ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನೆ ಚುನಾವಣೆ: ಚುರುಕಾದ ಚಟುವಟಿಕೆ

Last Updated 10 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಕ್ಷೇತ್ರಗಳಿಂದ ವಿಧಾನ ಪರಿಷತ್‌ನ 17 ಸ್ಥಾನಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಪದವೀಧರ ಮತ್ತು ಶಿಕ್ಷಕರ ತಲಾ ಮೂರು ಕ್ಷೇತ್ರಗಳಿಗೆ ಈಗಾಗಲೇ ಚುನಾವಣೆ ಘೋಷಣೆಯಾಗಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಜೂನ್ 17ರ ಒಳಗೆ ಚುನಾವಣೆ ನಡೆಯಬೇಕಾಗಿದೆ. ಯಾವುದೇ ಕ್ಷಣದಲ್ಲಿ ಚುನಾವಣೆ ವೇಳಾಪಟ್ಟಿ ಪ್ರಕಟವಾಗಲಿದೆ. ಪುನರಾಯ್ಕೆ ಬಯಸಿರುವ ಹಾಲಿ ಸದಸ್ಯರು ಚುನಾವಣೆಯ ದಿನಾಂಕ ಪ್ರಕಟವಾಗುವ ಮೊದಲೇ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ.

11 ಸ್ಥಾನಗಳು ಅಷ್ಟೇ ಅಲ್ಲದೆ, ಡಾ.ವಿ.ಎಸ್.ಆಚಾರ್ಯ ನಿಧನದಿಂದಾಗಿ ಒಂದು ಸ್ಥಾನಕ್ಕೆ ಉಪ ಚುನಾವಣೆ ನಡೆಯಬೇಕಾಗಿದೆ. ಅದಕ್ಕೆ ಪ್ರತ್ಯೇಕವಾಗಿ ಚುನಾವಣೆ ಘೋಷಣೆಯಾಗುವ ಸಂಭವವಿದೆ.

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದೆ. ಈ ಮಧ್ಯೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮುಂದಿನ ವಾರ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಸಂಬಂಧಪಟ್ಟ ಜಿಲ್ಲೆಗಳ ಶಾಸಕರು, ಸಚಿವರು, ಸಂಸದರು ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರ ಸಭೆ ಕರೆದಿದ್ದಾರೆ.

  ಬಿಜೆಪಿಯ ಡಿ.ಎಚ್.ಶಂಕರಮೂರ್ತಿ, ರಾಮಚಂದ್ರಗೌಡ, ಗಣೇಶ ಕಾರ್ಣಿಕ್ ಪುನರಾಯ್ಕೆ ಬಯಸಿದ್ದಾರೆ. ಹಾಲಿ ಸದಸ್ಯ ಮನೋಹರ ಮಸ್ಕಿ ಈ ಬಾರಿ ಕಣಕ್ಕೆ ಇಳಿಯುತ್ತಿಲ್ಲ. ಅವರ ಬದಲಿಗೆ ಅಮರನಾಥ ಪಾಟೀಲ ಅವರು ಈಶಾನ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಹಾಲಿ ಪಕ್ಷೇತರ ಸದಸ್ಯ ವೈ.ಎ.ನಾರಾಯಣಸ್ವಾಮಿ ಈ ಬಾರಿ ಬಿಜೆಪಿಯಿಂದ ಕಣಕ್ಕೆ ಇಳಿಯಲಿದ್ದು, ಈಗಾಗಲೇ ಟಿಕೆಟ್ ಘೋಷಣೆಯಾಗಿದೆ.

ವಿಧಾನ ಪರಿಷತ್ತಿನ ಉಪಸಭಾಪತಿ ವಿಮಲಾಗೌಡ, ವಿರೋಧ ಪಕ್ಷದ ನಾಯಕಿ ಮೋಟಮ್ಮ, ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ, ತೋಂಟದಾರ್ಯ, ಡಿ.ಎಸ್.ವೀರಯ್ಯ, ಕಾಂಗ್ರೆಸ್‌ನ ವಿ.ಆರ್.ಸುದರ್ಶನ್, ಕೆ.ಸಿ.ಕೊಂಡಯ್ಯ, ಕಾಜಿ ಅರಷದ ಅಲಿ, ಜೆಡಿಎಸ್‌ನ ಎಚ್.ಸಿ.ನೀರಾವರಿ, ಎಸ್.ಚಿಕ್ಕಮಾದು, ಅಬ್ದುಲ್ ಅಜೀಂ ಅವರ ಸದಸ್ಯತ್ವದ ಅವಧಿ ಜೂನ್ 17ಕ್ಕೆ ಮುಕ್ತಾಯವಾಗಲಿದೆ.

ನಾಮಕರಣ ಸದಸ್ಯರಾದ ಎನ್.ತಿಪ್ಪಣ್ಣ, ವೈ.ಎಸ್.ವಿ.ದತ್ತ ಮತ್ತು ಶ್ರೀನಾಥ್ ಅವರ ಅವಧಿ ಇದೇ 20ಕ್ಕೆ ಮುಕ್ತಾಯವಾಗಲಿದೆ.

ಮೋಟಮ್ಮ ವಿಧಾನಸಭೆ ಚುನಾವಣೆಗೆ ನಿರಾಸಕ್ತಿ ವ್ಯಕ್ತಪಡಿಸಿದ್ದು, ಮೇಲ್ಮನೆಗೆ ಪುನರಾಯ್ಕೆ ಆಗಲು ಆಸಕ್ತಿ ತೋರಿದ್ದಾರೆ. ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೂ ಮುಂಚೆ ನಡೆಯುವ ಮಹತ್ವದ ಚುನಾವಣೆ ಇದಾಗಿದ್ದು, ಸಹಜವಾಗಿಯೇ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.

ಆರು ಸ್ಥಾನಗಳಿಗೆ ಜೂ.10ಕ್ಕೆ ಚುನಾವಣೆ
ಬೆಂಗಳೂರು: ಪದವೀಧರ ಮತ್ತು ಶಿಕ್ಷಕರ ತಲಾ ಮೂರು ಕ್ಷೇತ್ರ ಒಳಗೊಂಡಂತೆ ರಾಜ್ಯ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ಈ ಸಂಬಂಧದ ಅಧಿಸೂಚನೆ ಇದೇ 16ರಂದು ಹೊರಬೀಳಲಿದೆ.
ಈ ಆರು ಸ್ಥಾನಗಳು ಜೂನ್ 21ಕ್ಕೆ ತೆರವಾಗಲಿವೆ. ಅಧಿಸೂಚನೆ ಹೊರಬಿದ್ದ ದಿನದಿಂದಲೇ ನಾಮಪತ್ರ ಸಲ್ಲಿಸಬಹುದು. ಮೇ 23 ನಾಮಪತ್ರ ಸಲ್ಲಿಸಲು ಕಡೆ ದಿನ. ಮೇ 24ರಂದು ನಾಮಪತ್ರಗಳ ತಪಾಸಣೆ ನಡೆಯಲಿದೆ. ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಮೇ 26 ಕೊನೆ ದಿನ. ಜೂನ್ 10ರಂದು ಮತದಾನ, 13ರಂದು ಮತ ಎಣಿಕೆ ನಡೆಯಲಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ (ನೈರುತ್ಯ ಪದವೀಧರ ಕ್ಷೇತ್ರ), ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರಗೌಡ (ಬೆಂಗಳೂರು ಪದವೀಧರ), ಮನೋಹರ ಮಸ್ಕಿ (ಈಶಾನ್ಯ ಪದವೀಧರ), ಗಣೇಶ ಕಾರ್ಣಿಕ್ (ವಾಯವ್ಯ ಶಿಕ್ಷಕರ ಕ್ಷೇತ್ರ), ವೈ.ಎ.ನಾರಾಯಣಸ್ವಾಮಿ (ಆಗ್ನೇಯ ಶಿಕ್ಷಕರ ಕ್ಷೇತ್ರ) ಮತ್ತು ಮರಿತಿಬ್ಬೇಗೌಡ (ದಕ್ಷಿಣ ಶಿಕ್ಷಕರ ಕ್ಷೇತ್ರ) ಅವರ ಅವಧಿ ಜೂನ್ 21ಕ್ಕೆ ಮುಗಿಯಲಿದೆ. ಇವರಿಂದ ತೆರವಾಗುವ ಸ್ಥಾನಗಳಿಗೆ ಈಗ ಚುನಾವಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT