ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್, ವಿರೋಧ ಪಕ್ಷ ಖಂಡನೆ

Last Updated 1 ಅಕ್ಟೋಬರ್ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಸದಸ್ಯ ಕಾಂಗ್ರೆಸ್‌ನ ಎಸ್. ನಟರಾಜ್ ಅವರ ಹತ್ಯೆಗೆ ಮೇಯರ್ ಹಾಗೂ ವಿರೋಧ ಪಕ್ಷಗಳ ಮುಖಂಡರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ವೈಫಲ್ಯದ ಬಗ್ಗೆ ಕಿಡಿ ಕಾರಿರುವ ಅವರು, ಪಾಲಿಕೆ ಸದಸ್ಯರಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

`ನಟರಾಜ್ ಉತ್ತಮ ವ್ಯಕ್ತಿಯಾಗಿದ್ದರು. ಹಾಡಹಗಲೇ ದುಷ್ಕರ್ಮಿಗಳು ಅವರನ್ನು ಹತ್ಯೆ ಮಾಡಿರುವ ವಿಷಯ ತಿಳಿದು ಬಹಳ ನೋವಾಯಿತು. ಪಾಲಿಕೆ ಸದಸ್ಯರಿಗೆ ರಕ್ಷಣೆ ನೀಡುವ ಸಂಬಂಧ ಪಕ್ಷದ ಮುಖಂಡರೊಂದಿಗೆ ಚರ್ಚಿಸಲಾಗುವುದು~ ಎಂದು ಮೇಯರ್ ಪಿ. ಶಾರದಮ್ಮ ತಿಳಿಸಿದರು.

ಸದಸ್ಯರಿಗೆ ಪೊಲೀಸ್ ಭದ್ರತೆ: `ಪಾಲಿಕೆ ಸದಸ್ಯರೊಬ್ಬರನ್ನು ಸಾರ್ವಜನಿಕರ ಎದುರೇ ಹತ್ಯೆ ಮಾಡಿರುವುದು ಖಂಡನೀಯ. ಇದರಿಂದ ಜನರು ಭಯಭೀತರಾಗಿದ್ದಾರೆ. ಸೌಮ್ಯ ವ್ಯಕ್ತಿತ್ವದ ನಟರಾಜ್ ಕೊಲೆಯಾಗಿರುವುದು ನೋವು ತಂದಿದೆ. ಪೊಲೀಸ್ ಠಾಣೆಯ ಸಮೀಪದಲ್ಲೇ ಕೊಲೆ ನಡೆದಿದ್ದು, ಪೊಲೀಸರ ವೈಫಲ್ಯ ಎದ್ದು ಕಾಣುತ್ತದೆ. ಹಾಗಾಗಿ ಭದ್ರತೆ ಅಪೇಕ್ಷಿಸುವ ಪಾಲಿಕೆ ಸದಸ್ಯರಿಗೆ ರಕ್ಷಣೆ ನೀಡುವಂತೆ ಕೋರಲು ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು~ ಎಂದು ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ ಹೇಳಿದರು.

ಆಘಾತವಾಗಿದೆ: `ನಟರಾಜ್ ಅವರ ಹತ್ಯೆ ಸುದ್ದಿ ಆಘಾತ ಉಂಟು ಮಾಡಿದೆ. ಹಾಡಹಗಲೇ ಜನಪ್ರತಿನಿಧಿಯೊಬ್ಬರು ಕೊಲೆಯಾಗಿರುವುದಕ್ಕೆ ಪೊಲೀಸ್ ಇಲಾಖೆ ವೈಫಲ್ಯವೇ ಕಾರಣ. ನಗರದ ಹೃದಯ ಭಾಗದಲ್ಲೇ ಈ ಘಟನೆ ನಡೆದಿರುವುದು ದುರ್ದೈವದ ಸಂಗತಿ. ಪಕ್ಷ ಇದನ್ನು ತೀವ್ರವಾಗಿ ಖಂಡಿಸುತ್ತದೆ~ ಎಂದು ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್ ಆಕ್ರೋಶ ವ್ಯಕ್ತಪಡಿಸಿದರು.

ದಕ್ಷ ಪೊಲೀಸರನ್ನು ನೇಮಿಸಿ: `ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಆರಂಭವಾಗಿ 16 ತಿಂಗಳು ಪೂರ್ಣಗೊಳ್ಳುವ ಹೊತ್ತಿಗೆ ಇಬ್ಬರು ಸದಸ್ಯರ ಹತ್ಯೆ ನಡೆದಿದೆ. ಇದೇ ಗಾಂಧಿನಗರದಲ್ಲಿ ಪಾಲಿಕೆ ಮಾಜಿ ಸದಸ್ಯ ಗೋವಿಂದರಾಜು ಅವರ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆಗಳಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ. ಮುಖ್ಯಮಂತ್ರಿಗಳು ಕೂಡಲೇ ಇತ್ತ ಗಮನ ಹರಿಸಿ, ನಗರದ ಠಾಣೆಗಳಿಗೆ ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು. ಜನರು ನಿರಾಂತಕವಾಗಿ ಓಡಾಡುವ ವಾತಾವರಣ ನಿರ್ಮಿಸಬೇಕು~ ಎಂದು ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದ್ದಾರೆ.

ಹತ್ತಾರು ಸದಸ್ಯರಿಗೆ ಜೀವ ಬೆದರಿಕೆ: ಬಿಬಿಎಂಪಿಗೆ ಚುನಾವಣೆ ನಡೆದು ಜನಪ್ರತಿನಿಧಿಗಳ ಆಡಳಿತ ಅಸ್ತಿತ್ವಕ್ಕೆ ಬಂದ 16 ತಿಂಗಳಲ್ಲಿ ಇಬ್ಬರು ಸದಸ್ಯರ ಬರ್ಬರ ಹತ್ಯೆ ನಡೆದಿದೆ. ಜನವರಿ 16ರಂದು ಜೆಡಿಎಸ್‌ನ ಮಹಮ್ಮದ್ ಅಲಿ (ದಿವಾನ್ ಅಲಿ) ಅವರ ಹತ್ಯೆಯಾಗಿತ್ತು. ಶನಿವಾರ ಕಾಂಗ್ರೆಸ್ ಸದಸ್ಯ ಎಸ್. ನಟರಾಜ್ ಕೊಲೆಯಾಗಿದ್ದಾರೆ.

ಪಾಲಿಕೆಯ ಹಲವು ಸದಸ್ಯರಿಗೆ ಇಂದಿಗೂ ಪ್ರಾಣ ಬೆದರಿಕೆ ಇದೆ. ಬಿಜೆಪಿ ಹಾಗೂ ಕಾಂಗ್ರೆಸ್‌ನ ಹತ್ತಕ್ಕೂ ಹೆಚ್ಚು ಸದಸ್ಯರ ಪ್ರಾಣಕ್ಕೆ ಆಪತ್ತು ಇದೆ. ಅಲ್ಲದೇ ಕೆಲ ಸದಸ್ಯೆಯರ ಪತಿಯರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT