ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಧ್ವನಿಯ ವಿರಾಟ್ ರೂಪ

Last Updated 12 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸುತ್ತಲೂ ಕಗ್ಗತ್ತಲು. ಒಂದು ಮೂಲೆಯಲ್ಲಿ ಪ್ರಕಾಶಮಾನ ಬೆಳಕು ಮೂಡುತ್ತದೆ. ಅಲ್ಲಿ ಒಬ್ಬ ಚಂಚಲಚಿತ್ತ ವ್ಯಕ್ತಿ ಕುಳಿತಿದ್ದಾನೆ. ನೃತ್ಯ ರೂಪಕದ ಮೂಲಕ ಪ್ರಸ್ತುತ ಒತ್ತಡದ ಜೀವನದಲ್ಲಿ ಮನುಷ್ಯನ ತೊಳಲಾಟಗಳನ್ನು ಅಭಿವ್ಯಕ್ತಿಸುತ್ತಿದ್ದಾನೆ.

ನಂತರ ಏಕಾಏಕಿ ನಾಲ್ವರು ನೃತ್ಯಪಟುಗಳ ಆಗಮನ; ಅವರದ್ದೂ ಅದೇ ಚಲನೆ, ನೃತ್ಯ. ಹೀಗೆ ಸತತ ಒಂದು ಗಂಟೆ ನೃತ್ಯದ ಮೂಲಕ ಪ್ರೇಕ್ಷಕರನ್ನು ಹಿಡಿದು ಕೂರಿಸಿದರು ಕಲಾವಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಅಟ್ಟಕ್ಕಲರಿ ಸೆಂಟರ್ ಫಾರ್ ಮೂವ್‌ಮೆಂಟ್ ಆರ್ಟ್ಸ್ ಸಂಸ್ಥೆ ಆಯೋಜಿಸಿದ್ದ `ಮೈಧ್ವನಿ~ (ದೇಹದ ಪ್ರತಿಧ್ವನಿಗಳು) ಅಟ್ಟಕ್ಕಲರಿ ನೃತ್ಯ ಪ್ರದರ್ಶನದಲ್ಲಿ ಕಂಡು ಬಂದ ಮನಮೋಹಕ ದೃಶ್ಯಗಳಿವು.

ಮೈಧ್ವನಿ ಶೀರ್ಷಿಕೆಗೆ ತಮಿಳು ಮತ್ತು ಸಂಸ್ಕೃತ ಮೂಲ. ಮೈ ಅಂದರೆ ದೇಹ ಮತ್ತು ಧ್ವನಿ ಎಂದರೆ ಮಾರ್ದನಿ ಎಂಬ ಅರ್ಥ. ಈ ಸಮಕಾಲೀನ ನೃತ್ಯವನ್ನು ದೇಹದ ಪ್ರತಿಧ್ವನಿಗಳು ಅಥವಾ ದೇಹದ ಸ್ಮೃತಿಗಳು ಎಂದು ಅರ್ಥೈಸಬಹುದು ಎನ್ನುತ್ತಾರೆ ನೃತ್ಯ ನಿರ್ದೇಶಕ ಜಯಚಂದ್ರನ್ ಪಳರಿ.

ಭಾರತೀಯ ಉಪಖಂಡದಲ್ಲಿ ಚಾಲ್ತಿಯಲ್ಲಿರುವ ದೈಹಿಕ ಮತ್ತು ಪ್ರದರ್ಶನ ಕಲೆಗಳ ಕುರಿತು ಆಳವಾಗಿ ಅಧ್ಯಯನ ನಡೆಸಿ ಈ ನೃತ್ಯ ಸಂಯೋಜಿಸಲಾಗಿದೆ. ಭರತನಾಟ್ಯದ ಮುದ್ರೆಗಳು ಮತ್ತು ಕೇರಳದ ಕಳರಿಪಯಟ್ಟುವಿನಲ್ಲಿ ಪ್ರದರ್ಶಿಸುವ ಪ್ರಾಣಿಗಳ ಚಲನೆಯನ್ನು ಆಧಾರವಾಗಿ ಇಟ್ಟುಕೊಂಡು ನೃತ್ಯ ಪ್ರದರ್ಶಿಸಲಾಯಿತು.

ಶ್ವೇತವರ್ಣದ ಧಿರಿಸು ತೊಟ್ಟ ಮೂವರು ಹುಡುಗಿಯರು ಮೂರು ಸ್ಟೀಲಿನ ಬಿಂದಿಗೆ ಹಿಡಿದು ಹೆಜ್ಜೆ ಹಾಕುತ್ತಿದ್ದರು. ಅದು ಕೊನೆಯಿಲ್ಲದ ಹೆಣ್ತನವನ್ನು ಸೂಚಿಸಿದರೆ, ಮೂವರು ಯುವಕರು ದೀಪಗಳನ್ನು ಹಿಡಿದು ಕಳರಿಪಯಟ್ಟುವಿನ ಪಟ್ಟುಗಳನ್ನು ಪ್ರದರ್ಶಿಸುತ್ತಿದ್ದುದು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಈ ಬೆಂಕಿ ಪುರುಷ ಶಕ್ತಿಯನ್ನು ಸಂಕೇತಿಸುತ್ತಿತ್ತು.

ನೀರನ್ನು ಜೀವನ ಚಿಲುಮೆಯಾಗಿ ಬಿಂಬಿಸಿ, ಪ್ರಕೃತಿ ಮತ್ತು ಮಾನವನ ಸಂಬಂಧವನ್ನು ಅರ್ಥೈಸುವ ಉದ್ದೇಶ ಈ ನೃತ್ಯದಲ್ಲಿದೆ. ಹಿನ್ನೆಲೆ ಸಂಗೀತದ ನಿನಾದ ಈ ಸಮಕಾಲೀನ ನೃತ್ಯಕ್ಕೆ ಸಾಥ್ ನೀಡಿತ್ತು.
 
ಇಲ್ಲಿ ಮೂಕಾಭಿನಯವೆಂಬಂತೆ ಕಂಡುಬಂದರೂ ದೇಹದ ಚಲನೆಗಳು ದೇಹದೊಳಗಿರುವ ಜ್ಯಾಮಿತಿಯ ಸಂಕೇತಗಳು ಹಾಗೂ ಮನಸ್ಸಿನ ಚೈತನ್ಯ ಬಿಂಬಿಸುವ ಚಲನೆಗಳನ್ನು ಅವಿಸ್ಮರಣೇಯ ರೀತಿಯಲ್ಲಿ ರಂಗದ ಮೇಲೆ ಪ್ರದರ್ಶಿಸಲಾಯಿತು. ಇದರ ಹಿಂದೆ ಯುವ ಕಲಾವಿದರ ಪರಿಶ್ರಮ ಎದ್ದು ಕಾಣುತ್ತಿತ್ತು.

ಜಯಚಂದ್ರನ್ ಪಳರಿ ಕಲಾನಿರ್ದೇಶನ ಮಾಡಿದ್ದರೆ, ಇಸ್ರೆಲ್‌ನ ಪೆಟ್ರಿಕ್ ಸೆಬಾಗ್ ಮತ್ತು ಯೊಟಾಮ ಅಗಂ ಸಂಗೀತ ಮತ್ತು ಧ್ವನಿ ನೀಡಿದ್ದರು. ಥಾಮಸ್ ದೊಟ್ಜಲರ್ (ಬೆಳಕು), ಹಿಮಾಂಶು ಮತ್ತು ಸೋನಾಲಿ ಅವರು ವಸ್ತ್ರ ವಿನ್ಯಾಸ ಮಾಡಿದ್ದರು.

ಒಟ್ಟಾರೆ ಸಮಕಾಲೀನ ನೃತ್ಯ ಪರಂಪರೆಗೆ ವಿಶಿಷ್ಟ ಆಯಾಮ ತಂದುಕೊಟ್ಟು ರಂಗದ ಮೇಲೆ ಪ್ರದರ್ಶಿತವಾದ ಮೈಧ್ವನಿ ಅಟ್ಟಕಲರಿಯು ಅಭಿಮಾನಿಗಳಿಗೆ ಪುಳಕ ಉಂಟುಮಾಡಿತ್ತು. ಈ ಪ್ರದರ್ಶನ ಅಕ್ಟೋಬರ್‌ನಲ್ಲಿ ಜರ್ಮನಿಯಲ್ಲಿ ಪ್ರದರ್ಶಿತವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT