ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮೇಲ್ಸೇತುವೆ ಬಳಕೆಯಿಂದ ಅಪಘಾತ ನಿಯಂತ್ರಣ'

Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಸಾರ್ವಜನಿಕರು ರಸ್ತೆ ದಾಟಲು ಅಂಡರ್‌ಪಾಸ್ ಅಥವಾ ಮೇಲ್ಸೇತುವೆಯನ್ನು ಬಳಕೆ ಮಾಡುವುದರಿಂದ ಅಪಘಾತಗಳ ಸಂಖ್ಯೆಯನ್ನು ನಿಯಂತ್ರಿಸಬಹುದು' ಎಂದು ಹೈದರಾಬಾದ್ ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಸಿ.ವಿ.ಆನಂದ್ ಅಭಿಪ್ರಾಯಪಟ್ಟರು.

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ನಗರದಲ್ಲಿ ಆಯೋಜಿಸಿರುವ `ಸಂಚಾರ ವ್ಯವಸ್ಥೆಯ ನಿಯಮ, ನಿರ್ವಹಣೆ ಮತ್ತು ಆಡಳಿತದಲ್ಲಿ ಹೊಸ ಪ್ರಯತ್ನ' ವಿಷಯದ ವಿಚಾರ ಸಂಕಿರಣದ ಎರಡನೇ ದಿನವಾದ ಶುಕ್ರವಾರ ಅವರು ಮಾತನಾಡಿದರು.
`ಹೈದರಾಬಾದ್‌ನಲ್ಲಿ  26 ಲಕ್ಷ ವಾಹನಗಳಿವೆ. ಇದಕ್ಕೆ ನಿತ್ಯ 600 ವಾಹನಗಳು ಸೇರ್ಪಡೆಯಾಗುತ್ತಿವೆ. ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ 450 ಮಂದಿ ಸಾವನ್ನಪ್ಪುತ್ತಿದ್ದು, ಇದರಲ್ಲಿ ಶೇ 48 ರಷ್ಟು ಪಾದಚಾರಿಗಳೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಸುರಕ್ಷಿತವಾಗಿ ರಸ್ತೆ ದಾಟಲೆಂದೇ ನಿರ್ಮಿಸಲಾಗಿರುವ ಸ್ಕೈವಾಕರ್ ಹಾಗೂ ಅಂಡರ್‌ಪಾಸ್‌ಗಳನ್ನು ಸಾರ್ವಜನಿಕರು ಬಳಸಿಕೊಳ್ಳುತ್ತಿಲ್ಲ. ರಸ್ತೆ ದಾಟುವ ಆತುರದಲ್ಲಿ ವಾಹನಗಳನ್ನು ಗಮನಿಸದೇ ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ' ಎಂದರು.
ಪ್ರಸ್ತುತ ದಿನಗಳಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘಿಸುವವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ನಗರದಾದ್ಯಂತ ಅಳವಡಿಸಿರುವ ಕ್ಯಾಮೆರಾಗಳು ಪ್ರತಿಯೊಬ್ಬ ಚಾಲಕನ ಮೇಲೂ ನಿಗಾ ಇಟ್ಟಿರುತ್ತದೆ. ಅಲ್ಲದೇ, ಸಿಬ್ಬಂದಿ ಕೂಡ ಡಿಜಿಟೆಲ್ ಕ್ಯಾಮೆರಾ, ಸ್ಪೀಡ್ ಲೇಸರ್ ಗನ್ ಕ್ಯಾಮೆರಾ, ಸಿಗ್ನಲ್ ಜಂಪ್ ಕ್ಯಾಮೆರಾ ಸೇರಿದಂತೆ ಮೊಬೈಲ್ ಇಂಟರ್‌ಸೆಪ್ಟರ್ ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ. ಒಂದು ವೇಳೆ ಚಾಲಕ ಪೊಲೀಸ್ ಸಿಬ್ಬಂದಿಯಿಂದ ತಪ್ಪಿಸಿಕೊಂಡರೂ, ಆತ ಮನೆ ಮುಟ್ಟುವ ಮುನ್ನವೇ ಪೊಲೀಸರು ವಿಧಿಸಿದ ದಂಡದ ಪ್ರತಿ ಮನೆ ಸೇರಿರುತ್ತದೆ. ಸಾರ್ವಜನಿಕರು ಇದನ್ನು ಗಮನದಲ್ಲಿಟ್ಟುಕೊಂಡು ನಿಯಮ ಪಾಲಿಸಬೇಕು ಎಂದು ಆನಂದ್ ಎಚ್ಚರಿಕೆ ನೀಡಿದರು.

ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಹೈದರಾಬಾದ್‌ನಲ್ಲಿ 650 ಸಿಬ್ಬಂದಿಗೆ ಹ್ಯಾಂಡ್‌ಸೆಟ್ ಕೊಡಲಾಗಿದೆ. ವಾಹನ ನೋಂದಣಿ ಸಂಖ್ಯೆಯನ್ನು ಹ್ಯಾಂಡ್‌ಸೆಟ್‌ನಲ್ಲಿ ಟೈಪ್ ಮಾಡಿದರೆ ಸಾಕು. ಆ ವಾಹನದ ಸಂಪೂರ್ಣ ವಿವರ ಹ್ಯಾಂಡ್‌ಸೆಟ್‌ನಲ್ಲಿ ಬರುತ್ತದೆ. ಅಲ್ಲದೇ ಇದರಲ್ಲಿ ಪಿಡಿಎ (ಪರ್ಸನಲ್ ಡಿಜಿಟಲ್ ಅಸಿಸ್ಟೆನ್ಸ್) ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಚಾಲಕನ ವಿರುದ್ಧ ಈ ಹಿಂದೆ ಯಾವುದಾದರೂ ಪ್ರಕರಣಗಳಿವೆಯೇ ಎಂಬುದನ್ನು ಪಿಡಿಎ ಪತ್ತೆ ಹಚ್ಚುತ್ತದೆ. ನಿಯಮ ಉಲ್ಲಂಘಿಸಿದ ಚಾಲಕರಿಂದ 2009ರಲ್ಲಿ 18 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿತ್ತು. ಹೊಸ ತಂತ್ರಜ್ಞಾನಗಳ ಬಳಕೆಯಿಂದ 2012ರಲ್ಲಿ 40 ಕೋಟಿ ರೂಪಾಯಿ ದಂಡ ಕಟ್ಟಿಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಚೆನ್ನೈನಲ್ಲಿ ಎಎನ್‌ಪಿಆರ್ ಕ್ಯಾಮೆರಾ: `ಚೆನ್ನೈ ನಗರದಲ್ಲಿ ಕೆಲ ಜಂಕ್ಷನ್‌ಗಳಲ್ಲಿ ಎಎನ್‌ಪಿಆರ್ (ಆಟೊಮೇಟಿಕ್ ನಂಬರ್ ಪ್ಲೇಟ್ ರೀಡರ್) ಎಂಬ ನೂತನ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದು ಸಂಚಾರ ನಿಯಮ ಉಲ್ಲಂಘಿಸಿದ ಹಾಗೂ ಕದ್ದ ವಾಹನಗಳನ್ನು ಪತ್ತೆ ಹಚ್ಚಲು ನೆರವಾಗುತ್ತದೆ' ಎಂದು ಚೆನ್ನೈ ಹೆಚ್ಚುವರಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ತಿಳಿಸಿದರು.


ಚೆನ್ನೈನಲ್ಲಿ 37 ಲಕ್ಷ ವಾಹನಗಳು ಸಂಚಾರ ನಡೆಸುತ್ತಿವೆ. ಇದರಲ್ಲಿ ಶೇ 70ರಷ್ಟು ದ್ವಿಚಕ್ರ ವಾಹನಗಳಿವೆ. ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೆ 67 ಸಂಚಾರ ಪೊಲೀಸ್ ಠಾಣೆಗಳು ಮತ್ತು 14  ಸಂಚಾರ ತನಿಖಾ ಠಾಣೆಗಳಿವೆ. ಆದರೂ ವಾಹನ ದಟ್ಟಣೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಂತ್ರಜ್ಞಾನಗಳ ನೆರವು ಪಡೆಯಲಾಗುತ್ತಿದೆ. ಇತ್ತೀಚೆಗೆ `ಇ-ಚಲನ್ ಎರಾ' ಎಂಬ ವ್ಯವಸ್ಥೆಯನ್ನು ಆರಂಭಿಸಲಾಗಿದೆ.

ಇದರಂತೆ ಸಿಬ್ಬಂದಿಗೆ ಒಂದೊಂದು ಹ್ಯಾಂಡ್‌ಸೆಟ್ ನೀಡಲಾಗಿದೆ. ಈ ಮೊದಲು ನಿಯಮ ಉಲ್ಲಂಘಿಸಿದ ಚಾಲಕನಿಗೆ ದಂಡದ ಪ್ರತಿ ಬರೆದು ಕೊಡಲು ಸಿಬ್ಬಂದಿಗೆ 12 ನಿಮಿಷ ಬೇಕಿತ್ತು. ಆದರೆ, ಈ ವ್ಯವಸ್ಥೆ ಜಾರಿಯಾದ ನಂತರ ಐದು ನಿಮಿಷದಲ್ಲಿ ಸಿಬ್ಬಂದಿ ದಂಡ ವಿಧಿಸುತ್ತಿದ್ದಾರೆ ಎಂದರು.

ಸಾರ್ವಜನಿಕರೇ ಅರಿಯಬೇಕು

`ದೇಶದಲ್ಲಿ ಸಂಚಾರ ನಿಯಮಗಳು ಕಟ್ಟು ನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ. ಇದರ ಜತೆಗೆ ದೇಶದ ರಸ್ತೆಗಳು ಹದಗಟ್ಟಿರುವುದು ಅಪಘಾತಗಳ ಸಂಖ್ಯೆಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಷ್ಟೇ ತಂತ್ರಜ್ಞಾನಗಳನ್ನು ಜಾರಿಗೆ ತಂದರೂ ಅದರಿಂದಾಗುವ ಪರಿಣಾಮ ಅಲ್ಪಮಟ್ಟದ್ದೇ ಆಗಿರುತ್ತದೆ. ಚಾಲಕರು ಜೀವದ ಬೆಲೆಯನ್ನು ಅರಿತುಕೊಂಡು ಸ್ವಹಿತಾಸಕ್ತಿಯಿಂದ ನಿಯಮ ಪಾಲಿಸಬೇಕಿದೆ'
- ಪಿ.ಕೆ.ಸಿಂಗ್, ರಾಷ್ಟ್ರೀಯ ಹೆದ್ದಾರಿ ಸುರಕ್ಷತಾ ವಿಭಾಗ, 3ಎಂ ಇಂಡಿಯಾ

ಕ್ಷಣ ಕ್ಷಣಕ್ಕೂ ಮಾಹಿತಿ ಅಗತ್ಯ
`ಅಪಘಾತಗಳು, ಗಣ್ಯರ ಭೇಟಿ, ವಾಹನ ದಟ್ಟಣೆ, ಕಾಮಗಾರಿ, ಜಾಥಾ, ಮೆರವಣಿಗೆ ಸೇರಿದಂತೆ ರಸ್ತೆಗಳಲ್ಲಿನ ಪ್ರಸ್ತುತ ಸ್ಥಿತಿಗಳ ಬಗ್ಗೆ ಚಾಲಕರಿಗೆ ಮಾಹಿತಿ ಸಿಗಬೇಕು. ಅಂದರೆ, ಸಿಗ್ನಲ್‌ಗಳಲ್ಲಿ, ರಸ್ತೆ ಬದಿಗಳಲ್ಲಿ ಅಳವಡಿಸಿರುವ ಎಲೆಕ್ಟ್ರಾನಿಕ್ ಸೂಚನಾ ಫಲಕಗಳಲ್ಲಿ ಆ ಮಾಹಿತಿ ಕ್ಷಣ ಕ್ಷಣಕ್ಕೂ ಭಿತ್ತರವಾಗಬೇಕು. ಇದರಿಂದ ಚಾಲಕರು ಎಚ್ಚೆತ್ತುಕೊಂಡು ಪರ್ಯಾಯ ಮಾರ್ಗಗಳಲ್ಲಿ ಚಲಿಸುತ್ತಾರೆ'
- ಪುಷ್ಕರ್ ಕುಲಕರ್ಣಿ, ವ್ಯವಸ್ಥಾಪಕ ನಿರ್ದೇಶಕ, ಸರ್ಕೊ ಇಂಡಿಯಾ ಕಂಪೆನಿ

ಪ್ರಾಥಮಿಕ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಬೇಕು
`ದೇಶದಲ್ಲಿ ಪ್ರತಿ ದಿನ 450 ಮಂದಿ ಅಪಘಾತದಿಂದ ಸಾವನ್ನಪ್ಪುತ್ತಿದ್ದು, ಬೆಂಗಳೂರಿನಲ್ಲಿ ಪ್ರತಿ ವರ್ಷ 900 ಮಂದಿ ಅಸುನೀಗುತ್ತಿದ್ದಾರೆ. ನಗರದ ಆಸ್ಪತ್ರೆಗಳಲ್ಲಿ ಶೇ. 20ರಷ್ಟು ಬೆಡ್‌ಗಳಲ್ಲಿ ಅಪಘಾತದಿಂದ ಗಾಯಗೊಂಡವರೇ ಇರುತ್ತಾರೆ. ಅಪಘಾತ ಸಂಭವಿಸಿದ ಕೂಡಲೇ ಗಾಯಾಳುಗೆ ಪ್ರಾಥಮಿಕ ಚಿಕಿತ್ಸೆ ಸಿಗುತ್ತಿಲ್ಲ. ಇದರ ಬಗ್ಗೆ ಜನರಲ್ಲಿ ಮಾಹಿತಿ ಇಲ್ಲದಿರುವುದು ಪ್ರಮುಖ ಕಾರಣ. ಹೀಗಾಗಿ ಸಾರ್ವಜನಿಕರಿಗೆ ಪ್ರಥಮ ಚಿಕಿತ್ಸೆ ನೀಡುವ ವಿಧಾನದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ'
- ಡಾ.ಜಿ.ಗುರುರಾಜ್
ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ

ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗುವುದಿಲ್ಲ
`ಅಪಘಾತ ನಡೆದ ಸಂದರ್ಭದಲ್ಲಿ ಗಾಯಾಳುವನ್ನು ನೇರವಾಗಿ ಗುಣಮಟ್ಟದ ಆಸ್ಪತ್ರೆಗೆ ದಾಖಲಿಸಬೇಕು. ಆದರೆ, ಗಾಯಾಳುವನ್ನು ನಾಲ್ಕಾರು ಆಸ್ಪತ್ರೆಗೆ ಕರೆದೊಯ್ದು, ಆ ವೈದ್ಯರು ಸೂಚಿಸಿದ ಬಳಿಕ ಉತ್ತಮ ಆಸ್ಪತ್ರೆಗೆ ದಾಖಲಿಸುತ್ತಾರೆ. ಈ ವೇಳೆಗಾಗಲೇ ಆತನ ಪ್ರಾಣವೇ ಹೋಗಿರುತ್ತದೆ'
- ಡಾ.ಮಬೆಲ್ ವಾಸ್ನಿಕ್
ತುರ್ತು ನಿಗಾ ಘಟಕ, ಮಣಿಪಾಲ್ ಆಸ್ಪತ್ರೆ

ಜೀವರಕ್ಷಣೆಯಲ್ಲಿ 108
ಪ್ರಸ್ತುತ ಹನ್ನೆರಡು ರಾಜ್ಯಗಳಲ್ಲಿ ಆರೋಗ್ಯ ಕವಚ 108 ತುರ್ತು ಚಿಕಿತ್ಸಾ ಅಂಬುಲೆನ್ಸ್ ಸೇವೆ ಒದಗಿಸುತ್ತಿದೆ. ಒಟ್ಟ ನಾಲ್ಕು ಸಾವಿರ ವಾಹನಗಳು ಜನರ ಜೀವರಕ್ಷಣೆಗೆ ಓಡಾಡುತ್ತಿವೆ. ಸಹಾಯವಾಣಿ ಕೇಂದ್ರದಲ್ಲಿ 970 ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ 20 ಸಾವಿರ ಕರೆಗಳು ಸ್ವೀಕರಿಸಲಾಗುತ್ತಿದೆ. ಕರೆ ಬಂದ 15 ನಿಮಿಷದಲ್ಲಿ ಚಾಲಕ ಹಾಗೂ ಸಿಬ್ಬಂದಿ ಸ್ಥಳದಲ್ಲಿರುತ್ತಾರೆ. ವಾಹನದಲ್ಲೇ ಪ್ರಾಥಮಿಕ ಚಿಕಿತ್ಸೆ ಕೊಡಲಾಗುವುದು.
- ಶ್ರೀಧರ್,
ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಕರ್ನಾಟಕ ಮತ್ತು ತಮಿಳುನಾಡು ಜಿವಿಕೆ ಈಎಂಆರ್‌ಐ (108)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT