ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಛಾವಣಿ ಕುಸಿತ: ಜೀವದ ಭಯದಲ್ಲಿ ವಿದ್ಯಾರ್ಥಿಗಳು

Last Updated 21 ಜುಲೈ 2012, 9:25 IST
ಅಕ್ಷರ ಗಾತ್ರ

ಮಸ್ಕಿ: ವಜ್ರಮಹೋತ್ಸವದ ಸಂಭ್ರಮದಲ್ಲಿರುವ ಇಲ್ಲಿಯ ಸರ್ಕಾರಿ ಬಾಲಕರ ಪ್ರೌಢ ಶಾಲೆಯ ಕಟ್ಟಡ ಇದೀಗ ಅಪಾಯದ ಅಂಚಿನಲ್ಲಿದೆ. ಶಾಲೆಯಲ್ಲಿ ಕಲಿಯುತ್ತಿರುವ ನೂರಾರು ವಿದ್ಯಾರ್ಥಿಗಳು ನಿತ್ಯ ಜೀವದ ಭಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಈ ಕಡೆ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದೆ.

ಮೂರು ದಿನಗಳ ಹಿಂದೆಯಷ್ಟೇ ಶಾಲೆಯ ಕೊಠಡಿಯೊಂದರ ಮೇಲ್ಛಾವಣಿ ಕುಸಿದು ಸ್ವಲ್ಪದರಲ್ಲಿಯೇ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ತರಗತಿ ನಡೆಯುವಾಗ ಈ ಘಟನೆ ನಡೆದಿದ್ದರೆ 5-6 ವಿದ್ಯಾರ್ಥಿಗಳಿಗೆ ಅಪಾಯ ಇತ್ತು ಎಂದು ಶಿಕ್ಷಕರು ಹೇಳುತ್ತಾರೆ. ಈ ಘಟನೆಯಿಂದ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.

ಶಾಲೆಯಲ್ಲಿ ಇದೀಗ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ಅವಶ್ಯಕತೆ ಇದೆ. ಈ ಈಗಿರುವ  21 ಕೊಠಡಿಗಳಲ್ಲಿ 6 ಮಾತ್ರ ತರಗತಿ ನಡೆಸಲು ಯೋಗ್ಯವಾಗಿವೆ. ಉಳಿದ 15 ಕೊಠಡಿಗಳ ಸಂಪೂರ್ಣ ಶಿಥಿಲಗೊಂಡಿದ್ದು ಅವುಗಳು ಯಾವುದೇ ಕ್ಷಣದಲ್ಲಿ ಏನು ಬೇಕಾದರು ಆಗಬಹುದು ಎನ್ನುತ್ತಾರೆ ಶಾಲೆಯ ಮುಖ್ಯಗುರು     ಸುಭಾಷಸಿಂಗ್.

ಎರಡು ವರ್ಷದ ಹಿಂದೆಯಷ್ಟೇ ಒಂದೆರಡು ಕೊಠಡಿಗಳ ತಾತ್ಕಾಲಿಕ ದುರಸ್ತಿ ಆಗಿದ್ದು ಬಿಟ್ಟರೆ ಇದುವರೆಗೂ ಉಳಿದ ಕೊಠಡಿಗಳ ದುರಸ್ತಿ ಆಗಿಲ್ಲ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಗೆ  ಶಾಲೆಯ ಮುಖ್ಯೋಪಾಧ್ಯಾಯರು ಹಲವು ಭಾರಿ ಪತ್ರ ಬರೆದಿದ್ದಾರೆ. ಆದರೂ ಯಾವುದೇ ಅಧಿಕಾರಿ ಈ ಕಡೆ ಗಮನಹರಿಸಿಲ್ಲ.

1958 ರಲ್ಲಿ ಇಲ್ಲಿ ಪ್ರೌಢ ಶಾಲೆ ಆರಂಭಿಸಲಾಗಿದೆ. ಅಂದಿನ ಮೈಸೂರು ಸರ್ಕಾರದಲ್ಲಿ (1966 ರಲ್ಲಿ) ಕೇವಲ 99500 ರೂಪಾಯಿಗಳ ವೆಚ್ಚದಲ್ಲಿ ಈ ಶಾಲೆಯ ಕೊಠಡಿಗಳ ನಿರ್ಮಾಣವಾಗಿತ್ತು. ಇದೀಗ ಈ ಶಾಲೆಯು 50 ವರ್ಷಗಳನ್ನು ಪೂರೈಸಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ.

ದುಸ್ಥಿತಿಯಲ್ಲಿರುವ ಈ ಶಾಲೆಯ ಕೊಠಡಿಗಳ ದುರಸ್ತಿಗೆ ಶಿಕ್ಷಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದು ಬಿಜೆಪಿ ಎಸ್.ಟಿ. ಮೋರ್ಚ ರಾಜ್ಯ ಕಾರ್ಯದರ್ಶಿ ಬಸನಗೌಡ ಪೊ. ಪಾಟೀಲ ಒತ್ತಾಯಿಸಿದ್ದಾರೆ.


50 ವರ್ಷಗಳಷ್ಟು ಇತಿಹಾಸ ಇರುವ ಈ ಶಾಲೆಯ ದುರಸ್ತಿ ಬಗ್ಗೆ ಶಾಸಕ ಪ್ರತಾಪಗೌಡ ಪಾಟೀಲ ಹೆಚ್ಚು ಗಮನ ಹರಿಸಬೇಕು ಎಂದು ಇಲ್ಲಿಯ ಶಿಕ್ಷಣ ಪ್ರೇಮಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT