ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದಾನವಿಲ್ಲದ ಶಾಲೆಗಳು

Last Updated 28 ಜುಲೈ 2013, 10:19 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳು ದೈಹಿಕವಾಗಿ ಹಾಗೂ ಬೌದ್ಧಿಕವಾಗಿ ಸದೃಢರಾಗಬೇಕಾದರೆ ಆಟದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಹಾಗೂ ಮೈದಾನವಿದ್ದಲ್ಲಿ ಮಾತ್ರ ವಿದ್ಯಾರ್ಥಿಗಳಿಗೆ ಕ್ರೀಡಾಸಕ್ತಿ ಮೂಡುತ್ತದೆ. ಆದರೆ ಕುಂದಗೋಳ ತಾಲ್ಲೂಕಿನಲ್ಲಿ ಬಹುತೇಕವಾಗಿ ಮೈದಾನದ ಕೊರತೆ ಎದ್ದು ಕಾಣುತ್ತಿದ್ದು, ಕ್ರೀಡಾಪಟುಗಳಿಗೆ ನಿರಾಸಕ್ತಿ ಮೂಡಿಸುತ್ತಿದೆ.

ತಾಲ್ಲೂಕಿನಲ್ಲಿ 102 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು 5 ಅನುದಾನ ಶಾಲೆಗಳು, 14 ಅನುದಾನ ರಹಿತ ಶಾಲೆಗಳಿವೆ.19 ಸರ್ಕಾರಿ ಪ್ರೌಢಶಾಲೆಗಳಿದ್ದು 8 ಅನುದಾನ ಶಾಲೆಗಳು, 3 ಅನುದಾನ ರಹಿತ ಶಾಲೆಗಳಿವೆ. ಆದರೆ ಯಾವ ಶಾಲೆಯಲ್ಲೂ ಹೇಳಿಕೊಳ್ಳುವಂಥ ಮೈದಾನವಿಲ್ಲ. ತಾಲ್ಲೂಕಿನ ಬೆರಳೆಣಿಕೆಯಷ್ಟು ಶಾಲೆಗಳಲ್ಲಿ ಸಣ್ಣ ಪ್ರಮಾಣದ ಅಂದರೆ 200 ಮೀ ಟ್ರ್ಯಾಕ್ ಇರುವ ಮೈದಾನ ಕಾಣಬಹುದು. ಬಹುತೇಕ ಶಾಲೆಗಳಲ್ಲಿ ಪ್ರಾರ್ಥನೆ ಮಾಡಲೂ ಮೈದಾನವಿಲ್ಲ.

102 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೇವಲ 35 ದೈಹಿಕ ಶಿಕ್ಷಕರಿದ್ದು, 19 ಪ್ರೌಢಶಾಲೆಗಳಲ್ಲಿ 18 ದೈಹಿಕ ಶಿಕ್ಷಕರಿದ್ದಾರೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಲ್ಲಿ ಕ್ರೀಡಾಸಕ್ತಿ ಮೂಡಿಸಬೇಕಾದರೆ ದೈಹಿಕ ಶಿಕ್ಷರ ಅವಶ್ಯಕತೆ ಇದೆ. ಒಂದೆಡೆ ಮೈದಾನದ ಕೊರತೆಯಾದರೆ, ಇನ್ನೊಂದೆಡೆ ದೈಹಿಕ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ.

ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ದೈಹಿಕ ಶಿಕ್ಷಕರನ್ನು ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ. ಕೆಲ ಶಾಲೆಗಳಲ್ಲಿ ಮೈದಾನಗಳಿವೆ. ಇನ್ನೂ ಕೆಲ ಶಾಲೆಗಳ ಮೈದಾನದ ಕೊರತೆ ಇದೆ ಎಂದು ಸರ್ಕಾರಕ್ಕೆ ತಿಳಿಸಲಾಗಿದೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್.ಕೆಳದಿಮಠ ಪ್ರಜಾವಾಣಿಗೆ ತಿಳಿಸಿದರು.

ಈಗ ತಾಲ್ಲೂಕಿನಲ್ಲಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಆರಂಭವಾಗಿದ್ದು, ಓಟದ ಸ್ಪರ್ಧೆಯನ್ನು ವಾಹನಗಳು ಸಂಚರಿಸುವ ಸಾಮಾನ್ಯ ರಸ್ತೆಯಲ್ಲೇ ನಡೆಸುತ್ತಿದ್ದಾರೆ. ಉಳಿದೆಲ್ಲ ಕ್ರೀಡೆಗಳನ್ನು ಚಿಕ್ಕ-ಪುಟ್ಟ ಮೈದಾನಗಳಲ್ಲಿ ನಡೆಸಲಾಗುತ್ತಿದೆ. ಉದ್ದ ಜಿಗಿತ, ಎತ್ತರ ಜಿಗಿತ, ಖೋ ಖೋ ಕಬಡ್ಡಿ, ಭರ್ಚಿ ಎಸೆತ, ಚಕ್ರ-ಗುಂಡು ಎಸೆತಗಳ ಹೀಗೆ ವಿವಿಧ ಕ್ರೀಡೆಗಳನ್ನು ಸತತವಾಗಿ ಅಭ್ಯಾಸ ಮಾಡಲು ಸೂಕ್ತ ಮೈದಾನ ಅವಶ್ಯವಾಗಿದೆ. ಈಗಲಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿ ಕ್ರೀಡೆಗೆ ಉತ್ತೇಜನ ನೀಡುವಲ್ಲಿ ಶ್ರಮಿಸಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT