ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಳದ ಆಕರ್ಷಣೆ ಜಾಫ್ರಾಬಾದಿ

Last Updated 10 ಸೆಪ್ಟೆಂಬರ್ 2011, 10:20 IST
ಅಕ್ಷರ ಗಾತ್ರ

ಧಾರವಾಡ: ಶ್ವಾನದ ಕಿವಿಯ ಹಾಗೆ ಕೆನ್ನೆಗೆ ತಾಗಿಕೊಂಡಿರುವ ಅರ್ಧ ಚಂದ್ರಾಕಾರದ ಚಪ್ಪೆಟೆಯಾದ ಕೋಡು. ವಿಶಾಲ ದೇಹ. ಅಗಲವಾದ ಅಂದದ ಮುಖ. ನೀಟಾಗಿ ಬಾಚಿಕೊಂಡಂತೆ ತಲೆಗೂದಲು. ಇದು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಬೃಹತ್ ಕೃಷಿ ಮೇಳಕ್ಕೆ ಬಂದಿರುವ  ಸಿಂಹದ ನಾಡಾದ ಗುಜರಾತಿನ ಗಿರ್ ಪ್ರದೇಶದ ಬಲು ಅಪರೂಪದ ಎಮ್ಮೆ  `ಜಾಫ್ರಾಬಾದಿ~.

ಕೃಷಿ ಮೇಳಕ್ಕೆ ಸಾಗುವ ಮಾರ್ಗದಲ್ಲಿ ಕೃಷಿ ವಿಶ್ವವಿದ್ಯಾಲಯದ ಪ್ರವೇಶ ದ್ವಾರದಲ್ಲಿಯೇ ಆಯೋಜಿಸಿರುವ ಜಾನುವಾರು ಮೇಳದಲ್ಲಿ `ಜಾಫ್ರಾಬಾದಿ~ ಎಮ್ಮೆ  ರೈತರ  ಗಮನ ಸೆಳೆಯುತ್ತಿದೆ. ದೇವಲೋಕದಿಂದ ಇಳಿದು ಬಂದಿರುವಂತಹ `ಕಾಂಕ್ರೀಜ್~, ಕ್ಷೀರವನ್ನೇ ಹರಿಸುವ `ಮುರ‌್ರಾ~,   `ಗೀರ್~, `ದೇವಣಿ~, `ಥಾರಪಾರ್ಕರ್~ ತಳಿಗಳು  ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ.

ಹೊಸ ತಳಿಯ ಹಾಗೂ ಹೆಚ್ಚು ಹಾಲು ಕೊಡುವ  ಎಮ್ಮೆ ಹಾಗೂ ಆಕಳುಗಳನ್ನು ವೀಕ್ಷಿಸಲು ರೈತರು ತಂಡೋಪ ತಂಡವಾಗಿ ಬರುತ್ತಿದ್ದಾರೆ. ಅಷ್ಟೇ ಕುತೂಹಲದಿಂದ ಅವುಗಳ ಬಗೆಗೆ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದಾರೆ.

ಇಂಥದೊಂದು ಎಮ್ಮೆಯನ್ನು ಕೊಂಡುಕೊಂಡರೆ ಹೇಗೆ, ಅವುಗಳ ಬೆಲೆ ಎಷ್ಟು, ನಾವಿರುವ ಪರಿಸರದಲ್ಲಿ ಅವುಗಳನ್ನು ಸಾಕಬಹುದೇ? ಅವುಗಳ ನಿರ್ವಹಣೆ ನಮ್ಮಿಂದ ಸಾಧ್ಯವೆ? ಎಂದೆಲ್ಲ ಹಲವಾರು ಪ್ರಶ್ನೆಗಳನ್ನು ಹಾಕಿ  ಪಶುತಜ್ಞರಿಂದ ಮಾಹಿತಿ ಪಡೆದು ಖುಷಿಯಿಂದ ತೆರಳುತ್ತಿದ್ದಾರೆ. 

ಹೊಸ ತಳಿಯ ಜಾನುವಾರುಗಳ ಬಗೆಗೆ  ಕೃಷಿಕರಿಗೆ ಬಹಳ ಸಮಾಧಾನದಿಂದ ಮನವರಿಕೆ ಮಾಡುತ್ತಿದ್ದ ಕೃಷಿ ವಿಶ್ವವಿದ್ಯಾಲಯದ ಪಶು ವಿಜ್ಞಾನ ವಿಭಾಗದ ಮುಖ್ಯಸ್ಥ ಎಸ್.ವಿ. ಹೊಸಮನಿ ಅವರನ್ನು ಮಾತಿಗೆಳೆದಾಗ, `ಮೊದಲ ದಿವಾದ್ದರಿಂದ ಆಕಳು ಹಾಗೂ ಎಮ್ಮೆಯ ತಲಾ ಐದು ತಳಿಗಳನ್ನು ಪ್ರದರ್ಶನದಲ್ಲಿಡಲಾಗಿದೆ. ಇಲ್ಲಿರುವ ಜಾನುವಾರು ರಾಜ್ಯದ ಯಾವುದೇ ಪ್ರದೇಶಕ್ಕೂ ಒಗ್ಗಿಕೊಳ್ಳುತ್ತವೆ. ಗುಜರಾತ್ ಹಾಗೂ ಪಂಜಾಬ್ ಮೂಲದ ತಳಿಗಳು ಹೆಚ್ಚು ಹಾಲು ಕೊಡುತ್ತವೆ. ಅಂತಹ ತಳಿಗಳನ್ನೇ ಪ್ರದರ್ಶಿಸಲಾಗಿದೆ~ ಎಂದರು.

ಗುಜರಾತ್‌ನ ಪ್ರಸಿದ್ಧ `ಕಾಂಕ್ರೀಜ್~ ಆಕಳ ತಳಿ ಮೇಳದಲ್ಲಿ ಗಮನ ಸೆಳೆಯುತ್ತಿದೆ. ಅದರ ಕೊರಳ ಪಟ್ಟಿ, ಹೊಟ್ಟೆಗೆ ಹಾಕಿರುವ ರಿಬ್ಬನ್ ಹಾಗೂ ಕೊರಳ ಗಂಟೆಯಿಂದಾಗಿ ಅದರ ಅಂದ ಇನ್ನಷ್ಟು ಹೆಚ್ಚಾಗಿದೆ.  ಪಂಜಾಬ್‌ನ `ಮುರ‌್ರಾ~ ತಳಿಯ ಎಮ್ಮೆಗಳು ಕೂಡ ಇಲ್ಲಿಗೆ ಬಂದಿವೆ. ಶೇ 6.5 ಕೊಬ್ಬಿನ ಅಂಶವಿರುವ ದಿನಕ್ಕೆ 8ರಿಂದ 12 ಲೀಟರ್ ಹಾಲು ಕೊಡುವ ತಳಿ ಇದಾಗಿದೆ.  ಗುಜರಾತ್‌ನ ಇನ್ನೊಂದು ತಳಿ `ಸೂರ್ತಿ~ ಶೇ 7ರಷ್ಟು ಕೊಬ್ಬಿನ ಅಂಶವಿರುವ ಹಾಗೂ ದಿನಕ್ಕೆ 5ರಿಂದ 6 ಲೀಟರ್ ಹಾಲು ಕೊಡುವ ಉತ್ತಮ ತಳಿ ಇಲ್ಲಿ ಇದೆ.

ಕೇವಲ ಹೊರ ರಾಜ್ಯದ ರಾಸುಗಳು ಮಾತ್ರವಲ್ಲದೇ ರಾಜ್ಯದ ದೇಸಿ ತಳಿಯ ರಾಸುಗಳು ಪ್ರದರ್ಶನದಲ್ಲಿವೆ. ಬೀದರನ `ದೇವಣಿ~ ಹಾಗೂ ಕೊಬ್ಬಿನ ಅಂಶ ಅಧಿಕವಾಗಿರುವ ಧಾರವಾಡದ ಜವಾರಿ ತಳಿಗಳನ್ನು ಪ್ರದರ್ಶನದಲ್ಲಿ ಪರಿಚಯಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT