ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮೈಲಾರ-ಮಸೂತಿ'ವರೆಗೆ ಗೆದ್ದವರು ಐವರು ಮಾತ್ರ!

Last Updated 9 ಏಪ್ರಿಲ್ 2013, 7:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಈವರೆಗೆ ನಡೆದಿರುವ 12 ವಿಧಾನಸಭಾ ಚುನಾ ವಣೆಗಳಲ್ಲಿ ಆರಂಭದಲ್ಲಿ ಮಹಿಳೆಯರಿಗೆ ಸಿಕ್ಕ ಅಲ್ಪ ಪ್ರಾತಿನಿಧ್ಯ ನಂತರದ ವರ್ಷಗಳಲ್ಲಿ ಕಡಿಯಾಗುತ್ತ ಬಂದಿದೆ.

1957ರಿಂದ 2008ರ ವರೆಗಿನ ಚುನಾವಣೆ ಗಳಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ನಾಲ್ವರು ಹಾಗೂ ಹೊಸ ಜಿಲ್ಲೆಯಾಗಿ ರೂಪು ಗೊಂಡ ಬಳಿಕ ಕೇವಲ ಒಬ್ಬ ಮಹಿಳೆಯಷ್ಟೇ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ.

ಕರ್ನಾಟಕ ಏಕೀಕರಣದ ಬಳಿಕ 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಹಾವೇರಿ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಿದ್ಧಮ್ಮ ಮೈಲಾರ ಹಾಗೂ ಗದಗದ ಶಿರಹಟ್ಟಿ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಲೀಲಾವತಿ ಮಾಗಡಿ ಜಯಗಳಿಸಿ ವಿಧಾನಸಭೆ ಪ್ರವೇಶಿಸಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದರು. 

ನಂತರ 1962ರಲ್ಲಿ  ಎರಡನೇ ಬಾರಿ ಬ್ಯಾಡಗಿ ಯಿಂದ ಸ್ಪರ್ಧಿಸಿದ ಸಿದ್ಧಮ್ಮ ಜಯಗಳಿಸಿದರೆ, ರಾಣಿಬೆನ್ನೂರು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿ ಸಿದ್ದ ಯಲ್ಲಮ್ಮ ಸಾಂಬ್ರಾಣಿ ಜಯಗಳಿಸಿದರು. ಶಿರಹಟ್ಟಿಯಿಂದ ಸ್ಪರ್ಧಿಸಿದ್ದ ಲೀಲಾವತಿ ಪರಾಭವ ಗೊಂಡರು. ಅ ಬಳಿಕ ಹಲವು ಮಹಿಳೆಯರು  ಗದಗ, ಹಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಣಕ್ಕಿಳಿ ದರೂ ಯಾರೂ ಜಯಗಳಿಸಲಿಲ್ಲ. ಇದಾದ 10 ವರ್ಷಗಳ ಬಳಿಕ  1972ರಲ್ಲಿ  ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಸುಮತಿ ಮಡಿಮನ್  ಜಯಗಳಿಸಿದರು. ಮರಳಿ 1978ರಲ್ಲಿ ಸ್ಪರ್ಧಿಸಿದಾಗಲೂ ಜಯ ಭೇರಿ ಬಾರಿಸಿದರು.

ಈ ನಡುವೆ ಕೆಲವು ಚುನಾವಣೆಗಳಲ್ಲಿ ವಿವಿಧ ಪಕ್ಷಗಳಿಂದ ಮಹಿಳೆಯರು ಸ್ಪರ್ಧಿಸಿದರೂ ಜಯ ಗಳಿಸಲಿಲ್ಲ.1983ರಲ್ಲಿ ಕಲಘಟಗಿ ಕ್ಷೇತ್ರದಲ್ಲಿ ಜನತಾ ಪಕ್ಷದಿಂದ ಎಸ್.ಬಿ.ಮಠದ ಸ್ಪರ್ಧಿಸಿ ಪರಾಭವಗೊಂಡರು.1985ರಲ್ಲಿ ಆಗಿನ ಧಾರ ವಾಡ ಕ್ಷೇತ್ರದಲ್ಲಿ ಲೀಲಾವತಿ ಚರಂತಿಮಠ ಕಾಂಗ್ರೆಸ್‌ನಿಂದ  ಸ್ಪರ್ಧಿಸಿ, ಆಗ ಪಕ್ಷೇತರರಾಗಿ ಸ್ಪರ್ಧಿಸಿದ್ದ ಹಾಲಿ ಶಾಸಕ ಬಿಜೆಪಿಯ ಚಂದ್ರಕಾಂತ ಬೆಲ್ಲದರಿಂದ ಪರಾಭವಗೊಂಡಿದ್ದರು. ಇದರ ಹೊರತಾಗಿ ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದ ಮನೋರಮಾ  ಬುನಿಯನ್ 1989 ಮತ್ತು 1994ರಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು.

ಮೊದಲ ಶಾಸಕಿ: 1997ರಲ್ಲಿ ಧಾರವಾಡ ಜಿಲ್ಲೆ ವಿಭಜನೆಗೊಂಡು ಹೊಸ ಜಿಲ್ಲೆಯಾಯಿತು. ಧಾರವಾಡದಿಂದ ಬೇರ್ಪಟ್ಟ ಗದಗ ಮತ್ತು ಹಾವೇರಿ ಪ್ರತ್ಯೇಕ ಜಿಲ್ಲೆಗಳಾಗಿ ರಚನೆಯಾದವು. ನಂತರ 1999ರಲ್ಲಿ ನಡೆದ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಕಲಘಟಗಿ ಕ್ಷೇತ್ರದಿಂದ ಜೆಡಿಎಸ್‌ನಿಂದ ದೀಪಾ ದಯಾನಂದ ಮುರಕುಂಬಿ ಸ್ಪರ್ಧಿಸಿ ಪರಾಭವ ಗೊಂಡಿದ್ದರು. 2004ರಲ್ಲಿ ಪಾರ್ವತಿದೇವಿ ಮಳೀಮಠ ಕನ್ನಡನಾಡು ಪಕ್ಷದಿಂದ ಸ್ಪರ್ಧಿಸಿದ್ದರು.

ಕ್ಷೇತ್ರ ಪುನರ್ವಿಂಗಡಣೆ ಬಳಿಕ 2008ರಲ್ಲಿ ನಡೆದ ಚುನಾವಣೆಯಲ್ಲಿ  ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಣಕ್ಕಿಳಿದಿದ್ದರು. ಬಿಎಸ್‌ಪಿಯಿಂದ  ಹುಬ್ಬಳ್ಳಿ-ಧಾರವಾಡ ಪೂರ್ವ ದಲ್ಲಿ ಶೋಭಾ ವಾಸುದೇವ ಬಳ್ಳಾರಿ, ಕಲಘಟಗಿಯಲ್ಲಿ ಜೆಡಿಯುನಿಂದ ಸುವರ್ಣ ಗೋವಿಂದರಾವ್ ಕುಲಕರ್ಣಿ, ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಜೆಡಿಯುನಿಂದ  ಸಾವಿತ್ರಿ ಎಂ. ಗುಂಡಿ, ಸರ್ವೋದಯ ಪಕ್ಷದಿಂದ ಶಶಿಕಲಾ  ಈಶ್ವರ ಮಸೂತಿ, ಧಾರವಾಡ ಪಶ್ಚಿಮದಿಂದ ರೀಟಾ ಪಾವಟೆ ಪಕ್ಷೇತರರಾಗಿ ಸ್ಪರ್ಧಿಸಿ ಪರಾಭವಗೊಂಡರು.

2008ರಲ್ಲಿ ಬಿಜೆಪಿ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಟಿಕೆಟ್ ನೀಡಿ ಧಾರವಾಡ ಗ್ರಾಮಾಂತರದಿಂದ  ಸೀಮಾ ಮಸೂತಿ ಅವರನ್ನು ಕಣಕ್ಕಿಳಿಸಿತು. ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ಅವರನ್ನು ಪರಾಭವಗೊಳಿಸಿದ ಸೀಮಾ ಮಸೂತಿ, ಹೊಸ ಜಿಲ್ಲೆಯಾದ ಬಳಿಕ ವಿಧಾನಸಭೆ ಪ್ರವೇಶಿಸಿದ ಮೊದಲ ಮಹಿಳೆ. ಈ ಬಾರಿ ಕೂಡ ಇದೇ ಕ್ಷೇತ್ರದಿಂದ ಅವರು ಕಣಕ್ಕಿಳಿದಿದ್ದಾರೆ.

ಪಕ್ಷೇತರರಿಗೆ ದೊರಕದ ಗೆಲುವು
ಜಿಲ್ಲೆಯಲ್ಲಿ  ಪಕ್ಷೇತರರಾಗಿ ಕಣಕ್ಕಿಳಿದ ಮಹಿಳೆಯರೂ ಕಡಿಮೆ, ಗೆದ್ದಿದ್ದು ಇಲ್ಲವೇ ಇಲ್ಲ. 1989ರಲ್ಲಿ ಧಾರವಾಡ ಕ್ಷೇತ್ರದಿಂದ ಪಕ್ಷೇತರರಾಗಿ ಗೌರವ್ವ ಭೀಮಸಿ ಹಾಗೂ ದಾಕ್ಷಾಯಿಣಿ ಹಿರೇಮಠ ಕಣಕ್ಕಿಳಿದಿದ್ದರು. 1994ರಲ್ಲಿ ಧಾರವಾಡ ಕ್ಷೇತ್ರದಿಂದ ಗೌರವ್ವ ಹಂಚಿನಾಳ ಮಠ, ವಿಜಯಲಕ್ಷ್ಮಿ ಲೂತಿಮಠ, ಖಾದರ್‌ಬೀ ಗೌಸ್‌ಮೊಹಿದ್ದೀನ್ ಬಾಗೇವಾಡಿ ಸ್ಪರ್ಧಿಸಿದ್ದರು. 1989ರಲ್ಲಿ ಯಾರೂ ಕಣಕ್ಕಿಳಿಯಲಿಲ್ಲ. 2004ರಲ್ಲಿ ಸುಮಿತ್ರಾ ಎಸ್. ಮಂಗಾಜಿ ಹಾಗೂ ಹಜರತ್ ಅನ್ವರ್‌ಸಾಬ್ ಮಿರ್ಜಿ ಸ್ಪರ್ಧಿಸಿ ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT