ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಲಾಪುರ ಜಾತ್ರೆ: ಭಕ್ತರ ಅನುಕೂಲಕ್ಕೆ ಕ್ರಮ

Last Updated 2 ಜನವರಿ 2014, 6:43 IST
ಅಕ್ಷರ ಗಾತ್ರ

ಯಾದಗಿರಿ: ಜನವರಿ 14ರಿಂದ ಆರಂಭ­ವಾಗಲಿ­ರುವ ತಾಲ್ಲೂಕಿನ ಪ್ರಸಿದ್ಧ ಮೈಲಾರಲಿಂಗೇಶ್ವರ ದೇವಸ್ಥಾನದ ಜಾತ್ರೆ ಸಂದರ್ಭದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಸಕಲ ವ್ಯವಸ್ಥೆಗಳನ್ನು ಅಚ್ಚು­ಕಟ್ಟಾಗಿ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ತಾಲ್ಲೂಕಿನ ಮೈಲಾಪುರದ ಮೈಲಾರ­ಲಿಂಗೇಶ್ವರ ದೇವಸ್ಥಾನದಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಪಿ.ಮಲ್ಲಿಕಾರ್ಜುನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಜಾತ್ರೆ ಸಂದರ್ಭದಲ್ಲಿ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಅವರು, ಯಾದಗಿರಿ ತಹಶೀಲ್ದಾರ್‌ ಪಿ.ಮಲ್ಲಿಕಾರ್ಜುನ ಅವರನ್ನು ಮೈಲಾರ­ಲಿಂಗೇಶ್ವರ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನಾಗಿ ನೇಮಿಸಿದ್ದಾರೆ.

ಸಮರ್ಪಕ ಬಸ್‌ಗಳ ವ್ಯವಸ್ಥೆ ಮಾಡುವುದರ ಜೊತೆಗೆ ಮೈಲಾಪುರ ಗ್ರಾಮದಲ್ಲಿ ಮುಖ್ಯ ರಸ್ತೆಯ ವಿಸ್ತಾರ ಮತ್ತು ಅಕ್ಕಪಕ್ಕದ ಸ್ಥಳವನ್ನು ಸ್ವಚ್ಫ­ಗೊಳಿಸಲು ನಿರ್ಧರಿಸಲಾಯಿತು. ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಅವಶ್ಯಕ ಪೈಪ್‌ಲೈನ್‌ ಅಳವಡಿ­ಸುವುದರ ಜೊತೆಗೆ ನೀರಿನ ಟ್ಯಾಂಕ್ ದುರಸ್ತಿ­ಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಯಿತು.

ಜಾತ್ರೆ ಸಮಯದಲ್ಲಿ ಕುರಿಗಳು ಒಳಗೆ ಬರದಂತೆ ನೋಡಿಕೊಳ್ಳಲು 6 ಚೆಕ್‌ಪೋಸ್ಟ್‌ ಮತ್ತು 1 ಕುರಿ ಸಂಗ್ರಹಣ ಶೆಡ್ ನಿರ್ಮಿಸಲು ತಿಳಿಸಲಾಯಿತು. ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಇನ್ನೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಈ ವೇಳೆ ಕುರಿಗಳು ತಂದಲ್ಲಿ ಅವುಗಳನ್ನು ಯಾದಗಿರಿ, ಶಹಾಪುರ, ಗುರುಮಠ­ಕಲ್‌­ಗಳಿಗೆ ಸಾಗಿಸಲು ಮತ್ತು ಆ ಕುರಿಗಳಿಗೆ ಅವಶ್ಯಕ ಮೇವು ಮತ್ತು ಇತರೆ ಆಹಾರದ ವ್ಯವಸ್ಥೆ ಮಾಡಿ­ಕೊಳ್ಳುವ ಕುರಿತು ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.

ಜಾತ್ರೆ ಸಂದರ್ಭದಲ್ಲಿ ಹೆಚ್ಚಿನ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಕೆರೆಯ ಹತ್ತಿರದಲ್ಲಿ ಜಾತ್ರೆ ಮುಗಿಯುವವರೆಗೆ ನುರಿತ ಇಬ್ಬರು ಮೀನುಗಾರರನ್ನು ನಿಯೋಜಿಸಲು ಸೂಚನೆ ನೀಡಲಾಯಿತು.

ಯಾದಗಿರಿಯಿಂದ ಗುರುಮಠಕಲ್ ಮಾರ್ಗ­ದಲ್ಲಿ ಈಶಾನ್ಯ ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ ಕಾರ್ಯಾಗಾರದ ಬಳಿ ಹೆಚ್ಚಿನ ಅಪಘಾತ­ಗಳು ಸಂಭವಿಸುತ್ತಿರುವುದರಿಂದ ಆ ಸ್ಥಳದಲ್ಲಿ ಅಪಘಾತ ವಲಯ ಎಂಬ ನಾಮಫಲಕವನ್ನು ಅಳವಡಿಸುವ ಕುರಿತು ನಿರ್ಧರಿಸಲಾಯಿತು.

ಸಾರಿಗೆ ಬಸ್ ನಿಲ್ದಾಣದ ಹತ್ತಿರ ಇಬ್ಬರು ಪೊಲೀಸ್‌ ಸಿಬ್ಬಂದಿಗಳನ್ನು ಹಗಲು ರಾತ್ರಿ ನಿಯೋಜಿ­ಸಲು ಮತ್ತು ದೇವಸ್ಥಾನದ ವತಿಯಿಂದ ಬೆಳಕಿನ ವ್ಯವಸ್ಥೆ ಮಾಡಿಸಲು ಹಾಗೂ ಬಸ್ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಮಾಡಲು ತೀರ್ಮಾನಿಸ­ಲಾಯಿತು. ಜನವರಿ 10ರಿಂದ 18ರ ವರೆಗೆ ಮೈಲಾ­ಪುರ ಗ್ರಾಮದಲ್ಲಿ ನಿರಂತರ ವಿದ್ಯುತ್ ಕಲ್ಪಿ­ಸುವ ಕುರಿತು ಮತ್ತು ವಿದ್ಯುತ್ ಪರಿವರ್ತಕಗಳನ್ನು ಹಾಗೂ ಕಂಬಗಳಲ್ಲಿ ತಂತಿಗಳನ್ನು ಸುಧಾರಿಸು­ವುದು, ಹೆಚ್ಚುವರಿ ಟಿ.ಸಿ.ಗಳನ್ನು, ಅನುಭವ ಹೊಂದಿರುವ ಲೈನ್‌ಮೆನ್‌ ಮತ್ತು ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಯಿತು.

ಜಾತ್ರೆ ಅವಧಿಯಲ್ಲಿ ನುರಿತ ಸಿಬ್ಬಂದಿ, ಅಗ್ನಿ­ಶಾಮಕ ವಾಹನ ಸೌಲಭ್ಯ ಮತ್ತು ನಿಗದಿಪಡಿಸಿದ ರಸ್ತೆ ಪಕ್ಕದಲ್ಲಿ ಅಂಗಡಿ ಹಾಕದಂತೆ ಹಾಗೂ ಶಾಲೆ ಹತ್ತಿರ ವಾಹನ ಹೋಗಲು ರಸ್ತೆ ಸುಧಾರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಅದೇ ರೀತಿ ಜಾತ್ರೆಗೆ ಮಹಾರಾಷ್ಟ್ರ, ಆಂಧ್ರ­ಪ್ರದೇಶ ಮತ್ತು ವಿವಿಧ ಜಿಲ್ಲೆಗಳಿಂದ ಬರುವ ಭಕ್ತಾದಿಗಳಿಗೆ ತೊಂದರೆಯಾಗದಂತೆ ವಾಹನ ತಪಾಸಣೆ ಮಾಡಬೇಕು. ಜಾತ್ರಾ ಸ್ಥಳದಲ್ಲಿ ಆರೋಗ್ಯ ಇಲಾಖೆಯಿಂದ ಔಷಧ, ಮಾತ್ರೆಗಳನ್ನು ಇಟ್ಟುಕೊಳ್ಳಬೇಕು. ಜಾತ್ರೆ ಮುಗಿದ ನಂತರ ಸ್ವಚ್ಫತೆ ಮತ್ತು ಕಸ ವಿಲೇವಾರಿ ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ, ಚರಂಡಿ ಮತ್ತು ಇತರೇ ಸ್ವಚ್ಫತೆ, ಕೊಳವೆ ಬಾವಿಗಳನ್ನು ದುರಸ್ತಿ­ಗೊಳಿಸುವಂತೆ ತಾಲ್ಲೂಕು ಪಂಚಾಯಿತಿ ಅಧಿಕಾರಿ­ಗಳಿಗೆ ಸೂಚಿಸಲಾಯಿತು.

ಜಾತ್ರೆ ಅಂಗವಾಗಿ ಮೈಲಾಪುರ ಗ್ರಾಮದಲ್ಲಿ ಮತ್ತು ಸುತ್ತಲಿನ ತಾಂಡಾಗಳಲ್ಲಿ ಕಳ್ಳಬಟ್ಟಿ ಸಾರಾಯಿ ಮತ್ತು ಅಕ್ರಮ ಮದ್ಯಮಾರಾಟ ಮಾಡುವ­ವರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮಕೈಗೊಳ್ಳಲು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಮಹಿಳಾ ಅಭಿವೃದ್ಧಿ ನಿಗಮ­ದಿಂದ ಮಳಿಗೆ ಹಾಕುವ ಬಗ್ಗೆ ಚರ್ಚಿಸಲಾಯಿತು. ಯಾದಗಿರಿಯಿಂದ ರಾಯಚೂರಿಗೆ ಹೋಗುವ ರಸ್ತೆಯ ತೆಗ್ಗು–ಗುಂಡಿಗಳನ್ನು ಮುಚ್ಚಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.

ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಶರಣಭೂಪಾಲರಡ್ಡಿ, ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ಅಭಿವೃದ್ಧಿ ನಿರೀಕ್ಷಕಿ ಶಿವಮಂಗಲ ಎಸ್., ಅಗ್ನಿಶಾಮಕ ಠಾಣೆಯ ಅಧಿಕಾರಿ ಗುರುರಾಜ್, ಯಾದಗಿರಿ ಗ್ರಾಮೀಣ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನ ಎಂ., ಬಳಿಚಕ್ರ ಆರೋಗ್ಯ ಅಧಿಕಾರಿ ಡಾ.ಎನ್.ಎಸ್.­ಸಾಜೀದ್, ಜೆಸ್ಕಾಂ ಅಧಿಕಾರಿ ಮೋಶಿನ್ ಅಹ್ಮದ್, ಕಂದಾಯ ನಿರೀಕ್ಷಕ ಸುರೇಂದ್ರ ಹಾಗೂ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT