ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮೇಡಂ' ಎಂದ ಹುಡುಗ!

ಬಸ್ ಕತೆ
Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಅಂದು ಬೃಹತ್ ಬೆಂಗಳೂರು ನಗರ ಸಾರಿಗೆಯ 78ನೇ ನಂಬರಿನ ಬಸ್ಸು ಹತ್ತಿ ನಮ್ಮ ಮನೆಯಿದ್ದ ರಾಜಾಜಿನಗರಕ್ಕೆ ಹೊರಟೆ. ಭಂಡತನದಿಂದ ನುಗ್ಗಿ ಸೀಟು ಹಿಡಿದು ಕುಳಿತೆ. ಕೆಲವೇ ನಿಮಿಷಗಳಲ್ಲಿ ಬಸ್ಸು ಭರ್ತಿಯಾಗಿ ಹೊರಟಿತು. ಸುಮಾರು 25-26 ವರ್ಷದ ತರುಣನೊಬ್ಬ ನಿಂತಿದ್ದ. ಪದೇಪದೇ ಹಿಂದಿರುಗಿ ನನ್ನ ಕಡೆ ನೋಡುತ್ತ ಹಲ್ಲು ಕಿರಿಯುತ್ತಿದ್ದ. ಅಪರಿಚಿತನ ನಡತೆಗೆ ಕೋಪಗೊಂಡು ನಾನು ಪಕ್ಕಕ್ಕೆ ಮುಖ ತಿರುಗಿಸಿ ಕುಳಿತೆ.

ಒಂದೆರೆಡು ಬಸ್ಸು ನಿಲ್ದಾಣ ಬರುತ್ತಲೇ ನಿಂತಿದ್ದ ಕೆಲವರು ಬಸ್ಸಿನಲ್ಲಿ ಹಿಂದಕ್ಕೆ ಸರಿದರು. ಕೆಲವರು ಇಳಿದುಹೋದರು. ಬಸ್ಸು ಹತ್ತಿದವರು ಇನ್ನು ಕೆಲವರು. ಆ ಯುವಕ ಹಿಂದಕ್ಕೆ ಸರಿದು ನನ್ನ ಪಕ್ಕಕ್ಕೇ ಬಂದು ನಿಂತ. ನಾನು ತಲೆ ಎತ್ತಿ ನೋಡಿದಾಗ ಪುನಃ ನನ್ನನ್ನು ನೋಡಿ ಕಿರುನಗೆ ಬೀರಿದ.

ನನಗೆ ತುಂಬಾ ಕೋಪ ಬಂದು ಕಿಟಕಿಯ ಕಡೆಗೆ ಮುಖ ತಿರುಗಿಸಿಕೊಂಡು ಕುಳಿತೆ. ಇನ್ನೆರಡು ಬಸ್ಸು ನಿಲ್ದಾಣಗಳು ಬಂದ ನಂತರ ಸ್ಥಳಾವಕಾಶವಾಗಿ ಪ್ರಯಾಣಿಕರು ಕೂರಲು ಸ್ಥಳಾವಕಾಶ ದೊರೆಯಿತು. ಆಗ ಆ ಯುವಕ ನನ್ನ ಪಕ್ಕದಲ್ಲೇ ಬಂದು ಕುಳಿತುಬಿಟ್ಟ. ಆದರೆ ಅವನು ಗಂಭೀರವಾಗಿ ಕೂರಲಿಲ್ಲ. ನನ್ನನ್ನು ಮಾತನಾಡಿಸಲು ಪ್ರಯತ್ನಪಟ್ಟ. `ಮೇಡಂ ಮೇಡಂ' ಎಂದು ಸಂಬೋಧಿಸಿ, `ನನ್ನನ್ನು ಮರೆತು ಬಿಟ್ಟಿದ್ದೀರಾ' ಎಂದು ಕೇಳಿದ.

ನನಗೆ ಕೋಪ ಬಂತು. `ಬಾಯಿಮುಚ್ಚಿ ಕುಕ್ಕರಿಸು. ಗಲಾಟೆ ಮಾಡಿದರೆ ಬಸ್ಸಿನಿಂದ ಹೊರಗೆ ಹಾಕಿಸುತ್ತೇನೆ' ಎಂದು ಎಚ್ಚರಿಕೆ ಕೊಟ್ಟೆ. ತನ್ನ ಎರಡೂ ಕೈಗಳನ್ನು ಜೋಡಿಸಿ, `ವಿದ್ಯಾವರ್ಧಕ ಸಂಘದ ಸ್ಕೂಲಿನ ಸುಬ್ಬಲಕ್ಷ್ಮೀ ಮೇಡಂ ಜೊತೆ ನಿಮ್ಮ ಮನೆಗೆ ನಾನು 15 ವರ್ಷಗಳ ಹಿಂದೆ ಬಂದಿದ್ದೆ' ಅಂದ. ನನಗೂ ನೆನಪಾದಂತಾಗಿ ಕೋಪ ತಣ್ಣಗಾಗತೊಡಗಿತು.

`ನನ್ನ ಹೆಸರು ಶ್ರೀಧರ. ತಬ್ಬಲಿಯಾಗಿದ್ದ ನನಗೆ ಒಂದು ವರ್ಷದ ಸ್ಕೂಲಿನ ಖರ್ಚು ಅಂದರೆ ಪುಸ್ತಕಗಳು, ಫೀಸು, ಸಮವಸ್ತ್ರ, ಬೂಟ್ಸ್, ಸಾಕ್ಸ್ ಎಲ್ಲಾ ಕೊಟ್ಟು ಸಹಾಯ ಮಾಡಿದ್ದೀರಿ' ಎಂದ. ಬಾಡಿದ ಮುಖ, ಸೊರಗಿದ ದೇಹ, ಅಳತೆಯಿಲ್ಲದ ಸ್ಕೂಲಿನ ಸಮವಸ್ತ್ರ ಧರಿಸಿ, ತಲೆಯನ್ನು ಮೇಲಕ್ಕೆ ಎತ್ತದೆ ನಾಚಿಕೆಯಿಂದ ನಾನೇ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ. ಆ ಹುಡುಗ ಇವನೇ ಎಂದು ನಂಬಲಾಗಲಿಲ್ಲ.

ಹುಡುಗ ದೃಢಕಾಯನಾಗಿ ಎತ್ತರಕ್ಕೆ ಬೆಳೆದಿದ್ದಾನೆ. ತಲೆಯೆತ್ತಿ ಮಾತನಾಡುತ್ತಿದ್ದಾನೆ. ನೀಟಾಗಿ ಬಾಚಿದ ಗುಂಗರು ಕೂದಲಿನ ಕ್ರಾಪ್ ಜೊತೆಗೆ ಫ್ರೆಂಚ್ ಗಡ್ಡ, ಆಧುನಿಕ ಉಡುಪು ನೋಡಿ ಅವನು ಶ್ರೀಧರನೆಂದು ನಂಬಲು ಸ್ವಲ್ಪ ಕಾಲಾವಕಾಶ ಬೇಕಾಯಿತು. ಅಷ್ಟರಲ್ಲೇ ಶ್ರೀಧರ `ಮೇಡಂ! ನಿಮ್ಮ ವಿಳಾಸ ಕೊಡಿ.
 

ನಿಮ್ಮ ಹಳೆ ಮನೆಗೆ ಹೋಗಿದ್ದೆ. ನೀವಿರಲಿಲ್ಲ. ಭಾನುವಾರ ನಿಮ್ಮ ಮನೆಗೆ ಬಂದು ನನ್ನ ವಿವಾಹದ ಲಗ್ನ ಪತ್ರಿಕೆಯನ್ನು ಕೊಟ್ಟು ನನ್ನ ಮದುವೆಗೆ ಆಹ್ವಾನಿಸುತ್ತೇವೆ' ಎಂದು ವಿಳಾಸ ಬರೆದುಕೊಂಡ. ಅಷ್ಟರಲ್ಲೇ ಅವನು ಇಳಿಯುವ ನಿಲ್ದಾಣ ಬಂತು. ನನಗೆ ಕೈ ಬೀಸುತ್ತಾ, ಬೈ ಬೈ ಹೇಳಿ ಬಸ್ಸಿನಿಂದಿಳಿದು ಹೊರಟೇಹೋದ. ನಾನು ತಬ್ಬಿಬ್ಬಾಗಿ ಕುಳಿತೇ ಇದ್ದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT