ಯುಟಿಯುಸಿಯ ರಾಜ್ಯ ಸಮಿತಿ ಸದಸ್ಯ ಕೃಷ್ಣದಾಸ್, `ದಿನದಿಂದ ದಿನಕ್ಕೆ ಸರ್ಕಾರ ಎಲ್ಲ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಸಿದ್ದು, ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಬದಲು ಕಾರ್ಮಿಕ ಹೋರಾಟವನ್ನೇ ಹತ್ತಿಕ್ಕುವ ಕುತಂತ್ರದಲ್ಲಿ ಆಳ್ವಿಕ ಸರ್ಕಾರಗಳು ತೊಡಗಿವೆ~ ಎಂದು ಆರೋಪಿಸಿದರು.ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಜಿ.ದೇಸಾಯಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಾಯಿ ವೆಲ್‌ಫೇರ್ ಅಸೋಸಿಯೇಷನ್

“ಇಂದು ಕಾರ್ಮಿಕರಿಗೆ ಯಾವುದೇ ರೀತಿಯ ಸವಲತ್ತುಗಳು ಪರಿಪೂರ್ಣವಾಗಿ ದೊರಕುತ್ತಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಅವರ ಸಮಸ್ಯೆಗಳತ್ತ ಗಮನಹರಿಸಬೇಕು” ಎಂದು ನಗರ ಪೊಲೀಸ್ ಆಯುಕ್ತ ಡಾ.ಕೆ.ರಾಮಚಂದ್ರರಾವ್ ಹೇಳಿದರು.

ಸಾಯಿ ವೇಲಫೇರ್ ಅಸೋಸಿಯಶನ್, ರಾಜ್ಯ ಮಹಿಳಾ ಉದ್ದಿಮೆದಾರರ ಸಂಘ ಹಾಗೂ ಲಯನ್ಸ್ ಕ್ಲಬ್ ನವಲಗುಂದ ಟೌನ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಲಯನ್ಸ್ ಇಂಟರ್‌ನ್ಯಾಷನಲ್‌ನ ಜಿಲ್ಲಾ ಗವರ್ನರ್ ಕೃಷ್ಣ ಪುಂಜಿ, ಇತರ ದೇಶಗಳಿಗಿಂತ ಭಾರತ ಉತ್ತಮವಾದ ಸಂಸ್ಕೃತಿ ಹಾಗೂ ಜೀವನಶೈಲಿ, ಜೊತೆಗೆ ಮಾತೃಗುಣವನ್ನು ಹೊಂದಿದೆ. ಈ ಸಮಾಜವನ್ನು ಉನ್ನತ ಹಂತಕ್ಕೆ ಕರೆದುಕೊಂಡು ಹೋಗುವಂತೆ ಮಾಡಿದ್ದೇ ಕಾರ್ಮಿಕ ವರ್ಗ~ ಎಂದರು.

ವಕೀಲರ ಸಂಘದ ಅಧ್ಯಕ್ಷ ಬಿ.ಡಿ.ಹಿರೇಮಠ, `ಕಾರ್ಮಿಕ ವರ್ಗ, ಅಧಿಕಾರಿ ವರ್ಗ, ರೈತವರ್ಗ ಹಾಗೂ ಜನಪ್ರತಿನಿಧಿಗಳು ಈ ದೇಶದ ಮೂಲ ಆಧಾರ ಸ್ಥಂಭಗಳಾಗಿದ್ದಾರೆ~ ಎಂದರು.ಡಾ.ಎಂ.ಎಸ್.ಹುಲ್ಲೊಳ್ಳಿ, ಸಾಹಿತಿ ಮೋಹನ ನಾಗಮ್ಮನವರ, ರಾಜ್ಯ ಮಹಿಳಾ ಉದ್ದಿಮೆದಾರರ ಸಂಘದ ಅಧ್ಯಕ್ಷೆ ದೇವಕಿ ಯೋಗಾನಂದ, ಶರಣಪ್ಪ ಕೊಟಗಿ, ನಿಜಾಮುದ್ದೀನ್ ಶೇಖ್ ಮತ್ತಿತರರು ಮಾತನಾಡಿದರು.

ಹುಬ್ಬಳ್ಳಿಯ ಹೊಸಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಡಾ.ಶಾಂತಾ ಹಲಗಿ ಅಧ್ಯಕ್ಷತೆ ವಹಿಸಿದ್ದರು.ದೇವಾನಂದ ರತ್ನಾಕರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ಯಾಮಲಾ ರತ್ನಾಕರ ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT