ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲಧಿಕಾರಿಗಳಿಂದ ಕಿರುಕುಳ ಆರೋಪ :ಆತ್ಮಹತ್ಯೆ ಬೆದರಿಕೆ- ಪೇದೆ ಬಂಧನ

Last Updated 5 ಜುಲೈ 2012, 8:00 IST
ಅಕ್ಷರ ಗಾತ್ರ

ಕೊಪ್ಪಳ: ಮೇಲಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತನ್ನ ಕೋಣೆ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ ಇಂಡಿಯನ್ ರಿಜರ್ವ್ ಬೆಟಾಲಿಯನ್‌ನ (ಐಆರ್‌ಬಿ) ಪೇದೆಯನ್ನು ಸಿನಿಮೀಯ ರೀತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರಕ್ಷಿಸಿ, ಬಂಧಿಸಲಾಗಿದೆ.

ಅಲ್ಲದೇ, ಇದೇ ವೇಳೆ ತನ್ನ ಕೋಣೆಯಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಇಬ್ಬರು ಸಹೋದ್ಯೋಗಿಗಳನ್ನು ಸಹ ಜಿಲ್ಲೆಯ ಪೊಲೀಸರು ರಕ್ಷಿಸಿದ್ದಾರೆ.ತಾಲ್ಲೂಕಿನ ಹೊಸನಿಂಗಾಪುರ ಗ್ರಾಮದ ಬಳಿ ಇರುವ ಐಆರ್‌ಬಿ ಕೇಂದ್ರದಲ್ಲಿ ಬುಧವಾರ ಈ ಘಟನೆ ನಡೆದಿದೆ. ಐಆರ್‌ಬಿ ಪೇದೆ ಯಮುನಪ್ಪ ಆತ್ಮಹತ್ಯೆಗೆ ಯತ್ನಿಸಿ ಈಗ ಮುನಿರಾಬಾದ್ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ. ಸಂಜೀವ್ ಮತ್ತು ಕಿರಣ್ ಎಂಬುವವರು ಯಮುನಪ್ಪನ ಹುಚ್ಚಾಟದಿಂದ ಆಗುತ್ತಿದ್ದ ಅನಾಹುತದಿಂದ ಪಾರಾದ ಸಹೋದ್ಯೋಗಿಗಳು.

ಘಟನೆ ವಿವರ: ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕವಟಕೊಪ್ಪ ಗ್ರಾಮದ ಯಮುನಪ್ಪ 2008ರಲ್ಲಿ ಐಆರ್‌ಬಿಯಲ್ಲಿ ಪೇದೆಯಾಗಿ ನೇಮಕಗೊಂಡಿದ್ದಾನೆ. 6 ತಿಂಗಳ ಹಿಂದೆ ಮದುವೆಯಾಗಿದ್ದ ಈತನಿಗೆ ಕೇಂದ್ರದ ವ್ಯಾಪ್ತಿಯಲ್ಲಿರುವ ವಸತಿಗೃಹವನ್ನು ನೀಡಿರಲಿಲ್ಲ ಎನ್ನಲಾಗಿದೆ.
 
ಅಲ್ಲದೇ, ವಸತಿಗೃಹ ನೀಡುವ ಸಲುವಾಗಿ ಮೇಲಧಿಕಾರಿಗಳು 20 ಸಾವಿರ ರೂಪಾಯಿ ಲಂಚ ಕೇಳಿದ್ದರು ಎಂದೂ ಹೇಳಲಾಗಿದೆ. ಇದರಿಂದ ಮನನೊಂದ ಯಮುನಪ್ಪ ಇಂದು ಬೆಳಿಗ್ಗೆ 5 ಗಂಟೆ ಹೊತ್ತಿಗೆ ತನ್ನ ಸಹೋದ್ಯೋಗಿಗಳನ್ನು ತಾವಿರುವ ಕೋಣೆಯಲ್ಲಿಯೇ ಕೂಡಿ ಹಾಕಿದ್ದಲ್ಲದೇ, ಚಾಕು ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ.

ಒತ್ತೆಯಾಳಾಗಿಟ್ಟುಕೊಂಡಿದ್ದವರನ್ನು ಮೂತ್ರ ವಿಸರ್ಜನೆಗೂ ಬಿಡದ ಯಮುನಪ್ಪ, ಸ್ಥಳಕ್ಕೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದ ಪ್ರತಿನಿಧಗಿಳು ಬಂದು ತನ್ನ ಅಹವಾಲು ಕೇಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ. ಅಲ್ಲದೇ, ಒಂದು ಚಾಕುವನ್ನು ತನ್ನ ಕುತ್ತಿಗೆಗೆ ಇಟ್ಟುಕೊಂಡಿದ್ದರೆ, ಮತ್ತೊಂದು ಚಾಕುವನ್ನು ಒತ್ತೆಯಾಳಾಗಿದ್ದವರತ್ತ  ಹಿಡಿದಿದ್ದ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಪ್ರಕಾಶ್, ಡಿಎಸ್‌ಪಿ ವಿಜಯ ಡಂಬಳ ಅವರು ಮಾಡಿದ ಮನವಿಗೆ ಯಮುನಪ್ಪ ಸ್ಪಂದಿಸಿ, ಹೊರಗೆ ಬರಲು ನಿರಾಕರಿಸಿದ. ಇತ್ತ ಯಮುನಪ್ಪನ ಬೆದರಿಕೆ, ಬೇಡಿಕೆ ಮುಂದುವರಿದಿತ್ತು.

ಅಷ್ಟರಲ್ಲಿ ಕೆಲ ಪೊಲೀಸರು ಕಿಟಕಿಯಿಂದ ಹಿಡಿಯಷ್ಟು ಖಾರದ ಪುಡಿಯನ್ನು ಕೊಣೆಯೊಳಕ್ಕೆ ಚೆಲ್ಲಿದರು. ಇದರಿಂದ ವಿಚಲಿತನಾದ ಯಮುನಪ್ಪ ಕೂಡಲೇ ಒತ್ತೆಯಾಳುಗಳತ್ತ ನುಗ್ಗಿದ. ಇದೇ ಸಂದರ್ಭದಲ್ಲಿ 5-6 ಜನರಿದ್ದ ಪೊಲೀಸರ ಗುಂಪು ಕೋಣೆಯ ಬಾಗಿಲನ್ನು ಮುರಿದು ಒಳ ನುಗ್ಗಿದರಲ್ಲದೇ, ಕ್ಷಣಾರ್ಧದಲ್ಲಿ ಯಮುನಪ್ಪನನ್ನು ಬಂಧಿಸಿ, ತಮ್ಮ ವಶಕ್ಕೆ ತೆಗೆದುಕೊಂಡರು.

ನಂತರ ಮುನಿರಾಬಾದ್ ಠಾಣೆಗೆ ಕರೆದೊಯ್ಯಲಾಯಿತಲ್ಲದೇ, ಯಮುನಪ್ಪನ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ. ಗ್ರಾಮೀಣ ಸಿಪಿಐ ವೆಂಕಟಪ್ಪ ನಾಯಕ ಹಾಗೂ ಇತರ ಅಧಿಕಾರಿಗಳು ಸಹ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಈ ಕಾರ್ಯಾಚರಣೆ ನೋಡಲು ಐಆರ್‌ಬಿ ಆವರಣದಲ್ಲಿನ ವಸತಿಗೃಹಗಳ ಸಮುಚ್ಚಯದ ಮುಂದೆ ಜನ ಸೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT