ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈನವಿರೇಳಿಸಿದ ರಾಚಣ್ಣನ ಅಗ್ಗಿಉತ್ಸವ

Last Updated 23 ಏಪ್ರಿಲ್ 2013, 8:49 IST
ಅಕ್ಷರ ಗಾತ್ರ

ಕೆರೂರ: ವೈವಿಧ್ಯಮಯ ಆಚರಣೆಗಳ ಸಂಗಮದಂತಿರುವ ಸ್ಥಳೀಯ ರಾಚೂಟೇಶ್ವರ ಜಾತ್ರ್ಯೋತ್ಸವದ ವಿಶೇಷತೆ ಎಂದರೆ `ಅಗ್ಗಿ ಉತ್ಸವ'ದ ಆಚರಣೆ. ಅದರಂತೆ ಇಷ್ಟಾರ್ಥ ಸಿದ್ಧಿಗೆ ಹರಕೆ ಹೊತ್ತ ಸಾವಿರಾರು ಭಕ್ತರು ಭಾನುವಾರ ಬೆಂಕಿಯ ರಾಶಿಯ ಮೇಲೆ ಕೈಮುಗಿದು ಸಾಗುತ್ತಿದ್ದ ಕ್ಷಣ ರೋಮಾಂಚನಕಾರಿಯಾಗಿತ್ತು. ಈ ಸಂದರ್ಭಕ್ಕೆ ಸಾಕ್ಷಿಯಾಗಲು ದೇವಾಲಯದ ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ಜಮಾಯಿಸಿದ್ದರು.

ದೇಗುಲದ ವಿಶಾಲ ಆವರಣದಲ್ಲಿ ಸುಮಾರು 25 ಅಡಿ ಉದ್ದದ ಜಾಗೆಯಲ್ಲಿದ್ದ ಕೆಂಡದಲ್ಲಿ ಜಿಗಿಯುತ್ತಿದ್ದ ದೃಶ್ಯ ನೋಡುಗರನ್ನು ರೋಮಾಂಚನಗೊಳಿಸಿತು. ಉತ್ಸವದ ವಿಶೇಷ ಅರ್ಚಕ ವೀರಣ್ಣ ಪತ್ತಾರ ನಂದಿಕೋಲು ಹಾಗೂ ಪಲ್ಲಕ್ಕಿಗೆ ಮಂಗಳಾರತಿ ಎತ್ತಿ, ಕೆಂಡದ ಮೇಲೆ ಸಾಗುತ್ತಿದ್ದಂತೆ `ಶ್ರೀ ರಾಚೂಟೇಶ್ವರ ಬಸವೇಶ್ವರ ಮಹಾರಾಜ ಕೀ ಜೈ' ಎಂಬ ಹರ್ಷೋದ್ಘಾರ ಭಕ್ತರಿಂದ ಮೊಳಗಿತು.

ಭಕ್ತಿ ಸ್ವರೂಪ: ಸರದಿಯಲ್ಲಿ ನಿಂತಿದ್ದ ಪಲ್ಲಕ್ಕಿ,13 ನಂದಿಕೋಲು ಹಾಗೂ ಒದ್ದೆ ಬಟ್ಟೆಯಲ್ಲಿ ರಾಚಣ್ಣನ ಸ್ಮರಣೆ ಯಲ್ಲಿ ಸಾವಿರಾರು ಭಕ್ತರು, ಸ್ತ್ರೀಯರು ಬೆಂಕಿಯಲ್ಲಿ ನಡೆದರು. ಈ ದೃಶ್ಯ ನೋಡಲು ಆಂಧ್ರ, ತಮಿಳುನಾಡು, ಬೆಂಗಳೂರು, ಹುಬ್ಬಳ್ಳಿ ಇತರೆಡೆಯಿಂದ ಭಕ್ತರ ದಂಡು ಆಗಮಿಸಿತ್ತು.  ಇದಕ್ಕೂ ಮುನ್ನ ಪುರವಂತರು ಪಾದಗಟ್ಟೆಯ ಬಳಿ ಒಡಪುಗಳನ್ನು ಹೇಳುತ್ತಾ ಸಾಗಿದರು. ಮಧ್ಯರಾತ್ರಿ ಭಕ್ತರ ಮನರಂಜಿಸಲು ನಾಲತವಾಡದ ವೀರೇಶ್ವರ ನಾಟ್ಯ ಸಂಘವು `ಕಿವುಡ ಮಾಡಿದ ಕಿತಾಪತಿ' ಎಂಬ ಹಾಸ್ಯ ಪ್ರಧಾನ ನಾಟಕ ಪ್ರದರ್ಶಿಸಿತು.

ಕುಸ್ತಿ ಪಂದ್ಯಗಳ ಕಲರವ: ಸೋಮವಾರದ ಸಂಜೆಯಿಂದ ದೇವಾಲಯದ ಬಳಿಯ ಕುಸ್ತಿ ಅಖಾಡದಲ್ಲಿ ಜಂಗೀ ಕುಸ್ತಿ ಪಂದ್ಯಗಳಿಗೆ ಚಾಲನೆ ದೊರಕಿದೆ. ಮೂರು ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು, ಕ್ರೀಡಾಸಕ್ತರ ಮನ ತಣಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT