ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನವಿ ವಿಳಂಬ ಮನ್ನಿಸದಿದ್ದರೆ ದುಷ್ಪರಿಣಾಮ

ಬಾಬ್ರಿ ಮಸೀದಿ ಪ್ರಕರಣದ ವಿಚಾರಣೆ- ಸಿಬಿಐ ಮೊರೆ
Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರಾದ ಎಲ್.ಕೆ.ಅಡ್ವಾಣಿ ಮತ್ತಿತರರ ವಿರುದ್ಧದ ಒಳಸಂಚಿನ ಆರೋಪ ಕೈಬಿಟ್ಟ ಅಲಹಾಬಾದ್ ಹೈಕೋರ್ಟ್ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಲು 167 ದಿನಗಳಷ್ಟು ವಿಳಂಬವಾಗಿದ್ದನ್ನು ಮನ್ನಿಸದಿದ್ದರೆ ರಾಷ್ಟ್ರಕ್ಕೆ ಸರಿಪಡಿಸಲಾಗದಂತಹ ನಷ್ಟ ಸಂಭವಿಸುತ್ತದೆ ಎಂದು ಸಿಬಿಐ, ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದೆ.

ಈ ಕುರಿತು ವಿಚಾರಣೆ ನಡೆಸುತಿತರುವ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ಮುಂದೆ ಸಿಬಿಐ ಪರ ವಕೀಲರು ಮಂಗಳವಾರ ಹೀಗೆ ಹೇಳಿದರು. ಸಂಬಂಧಿಸಿದ ಎಲ್ಲರ ವಿಚಾರಣೆ ಆಲಿಸಿದ ನಂತರ ಈ ಕುರಿತು ನಿರ್ಧಾರ ಪ್ರಕಟಿಸುವುದಾಗಿ ನ್ಯಾಯಮೂರ್ತಿ ಹೇಳಿದರು.

ವಿಳಂಬ ಮನ್ನಿಸುವುದನ್ನು ತಡ ಮಾಡಿದರೆ ನ್ಯಾಯ ಪ್ರಕ್ರಿಯೆ ವಿಳಂಬವಾದಂತೆ ಆಗುತ್ತದೆ. ಗಂಭೀರ ಅಪರಾಧ ಎಸಗಿಯೂ ಆರೋಪಿಗಳು ವಿಚಾರಣೆಯನ್ನೇ ಎದುರಿಸದೆ ಪಾರಾದಂತೆ ಆಗುತ್ತದೆ ಎಂದು ಕೇಂದ್ರೀಯ ತನಿಖಾ ಸಂಸ್ಥೆಯು ಪ್ರಮಾಣಪತ್ರದಲ್ಲಿ ಹೇಳಿದೆ.

ವಿಳಂಬಕ್ಕೆ ಕಾರಣವನ್ನು ವಿವರಿಸಿ ಪ್ರಮಾಣಪತ್ರ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಏ.2ರಂದು ಹಿರಿಯ ವಕೀಲ ಪಿ.ಆರ್.ರಾವ್ ಅವರಿಗೆ ಸೂಚಿಸಿತ್ತು. ವಿಶೇಷ ಮೇಲ್ಮನವಿ ಅರ್ಜಿಗೆ ಒಪ್ಪಿಗೆ ನೀಡಲು ಆಗಿನ ಸಾಲಿಸಿಟರ್ ಜನರಲ್ ಅವರ ಕಚೇರಿ ಮೂರು ತಿಂಗಳಿಗೂ ಹೆಚ್ಚು ಕಾಲ ತೆಗೆದುಕೊಂಡದ್ದೇಕೆ ಕಾರಣ ಏನೆಂಬುದನ್ನು ವಿವರಿಸಬೇಕು ಎಂದೂ ಕೋರ್ಟ್ ಸೂಚಿಸಿತ್ತು.

ಮೇಲ್ಮನವಿ ಅರ್ಜಿಯ ಕರಡು ಪ್ರತಿಗೆ ಒಪ್ಪಿಗೆ ನೀಡುವ ಮುನ್ನ ಸಾಲಿಸಿಟರ್ ಜನರಲ್ ಅವರು ಅಪಾರ ಪ್ರಮಾಣದ ದಾಖಲೆಗಳನ್ನು  ನೋಡಬೇಕಿತ್ತು. ಅಲ್ಲದೇ 2 ಜಿ ತರಂಗಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಅವರಿಗೆ ಹೆಚ್ಚಿನ ಕೆಲಸ ಇತ್ತು ಎಂದು  ಸಿಬಿಐ ವಿವರಿಸಿದೆ.ಮುಂದಿನ ವಿಚಾರಣೆ ಜುಲೈ 17ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT