ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ದರ್ಜೆಗೆ ಏರದ ಯಾದಗಿರಿ ರೈಲು ನಿಲ್ದಾಣ

Last Updated 20 ಜೂನ್ 2011, 9:25 IST
ಅಕ್ಷರ ಗಾತ್ರ

ಯಾದಗಿರಿ: ಹಿಂದುಳಿದಿರುವ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹೈದರಾಬಾದ್ ಕರ್ನಾಟಕದ ಜಿಲ್ಲೆಯಾಗಿರುವ ಯಾದಗಿರಿಯು ಎಲ್ಲ ರೀತಿಯ ಸಂಪನ್ಮೂಲಗಳನ್ನು ಹೊಂದಿದ್ದರೂ, ಇನ್ನೂ ಸೌಲಭ್ಯಗಳ ನಿರೀಕ್ಷೆಯಲ್ಲಿಯೇ ಕಾಲ ಕಳೆಯುವಂತಾಗಿದೆ.

ಜಿಲ್ಲೆಯಲ್ಲಿ ಎರಡು ನದಿ, ಸಂಪರ್ಕ ಸಾಧನಗಳಾದ ರೈಲು, ಉತ್ತಮ ರಸ್ತೆ, ಒಳ್ಳೆಯ ಭೂಮಿ ಹೀಗೆ ಎಲ್ಲ ಸಂಪನ್ಮೂಲಗಳೂ ಇವೆ. ಆದರೆ ಅವೆಲ್ಲವೂ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಇನ್ನೊಂದೆಡೆ ಸೌಲಭ್ಯಗಳನ್ನು ನೀಡಿ ಎಂದು ಒತ್ತಾಯಿಸಿದರೂ, ಆಡಳಿತದ ಗಮನಕ್ಕೆ ಮಾತ್ರ ಬರುತ್ತಿಲ್ಲ ಎಂಬ ನೋವು ಇಲ್ಲಿಯ ಜನರದ್ದಾಗಿದೆ.

ಜಿಲ್ಲೆಯಲ್ಲಿ ಪ್ರಮುಖ ರೈಲು ನಿಲ್ದಾಣ ಯಾದಗಿರಿಯಲ್ಲಿದೆ. ಅನೇಕ ಪ್ರಮುಖ ರೈಲುಗಳೂ ಈ ನಿಲ್ದಾಣದ ಮೂಲಕ ಹಾದು ಹೋಗುತ್ತವೆ. ಹೈದರಾಬಾದ್, ಸಿಕಂದರಾಬಾದ್, ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ ಹೀಗೆ ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಇಷ್ಟೆಲ್ಲ ಇದ್ದರೂ, ಇಲ್ಲಿಯ ಜನರು ಮಾತ್ರ ರೈಲು ಸೇವೆಗಳನ್ನು ತಮಗೂ ನೀಡಿ ಎಂದು ಒತ್ತಾಯಿಸುತ್ತಲೇ ಇರುವಂತಹ ಸ್ಥಿತಿ ಇದೆ.

ಪ್ರಮುಖ ರೈಲುಗಳು ನಿಲುಗಡೆ ಇಲ್ಲದೇ ಇರುವುದರಿಂದ ಇಲ್ಲಿಯ ಬಹುಪಾಲು ಜನರು, ಪಕ್ಕದ ವಾಡಿಯಿಂದಲೋ, ರಾಯಚೂರಿನಿಂದಲೂ ರೈಲುಗಳನ್ನು ಹಿಡಿಯುವ ಅನಿವಾರ್ಯತೆ ಉಂಟಾಗಿದೆ. ರಾಜಧಾನಿ ಎಕ್ಸ್‌ಪ್ರೆಸ್, ಕೆ.ಕೆ. ಎಕ್ಸ್‌ಪ್ರೆಸ್, ಜಯಂತಿ ಎಕ್ಸ್‌ಪ್ರೆಸ್ ಸೇರಿದಂತೆ ಹಲವಾರು ರೈಲುಗಳು ಇದೇ ನಿಲ್ದಾಣದ ಮೂಲಕ ಹಾದು ಹೋದರೂ ಯಾದಗಿರಿಯಲ್ಲಿ ನಿಲುಗಡೆ ಆಗುತ್ತಿಲ್ಲ.

ಅತಿ ಹೆಚ್ಚು ಆದಾಯ: ದಕ್ಷಿಣ ಮಧ್ಯೆ ರೈಲ್ವೆಯ ಗುಂತಕಲ್ ವಿಭಾಗದಲ್ಲಿಯೇ ಅತಿ ಹೆಚ್ಚು ಆದಾಯ ತಂದು ಕೊಡುವ ಎರಡನೇ ನಿಲ್ದಾಣವೇ ಯಾದಗಿರಿ. ನಿತ್ಯ ರೂ.3 ರಿಂದ3.5 ಲಕ್ಷ ಆದಾಯ ಇಲ್ಲಿದೆ.

ಗುಂತಕಲ್ ವಿಭಾಗದಲ್ಲಿ ಪುಟ್ಟಪರ್ತಿಯನ್ನು ಹೊರತುಪಡಿಸಿ, ಯಾದಗಿರಿಯಿಂದಲೇ ಅತಿ ಹೆಚ್ಚು ಆದಾಯ ಬರುತ್ತಿದೆ ಎಂಬ ಮಾಹಿತಿಯನ್ನು ರೈಲು ಅಧಿಕಾರಿಗಳೇ ನೀಡುತ್ತಾರೆ. ಇಷ್ಟೆಲ್ಲ ಇದ್ದರೂ, ನಗರದಲ್ಲಿರುವ ರೈಲು ನಿಲ್ದಾಣದಲ್ಲಿ ಸೌಲಭ್ಯಗಳಿಗಾಗಿ ಮಾತ್ರ ಜನರು ಪರದಾಡುವುದು ತಪ್ಪುತ್ತಿಲ್ಲ.

ಇಲ್ಲಿಯ ರೈಲು ನಿಲ್ದಾಣದಲ್ಲಿ ಟಿಕೆಟ್ ಮುಂಗಡ ಕಾಯ್ದಿರಿಸುವ ಕೌಂಟರ್‌ನ ಸೌಲಭ್ಯವೂ ಕೇವಲ 12 ಗಂಟೆ ಮಾತ್ರ ಸಿಗುತ್ತಿತ್ತು. ಕೇವಲ ಒಂದೇ ಕೌಂಟರ್‌ನಲ್ಲಿ ಸರದಿಯಲ್ಲಿ ನಿಂತು ರೈಲ್ವೆ ಟಿಕೀಟ್ ಪಡೆಯುವಷ್ಟರಲ್ಲಿ ಸಾಕಾಗಿ ಹೋಗುತ್ತಿತ್ತು. ಇತ್ತೀಚೆಗಷ್ಟೇ ನಗರದ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದ ಸಂಸದ ಸಣ್ಣಫಕೀರಪ್ಪ, ದಿನದ 24 ಗಂಟೆ ಕಾರ್ಯನಿರ್ವಹಿಸುವ ಎರಡು ಕೌಂಟರ್‌ಗಳ ಆರಂಭಕ್ಕೆ ಸೂಚನೆಯನ್ನು ನೀಡಿದ್ದಾರೆ. ಆದರೆ ಇದು ಕಾರ್ಯರೂಪಕ್ಕೆ ಬರುವುದಾದರೂ ಎಂದು ಎಂಬ ಪ್ರಶ್ನೆ ಜನರದ್ದು.

ಸುರಕ್ಷತಾ ಸೌಲಭ್ಯಗಳೂ ಇಲ್ಲ: ಜಿಲ್ಲೆಯಾದ ನಂತರವೂ ಇಲ್ಲಿಯ ರೈಲು ನಿಲ್ದಾಣದಲ್ಲಿ ರೈಲ್ವೆ ಸುರಕ್ಷತಾ ಪಡೆಯ ಪೂರ್ಣ ಪ್ರಮಾಣದ ಠಾಣೆ ಇಲ್ಲ. ಯಾದಗಿರಿ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ಯಾವುದೇ ಪ್ರಕರಣ ನಡೆದರೂ, ರಾಯಚೂರಿನಲ್ಲಿರುವ ಠಾಣೆಯಲ್ಲಿಯೇ ಪ್ರಕರಣ ದಾಖಲಾಗುತ್ತದೆ.

ನಗರದ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿನ ಪ್ರಕರಣಗಳು ನಡೆದರೆ, ಸುರಕ್ಷತೆಗೆ ಅಗತ್ಯವಿರುವ ಸಿಬ್ಬಂದಿಯೂ ಇಲ್ಲದಾಗಿದೆ. ಕೇವಲ ಸಹಾಯ ಸಬ್ ಇನ್ಸ್‌ಪೆಕ್ಟರ್ ನೇತೃತ್ವದ ಹೊರ ಠಾಣೆ ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಿದೆ.
 
ಹೀಗಾಗಿ ಯಾವುದೇ ಪ್ರಕರಣಗಳು ನಡೆದರೂ ರಾಯಚೂರಿಗೆ ಅಲೆದಾಡುವ ತಾಪತ್ರಯ ಆರಂಭವಾಗುತ್ತದೆ. ಈ ಬಗ್ಗೆ ಸಂಸದರೂ ಸಹ ರೈಲ್ವೆ ಸಚಿವರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದು, ರೈಲ್ವೆ ಸುರಕ್ಷತಾ ಪಡೆಯ ಪೂರ್ಣ ಪ್ರಮಾಣದ ಠಾಣೆಯಲ್ಲಿ ಪ್ರಾರಂಭಿಸಲು ಒತ್ತಾಯಿಸಿದ್ದಾರೆ.

ಕನ್ನಡಕ್ಕಿಲ್ಲ ಪ್ರಾಶಸ್ತ್ಯ: ಆಂಧ್ರಪ್ರದೇಶದ ಗಡಿಗೆ ಹೊಂದಿರುವ ಇಲ್ಲಿಯ ರೈಲು ನಿಲ್ದಾಣವನ್ನು ನೋಡಿದರೆ, ಯಾದಗಿರಿಯು ಆಂಧ್ರಪ್ರದೇಶದಲ್ಲಿದೆಯೇ ಎಂಬ ಸಂಶಯ ಬರದೇ ಇರಲಾರದು. ಇಲ್ಲಿಯ ರೈಲು ನಿಲ್ದಾಣದಲ್ಲಿ ಮುಂಗಡ ಟಿಕೀಟ್ ಖರೀದಿಸಲು ಭರ್ತಿ ಮಾಡಿ ಕೊಡುವ ಫಾರ್ಮ್ ಸಹ ತೆಲುಗು ಮತ್ತು ಇಂಗ್ಲಿಷ್‌ನಲ್ಲಿ ಮುದ್ರಿತವಾಗಿದೆ.

ರೈಲ್ವೆ ನಿಲ್ದಾಣದಲ್ಲಿ ಹಾಕಿರುವ ಫಲಕಗಳಲ್ಲಿ ಕನ್ನಡ ಅಕ್ಷರಗಳನ್ನು ಬೇಕಾಬಿಟ್ಟಿಯಾಗಿ ಬರೆಯಲಾಗಿದ್ದು, ತೆಲುಗು ಪ್ರೇಮ ಎದ್ದು ಕಾಣುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹಲವಾರು ಇಲ್ಲಗಳ ಮಧ್ಯೆ ನಡೆಯುತ್ತಿರುವ ಯಾದಗಿರಿಯ ರೈಲು ನಿಲ್ದಾಣಕ್ಕೆ ಸೌಲಭ್ಯಗಳನ್ನು ಒದಗಿಸಲು ಅನೇಕ ಹೋರಾಟಗಳು ನಡೆದರೂ ಪ್ರಯೋಜನವಾಗುತ್ತಿಲ್ಲ. ಹೋರಾಟಗಾರರೇ ಇದೀಗ ನಿರ್ಲಿಪ್ತರಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಜಿಲ್ಲೆಯ ರೈಲು ನಿಲ್ದಾಣಕ್ಕೆ ಅಗತ್ಯವಾಗಿರುವ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ಅವಶ್ಯಕವಾಗಿದೆ ಎನ್ನುವುದು ಜನರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT