ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನೆ : ಮೊಂಡಾಗುತ್ತಿರುವ ಅಂಕುಶ

Last Updated 16 ಜೂನ್ 2012, 19:30 IST
ಅಕ್ಷರ ಗಾತ್ರ

ಮೈಸೂರು ಮಹಾರಾಜರ ಆಡಳಿತಾವಧಿಯಲ್ಲಿ ಸರ್ಕಾರಕ್ಕೆ ಶಾಸನ ನಿರೂಪಣೆ ಮತ್ತು ಆಡಳಿತ ವಿಚಾರಗಳಲ್ಲಿ ಸಹಕರಿಸಲು ವಿಷಯತಜ್ಞರು ಹಾಗೂ ಅನುಭವಿಗಳನ್ನು ಒಳಗೊಂಡಂತೆ ಮೈಸೂರು ವಿಧಾನಪರಿಷತ್ತು 1907ರಲ್ಲಿ ಅಸ್ತಿತ್ವಕ್ಕೆ ಬಂತು.

1923ರಲ್ಲಿ ಅನುದಾನಗಳ ಮೇಲಿನ ಮತದಾನಕ್ಕೆ ಅವಕಾಶ ಕಲ್ಪಿಸುವ ಮೂಲಕ ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಪದ್ಧತಿಗೆ ನಾಂದಿಹಾಡಿದ ಕೀರ್ತಿ ಮೈಸೂರು ರಾಜಮನೆತನದ್ದು. ಇದು ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಲೋಕಸಭೆಯೊಂದಿಗೆ ರಾಜ್ಯಸಭೆಯ ಸ್ಥಾಪನೆಗೆ ಸ್ಫೂರ್ತಿಯಾಗಿದ್ದು ಇತಿಹಾಸ.

ದೇಶದ ಸಂವಿಧಾನ ರಚಿಸುವ ಸಂದರ್ಭದಲ್ಲಿ ಮೇಲ್ಮನೆ ಅಗತ್ಯದ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ರಾಷ್ಟ್ರದಲ್ಲಿ ರಾಜ್ಯಸಭೆ ಮತ್ತು ರಾಜ್ಯಗಳಲ್ಲಿ ಮೇಲ್ಮನೆ ಇರುವುದು ಅಗತ್ಯ ಎನ್ನುವ ನಿರ್ಧಾರಕ್ಕೆ ಸಂವಿಧಾನ ರಚನಾಕಾರರು ಬಂದಿದ್ದಾರೆ.

ಭಾಷಾವಾರು ರಾಜ್ಯಗಳ ರಚನೆ, ಪ್ರಾಂತ್ಯಗಳ ಪುನರ್ವಿಂಗಡಣೆಯಾದ ಮೇಲೆ ಆಯಾ ರಾಜ್ಯಗಳ ವ್ಯಾಪ್ತಿ, ಜನಸಂಖ್ಯೆ ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ ಮೇಲ್ಮನೆ ರಚಿಸಿಕೊಳ್ಳುವ ಸ್ವಾತಂತ್ರ್ಯ ಮತ್ತು ವಿವೇಚನೆಯನ್ನು ರಾಜ್ಯಗಳಿಗೆ ನೀಡಲಾಯಿತು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೇಲ್ಮನೆ ಮಹತ್ವವಾದುದು.  ಏಕೆಂದರೆ ಪ್ರತಿಯೊಂದು ನಿರ್ಧಾರ, ಶಾಸನ ಹಂತಹಂತವಾಗಿ ಪರಿಶೀಲನೆಗೆ ಒಳಗಾಗಬೇಕು. ಶಾಸನ ಸಭೆಯಲ್ಲಿ ಪ್ರತಿಯೊಂದು ವಿಷಯವು ಹೆಚ್ಚು ವಿಮರ್ಶೆಗೆ ಒಳಪಟ್ಟರೆ ಅದರಿಂದ ದೋಷವಿಲ್ಲದ ಶಾಸನ ರಚನೆ ಸಾಧ್ಯವಾಗುತ್ತದೆ ಎನ್ನುವುದು ಮೇಲ್ಮನೆ ಸ್ಥಾಪನೆ ಹಿಂದಿರುವ ಆಶಯ.

ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ವಿಧಾನಪರಿಷತ್ತಿನ ಉದ್ದೇಶ ಮತ್ತು ಅಗತ್ಯಗಳೆರಡೂ ಸ್ವಾತಂತ್ರ್ಯಪೂರ್ವ ಯುಗಕ್ಕಿಂತ ಭಿನ್ನವಾಗಿದ್ದವು. ಕೆಳಮನೆಗೆ ಆರಿಸಿಬಾರದಬುದ್ಧಿವಂತರಿಗೆ ಪ್ರಾತಿನಿಧ್ಯ ನೀಡುವಷ್ಟಕ್ಕೆ ಮಾತ್ರ ಆ ಉದ್ದೇಶ ಸೀಮಿತವಾಗಿರಲಿಲ್ಲ. ಭಾರತೀಯ ಸಾಮಾಜಿಕ ಸಂಬಂಧಗಳಲ್ಲಿ ಹಾಸುಹೊಕ್ಕಾಗಿರುವ ಫ್ಯೂಡಲ್ ಮನಸ್ಥಿತಿ ವಿಜೃಂಭಣೆಯನ್ನು ತಡೆಯುವ ಸುಪ್ತ ಉದ್ದೇಶವೂ ವಿಧಾನಪರಿಷತ್ತಿನಂಥ ಮೇಲ್ಮನೆಗಳನ್ನು ಉಳಿಸಿಕೊಳ್ಳುವುದರ ಹಿಂದಿತ್ತು.

ಮೇಲ್ಮನೆಯು ಹಿರಿಯ ಮತ್ತು ವಿಷಯತಜ್ಞರನ್ನು ಹೊಂದಿದ್ದು, ಸದನ ಕಲಾಪದಲ್ಲಿ ಅವರ ಉಪಸ್ಥಿತಿ ಮತ್ತು ಸಲಹೆ-ಸೂಚನೆಗಳು ರಾಜಕೀಯಕ್ಕೆ ಪರಿಪೂರ್ಣತೆ, ಸ್ಪಷ್ಟತೆ ಹಾಗೂ ಮೆರುಗು ಕೊಡುತ್ತದೆ; ಮೇಲ್ಮನೆ ಸದಸ್ಯರು ಪೂರ್ವಗ್ರಹಪೀಡಿತರಾಗಿರದೆ, ರಾಜಕೀಯ ಮನಸ್ಥಿತಿ ಮತ್ತು ರಾಜಕೀಯ ಪಕ್ಷಗಳ ದಾಕ್ಷಿಣ್ಯದಿಂದ ಮುಕ್ತವಾಗಿ ಇರುವುದರಿಂದ ರಾಜ್ಯದ ಹಿತದೃಷ್ಟಿ-ಅಭಿವೃದ್ಧಿ ಬಗೆಗಿನ ಕಾಳಜಿಯೇ ಪ್ರಮುಖವಾಗಿ, ಪಕ್ಷಪಾತ ನಿಲುವಿನಿಂದ ದೂರ ಇರುತ್ತಾರೆ; ಮೇಲ್ಮನೆಯು ಶಾಶ್ವತ ಸದನವಾಗಿರುವುದರಿಂದ ಪ್ರಸ್ತುತ ಕಾಲಮಾನದ ರಾಜಕೀಯದಲ್ಲಿ ಸ್ಥಿರತೆ ಕಾಪಾಡುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ.

ಎಂಬತ್ತರ ದಶಕದ ನಂತರ ದೇಶದ ರಾಜಕಾಣರದಲ್ಲಿ ಆಗಿರುವ ಪಲ್ಲಟದಿಂದ ಪಕ್ಷ ರಾಜಕಾರಣ ದ್ವೇಷ ರಾಜಕಾರಣಕ್ಕೆ ತಿರುಗಿ ಎಲ್ಲ ಸದನಗಳಲ್ಲಿ ನಮ್ಮ ಮಾತನ್ನೇ ಕೇಳುವ, ನಮ್ಮ ನೀತಿ ನಿಲುವುಗಳನ್ನೇ ಬೆಂಬಲಿಸುವ ಸದಸ್ಯರು ಹೆಚ್ಚಿರಬೇಕು ಎನ್ನುವ ಸ್ಥಿತಿಗೆ ಎಲ್ಲ ರಾಜಕೀಯ ಪಕ್ಷಗಳು ಬಂದು ನಿಂತಿವೆ.

ಪರಿಣಾಮ ಅತ್ಯಂತ ಮೌಲಿಕವಾದ ಚರ್ಚೆಗಳ ಇತಿಹಾಸವಿರುವ ವಿಧಾನ ಪರಿಷತ್ತು ಕ್ರಮೇಣ ಕೆಳಮನೆಯಂತೆಯೇ ಚರ್ಚೆಯ ಮಹತ್ವವನ್ನೇ ಮರೆತುಬಿಟ್ಟಿದೆ. ಕೆಳಮನೆಯ ಪ್ರತಿರೂಪದದಂತೆ ಮೇಲ್ಮನೆಯೂ ಆಗಿದೆ. ಮೇಲ್ಮನೆ ಇಂತಹ ಸ್ಥಿತಿಗೆ ತಲುಪಲು ಎಲ್ಲ ಪಕ್ಷಗಳ ಕೊಡುಗೆ ಇದೆ. ಈ ವಿಚಾರದಲ್ಲಿ ಎಲ್ಲ ಪಕ್ಷಗಳು ದೋಷಿಗಳೇ.

ಮೇಲ್ಮನೆ ಇಂದು ರಾಜಕಾರಣಿಗಳಿಗೆ ಪುನರ್ವಸತಿ ಕೇಂದ್ರವಾಗಿ ಮಾರ್ಪಟ್ಟಿದೆ. ವಿ.ಸೋಮಣ್ಣ ಮತ್ತು ಬಂಡೆಪ್ಪ ಕಾಶೆಂಪೂರ ಅವರನ್ನು ನಾಮಕರಣ ಪಟ್ಟಿಯಿಂದ ತಿರಸ್ಕರಿಸಿದ ಎರಡು ಪ್ರಕರಣಗಳನ್ನು ಹೊರತುಪಡಿಸಿದರೆ ಅನೇಕ ಬಾರಿ ಆಡಳಿತ ಪಕ್ಷ ನೀಡಿದ ಪಟ್ಟಿಯನ್ನು ರಾಜ್ಯಪಾಲರು ಒಪ್ಪಿಕೊಂಡಿದ್ದಾರೆ.

ನಾಮಕರಣ ಕೋಟಾದಲ್ಲಿ ಬರುವವರು ಯಾವುದೇ ಪಕ್ಷದ ಸಕ್ರಿಯ ಸದಸ್ಯರೂ ಆಗಿರಬಾರದು ಮತ್ತು ಸರ್ಕಾರದ ಭಾಗವೂ ಆಗಬಾರದು. ಅಲ್ಲದೆ, ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳಿಂದ ಆಯಾ ಕ್ಷೇತ್ರಗಳ ಪರಿಣಿತರ ಆಯ್ಕೆಯಾಗಿ ಬರಬೇಕಿರುವ ಕಡೆ ಸಕ್ರಿಯ ರಾಜಕಾರಣಿಗಳೇ ಆಯ್ಕೆಯಾಗುತ್ತಿರುವುದು ಪ್ರಜಾಪ್ರಭುತ್ವದ ಅಣಕ.
 
ಪದವೀಧರ ಮತದಾರ ಮತ ಚಲಾಯಿಸುವ ಹಕ್ಕು ಪಡೆಯಬೇಕಾದರೆ ಪದವಿ ಗಳಿಸಿ ಮೂರು ವರ್ಷವಾಗಿರಬೇಕು. ಆದರೆ, ಈ ಕ್ಷೇತ್ರಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗೆ ಯಾವುದೇ ಪದವಿ ಕಡ್ಡಾಯವಲ್ಲ. ಇದಕ್ಕಿಂತ ದೊಡ್ಡ ದುರಂತ ಮತ್ತೇನು ಬೇಕು? ಅಂದರೆ ಅಷ್ಟರಮಟ್ಟಿಗೆ ರಾಜಕಾರಣಿಗಳು ತಮ್ಮ ಪರವಾದ ಪರಿಸ್ಥಿತಿ ನಿರ್ಮಿಸಿಕೊಂಡಿದ್ದಾರೆ.

ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ಬರುವವರಿಗೂ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳ ವ್ಯವಸ್ಥೆ ಬಗ್ಗೆ ಅರಿವಿಗಿಂತ ಇಲ್ಲಿಯೂ ಜಾತಿ, ಹಣದ ಪ್ರಭಾವ ಉಳ್ಳವರು ಆರಿಸಿ ಬರುತ್ತಿದ್ದಾರೆ. ಪಕ್ಷಗಳು ಶಿಥಿಲವಾಗುತ್ತಿರುವುದು ಹಾಗೂ ಅವುಗಳು ವ್ಯಕ್ತಿ ಕೇಂದ್ರಿತವಾಗಿ ಪರಿವರ್ತನೆಯಾಗುತ್ತಿರುವುದಲ್ಲದೆ ಪ್ರತಿಯೊಂದು ಪಕ್ಷದಲ್ಲೂ ಆಂತರಿಕ ಪ್ರಜಾಪ್ರಭುತ್ವ ಕ್ಷೀಣಿಸುತ್ತಿದೆ.

ಇನ್ನು ಭಾರತೀಯ ರಾಜಕೀಯ ವ್ಯವಸ್ಥೆಯ ಹೊಸ ಮಜಲು ಎನ್ನಬಹುದಾದ ಕುಟುಂಬ ಕೇಂದ್ರಿತ ರಾಜಕಾರಣ ದಿನದಿನಕ್ಕೂ ಮಾನ್ಯತೆ ಪಡೆಯುತ್ತಿದೆ. ರಾಜಪರಂಪರೆ ನೆನಪಿಸುವಂತಹ ವಂಶ ಪಾರಂಪರ್ಯ ರಾಜಕಾರಣ ಎಲ್ಲ ಪಕ್ಷಗಳಲ್ಲೂ ಕಂಡುಬರುತ್ತಿದೆ.

ಹೀಗೆ ವಂಶಪಾರಂಪರ‌್ಯ ರಾಜಕಾರಣ ಮಾಡುವವರು ಸೂಚಿಸುವ ವ್ಯಕ್ತಿಗಳೇ ಮೇಲ್ಮನೆಗೆ ಆರಿಸಿ ಬರುವವರಾಗುತ್ತಿದ್ದಾರೆ. ಮೇಲ್ಮನೆ ಸದಸ್ಯರಾಗುವುದು ಈಗ ಪ್ರತಿಷ್ಠೆಯ ಪ್ರಶ್ನೆಯಾಗಿ ಕಾಣುತ್ತಿದೆ. ಅದೊಂದು ಸೇವೆ ಮತ್ತು ಶಾಸನ ರಚನೆಗೆ ಸಹಾಯವಾಗುವಂತಹ ಸ್ಥಾನವಾಗಿ ಉಳಿದಿಲ್ಲ.

ವಿಧಾನಪರಿಷತ್ತಿಗೆ ಸದಸ್ಯರ ಆಯ್ಕೆಯಲ್ಲಿ ಸಮಾಜದ ವಿವಿಧ ಸ್ತರಗಳ ಅಂದರೆ; ಸ್ಥಳೀಯ ಸಂಸ್ಥೆಗಳಾದ ನಗರಪಾಲಿಕೆಗಳು- ಪುರಸಭೆಗಳು ಮತ್ತು ಜಿಲ್ಲಾ ಪಂಚಾಯಿತಿಗಳಂತಹ ಸಂಸ್ಥೆಗಳ ಪ್ರತಿನಿಧಿಗಳು, ವಿಧಾನಸಭೆಯ ಸದಸ್ಯರು, ಪದವೀಧರ ಕ್ಷೇತ್ರಗಳ ಮತದಾರರು, ಶಿಕ್ಷಕ ಸಮುದಾಯದ ಮತದಾರರ ಪಾಲ್ಗೊಳ್ಳುವಿಕೆ ಬೇಕು.
 
ಜತೆಗೆ ಸಾಹಿತ್ಯ, ಸಹಕಾರ, ವಿಜ್ಞಾನ, ಕಲೆ, ಸಮಾಜಸೇವೆ ಮುಂತಾದ ಕ್ಷೇತ್ರಗಳಿಂದ ಗಣ್ಯರನ್ನು ರಾಜ್ಯಪಾಲರು ನಾಮಕರಣ ಮಾಡುವ ಮೂಲಕ ಭಾಗವಹಿಸುವುದರಿಂದ ಒಂದು ರಾಜ್ಯದ ಶಾಸನನಿರೂಪಣೆಯಲ್ಲಿ ರಾಜಕೀಯೇತರ ಮತ್ತು ವೈವಿಧ್ಯಮಯ- ಸಾಂಘಿಕ ಪಾಲ್ಗೊಳ್ಳುವಿಕೆ ಸಾಧ್ಯವಾಗಬೇಕೆಂಬ ಆಶಯಗಳೇ ಇಂದಿನ ಕಾಲಮಾನದಲ್ಲಿ ಮಸುಕಾಗಿರುವುದು ಉತ್ತಮ ಬೆಳವಣಿಗೆಯಲ್ಲ.

ಮಹತ್ವದ ವಿಚಾರಗಳು ಕಾಯ್ದೆಯಾಗುವ ಸಂದರ್ಭ ಪರಿಣಾಮಕಾರಿ, ಸತ್ವಯುತ ವಿಚಾರವಿನಿಮಯಗಳೇ ನಡೆಯಲು ಅಸ್ಪದವಿಲ್ಲದಂತಾಗಿರುವಲ್ಲಿ ಯಾರ ಪಾಲು ಎಷ್ಟೆಂಬುದನ್ನು ಕಂಡುಹಿಡಿಯಬೇಕಿದೆ. ಪರಿಹಾರೋಪಾಯಗಳನ್ನು ಬೇಗನೆ ಕಂಡುಕೊಳ್ಳದಿದ್ದಲ್ಲಿ ಈಗಾಗಲೇ ಅವನತಿಯ ಹಾದಿಯಲ್ಲಿರುವ ರಾಜಕಾರಣ ನಿಸ್ಸಾರವಾಗುವುದು ಖಂಡಿತ.

ಮೇಲ್ಮನೆ ಕೂಡ ಇಂದು ಕೆಳಮನೆಯಂತೆಯೇ ಧರಣಿ, ಸಭಾತ್ಯಾಗ, ಪ್ರಶ್ನೋತ್ತರಕ್ಕೆ ಅಡ್ಡಿ, ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿಕೆ, ಶಾಸನ ರಚನೆ ಯಾವುದೇ ಚರ್ಚೆ ಇಲ್ಲದೆ ಆಗುವ ಸ್ಥಿತಿಗೆ ತಲುಪಿದೆ.

ಇದಕ್ಕೆ ಕಾರಣ ಮೇಲ್ಮನೆ ಸದಸ್ಯರಲ್ಲಿ ಆಗಿರುವಂತಹ ಬೌದ್ಧಿಕ ಅಧಃಪತನ. ಮೇಲ್ಮನೆಯಲ್ಲಿ ದೈನಂದಿನ ಆಗುಹೋಗುಗಳ ಚರ್ಚೆಗಿಂತ ದೀರ್ಘಕಾಲದ ಪರಿಣಾಮ ಬೀರುವಂತಹ ಶಾಸನಗಳ ರಚನೆ, ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಸದನ ಸಮಿತಿ, ಜಂಟಿ ಸದನ ಸಮಿತಿ, ಇನ್ನಿತರ ಸಮಿತಿಗಳು ನೀಡುವ ವರದಿಗಳ ಬಗ್ಗೆ ಮೌಲ್ವಿಕ ಚರ್ಚೆ ನಡೆಯಬೇಕು. ಇದು ಇದೆಲ್ಲ ಇಂದು ಆಗುತ್ತಿದೆಯೇ ಎನ್ನುವುದನ್ನು ಎಲ್ಲ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು.

ನಮ್ಮ ಶಾಸಕಾಂಗದ ಇತಿಹಾಸವನ್ನು ಫ್ಯೂಡಲ್ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವವಾದೀ ಮೌಲ್ಯಗಳ ಸಂಘರ್ಷ ಎಂಬ ದೃಷ್ಟಿಯಲ್ಲಿ ನೋಡಿದಾಗ, ಕಳೆದ ಒಂದೂವರೆ ದಶಕದಲ್ಲಿ ಫ್ಯೂಡಲ್ ಮೌಲ್ಯಗಳು ಮತ್ತೆ ವಿಜೃಂಭಿಸುವಂತೆ ಕಾಣಿಸುತ್ತಿದೆ.
 
ಮೇಲ್ಮನೆ ಮತ್ತು ಕೆಳಮನೆಗಳಲ್ಲಿ ಆಸೀನರಾಗಿರುವವರನ್ನು ನೋಡಿದರೆ, ಬ್ರಿಟೀಷರು ಮತ್ತು ರಾಜರು ಹೋಗಿ ಅವರ ಜಾಗದಲ್ಲಿ ರಾಜಕೀಯ ಪಕ್ಷಗಳ ವ್ಯಕ್ತಿಗಳು ಪ್ರತಿಷ್ಠಾಪಿತರಾಗಿದ್ದಾರೆ ಅಷ್ಟೇ.

ಪಕ್ಷ ನಡೆಸುವ ರಾಜಕೀಯ ನಾಯಕರು ತಮ್ಮ ಪಕ್ಷಕ್ಕೆ ನಿಧಿ ಸಂಗ್ರಹಿಸಿ ಕೊಡುವವರ ಮತ್ತು ತಮ್ಮ ವೈಯಕ್ತಿಕ ಅಭಿಲಾಷೆಗಳನ್ನು ಈಡೇರಿಸುವವರನ್ನು ನೇಮಿಸುವ ಮೂಲಕ ಮೇಲ್ಮನೆಯ ಘನತೆ ಕಳೆಯುತ್ತಿದ್ದಾರೆ.

ಇಡೀ ಸದನದ ಕಸ್ಟೋಡಿಯಲ್ ಆಗಿರುವ ಮೇಲ್ಮನೆಯ ಅಧ್ಯಕ್ಷೀಯ ಹುದ್ದೆಯೂ ಅದರ ನಿರಪೇಕ್ಷಗುಣವನ್ನು ದಿನದಿನಕ್ಕೂ ಕಳೆದುಕೊಳ್ಳುತ್ತಿದೆ. ಲೋಕಸಭೆಯಲ್ಲಿ ಸೋಮನಾಥ ಚಟರ್ಜಿ ಮತ್ತು ವಿಧಾನಸಭೆಯಲ್ಲಿ ವೈಕುಂಠ ಬಾಳಿಗಾ ಸಭಾಧ್ಯಕ್ಷ ಸ್ಥಾನಕ್ಕೆ ಎಷ್ಟೊಂದು ಘನತೆ ಇದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ನನ್ನ ದೃಷ್ಟಿಯಲ್ಲಿ ಪ್ರತಿ ರಾಜ್ಯಕ್ಕೂ ಎರಡು ಸದನಗಳ ಶಾಸನ ಸಭೆ ಇರಲೇಬೇಕು. ಸಂವಿಧಾನಕ್ಕೆ ತಿದ್ದುಪಡಿ ತಂದಾದರೂ ಪ್ರತಿ ರಾಜ್ಯದಲ್ಲಿ ಜಾರಿಗೊಳಿಸಬೇಕು. ಮೇಲ್ಮನೆಗಳ ಸದಸ್ಯರ ಅರ್ಹತೆ, ನಾಮಕರಣ ಮಾನದಂಡ ಹೀಗೆ ಎಲ್ಲದರಲ್ಲೂ ಆಮೂಲಾಗ್ರ ಬದಲಾವಣೆಯೂ ಆಗಬೇಕು.

ಮೇಲ್ಮನೆ ಶಾಶ್ವತ ಸಭೆಯಾಗಿರುವುದರಿಂದ ಅದರ ಕಾರ್ಯವೈಖರಿ ಮತ್ತು ನಡವಳಿಕೆಯಲ್ಲಿ ಆಮೂಲಾಗ್ರ ಬದಲಾವಣೆ ಅತ್ಯಗತ್ಯ. ಯಾವುದೇ ಸಂಸ್ಥೆ ಅಥವಾ ಸದನ 60 ವರ್ಷ ಪೂರೈಸುತ್ತಿರುವುದು ಪಕ್ವತೆಯ ಸಂದೇಶ. ಆ ಪಕ್ವತೆ ಶಾಸನ ಸಭೆಗಳಿಗೂ ಬರಲಿ. ವಿಧಾನ ಪರಿಷತ್ ನಡಾವಳಿ ಮತ್ತು ನಿಯಮಗಳನ್ನು ಪರಿಷ್ಕರಿಸಲು ಇದು ಸಕಾಲ.
 
ಸದನಗಳ ಸದಸ್ಯರಿಗೆ ಇರಬೇಕಾದ ಅರ್ಹತೆ, ಅವರ ಕಾರ್ಯನಿರ್ವಹಣೆ, ಅಲ್ಲಿ ಚರ್ಚೆಯಾಗುವ ವಿಷಯಗಳು ಹೀಗೆ ಎಲ್ಲದರ ಬದಲಾವಣೆ ಮತ್ತು ಸುಧಾರಣೆಗೆ ಕಾಲ ಪಕ್ವವಾಗಿದೆ. ರಾಜಕೀಯ ಪಕ್ಷಗಳ ನೋಂದಣಿ, ಅವುಗಳ ಕಾರ್ಯನಿರ್ವಹಣೆ, ಕಾಲಕಾಲಕ್ಕೆ ಆಂತರಿಕ ಚುನಾವಣೆ, ಪ್ರತಿಯೊಬ್ಬ ರಾಜಕಾರಣಿಯ ಆಸ್ತಿಪಾಸ್ತಿ, ಜೀವನಾಧಾರ ಮತ್ತು ಆದಾಯ ಮೂಲ ಜನಸಾಮಾನ್ಯರಿಗೆ ತಿಳಿಯಬೇಕಿದೆ.
 
ಬಹಳಷ್ಟು ಮಂದಿ ರಾಜಕಾರಣಿಗಳಿಗೆ ನಿಖರ ಆದಾಯ ಮೂಲವೇ ಇಲ್ಲ. ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವಾಗ ಸುಧಾರಣೆ ನಮ್ಮಿಂದಲೇ ಆಗಬೇಕು.

(ಲೇಖಕರು ವಿಧಾನ ಪರಿಷತ್‌ನ ಮಾಜಿ ಸಭಾಪತಿ)
ನಿರೂಪಣೆ: ಕೆ.ಎಂ.ಸಂತೋಷ್‌ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT