ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲು`ಕೋಟೆ'ಯ ಅಧಿಪತ್ಯ ಯಾರದ್ದು?

Last Updated 10 ಏಪ್ರಿಲ್ 2013, 5:50 IST
ಅಕ್ಷರ ಗಾತ್ರ

ಮಂಡ್ಯ: ಪಾಂಡವಪುರ ವಿಧಾನಸಭೆ ಕ್ಷೇತ್ರ ಮರುವಿಂಗಡಣೆಯ ನಂತರ ಮೇಲುಕೋಟೆ ವಿಧಾನಸಭೆ ಎಂದು ಬದಲಾಗಿದೆ. ಚಿನಕುರಳಿ, ಕಸಬಾ, ಮೇಲುಕೋಟೆಯನ್ನು ಒಳಗೊಂಡಿದ್ದ ಈ ಕ್ಷೇತ್ರಕ್ಕೆ 2008ರ ಚುನಾವಣೆಯಲ್ಲಿ ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿಯೂ ಸೇರಿಕೊಂಡಿದೆ.

1952 ರಿಂದ ಇಲ್ಲಿಯವರೆಗೆ 13 ಬಾರಿ ಕ್ಷೇತ್ರಕ್ಕೆ ಚುನಾವಣೆ ನಡೆದಿದ್ದು, ಒಂಬತ್ತು ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿಲ್ಲ.

1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿ.ವೈ.ನಿಲೇಗೌಡರು ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಇವರ ವಿರುದ್ಧ ಕಿಸಾನ್ ಮಜ್ದೂರ್ ಪಾರ್ಟಿಯಿಂದ ಬಿ. ಚಾಮಯ್ಯ, ಪಕ್ಷೇತರ ಅಭ್ಯರ್ಥಿಯಾಗಿ ಚನ್ನೇಗೌಡ, ಕೆ.ಎಂ. ಲಿಂಗೇಗೌಡ ಸ್ಪರ್ಧಿಸಿದ್ದರು.

1957ರ ಚುನಾವಣೆಯಲ್ಲಿ ಬಿ.ವೈ. ನಿಲೇಗೌಡರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ. ಅವರ ಬದಲಾಗಿ ಮಹಿಳಾ ನಾಯಕಿ ದಮಯಂತಿ ಬೋರೇಗೌಡ ಅವರಿಗೆ ಟಿಕೆಟ್ ನೀಡಲಾಯಿತು. ಪಿಎಸ್‌ಪಿಯಿಂದ ಬಿ. ಚಾಮಯ್ಯ ಸ್ಪರ್ಧಿಸಿದರು. ಪಕ್ಷೇತರರಾಗಿ ದೊಡ್ಡತಿಮ್ಮೇಗೌಡರು ಕಣದಲ್ಲಿದ್ದರು. ಬಿ. ಚಾಮಯ್ಯ ಗೆಲುವು ಸಾಧಿಸಿದರು.

 

ಹ್ಯಾಟ್ರಿಕ್ ಸಾಧನೆ ತಡೆಗೆ ತೀವ್ರ ಪೈಪೋಟಿ
ಜೆಡಿಎಸ್ ಅಭ್ಯರ್ಥಿಯಾಗಿ ಶಾಸಕ ಸಿ.ಎಸ್. ಪುಟ್ಟರಾಜು ಹ್ಯಾಟ್ರಿಕ್ ಸಾಧನೆಗೆ ಮುಂದಾಗಿದ್ದಾರೆ. ಇದಕ್ಕೆ ತಡೆಯೊಡ್ಡಲು ಕೆಜೆಪಿ ಬೆಂಬಲ ಪಡೆದಿರುವ ಸರ್ವೋದಯ ಕರ್ನಾಟಕ ಪಕ್ಷದಿಂದ ಕೆ.ಎಸ್. ಪುಟ್ಟಣ್ಣಯ್ಯ ಹಾಗೂ ಕಾಂಗ್ರೆಸ್‌ನಿಂದ ಕೆಪಿಸಿಸಿ ಸದಸ್ಯ ಎಲ್.ಡಿ. ರವಿ ಕಣಕ್ಕೆ ಇಳಿದಿದ್ದಾರೆ.
ಬಿಎಸ್ಪಿಯಿಂದ ಮಹೇಶ್ ಮಾಚಳ್ಳಿ ಸ್ಪರ್ಧಿಸುವುದು ಖಚಿತವಾಗಿದ್ದರೆ, ಬಿಎಸ್‌ಆರ್ ಕಾಂಗ್ರೆಸ್ ಉದಯ್‌ಕುಮಾರ್, ಬಿಜೆಪಿಯಿಂದ ಮಂಜುನಾಥ್, ರವೀಂದ್ರ ಅವರು ಆಕಾಂಕ್ಷಿಯಾಗಿದ್ದಾರೆ.

1962ರ ಚುನಾವಣೆಯಲ್ಲಿ ಕಳೆದ ಬಾರಿ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್ ಪಕ್ಷವು ಮತ್ತೆ ಮಾಜಿ ಶಾಸಕ ಬಿ.ವೈ. ನಿಲೇಗೌಡರಿಗೆ ಟಿಕೆಟ್ ನೀಡಿತು. ಪ್ರಜಾ ಸೋಷಲಿಸ್ಟ್ ಪಾಟಿ (ಪಿಎಸ್‌ಪಿ)ಯಿಂದ ಎನ್.ಎ. ಚನ್ನೇಗೌಡರು ಸ್ಪರ್ಧಿಸಿದರು. ನಿಲೇಗೌಡರು ಎರಡನೇ ಬಾರಿಗೆ ಆಯ್ಕೆಯಾದರು.


1967ರ ಕಾಂಗ್ರೆಸ್ ಹೊಸ ಅಭ್ಯರ್ಥಿ ಡಿ. ಹಲಗೇಗೌಡರಿಗೆ ಟಿಕೆಟ್ ನೀಡಿತು. ಎನ್.ಎ. ಚನ್ನೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಗೆಲುವು ಸಾಧಿಸಿದರು.

1972ರ ಚುನಾವಣೆಯಲ್ಲಿ ಕಾಂಗ್ರೆಸ್ ಇಬ್ಭಾಗವಾಗಿತ್ತು. ಆಡಳಿತ ಕಾಂಗ್ರೆಸ್‌ನಿಂದ ಡಿ. ಹಲಗೇಗೌಡ ಹಾಗೂ ಸಂಸ್ಥಾ ಕಾಂಗ್ರೆಸ್‌ನಿಂದ ಕೆ. ಕೆಂಪೇಗೌಡರು ಸ್ಪರ್ಧಿಸಿದರು. ಹಿಂದಿನ ಬಾರಿ ಸೋತಿದ್ದ ಡಿ. ಹಲಗೇಗೌಡರು ಅನುಕಂಪದ ಅಲೆಯಲ್ಲಿ ಬಾರಿ ಜಯಭೇರಿ ಬಾರಿಸಿದರು.

1978ರಲ್ಲಿ ರೆಡ್ಡಿ ಕಾಂಗ್ರೆಸ್‌ನಿಂದ ಹಲಗೇಗೌಡರು, ಇಂದಿರಾ ಕಾಂಗ್ರೆಸ್‌ನಿಂದ ಸಿ.ಬಿ. ಮರಿಗೌಡ ಸ್ಪರ್ಧಿಸಿದರು. ಇವರಿಬ್ಬರ ನಡುವಿನ ಗುದ್ದಾಟದ ಲಾಭ ಪಡೆದ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಆರ್. ರಾಜಗೋಪಾಲ್ ಗೆಲುವು ಸಾಧಿಸಿದರು.

1983ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕೆಂಗೇಗೌಡ ಹಾಗೂ ಜನತಾ ಪಕ್ಷದಿಂದ ಕೆ.ಕೆಂಪೇಗೌಡ ಸ್ಪರ್ಧಿಸಿದ್ದರು. 83 ಹಾಗೂ 85ರ ಚುನಾವಣೆಯಲ್ಲಿ ಕೆ.ಕೆಂಪೇಗೌಡರು ಗೆಲುವು ಪಡೆದರು.

1989ರಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಸ್ಪರ್ಧಿಸಿದ ಡಿ. ಹಲಗೇಗೌಡರು ಗೆಲುವು ಸಾಧಿಸಿದರು. 1994ರಲ್ಲಿ ಡಿ. ಹಲಗೇಗೌಡರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಯಿತು. ಇದರಿಂದ ಅಸಮಾಧಾನಗೊಂಡ ಕೆ.ಕೆಂಪೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ಇವರಿಬ್ಬರ ನಡುವಿನ ಗುದ್ದಾಟದಲ್ಲಿ ರೈತ ಸಂಘದ ವರಿಷ್ಠ ಕೆ.ಎಸ್. ಪುಟ್ಟಣ್ಣಯ್ಯ ವಿಧಾನಸಭೆ ಪ್ರವೇಶಿಸಿದರು.

1999ರಲ್ಲಿ ಮತ್ತೆ ಕಾಂಗ್ರೆಸ್ ಟಿಕೆಟ್ ಪಡೆದ ಕೆ. ಕೆಂಪೇಗೌಡರು ಗೆಲುವು ಸಾಧಿಸಿದರು. ಕೆ.ಎಸ್. ಪುಟ್ಟಣ್ಣಯ್ಯ ಹಾಗೂ ಸಿ.ಎಸ್. ಪುಟ್ಟರಾಜು ಸೋಲುತ್ತಾರೆ. 2004ರಲ್ಲಿ ಜನತಾ ದಳದಿಂದ ಸಿ.ಎಸ್. ಪುಟ್ಟರಾಜು, ಸರ್ವೋದಯ ಕರ್ನಾಟಕ ಪಕ್ಷದಿಂದ ಕೆ.ಎಸ್. ಪುಟ್ಟಣ್ಣಯ್ಯ ಹಾಗೂ ಕಾಂಗ್ರೆಸ್‌ನಿಂದ ಎಲ್.ಡಿ. ರವಿ ಸ್ಪರ್ಧಿಸುತ್ತಾರೆ. ಸಿ.ಎಸ್. ಪುಟ್ಟರಾಜು ಗೆಲುವು ಸಾಧಿಸುತ್ತಾರೆ. 2008ರಲ್ಲಿ  ಸಿ.ಎಸ್. ಪುಟ್ಟರಾಜು ಮತ್ತೆ ಗೆಲುವು ಸಾಧಿಸುತ್ತಾರೆ. ಎದುರಾಳಿ ಕೆ.ಎಸ್. ಪುಟ್ಟಣ್ಣಯ್ಯ ಅವರನ್ನು ಕಾಂಗ್ರೆಸ್ ಪರೋಕ್ಷವಾಗಿ ಬೆಂಬಲಿಸಿದರೂ ಪ್ರಯೋಜನವಾಗುವುದಿಲ್ಲ. ಗಮನ ಸೆಳೆಯುವ ಸಂಗತಿ ಎಂದರೆ ಈ ಕ್ಷೇತ್ರದಿಂದ ಗೆದ್ದ ಶಾಸಕರಾರೂ ಸಚಿವರಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT