ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇರೆ ಮೀರಿದ ಈದ್ ಭಕ್ತಿ-ಶ್ರದ್ಧೆ

Last Updated 17 ಫೆಬ್ರುವರಿ 2011, 9:10 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಬುಧವಾರ ಈದ್ ಮಿಲಾದ್ ಸಂಭ್ರಮ ಮೇರೆ ಮೀರಿತ್ತು. ಮುಸ್ಲಿಂ ಧರ್ಮ ಮತ್ತು ದೇವರ ಪರವಾದ ಘೋಷಣೆ ಮುಗಿಲು ಮುಟ್ಟಿದ್ದವು. ಎಲ್ಲೆಲ್ಲೂ ಬಿಳಿ ಸಮವಸ್ತ್ರ ಧರಿಸಿದ ಮುಸ್ಲಿಮರೆ ಎದ್ದು ಕಾಣುತ್ತಿದ್ದರು.

ಬೆಳಿಗ್ಗೆಯಿಂದಲೇ ಸಾವಿರಾರು ಮುಸ್ಲಿಮರು ಭಕ್ತಿ-ಶ್ರದ್ಧೆಯಿಂದ ಈದ್ ಮಿಲಾದ್ ಆಚಚರಣೆಯಲ್ಲಿ ಪಾಲ್ಗೊಂಡರು. ನಗರದ ಹೊರವಲಯದ ಈದ್ಗಾ ಮೈದಾನದಲ್ಲಿ ಸಂಜೆ ಬಿಳಿಯ ವಸ್ತ್ರ ಧರಿಸಿ ನೆರೆದು ಹಿರಿಯರು-ಕಿರಿಯರೆಲ್ಲರೂ ಶಿಸ್ತಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಮರು ವಾಸಿಸುವ ಪ್ರದೇಶಗಳಲ್ಲಿ, ಮಸೀದಿಗಳಿರುವ ಸ್ಥಳಗಳಲ್ಲಿ, ಗಡಿಯಾರ ಗೋಪುರ ವೃತ್ತದಲ್ಲಿ ಚಂದ್ರ ನಕ್ಷತ್ರವುಳ್ಳ ಹಸಿರು ಬಾವುಟಗಳು ರಾರಾಜಿಸಿದವು.

ಮೆರವಣಿಗೆ
ಹಬ್ಬದ ಪ್ರಯುಕ್ತ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆ ವಿಶೇಷ ಗಮನ ಸೆಳೆಯಿತು. ಮುಸ್ಲಿಂ ಪರವಾದ ಘೋಷಣೆ ಮೊಳಗಿದವು. ಹಸಿರು ಬಾವುಟ ಹಾರಾಡಿದವು. ಸಂಜೆ 4ಕ್ಕೆ ಅಂಜುಮನ್ ಇಸ್ಲಾಮಿಯಾ ಕಚೇರಿಯಿಂದ ಆರಂಭವಾದ ಮೆರವಣಿಗೆ ಅಮ್ಮವಾರಿಪೇಟೆ ವೃತ್ತ, ಎಂ.ಬಿ.ರಸ್ತೆ, ಹೊಸ ಬಸ್ ನಿಲ್ದಾಣ, ಗಡಿಯಾರ ಗೋಪುರ ವೃತ್ತದ ಮೂಲಕ ಈದ್ಗಾ ಮೈದಾನ ತಲುಪಿತು.ಅಲ್ಲಿ ನೆರೆದ ಮುಸ್ಲಿಮರು 5ಗಂಟೆಗೆ ಪ್ರಾರ್ಥನೆ ಸಲ್ಲಿಸಿದರು. ನಂತರ ಮೆರವಣಿಗೆ ಮುಂದುವರಿಯಿತು. ಮೈದಾನದಿಂದ ಡೂಂ ಲೈಟ್ ವೃತ್ತ, ಎಂಜಿ.ರಸ್ತೆ ಮೂಲಕ ಮತ್ತೆ ಸಮಿತಿ ಕಚೇರಿ ತಲುಪಿತು.

ಸಂಚಾರ ನಿಷೇಧ: ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಪ್ರಾರ್ಥನೆ ಮತ್ತು ಮೆರವಣಿಗೆಗೆ ಅನುಕೂಲ ಕಲ್ಪಿಸಲೆಂದೇ ಮೆರವಣಿಗೆ ಮಾರ್ಗದಲ್ಲಿ ವಾಹನ ಸಂಚಾರವನ್ನು ಪೂರ್ಣವಾಗಿ ನಿಷೇಧಿಸಲಾಗಿತ್ತು. ಪರಿಣಾಮವಾಗಿ ಬೆಂಗಳೂರು ಕಡೆಯಿಂದ ಬರುವ ಬಸ್‌ಗಳು ಟೇಕಲ್ ರಸ್ತೆ ಮಾರ್ಗದಲ್ಲಿ ನಗರವನ್ನು ಪ್ರವೇಶಿದವು. ಉಳಿದಂತೆ ವಾಹನ ಸಂಚಾರ ಸ್ಥಗಿತಗೊಂಡಿತ್ತು.ಸಾವಿರಾರು ಮಂದಿ ಮೆರವಣಿಗೆ ವೀಕ್ಷಿಸಿದರು. ಭದ್ರತೆ ಸಲುವಾಗಿ ಅತ್ಯಧಿಕ ಸಂಖ್ಯೆ ಪೊಲೀಸರನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿತ್ತು.

ನಂತರ ಅಂಜುಮನ್ ಇಸ್ಲಾಮಿಯಾ ಕಟ್ಟಡದಲ್ಲಿ ಪ್ರವಾದಿ ಹಜರತ್ ಮೊಹಮ್ಮದ್ ಇ ಅರಾಬಿ ಜನ್ಮದಿನೋತ್ಸವ ಹಮ್ಮಿಕೊಳ್ಳಲಾಗಿತ್ತು. ಅಂಜುಮನ್ ಇಸ್ಲಾಮಿಯಾದ ಅಧ್ಯಕ್ಷ ಕೆ.ಎಂ.ಜಮೀರ್ ಅಹ್ಮದ್, ಪ್ರೊ.ಎಜಾಜ್ ಉದ್ದೀನ್, ಮೌಲ್ವಿಗಳಾದ ನೂರ್ ಮೊಹ್ಮದ್, ಮೊಹ್ಮದ್ ಖಲೀಲುಲ್ಲಾ, ಮುಸ್ಲಿಂ ಸಮುದಾಯದ ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದರು.
ಮೊಟ್ಟೆ ವಿತರಣೆ: ಈದ್ ಮಿಲಾದ್ ಪ್ರಯುಕ್ತ ನಗರದ ಅಂತರಗಂಗೆ ಅಂಗವಿಕಲರ ಶಾಲೆ ವಿದ್ಯಾರ್ಥಿಗಳಿಗೆ ಬುಧವಾರ ಬೆಳಿಗ್ಗೆ ನ್ಯೂಭಾರತ್ ಯುಥ್ ಫೌಂಡೇಶನ್ ಕಾರ್ಯಕರ್ತರು ಹಣ್ಣು ಮತ್ತು ಮೊಟ್ಟೆ ವಿತರಿಸಿದರು.ಫೌಂಡೇಶನ್ ಅಧ್ಯಕ್ಷ ಸೈಯದ್ ಆಶಮ್, ಪ್ರಮುಖರಾದ ಫೈರೋಸ್, ರಿಜ್ವಾನ್, ಸೈಯದ್ ನವಾಜ್, ಆಲಿ, ಅಮೀರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT