ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವು ಸಿಗುತ್ತಿಲ್ಲ... ಎತ್ತು ಕೊಳ್ಳೋರಿಲ್ಲ...

ಬರಗಾಲದಲ್ಲಿ ಬಂದಿದೆ ಚುನಾವಣೆ
Last Updated 3 ಏಪ್ರಿಲ್ 2013, 9:28 IST
ಅಕ್ಷರ ಗಾತ್ರ

ಕೋಲಾರ: `ಮೊನ್ನೆ ಚಿಂತಾಮಣಿ ಸಂತೆಗೆ ಹೋಗಿದ್ದೆ. ಅಲ್ಲಿ ಎತ್ತು ಕೊಳ್ಳೋರೆ ಇರಲಿಲ್ಲ. ಕೊಂಡರೂ, ರೂ.30 ಸಾವಿರ ಬೆಲೆಯ ಎತ್ತನ್ನು 10 ಸಾವಿರಕ್ಕೆ ಕೇಳೋರು... ಏನು ಕಾಲ ಬಂತಪ್ಪಾ... ಇದೇ ಟೈಮಲ್ಲಿ ಎಲೆಕ್ಸನ್ನು ಬಂದೈತೆ. ಏನಂತ ಹೇಳೋದು?'

-ತಾಲ್ಲೂಕಿನ ಮಗಸಂದ್ರದ ರೈತ ಚಂದ್ರಪ್ಪ ಉರಿಬಿಸಿಲಿನ ಝಳದಲ್ಲಿ ಉಸೂರೆನ್ನುತ್ತ ಹೇಳಿದರು. ನೀರಿಲ್ಲದೆ, ಮೇವು ಸಿಕ್ಕದೆ ಅವರು 8 ತಿಂಗಳ ಹಿಂದೆ ತಮ್ಮ ಒಂದು ಜೊತೆ ಹಸು ಮಾರಿದ್ದಾರೆ. ಉಳಿದವುಗಳನ್ನು ಅವರು ಕಷ್ಟಪಟ್ಟು ನೋಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಮೇವಿನ ಸಮಸ್ಯೆಯ ಕುರಿತು ಇದು ಒಂದು ಸಾಂಕೇತಿಕ ಚಿತ್ರವಷ್ಟೆ.

ನೀರಿನ ಕೊರತೆಯಿಂದ ಹಸಿ ಮೇವು ಬೆಳೆಯುವವರು ಕಡಿಮೆ. ಬೆಳೆದವರೂ ಮಾರುವ ಮನಸು ಮಾಡುತ್ತಿಲ್ಲ. ಇದೇ ವೇಳೆ, ಒಣಮೇವಿಗೂ (ರಾಗಿ ಹುಲ್ಲು, ಬತ್ತದ ಹುಲ್ಲು) ಬರ ಬಂದಿದೆ. ಜಮೀನು ಉಳ್ಳವರು ರಾಗಿ ಬೆಳೆದ ಬಳಿಕ ತಮ್ಮ ಮನೆಯ ಹಸು, ಎಮ್ಮೆಗಳಿಗೆ ಒಣಮೇವನ್ನು ಇಟ್ಟುಕೊಳ್ಳುತ್ತಾರೆ. ಬಹುತೇಕರು ಮಾರುವುದಿಲ್ಲ.

`ಕಷ್ಟಕಾಲ ಬಂತು. ಹಸು ಮಾರೋಣ' ಎಂದು ರೈತರು ಸಂತೆಗೆ ಹೋದರೆ ಅಲ್ಲಿ ಕೊಳ್ಳುವವರೇ ಇಲ್ಲ ಎಂಬುದು ಮತ್ತೊಂದು ವಿಪರ್ಯಾಸ. ಕೊಳ್ಳುವವರಿದ್ದರೂ ಅತಿ ಕಡಿಮೆ ಬೆಲೆಗೆ ಕೇಳುವ ರೂಢಿಯೂ ಬೆಳೆದಿದೆ. ಕಡಿಮೆ ಬೆಲೆಗೆ ಮಾರಲಾಗದೆ, ಜೊತೆಗಿರಿಸಿಕೊಂಡು ಪೋಷಿಸುವ ಸಾಮರ್ಥ್ಯವೂ ಇರದ ರೈತರು ಬಸವಳಿಯುತ್ತಿದ್ದಾರೆ.

ಬೇಸಿಗೆಯು ಬಾಗಿಲಲ್ಲಿರುವ ಹೊತ್ತಲ್ಲಿ ವಿಧಾನಸಭೆ ಚುನಾವಣೆ ಬಂದಿದೆ. ಅದಕ್ಕೂ ಮುನ್ನ ಜಿಲ್ಲೆಯಲ್ಲಿ ಬರಗಾಲ ನೆಲೆಯೂರಿದೆ. ಹೀಗಾಗಿ ಅಭ್ಯರ್ಥಿಗಳು, ಆಕಾಂಕ್ಷಿಗಳು ಬಿಸಿಲ ಝಳ ಲೆಕ್ಕಿಸದೆ ಬೆವರಿಳಿಸಿ ಪ್ರಚಾರ ನಡೆಸುತ್ತಿರುವ ಹೊತ್ತಲ್ಲೇ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಇಲ್ಲದ ಮೇವಿಗಾಗಿ ಹುಡುಕಾಡುತ್ತಿದ್ದಾರೆ. ಮೂಕ ಪಶುಗಳು ಮಾತ್ರ ಮಾತನಾಡಲಾಗದೆ ಸುಮ್ಮನಿವೆ.

ಒಂದು ಟ್ರ್ಯಾಕ್ಟರ ಲೋಡ್ ಒಣಮೇವಿನ ಬೆಲೆ ರೂ. 8 ಸಾವಿರದಿಂದ ರೂ. 15 ಸಾವಿರದವರೆಗೆ ಇದೆ. ದುಡ್ಡುಕೊಟ್ಟರೂ ಒಣಮೇವು ಸಿಗುತ್ತಿಲ್ಲ. ನಮ್ಮ ಗ್ರಾಮದವರೊಬ್ಬರು 15 ಸಾವಿರ ಕೊಟ್ಟು ತಂದಿದ್ದಾರೆ. ಹಿಂಡಿ, ಬೂಸ ಗಗನಕ್ಕೇರಿದೆ. ಅಷ್ಟು ಹಣ ಕೊಡಲಾಗದವರು ಹಸುಗಳನ್ನು ಮಾರುತ್ತಿದ್ದಾರೆ ಎನ್ನುತ್ತಾರೆ ಅದೇ ಗ್ರಾಮದ ಮತ್ತೊಬ್ಬ ರೈತ ಮುನಿಯಪ್ಪ.

ಹಾಲು ಕಡಿಮೆ: ಹಸು ಮಾರುವವರು ಒಂದೆಡೆಯಾದರೆ, ಮೇವು, ನೀರಿನ ಸಮಸ್ಯೆ ನಡುವೆಯೂ ಹಸುಗಳನ್ನು ಸಾಕುತ್ತಿರುವವರಿಗೆ ಹಾಲು ಕಡಿಮೆ ಸಿಗುತ್ತಿದೆ. ಅದನ್ನೇ ಜೀವನೋಪಾಯ ಮಾಡಿಕೊಂಡವರ ಸ್ಥಿತಿಯೂ ಕಷ್ಟಕರವಾಗಿದೆ.

`ಮೊದಲು ನಮ್ಮ ಸಂಘಕ್ಕೆ 400 ಲೀಟರ್ ಹಾಲು ಬರುತ್ತಿತ್ತು. ಈಗ 200 ಲೀಟರ್ ಕಡಿಮೆಯಾಗಿದೆ. ಹಲವರು ಹಸುಗಳನ್ನು ಮಾರಿದ್ದು ಒಂದು ಕಾರಣ. ಇರೋ ಹಸುಗಳಿಗೆ ಪೌಷ್ಠಿಕ ಆಹಾರ ದೊರಕದಿರುವುದು ಮತ್ತೊಂದು ಕಾರಣ' ಎನ್ನುತ್ತಾರೆ ತಾಲ್ಲೂಕಿನ ಮಾರ್ಕಂಡಪುರದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ವರಲಕ್ಷ್ಮಿ.

ಕೆಎಂಎಫ್ ನೀಡುವ 50 ಕೆಜಿ ತೂಕದ ಪಶು ಆಹಾರ ರೂ 650ರಿಂದ 850ಕ್ಕೆ ಏರಿದೆ. ಹೀಗಾಗಿ ರೈತರೂ ಹಸುಗಳಿಗೆ ಪಶುಆಹಾರವನ್ನು ಕಡಿಮೆ ಕೊಡುತ್ತಿದ್ದಾರೆ. ಸಹಜವಾಗಿಯೇ ಹಾಲು ಉತ್ಪಾದನೆ ಕಡಿಮೆಯಾಗುತ್ತಿದೆ ಎಂಬುದು ಅವರ ವಿಶ್ಲೇಷಣೆ.

ಇಂಥ ಸಂಕಷ್ಟದ ಸನ್ನಿವೇಶದಲ್ಲಿ ಚುನಾವಣೆ ಬಂದಿರುವುದರಿಂದ ಏನನ್ನಿಸುತ್ತದೆ? ಎಂದು ಕೇಳಿದರೆ, ಹಳ್ಳಿಗಳ ಈ ಕಷ್ಟಜೀವಿಗಳು ಮೌನವಾಗುತ್ತಾರೆ.
ಚುನಾವಣೆ ಬಂದಿರುವುದರಿಂದ ನಾವು ಯಾರನ್ನೂ ಏನೂ ಕೇಳಲಾಗದ ಸನ್ನಿವೇಶ ನಿರ್ಮಾಣವಾಗಿದೆ. ಇಲ್ಲದೇ ಹೋಗಿದ್ದರೆ ಕನಿಷ್ಠ ಗೋಶಾಲೆಗಳನ್ನಾದರೂ ತೆರೆದು ಮೇವು ಕೊಡಿ ಎಂದು ಕೇಳಬಹುದಾಗಿತ್ತು ಎಂಬುದು ಅವರ ಅಹವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT