ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಜಾತಿಗಳ ಅಹಂಕಾರ, ಕೆಳಜಾತಿಗಳ ಸೋಮಾರಿತನ

Last Updated 20 ಜನವರಿ 2013, 19:59 IST
ಅಕ್ಷರ ಗಾತ್ರ

ಭಾರತದ ಕಲೆ ಪ್ರಕಾರಗಳಿಗೆ ಅಂಟಿಕೊಂಡು ಬಂದಿರುವ ಅಮಾನವೀಯವಾದ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಆಧುನಿಕ ಯೋಚನಕ್ರಮಕ್ಕೆ ತೆರೆದುಕೊಂಡ ಮಂದಿ ಅನೇಕ ಕಲೆಗಳನ್ನು ಸಮಕಾಲೀನವಾದ ಬದಲಾವಣೆಗೊಳಪಡಿಸಿದರು. ಉದಾಹರಣೆಗೆ, ದೇವದಾಸಿ ಪದ್ಧತಿಯ ಹಿಂದೆ ಅಮಾನವೀಯ ಮನಸ್ಸಿರುವುದನ್ನು ಅರಿತುಕೊಂಡು ದೇವದಾಸಿಯರ ಭರತನಾಟ್ಯವನ್ನು ದೇವಸ್ಥಾನದ ಆವರಣದಿಂದ ಹೊರಗೆ ತಂದು ಅದಕ್ಕೊಂದು ಕಲಾತ್ಮಕ ಆವರಣವನ್ನು ಕೊಟ್ಟವರು ರುಕ್ಮಿಣೀ ದೇವಿ ಅರುಂಡೇಲ್.

ಪರಿಣಾಮವಾಗಿ ಇಂಥ ಕಲೆಗಳಲ್ಲಿ ತೊಡಗಿಸಿಕೊಳ್ಳುವುದು ಬ್ರಾಹ್ಮಣರಿಗೆ ಅವಮರ್ಯಾದೆಯೆಂದು ಭಾವಿಸುತ್ತಿದ್ದ ಕಾಲ ಬದಲಾಗಿ ಬ್ರಾಹ್ಮಣರೇ ಅಧಿಕವಾಗಿ ಈ ಕಲೆಯೊಳಗೆ ಪ್ರವೇಶ ಪಡೆದುಕೊಂಡರು. ಇಂಗ್ಲಿಷ್ ವಿದ್ಯಾಭ್ಯಾಸ, ಆಧುನಿಕ ಮನೋಭಾವಕ್ಕೆ ಮೊದಲಿಗೆ ತೆರೆದುಕೊಂಡವರೂ ಮೇಲ್ಜಾತಿಯ ಮಂದಿಯೇ ಅಲ್ಲವೆ?

ಸಮಕಾಲೀನ ಕಲೆಗಳ ವಿಷಯದಲ್ಲಿಯೂ ಅದೇ ಆಯಿತು. ಜಾತಿಪದ್ಧತಿಯನ್ನು ವಿರೋಧಿಸುವಲ್ಲಿ ಕೆಳಜಾತಿಯವರಲ್ಲಿ ಮೂಡಿದ ಜಾಗೃತಿಯೊಂದೇ ಕಾರಣವಲ್ಲ, ಮೇಲ್ಜಾತಿಯ ಮಂದಿಯಲ್ಲಿ ಉಂಟಾದ ಪಶ್ಚಾತ್ತಾಪವೂ ಒಂದು ಕಾರಣ ಎಂಬುದನ್ನು ಮರೆಯಬಾರದು. ಗಾಂಧೀಜಿ ಭಾರತದ ಮೇಲ್ಜಾತಿಯ ಮಂದಿಯಲ್ಲಿ ಪಶ್ಚಾತ್ತಾಪವನ್ನು ಪ್ರಚೋದಿಸುವಲ್ಲಿ ಗಾಢವಾದ ಪ್ರಭಾವ ಬೀರಿದರು.

ಭರತನಾಟ್ಯದಂಥ ಒಂದು ಕಲೆ ಹಳೆಯ ಅಡವುಗಳೊಂದಿಗೆ ಪಾಶ್ಚಾತ್ಯ ಬ್ಯಾಲೆಯ ಆಂಗಿಕಗಳನ್ನೂ ತನ್ನದಾಗಿಸಿಕೊಂಡು, ಮೇಲ್ಜಾತಿಯವರನ್ನು ಆಕರ್ಷಿಸಿ, ಆಧುನಿಕ ಮನಸ್ಸಿನಲ್ಲಿ ಪ್ರಸ್ತುತಗೊಳ್ಳಲಾರಂಭಿಸಿದ ಸಂದರ್ಭದಲ್ಲಿ ಅದೊಂದು ಮುಕ್ತರಂಗಭೂಮಿಯಾಗಿತ್ತು. ಆದರೆ ಇವತ್ತು? ದೇವದಾಸಿಯರ ಕೈಯಲ್ಲಿದ್ದು, ಪಾಶ್ಚಾತ್ಯ ಮನೋಸ್ಥಿತಿಯಲ್ಲಿ ಮರುರೂಪುಗೊಂಡ ಕಲೆ ಮೇಲ್ಜಾತಿಯವರ `ಪವಿತ್ರ' ಕಲೆಯಾಗಿ ಬದಲಾಗಿದೆ.

ಭರತನಾಟ್ಯವೆಂದರೆ ಮೇಲ್ಜಾತಿಯವರ ಕಲೆಯೆಂದು ಮೇಲ್ಜಾತಿಯವರು ಒಪ್ಪಿಸಿಬಿಟ್ಟಿದ್ದಾರೆ ಮತ್ತು ಇದನ್ನು ಕೆಳಜಾತಿಯವರು ನಂಬಿಬಿಟ್ಟಿದ್ದಾರೆ. ಇದಕ್ಕೆ ಮೇಲ್ಜಾತಿಯವರನ್ನು ದೂರುವುದು ಕೂಡ ತಪ್ಪೇ ಆಗುತ್ತದೆ. ಇವತ್ತು ಕೆಳಜಾತಿಯ ಮಂದಿ ಸೌಲಭ್ಯವನ್ನು ಪಡೆದು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಯಾಕೆ ಯಾರಿಗೂ ವೇದಗಳ ಬಗ್ಗೆ ಕುತೂಹಲವಿಲ್ಲ? ಯಾಕೆ ಅವರು ಶಾಸ್ತ್ರಗಳನ್ನು ಓದಿ ಅವುಗಳಿಗೆ ಮರುವ್ಯಾಖ್ಯಾನ ನೀಡಬೇಕೆಂದು ಬಯಸುವುದಿಲ್ಲ?

ಯಾಕೆ ಅವರು ಸಂಸ್ಕೃತವನ್ನು ಕಲಿತು ಉಪನಿಷತ್‌ಗಳನ್ನು ಓದಿ ಅವುಗಳಲ್ಲಿ ನಿಜವಾಗಿ ಏನಿದೆ ಎಂಬುದನ್ನು ವ್ಯಾಖ್ಯಾನಿಸುವುದಕ್ಕೆ ಹೋಗುವುದಿಲ್ಲ? ಯಾಕೆ ಅವರು ಭರತನಾಟ್ಯವನ್ನು ಕಲಿತು ಅದಕ್ಕೆ ಮಲೆಮಾದೇಶ್ವರನ ಕಥೆಯನ್ನು ಅಳವಡಿಸುವುದಕ್ಕೆ ಹೋಗುವುದಿಲ್ಲ? ಬ್ರಾಹ್ಮಣೇತರ ಜಾತಿಗಳಲ್ಲಿ ಕಲೆ ಮತ್ತು ಜ್ಞಾನಮೂಲಗಳ ಬಗ್ಗೆ ಇರುವ ಔದಾಸೀನ್ಯ ಮತ್ತು ಅವುಗಳನ್ನು ಅರಿತುಕೊಳ್ಳುವಲ್ಲಿನ ಸೋಮಾರಿತನದ ಧೋರಣೆಯೇ ಈ ಕ್ಷೇತ್ರಗಳಲ್ಲಿ ಕೆಲವು ಮೇಲ್ಜಾತಿಗಳ ಪ್ರಾಬಲ್ಯಕ್ಕೆ ಕಾರಣವಾಗಿದೆ.

ನಮ್ಮ ಹೆಚ್ಚಿನ ದಲಿತರು ಗಾಂಧಿವಾದಕ್ಕಿಂತ ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು. ದೇವಾಲಯದ ಒಳಗೆ ಪ್ರವೇಶಿಸಿ ಅದರ ಪಾವಿತ್ರ್ಯ ನಾಶ ಮಾಡುವುದಕ್ಕಿಂತ ದೇವಾಲಯದ ಹತ್ತಿರ ಹೋಗದೆ ಧಿಕ್ಕರಿಸಿ ಬದುಕಲು ಇಷ್ಟಪಡುವವರು. ಎರಡನೇ ವಿಧಾನದ ಅಪಾಯವೇನೆಂದರೆ, ಯಾವುದೇ ರೀತಿಯ ಪ್ರತಿರೋಧವಿಲ್ಲದ ಕಾರಣ ದೇವಾಲಯದಂಥ ವ್ಯವಸ್ಥೆ ಇನ್ನಷ್ಟು ಪ್ರಬಲವಾಗಿ ಜಾತಿವ್ಯವಸ್ಥೆಯನ್ನು ಪೋಷಿಸಿಕೊಂಡು ಸಾಗುತ್ತದೆ.

ಭರತನಾಟ್ಯ, ಕೂಚಿಪುಡಿ, ಯಕ್ಷಗಾನಗಳ ಹತ್ತಿರ ಹೋಗದಿರುವುದರಿಂದ ಅವುಗಳ ಒಳಗೆ ಹಾಸುಹೊಕ್ಕಾಗಿರುವ ಜಾತೀಯ ಮನಃಸ್ಥಿತಿ ಗೊತ್ತೇ ಆಗುವುದಿಲ್ಲ. ನಮ್ಮ ಕಲೆಗಳನ್ನು ಪ್ರಜಾತಾಂತ್ರಿಕ ಸ್ವರೂಪದಲ್ಲಿ ಮರುರೂಪಿಸಬೇಕಾದ ಅಗತ್ಯ ಈಗ ಹೆಚ್ಚಾಗಿ ಕಾಣಿಸುತ್ತಿದೆ. ಮೇಲ್ಜಾತಿಯವರ ಅಹಂಕಾರ ಮತ್ತು ಕೆಳಜಾತಿಯವರ ಸೋಮಾರಿತನದಿಂದಾಗಿಯೇ ಕಲೆಗಳಿಗೆ ಅಂಟಿರುವ ಜಾತಿಯ ಬಣ್ಣ ಮತ್ತಷ್ಟು ಗಾಢವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT