ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈ ನವಿರೇಳಿಸಿದ ಚಕ್ಕಡಿ ಓಟದ ಸ್ಪರ್ಧೆ

Last Updated 15 ಜನವರಿ 2013, 5:54 IST
ಅಕ್ಷರ ಗಾತ್ರ

ಚಡಚಣ: ಗ್ರಾಮೀಣ ಸ್ಪರ್ಧೆಗಳು ಮಾಯ ವಾಗುತ್ತಿರುವ ಸಂದರ್ಭದಲ್ಲಿ ಚಡಚಣ ಸಮೀಪದ ಧೂಮಕನಾಳ ಗ್ರಾಮದ ಮಸೂಬಾ ಜಾತ್ರೆ ನಿಮಿತ್ತ ಸೋಮವಾರ ಆಯೋಜಿಸಿದ್ದ ಜೋಡೆತ್ತಿನ ಚಕ್ಕಡಿ ಓಟದ ಸ್ಪರ್ಧೆ ರೈತರಲ್ಲಿ ಸಂಚಲನ ಮೂಡಿಸಿತಲ್ಲದೇ ನೋಡುಗರನ್ನು ನಿಬ್ಬೆರಗುಗೊಳಿಸಿತು.

ಸ್ಪರ್ಧೆ ಆರಂಭಗೊಳ್ಳುತ್ತಿದ್ದಂತೆ ತಾ  ಮುಂದು, ನಾ ಮುಂದು ಎಂಬಂತೆ ಚಕ್ಕಡಿಗಳು ಓಡಲಾರಂಭಿಸಿದಾಗ, ಕೆಲವರು ನಿಂತಲ್ಲೆ ಚಪ್ಪಾಳೆ ತಟ್ಟಿ ಖುಷಿ ಪಟ್ಟರೆ, ಕೆಲವು ಸಾಹಸಪ್ರಿಯರು  ನಾಲ್ಕಾರು ಕಿಲೋಮೀಟರ್‌ವರೆಗೆ ಬೆನ್ನಟ್ಟಿ, ಹುರಿದುಂಬಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ವಿಠ್ಠಲ ಕಟಕಧೊಂಡ, ಗ್ರಾಮೀಣ ಕ್ರೀಡೆಗಳು ಮಾಯವಾಗುತ್ತಿರುವ ಈ ಸಂದರ್ಭದಲ್ಲಿ ಇಂತಹ ಸ್ಪರ್ಧೆಗಳು ಭಾರತೀಯ ಸಂಸ್ಕೃತಿ, ಆಚರಣೆ ಹಾಗೂ ದೇಶಿಯ ಕ್ರೀಡೆಗಳನ್ನು ನೆನಪಿಸುತ್ತವೆ ಎಂದ ಅವರು, ಭಾಗದ ಸಮಗ್ರ ಅಭಿವೃದ್ಧಿಗೆ ನಿರಾವರಿ ಯೋಜನೆಗಳ ಅನುಷ್ಠಾನ ಅವಶ್ಯಕ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಪಂ.ಸದಸ್ಯ ಶ್ರೀಶೈಲಗೌಡ ಬಿರಾದಾರ, ದೇಶಿಯ ಕ್ರೀಡೆ, ಗ್ರಾಮೀಣ ಜನರ ಹವ್ಯಾಸಗಳನ್ನು ಪ್ರೋತ್ಸಾಹಿ ಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಅನುದಾನ ಒದಗಿಸಬೇಕು ಎಂದರು. ಜಿ.ಪಂ.ಸದಸ್ಯ ಆರ್.ಜಿ.ಪಾಟೀಲ ಮಾತನಾಡಿ, ಮಸೂಬಾ ದೇವಾಲಯದ ಜೀರ್ಣೋದ್ಧಾರಕ್ಕೆ ರೂ. 50 ಸಾವಿರ  ಅನುದಾನ ಒದಗಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಳಿ ಸಮಾಜದ ಅಧ್ಯಕ್ಷ ಭೀಮಶ್ಯಾ ಮೇತ್ರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಧನಸಿಂಗ ಪವಾರ, ಗ್ರಾ.ಪಂ.ಮಾಜಿ ಅಧ್ಯಕ್ಷ ತುಕಾರಾಮ ಸಿಂಧೆ, ಸದಸ್ಯರಾದ ರುದ್ರಗೌಡ ಪಾಟೀಲ, ಕುಶಾಲಪ್ಪಗೌಡ ಪಟ್ಟಣಶೆಟ್ಟಿ, ಗುತ್ತಿಗೆದಾರ ಮುತ್ತಣಗೌಡ ಪಾಟೀಲ, ಸಾಹೇಬಗೌಡ ಹತ್ತಿ, ಪುಂಡಲೀಕ ನಂದಗೊಂಡ, ರಾಮಚಂದ್ರ ಕೋಳಿ, ಬಸಣ್ಣ ಸಗಾಯಿ, ಶಿವಶಂಕರ ಸಗಾಯಿ, ರಮೇಶಗೌಡ ಬಿರಾದಾರ ಉಪಸ್ಥಿತರಿದ್ದರು.

ಬಹುಮಾನ: ಗೋಡಿಹಾಳ ಗ್ರಾಮದ ರಮೇಶ ವಾಘಮೋರೆ ಚಕ್ಕಡಿ ಪ್ರಥಮ, ಅದೇ ಗ್ರಾಮದ ರೇವಪ್ಪ ತೋಳನೂರ ಅವರ ಚಕ್ಕಡಿ ದ್ವಿತೀಯ ಹಾಗೂ ಝಳಕಿ ಗ್ರಾಮದ ರೈತ ಬಸಣ್ಣ ಸಗಾಯಿ ಇವರ ಚಕ್ಕಡಿ ತೃತೀಯ ಸ್ಥಾನ ಪಡೆದವು.

ವಿಜೇತ ಸ್ಪರ್ಧಿಗಳಿಗೆ ಶಾಸಕ ವಿಠ್ಠಲ ಕಟಕಧೊಂಡ, ಜಿ.ಪಂ.ಸದಸ್ಯ ಶ್ರೀಶೈಲಗೌಡ ಬಿರಾದಾರ, ಆರ್.ಜಿ.ಪಾಟೀಲ ಪ್ರಶಸ್ತಿ ಹಾಗೂ ನಗದು ಬಹುಮಾನ ವಿತರಿಸಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದನಗೌಡ ಬಿರಾದಾರ ಕಾರ್ಯಕ್ರಮ ನಡೆಸಿಕೊಟ್ಟರು. ಜಾತ್ರಾ ಸಮೀತಿ ಅಧ್ಯಕ್ಷ ಭೀಮರಾಯ ಪಾಟೀಲ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT