ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರೇಯಿಯ ಗೆಲುವಿನ ಯಾತ್ರೆ!

Last Updated 22 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ


ಸಿಹಿ ಕುಂದಾಕ್ಕೆ ಪ್ರಸಿದ್ಧಿಯಾಗಿರುವಷ್ಟೇ ಬೆಳಗಾವಿ ತನ್ನ ಕ್ರೀಡಾ ಚಟುವಟಿಕೆಗಳಿಂದಲೂ ಹೆಸರುವಾಸಿ. ಈ ನೆಲದ ಹುಡುಗಿ ಮೈತ್ರೇಯಿ ಬೈಲೂರ್ ಈಗ ರಾಜ್ಯದ ಟೇಬಲ್ ಟೆನಿಸ್ ಕ್ಷೇತ್ರದ ನವತಾರೆ. ಪ್ರಸಕ್ತ ವರ್ಷದ ಏಳು ರಾಜ್ಯ ರ್ಯಾಂಕಿಂಗ್ ಟೂರ್ನಿಗಳಲ್ಲಿ ಮಹಿಳಾ ವಿಭಾಗದಲ್ಲಿ ಆರು ಪ್ರಶಸ್ತಿ ಗೆದ್ದಿರುವ ಮೈತ್ರೇಯಿ ನಂಬರ್ ಒನ್  ಆಟಗಾರ್ತಿ. ರಾಜ್ಯ ಟಿಟಿ ತಂಡದ ಆಟಗಾರರಾಗಿದ್ದ ಅಪ್ಪ ಸಂಗಮ್ ಬೈಲೂರ್ ಮೈತ್ರೇಯಿಗೆ ಗುರು.

ಎಂಟನೇ ವಯಸ್ಸಿನಲ್ಲಿಯೇ ಟಿಟಿ ರ್ಯಾಕೆಟ್ ಹಿಡಿದ ಮೈತ್ರೇಯಿ ಹಿಂದಿರುಗಿ ನೋಡಿಯೇ ಇಲ್ಲ. ಈ ಪುಟ್ಟ ಚೆಂಡು ಮತ್ತು ಪುಟ್ಟ ಬ್ಯಾಟಿನ ಆಟ ಕಲಿಯಲು ಇಡೀ ಉತ್ತರ ಕರ್ನಾಟಕದಲ್ಲಿ ಎಲ್ಲಿಯೂ ತಕ್ಕ ಸೌಲಭ್ಯಗಳಿಲ್ಲ. ಒಳಾಂಗಣ ಕ್ರೀಡಾಂಗಣದ ಕೊರತೆಯಂತೂ ಎಲ್ಲ ಊರುಗಳಲ್ಲಿಯೂ ಇದೆ. ಬೆಳಗಾವಿಯೂ ಇದಕ್ಕೆ ಹೊರತಲ್ಲ. ಆದರೆ, ಸಂಗಮ್ ಬೈಲೂರ್ ಮನೆಯಲ್ಲಿಯೇ ಟೆಬಲ್ ಹಾಕಿದರು, ಬೌಲಿಂಗ್ ಪ್ರಾಕ್ಟಿಸ್ ಯಂತ್ರ ತಂದರು. ತಮ್ಮ ಅನುಭವವನ್ನು ಮಗಳಿಗೆ ಧಾರೆಯೆರೆದರು. ಅದರ ಫಲವಾಗಿ ಕರ್ನಾಟಕ ಟಿಟಿ ಕ್ಷೇತ್ರಕ್ಕೆ ಪ್ರತಿಭಾನ್ವಿತ ಆಟಗಾರ್ತಿಯೊಬ್ಬರು ಸಿಕ್ಕಿದ್ದಾರೆ.

ಸದ್ಯ ಬೆಳಗಾವಿಯ ಸೇಂಟ್ ಜೋಸೆಫ್ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿರುವ ಮೈತ್ರೇಯಿ, ಆಟ ಆರಂಭಿಸಿದ ದಿನದಿಂದಲೂ ಎಲ್ಲ ವಿಭಾಗಗಳಲ್ಲಿಯೂ ಅಗ್ರ ಶ್ರೇಯಾಂಕದ ಆಟಗಾರ್ತಿಯಾಗಿದ್ದಾರೆ. 10ನೇ ವಯಸ್ಸಿನಲ್ಲಿಯೇ ಮೈಸೂರಿನಲ್ಲಿ ಮಿನಿ ಕೆಡೆಟ್ ಪ್ರಶಸ್ತಿ ಗೆದ್ದ ಮೈತ್ರೆಯಿ ಮತ್ತೆ ಹಿಂದಿರುಗಿ ನೋಡಿಲ್ಲ. 2006-07ರಲ್ಲಿ ಕೆಡೆಟ್ ಬಾಲಕಿಯರ ವಿಭಾಗದ 14 ಪ್ರಶಸ್ತಿಗಳನ್ನು ಗೆದ್ದ ಮೈತ್ರೇಯಿ, ಅದೇ ಸಾಲಿನಲ್ಲಿ  ಚೆನ್ನೈನಲ್ಲಿ ನಡೆದ 69ನೇ ಸಬ್ ಜೂನಿಯರ್ ರಾಷ್ಟ್ರೀಯ ಟೂರ್ನಿಯಲ್ಲಿ ಕರ್ನಾಟಕಕ್ಕೆ ಕಂಚಿನ ಪದಕ ತಂದುಕೊಟ್ಟರು.

ಅದೇ ವರ್ಷ ರಾಷ್ಟ್ರ ರ್ಯಾಂಕಿಂಗ್‌ನ ಮೂರನೇ ಸ್ಥಾನವನ್ನೂ ಅವರು ಅಲಂಕರಿಸಿದ್ದರು. 2008-09ರ ಸಾಲಿನಲ್ಲಿ ಸಬ್ ಜೂನಿಯರ್ ವಿಭಾಗದ 19 ಪ್ರಶಸ್ತಿಗಳು ಮೈತ್ರೇಯಿ ಖಾತೆಗೆ ಸೇರಿದವು. 2009ರಲ್ಲಿ ದಸರಾ ಕ್ರೀಡಾಕೂಟದ ಚಿನ್ನದ ಪದಕವೂ ಅವರ ಕೊರಳನ್ನು ಅಲಂಕರಿಸಿತು.ಥಾಣೆ, ರಾಯಪುರ್, ಜೋಧಪುರ್, ಸಿಲಿಗುರಿ ಮತ್ತು ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಮತ್ತು ವಲಯ ಮಟ್ಟದ ರ್ಯಾಂಕಿಂಗ್ ಟೂರ್ನಿಗಳಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಕಳೆದ ವರ್ಷ ಅಖಿಲ ಭಾರತ ಟಿಟಿ ಫೆಡರೇಷನ್‌ನಿಂದ ಹತ್ತನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ಸದ್ಯ ಮೂರು ವಿಭಾಗಗಳಲ್ಲಿ ನಂಬರ್ ಒನ್ ಆಟಗಾರ್ತಿಯಾಗಿದ್ದಾರೆ. ಮಹಿಳೆಯರು, ಜೂನಿಯರ್ ಮತ್ತು ಯೂತ್ ಬಾಲಕಿಯರ ವಿಭಾಗಗಳಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿಯಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈ ಮಟ್ಟದ ಸಾಧನೆ ಮಾಡಿದ ಮಹಿಳಾ ಟಿಟಿ ಆಟಗಾರ್ತಿ ಮೈತ್ರೇಯಿ ಒಬ್ಬರೇ.

2010 ಅವರ ಅದೃಷ್ಟದ ವರ್ಷ. ಏಳು ರಾಜ್ಯ ರ್ಯಾಂಕಿಂಗ್ ಟೂರ್ನಿಗಳ ಪೈಕಿ ಆರು ಬಾರಿ ಮಹಿಳೆಯರ ವಿಭಾಗದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಭಾನುವಾರ ಮುಕ್ತಾಯವಾದ ಟೂರ್ನಿಯಲ್ಲಿಯೂ ಈ ಬೆಳಗಾವಿ ಹುಡುಗಿಯದ್ದೇ ಮಿಂಚು. ಬ್ಯಾಕ್‌ಹ್ಯಾಂಡ್ ಮತ್ತು ಫೋರ್‌ಹ್ಯಾಂಡ್ ರ್ಯಾಲಿಗಳಲ್ಲಿ ನಿಖರತೆ, ಫುಟ್‌ವರ್ಕ್‌ಗೆ ಹೆಚ್ಚಿನ ಪ್ರಾಧಾನ್ಯತೆ ಈ ಆಟಗಾರ್ತಿಯ ವಿಶೇಷ.


ಬೆಂಗಳೂರು, ಮೈಸೂರಿನಲ್ಲಿ ಹೆಚ್ಚು ಪ್ರಬಲವಾಗಿರುವ ಟಿಟಿ ಆಟಗಾರರಿಗೆ ಗಡಿ ಜಿಲ್ಲೆಯ ಈ ಹುಡುಗಿ ಸವಾಲಾಗಿದ್ದಾರೆ. ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪದಕ ಗೆಲ್ಲುವ ಹುಮ್ಮಸ್ಸು ಮೈತ್ರೇಯಿಯದ್ದು. ಅವರ ಕೌಶಲಕ್ಕೆ ಮತ್ತಷ್ಟು ಶಕ್ತಿ ತುಂಬಲು ತಂದೆ ಸಂಗಮ್ ಸತತ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಟೂರ್ನಿಗಳು ಎಲ್ಲಿಯೇ ನಡೆಯಲಿ ಅಪ್ಪ-ಮಗಳ ಹಾಜರಾತಿ ಎಲ್ಲರ ಗಮನ ಸೆಳೆಯುತ್ತದೆ. ಸಂಗಮ್ ಈಗ ಬೆಳಗಾವಿ ಟೇಬಲ್ ಟೆನಿಸ್ ಅಕಾಡೆಮಿ ಮೂಲಕ ಹಲವಾರು ಮಕ್ಕಳಿಗೆ ಟಿಟಿ ತರಬೇತಿ ನೀಡುತ್ತಿದ್ದಾರೆ. ಜೊತೆಗೆ ತಂದೆ-ಮಗಳ ಗೆಲುವಿನ ಯಾತ್ರೆಯೂ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT