ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಜಾತಿಗಳ ಸಮಸ್ಯೆ

Last Updated 21 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮೀಸಲಾತಿಯು ವರ್ತಮಾನದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡಿದೆ ಎಂದಾದರೆ ಅದು ಕೇವಲ ಕೆಳಜಾತಿಗಳವರ ಸಮಸ್ಯೆಗಳಿಗೆ ಸೀಮಿತವಾಗಿದೆ. ಮೇಲ್ಜಾತಿಯ ಪದವೀಧರ ಉನ್ನತ ಶಿಕ್ಷಣವನ್ನು ತನ್ನ ಬಡತನದ ಕಾರಣದಿಂದ ಪೂರೈಸಲಾಗದಿರುವುದು ಒಂದು ಸಮಸ್ಯೆಯಲ್ಲವೆ?

ಜಾತಿ ಆಧಾರಿತ ಮೀಸಲಾತಿ ಮೇಲ್ವರ್ಗದ ಬಡವರಿಗೆ ದಂಡನೆಯಲ್ಲವೆಂದೂ ಬದಲಾಗಿ ಅದು ಇಂದು ನಡೆಯುತ್ತಿರುವ ತಪ್ಪುಗಳನ್ನು ಮಾತ್ರ ಸರಿಪಡಿಸುತ್ತದೆ ಎಂಬುದು ನೈಜತೆಯ ಹತ್ತಿರವೂ ಸುಳಿಯದ ಒಂದು ಪರಿಕಲ್ಪನೆ.

ಮೇಲ್ವರ್ಗದ ಬಡ ವಿದ್ಯಾರ್ಥಿ ಅಥವಾ ಪದವೀಧರ ತನ್ನ ಮೀಸಲಾತಿರಾಹಿತ್ಯ ಮತ್ತು ಆರ್ಥಿಕ ಸಂಪನ್ಮೂಲದ ಕೊರತೆಯ ಕಾರಣದಿಂದಾಗಿ ಉನ್ನತ ಶಿಕ್ಷಣದಿಂದ ವಂಚಿತರಾಗುವುದು ಮತ್ತು ಅವನದೇ ಪರಿಸ್ಥಿತಿಯ ಕೆಳಜಾತಿಯ ಪದವೀಧರ  ಅವನಿಗಿಂತ ಕಡಿಮೆ ಅಂಕಗಳಿಸಿದ್ದರೂ ಜಾತಿ ಕಾರಣದಿಂದ ಮೀಸಲಾತಿ ಸೌಕರ್ಯ ಪಡೆದು ಉನ್ನತ ಪದವಿಗೆ ಸೀಟು ಗಿಟ್ಟಿಸುವುದು ಮೇಲ್ಜಾತಿಯ ಬಡ ಪದವೀಧರನಿಗೆ ಶಿಕ್ಷೆಯೇ ಅಲ್ಲವೆ? ಇದು ಇಂದು ನಡೆಯುತ್ತಿರುವ ತಪ್ಪುಗಳನ್ನು ಹೇಗೆ ಸರಿಪಡಿಸಿದಂತಾಗುತ್ತದೆ?

ಮೇಲ್ವರ್ಗದ ಬಡ ಪದವೀಧರನಿಗೆ ಜಾತಿ ಮೀಸಲಾತಿ ನೀತಿಯಿಂದಾಗಿ ಉನ್ನತ ವ್ಯಾಸಂಗ ಮಾಡಲು ಅಸಾಧ್ಯವಾಗುತ್ತದೆ.
ಸಹಜವಾಗಿಯೇ ಆತ ಜಾತಿ ಮೀಸಲಾತಿಯನ್ನು ವಿರೋಧಿಸುತ್ತಾನೆ. ಇದು ಮೀಸಲಾತಿ ಪರವಾಗಿ ಮಾತನಾಡುವವರಿಗೆ ಚಾಲಾಕಿನ ತಂತ್ರವಾಗಿ ಕಾಣುತ್ತದೆ. ಇದಕ್ಕೆ ಕಾರಣ  ಕೆಳಜಾತಿಗಳ ಪರವಾಗಿ ವಾದಿಸುತ್ತಿರುವವರಿಗೆ ಮೇಲ್ಜಾತಿಯ ಬಡ ಜನರ ಸ್ಥಿತಿಗತಿಗಳ ತುಮುಲಗಳ ಅರಿವಿಲ್ಲದಿರುವುದು. ವಿದ್ಯಾರ್ಥಿಯೊಬ್ಬ ಚಾರಿತ್ರಿಕವಾಗಿ ಶಿಕ್ಷಣದಿಂದ ವಂಚಿತವಾಗಿರುವ ಸಮುದಾಯದಿಂದ ಬಂದಿದ್ದರೆ ಆ ಗುಣಕ್ಕಾಗಿ ಕೆಲವು ಅಂಕಗಳನ್ನು ಅವನಿಗೆ ಸೇರಿಸಲಾಗುತ್ತದೆ ಎನ್ನಲಾಗಿದೆ.

ಈ ಮಾತನ್ನು ಸ್ವಾತಂತ್ರ್ಯ ಬಂದು ಕೆಲವು ವರ್ಷಗಳವರೆಗೆ ಒಪ್ಪಬಹುದಿತ್ತು. ಏಕೆಂದರೆ ಸಂವಿಧಾನ ರಚನೆ ಆಗುವವರೆಗೂ ಕೆಲವು ಸಮುದಾಯಗಳಿಗೆ ಶಿಕ್ಷಣದಲ್ಲಿ ಅವಕಾಶವಿರಲಿಲ್ಲ. ಆದರೆ ಒಮ್ಮೆ ಮೀಸಲಾತಿ ಸೌಲಭ್ಯದಿಂದ ಉಪಯೋಗ ಪಡೆದವರ ನಂತರದ ಪೀಳಿಗೆಯನ್ನು ಹೇಗೆ ಚಾರಿತ್ರಿಕವಾಗಿ ಶಿಕ್ಷಣದಿಂದ ವಂಚಿತವಾಗಿರುವ ಸಮುದಾಯದ ವಿದ್ಯಾರ್ಥಿಗಳು ಎಂದು ಗುರುತಿಸುತ್ತೀರಿ?

ಮೀಸಲಾತಿಯನ್ನೇ ಅನ್ಯಾಯ ಎಂದು ಹೇಳಲಾಗದು ನಿಜ. ಆದರೆ ಜಾತಿ ಆಧಾರಿತ ಮೀಸಲಾತಿ ಇಂದಿನ ಪರಿಸ್ಥಿತಿಯಲ್ಲಿ ಮೇಲ್ವರ್ಗದ ಬಡವರಿಗೆ ಮಾಡುವ ವಂಚನೆಯೇ ಆಗಿದೆ. ಆದ್ದರಿಂದಲೇ ಮೀಸಲಾತಿಯು ವ್ಯಕ್ತಿಯ ಕುಟುಂಬದ ವರಮಾನ ಅಥವಾ ಆರ್ಥಿಕ ಸ್ಥಿತಿಯನ್ನವಲಂಬಿಸಿರಬೇಕು. ಆತ ಯಾವುದೇ ಜಾತಿ ಇದ್ದರೂ ಸಹ ಆತನ ಕುಟುಂಬದ ಆದಾಯ ನಿರ್ದಿಷ್ಟ ಮಟ್ಟಕ್ಕಿಂತ ಕೆಳಗಿದ್ದರೆ ಮೀಸಲಾತಿ ದೊರಕಬೇಕು.

ಬಡವರಿಗಷ್ಟೇ ಮೀಸಲಾತಿ ಎಂಬ ವಾದವು ಮೀಸಲಾತಿಯನ್ನು ಜಾತಿಯ ಬದಲಿಗೆ ವರ್ಗದೊಡನೆ ತಳುಕು ಹಾಕುತ್ತದೆ ಎಂಬುದು ನಿಜ ಆದರೆ ಕೆಳಜಾತಿಯಲ್ಲಿರುವ ಬಡವರನ್ನೂ ಮರೆಯುವುದಿಲ್ಲ. ಅಂದರೆ ಇದು ಕೆಳಜಾತಿ ಮತ್ತು ಮೇಲ್ಜಾತಿಯ ಶ್ರೀಮಂತರನ್ನು ಬಡವರಿಂದ ಬೇರ್ಪಡಿಸಿ ಕೇವಲ ಬಡವರಿಗಷ್ಟೇ ಅನೇಕ ಸೌಲಭ್ಯಗಳು ಅಥವಾ ಮೀಸಲಾತಿಗಳು ದೊರಕುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT