ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್ ಮೇಲೆ ಹರಿಹಾಯ್ದ ಸದಸ್ಯರು

Last Updated 19 ಫೆಬ್ರುವರಿ 2011, 9:05 IST
ಅಕ್ಷರ ಗಾತ್ರ

ತುಮಕೂರು: ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದು ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಗಮನ ನೀಡುತ್ತಿಲ್ಲ. ಜತೆಗೆ ಯಾವುದೇ ವಾರ್ಡ್‌ಗಳಿಗೂ ಭೇಟಿ ನೀಡಿ ನಾಗರಿಕರ ಕುಂದುಕೊರೆತಗಳಿಗೆ ಸ್ಪಂದಿಸುತ್ತಿಲ್ಲ ಎಂದು ಮಹಾನಗರ ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಮೇಯರ್ ಮೇಲೆ ವಾಗ್ದಾಳಿ ಮಾಡಿದ ಘಟನೆ ಶುಕ್ರವಾರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆಯೇ ಮೇಯರ್ ಯಶೋಧಾ ಗಂಗಪ್ಪ, ಶೂನ್ಯ ವೇಳೆ ಇರುವುದಿಲ್ಲ. ಕಾರ್ಯಸೂಚಿಯ ವಿಷಯಗಳ ಜತೆಗೆ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಬಹುದು ಎಂದು ಪ್ರಕಟಿಸಿದ ತಕ್ಷಣ ಬಿಜೆಪಿ ಸದಸ್ಯ ಕೆ.ಪಿ.ಮಹೇಶ್, ಕಾಂಗ್ರೆಸ್ ಸದಸ್ಯರಾದ ದೇವಿಕಾ ರಮೇಶ್, ತರುಣೇಶ್ ಆಕ್ಷೇಪ ವ್ಯಕ್ತಪಡಿಸಿ, ಶೂನ್ಯವೇಳೆಗೆ ಪಟ್ಟುಹಿಡಿದರು. ಇತರ ಸದಸ್ಯರು ಇದಕ್ಕೆ ದನಿಗೂಡಿಸಿದರು.

ಮೇಯರ್ ಈವರೆಗೂ ಒಂದೇ ಒಂದು ವಾರ್ಡ್‌ಗೂ ಅಧಿಕೃತ ಭೇಟಿ ನೀಡಿಲ್ಲ. ಭೇಟಿ ನೀಡಿರುವ ಬಗ್ಗೆ ಒಂದೇ ಒಂದು ದಾಖಲೆ ನೀಡಿದರೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಸವಾಲು ಹಾಕಿದ ತರುಣೇಶ್, ಅಭಿವೃದ್ಧಿಗೆ ತಾರತಮ್ಯ ಮಾಡುತ್ತಿದ್ದೀರಿ ಎಂದು ಕಟುವಾಗಿ ಟೀಕಿಸಿದರು. ಇದಕ್ಕೆ ಆಕ್ಷೇಪಿಸಿದ ಮೇಯರ್, ತಾನು ‘ವರ’ ಎಂದು ಭಾವಿಸಿದ್ದೇನೆ. ಹೇಳಿಕೆ ವಾಪಸ್ ಪಡೆಯಿರಿ ಎಂದು ತಾಕೀತು ಮಾಡಿದರು. ಸಮಸ್ಯೆಗಳಿಗೆ ಅಧಿಕಾರಿಗಳು, ಸಿಬ್ಬಂದಿಯೂ ಸ್ಪಂದಿಸುತ್ತಿಲ್ಲ. ಹಲವು ಬಾರಿ ಪತ್ರ ಬರೆದರೂ ನಿಮ್ಮಿಂದ ಯಾವುದೇ ಉತ್ತರ ಇಲ್ಲ.ಎಂದು ಸದಸ್ಯ ಕೆ.ಪಿ.ಮಹೇಶ್ ವಾಗ್ದಾಳಿ ನಡೆಸಿದರು.

ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಸರ್ಕಾರದಿಂದ ಬರಲಿರುವ ರೂ. 100 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ, ಅಂದಾಜು ಪಟ್ಟಿ ತಯಾರಿಸಲು ಪಾಲಿಕೆಯಲ್ಲಿ ಅಗತ್ಯ ಮಾನವ ಶಕ್ತಿ ಇಲ್ಲ. ಕೇವಲ ಮೂವರು ಕಿರಿಯ ಎಂಜಿನಿಯರ್‌ಗಳನ್ನು ಇಟ್ಟುಕೊಂಡು ಕೆಲಸ ಮಾಡಲು ಆಗುತ್ತದೆಯೇ? ಎಂದು ಆಯುಕ್ತ ಜಯವಿಭವಸ್ವಾಮಿ ಪರಿಸ್ಥಿತಿ ವಿವರಿಸಿದರು. ನಗರಕ್ಕೆ ಪೂರೈಸುವಷ್ಟು ನೀರು ಬುಗುಡನಹಳ್ಳಿ ಕೆರೆಯಲ್ಲಿದೆ. ಆದರೆ, ಅಸಮರ್ಪಕ ನೀರು ಪೂರೈಕೆಗೆ ಪಾಲಿಕೆ ಸದಸ್ಯರೇ ಕಾರಣ ಎಂದು ಶಾಸಕ ಸೊಗಡು ಶಿವಣ್ಣ ನೀಡಿರುವ ಹೇಳಿಕೆಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ಶಾಸಕರು ಸಲ್ಲದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಸಮಸ್ಯೆ ಬಗೆಹರಿಸಲು ಸಭೆಗಳಲ್ಲಿ ಭಾಗವಹಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ಮೂರು ದಿನ ಗಡುವು: ಬುಗುಡನಹಳ್ಳಿಯಿಂದ ನಗರಕ್ಕೆ ತಂದಿರುವ ಪೈಪ್‌ಲೈನ್‌ನಲ್ಲಿ ಸೋರಿಕೆ ಸರಿಪಡಿಸಿಲ್ಲ. ಪೈಪ್‌ಲೈನ್‌ನಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ನೀರು ಪಡೆದು, ಮಾರಾಟ ಮಾಡುತ್ತಿದ್ದಾರೆ. ನೀರು ಶುದ್ಧೀಕರಣ ಘಟಕದಿಂದಲೇ ಮೂರು ಇಂಚು ವ್ಯಾಸದ ಪೈಪ್ ಅಳವಡಿಸಿ ತೋಟಕ್ಕೆ ನೀರು ಕೊಡಲಾಗಿದೆ. ಇದು ನೀರು ಸರಬರಾಜು ಮಂಡಳಿ ಅಧಿಕಾರಿಗಳು, ಆಯುಕ್ತರ ಗಮನಕ್ಕೆ ಬಂದಿಲ್ಲವೇ? ಎಂದು ಸದಸ್ಯೆಯರಾದ ಸುಜಾತಾ ಚಂದ್ರಶೇಖರ್, ಶಮೀಮ್ ತಾಜ್ ತರಾಟೆಗೆ ತೆಗೆದುಕೊಂಡರು.

ಮೂರು ದಿನಗಳ ಒಳಗೆ ಸ್ಥಳ ಪರಿಶೀಲನೆ ನಡೆಸಿ, ಅಕ್ರಮವಾಗಿ ನೀರು ಸಂಪರ್ಕ ಪಡೆದಿದ್ದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ನೀರು ಸರಬರಾಜು ಮಂಡಳಿ ಎಂಜಿನಿಯರ್‌ಗಳಿಗೆ ಆಯುಕ್ತರು ತಾಕೀತು ಮಾಡಿದರು. ಬುಗುಡನಹಳ್ಳಿ ಕೆರೆಯಲ್ಲಿ ಜನರು ಬಟ್ಟೆ, ಜಾನುವಾರುಗಳ ಮೈತೊಳೆಯುತ್ತಿರುವ ಬಗ್ಗೆ ಸದಸ್ಯ ನಯಾಜ್ ಅಹಮದ್ ಸಭೆಯ ಗಮನಕ್ಕೆ ತಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ, ಕೆರೆ ನೀರು ಅಶುದ್ಧಗೊಳಿಸದಂತೆ ನೀರು ಸರಬರಾಜು ಮಂಡಳಿಯೇ ನಿಗಾವಹಿಸಬೇಕು.
 
ರಕ್ಷಣೆಗೆ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು ಎಂದು ಆಯುಕ್ತರು ಸೂಚಿಸಿದರು. ನಿವೇಶನ ಕಬಳಿಕೆ: 24ನೇ ವಾರ್ಡ್‌ನಲ್ಲಿ ಸುಮಾರು ರೂ. 3 ಕೋಟಿ ಬೆಲೆ ಬಾಳುವ ಪಾಲಿಕೆಯ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಕಬಳಿಸಿದ್ದಾರೆ ಎಂದು ಆರೋಪಿಸಿದ ಸದಸ್ಯ ಕೆ.ಪಿ.ಮಹೇಶ್, ದಾಖಲೆಗಳನ್ನು ಪ್ರದರ್ಶಿಸಿ, ನಕಲಿ ಖಾತೆಯನ್ನು ರದ್ದುಪಡಿಸಿ, ನಿವೇಶನ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಇತರ ಸದಸ್ಯರು ದನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT