ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವಿಗಾಗಿ ಟನ್‌ಗೆ 2000 ದರದಲ್ಲಿ ಕಬ್ಬು ಖರೀದಿ

Last Updated 16 ಜುಲೈ 2012, 19:30 IST
ಅಕ್ಷರ ಗಾತ್ರ

ವಿಜಾಪುರ: ತೀವ್ರ ಬರದಿಂದ ಎದುರಾಗಿರುವ ಮೇವಿನ ಕೊರತೆ ನೀಗಿಸಲು ಟನ್‌ಗೆ 2000 ರೂಪಾಯಿ ದರದಲ್ಲಿ ಎಳೆ ಕಬ್ಬು (ಸೋಗೆ ಸಹಿತ) ಖರೀದಿಸಿ ಗೋಶಾಲೆಗಳಿಗೆ ಪೂರೈಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅಧ್ಯಕ್ಷತೆಯಲ್ಲಿ ಸೋಮವಾರ ಇಲ್ಲಿ ನಡೆದ ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಧರಿಸಲಾಯಿತು.

`ಜಾನುವಾರುಗಳಿಗೆ ಮೇವಿನ ಕೊರತೆ ಇದೆ. ಮಲೆನಾಡು ಪ್ರದೇಶದಲ್ಲಿ ಭತ್ತದ ಒಣಹುಲ್ಲು ದೊರೆಯುತ್ತಿದೆಯಾದರೂ ಅದನ್ನು ನಮ್ಮ ಜಾನುವಾರುಗಳು ತಿನ್ನುವುದಿಲ್ಲ. ಮಳೆಯ ಕೊರತೆಯಿಂದ ಕಬ್ಬಿನ ಬೆಳೆ ಒಣಗುತ್ತಿದೆ. ಅದನ್ನು ಖರೀದಿಸಿದರೆ ಆ ರೈತರಿಗೂ ಅನುಕೂಲವಾಗುತ್ತದೆ. ಮೇವಿನ ಕೊರತೆಯೂ ನೀಗುತ್ತದೆ~ ಎಂದು ಬೆಳ್ಳುಬ್ಬಿ ಹೇಳಿದರು.

`ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ಟನ್‌ಗೆ 2000 ರೂಪಾಯಿ ದರದಲ್ಲಿ ಹಸಿ ಮೇವು ಖರೀದಿಸಬಹುದಾಗಿದೆ. ಅದನ್ನು ಕಬ್ಬು ಖರೀದಿಸಲು ಬಳಸಬಹುದು. ಜಿಲ್ಲೆಯಲ್ಲಿನ 14 ಗೋಶಾಲೆಗಳಿಲ್ಲಿ 11,000 ಜಾನುವಾರುಗಳಿವೆ. ಸಾಗಾಣಿಕೆ ವೆಚ್ಚ ಭರಿಸಲು ಜಿಲ್ಲಾ ಆಡಳಿತಕ್ಕೆ ಅವಕಾಶವಿದೆಯಾದರೂ ಕಟಾವು ವೆಚ್ಚ ಭರಿಸಲಾಗದು~ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಹೇಳಿದರು.

`ಬೆಳೆ ಒಣಗುತ್ತಿರುವುದರಿಂದ ಬಂದಷ್ಟು ಬರಲಿ ಎಂದು ರೈತರೇ ಸ್ವಂತ ಖರ್ಚಿನಿಂದ ಕಟಾವು ಮಾಡಿ ಕೊಡುತ್ತಾರೆ. ಕೊಲ್ಹಾರ ಭಾಗದ ರೈತರನ್ನು ನಾನು ಒಪ್ಪಿಸುತ್ತೇನೆ. ಇದಕ್ಕೆ ಯಾರ‌್ಯಾರು ಮುಂದೆ ಬರುತ್ತಾರೆ ಅವರ ಪಟ್ಟಿ ತಯಾರಿಸಿ ಕಬ್ಬಿನ ಮೇವು ಖರೀದಿಸಿ~ ಎಂದು ಸೂಚಿಸಿದರು.

`ಕಬ್ಬಿಗೆ ಅಷ್ಟೊಂದು ದರವಿಲ್ಲ. 2000 ರೂಪಾಯಿ ಕೊಟ್ಟು ಕಬ್ಬಿನ ಮೇವು ಖರೀದಿಸಿದರೆ ಮುಂದೆ ಕಬ್ಬಿನ ಕೊರತೆ ಉಂಟಾಗಿ ಸಕ್ಕರೆ ಕಾರ್ಖಾನೆಗಳಿಗೆ ತೊಂದರೆಯಾಗಬಹುದು~ ಎಂದು ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT