ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಷುಗರ್: ಇಂದಿನಿಂದ ಬಾಕಿ ಪಾವತಿಗೆ ಕ್ರಮ

Last Updated 15 ಫೆಬ್ರುವರಿ 2012, 5:30 IST
ಅಕ್ಷರ ಗಾತ್ರ

ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಸಾಲಿನಲ್ಲಿ ಕಬ್ಬು ಪೂರೈಸಿದ್ದ ಬೆಳೆಗಾರರಿಗೆ ಬಾಕಿ ಪಾವತಿಯನ್ನು ಬುಧವಾರದಿಂದ ಆರಂಭಿಸಲಿದೆ.

ಕಳೆದ ನವೆಂಬರ್ ತಿಂಗಳಿಂದ ಬಾಕಿ ಇದ್ದು, ಒಟ್ಟಾರೆ 20-25 ಕೋಟಿ ಬಾಕಿ ಪಾವತಿಸಬೇಕಾಗಿದೆ. ಹಂತ-ಹಂತವಾಗಿ ಇದನ್ನು ಇತ್ಯರ್ಥ ಪಡಿಸಲಾಗುವುದು ಎಂದು ಕಾರ್ಖಾನೆಯ ಅಧ್ಯಕ್ಷ ನಾಗರಾಜಪ್ಪ ಮಂಗಳವಾರ ತಿಳಿಸಿದರು.

ಕಬ್ಬು ಬಾಕಿ ಪಾವತಿಗೆ ಆಗ್ರಹಪಡಿಸಿ ಕಾರ್ಖಾನೆಯ ಎದುರು ಪ್ರತಿಭಟನೆ ನಡೆಸಿದ ರೈತರನ್ನು ಉದ್ದೇಶಿಸಿ ಈ ಭರವಸೆ ನೀಡಿದ ಅವರು, ಕೇಂದ್ರ ಸರ್ಕಾರ ಸಕ್ಕರೆ ಮಾರಾಟಕ್ಕೆ ಅನುಮತಿ ನೀಡದಿರುವುದು ಈ ವಿಳಂಬಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಕಾರ್ಖಾನೆಯು ಪ್ರಸಕ್ತ ಹಂಗಾಮಿನಲ್ಲಿ ಇಲ್ಲಿಯವರೆಗೂ ಒಟ್ಟಾರೆ 3.62 ಲಕ್ಷ ಟನ್ ಕಬ್ಬು ಅರೆದಿದ್ದು, ಒಟ್ಟಾರೆ 3.28 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಿದೆ. ಮಾರಾಟಕ್ಕೆ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಇನ್ನೂ 2.70 ಲಕ್ಷ ಕ್ವಿಂಟಲ್ ಸಕ್ಕರೆ ದಾಸ್ತಾನು ಉಳಿದಿದೆ ಎಂದು ವಿವರಿಸಿದರು.

ಆದರೆ, ಕಾರ್ಖಾನೆಯು ರೈತರಿಗೆ ಬಾಕಿ ಪಾವತಿಸಲು ಕ್ರಮ ಕೈಗೊಳ್ಳುತ್ತಿದು, ನಾಳೆಯಿಂದಲೇ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರೈತರ ಧರಣಿ: ಇದಕ್ಕೂ ಮುನ್ನ  ಕಬ್ಬು ಸರಬರಾಜು ಮಾಡಿದ್ದ ಬೆಳೆಗಾರರಿಗೆ ದರ ಪಾವತಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ  ರೈತರು, ಕಬ್ಬು ಬೆಳೆಗಾರರು ಕಾರ್ಖಾನೆಯ ಆವರಣದಲ್ಲಿ ಧರಣಿ ನಡೆಸಿದರು.

ಪ್ರಸಕ್ತ ಸಾಲಿಗೆ ಇನ್ನೂ ಅಂತಿಮ ಬೆಲೆ ನಿಗದಿಪಡಿಸಿಲ್ಲ. ತಾತ್ಕಾಲಿಕ ಬೆಲೆ ಟನ್‌ಗೆ ರೂ. 2,000 ನಿಗದಿಪಡಿಸಲಾಗಿತ್ತು. ಇದರ ಜೊತೆಗೆ ಕಳೆದ ಸಾಲಿನಲ್ಲಿ ಪೂರೈಸಿದ್ದ ಕಬ್ಬಿಗೆ ಹಳೆಯ ಬಾಕಿ ಟನ್‌ಗೆ ರೂ. 100 ಅನ್ನೂ ಪಾವತಿಸಿಲ್ಲ ಎಂದು ರೈತರು ದೂರಿದರು.

ರೈತ ಸಂಘದ ಜಿಲ್ಲಾ ಘಟಕ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜನವರಿ 15ರ ಒಳಗೆ ಎಲ್ಲ ಬಾಕಿ ಪಾವತಿಸುವ ಭರವಸೆ ನೀಡಲಾಗಿತ್ತು ಎಂಬುದನ್ನುನೆನಪಿಸಿದರು.

ಪಾವತಿ ವಿಳಂಬವಾಗಿರುವುದರಿಂದ ಕೃಷಿಕರು, ಬೆಳೆಗಾರರು ಸಮಸ್ಯೆಗೆ ಈಡಾಗಿದ್ದಾರೆ. ತೆಗೆ, ಮುಂಗಾರು ಹಂಗಾಮು ಕೃಷಿ ಚಟುವಟಿಕೆಗೂ ತೊಂದರೆ ಆಗಿದೆ ಎಂದು ಸಮಸ್ಯೆ ತೋಡಿಕೊಂಡರು.

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಕೋಣಸಾಲೆ ನರಸರಾಜು, ಮುಖಂಡರಾದ ವಿ.ಅಶೋಕ್, ತಾಲ್ಲೂಕು ಘಟಕದ ಅಧ್ಯಕ್ಷ ಜವರೇಗೌಡ, ಮಾದಪ್ಪ, ಬೊಮ್ಮೇಗೌಡ ಮತ್ತು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT