ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಷುಗರ್: ಕಬ್ಬು ನುರಿಸುವ ಪ್ರಕ್ರಿಯೆಗೆ ಚಾಲನೆ

Last Updated 26 ಸೆಪ್ಟೆಂಬರ್ 2013, 8:25 IST
ಅಕ್ಷರ ಗಾತ್ರ

ಮಂಡ್ಯ: ಇಲ್ಲಿನ ಮೈಸೂರು ಸಕ್ಕರೆ ಕಂಪೆನಿ ನಿ.(ಮೈಷುಗರ್) ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಪ್ರಕ್ರಿಯೆಗೆ ಪೂಜೆ ನೆರವೇರಿಸುವ ಮೂಲಕ ಬುಧವಾರ ಚಾಲನೆ ನೀಡಲಾಯಿತು.

ಮೊದಲಿಗರಾಗಿ, ತಲಾ ಎರಡೂವರೆ ಟನ್‌ ಕಬ್ಬು ಪೂರೈಸಿದ ಚನ್ನಪ್ಪನದೊಡ್ಡಿ ಗ್ರಾಮದ ರೈತರಾದ ಮಧು ಹಾಗೂ ಶರತ್‌ ಅವರಿಗೆ ಬಹುಮಾನ ನೀಡಲಾಯಿತು.

ಕಬ್ಬು ನುರಿಸುವ ಯಂತ್ರಕ್ಕೆ ಸಾಂಕೇತಿಕವಾಗಿ ಕಬ್ಬಿನ ಜಲ್ಲೆಯ ತುಂಡುಗಳನ್ನು ಹಾಕಿ ಕಬ್ಬು ಅರೆಯುವಿಕೆ ಕೆಲಸಕ್ಕೆ ಚಾಲನೆ ನೀಡಲಾಯಿತು. ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಅಯ್ಯಪ್ಪ ಸೇರಿದಂತೆ ಹಲವು ರೈತರು, ರೈತ ಹಾಗೂ ಕಾಂಗ್ರೆಸ್‌ ಮುಖಂಡರು ಸಾಕ್ಷಿಯಾದರು.

ನಂತರ ಮಾತನಾಡಿದ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಅಯ್ಯಪ್ಪ, ‘ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗೆ ಒಟ್ಟು 3.06 ಲಕ್ಷ ಟನ್‌ ಕಬ್ಬು ಒಪ್ಪಿಗೆಯಾಗಿತ್ತು. ಕಾರ್ಖಾನೆ ಆರಂಭ ತಡವಾಗಿದ್ದರಿಂದ ಕನಿಷ್ಠ 2.60 ಲಕ್ಷ ಟನ್‌ ಕಬ್ಬು ಅರೆಯುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

ಕಬ್ಬು ಪೂರೈಸಿದ 30 ದಿನದೊಳಗೆ ಹಣ ಬಟವಾಡೆ ಮಾಡಲಾಗುವುದು. ತಡವಾಗಿ ಹಣ ನೀಡಲಾಗುತ್ತದೆ ಎಂದು ಆತಂಕ ಪಡಬೇಕಿಲ್ಲ ಎಂದು ಹೇಳಿದರು.

ಕಾರ್ಖಾನೆಯ ಸಿಎಒ ರಾಮಯ್ಯ, ಪ್ರಧಾನ ವ್ಯವಸ್ಥಾಪಕ ಶಂಕರ್‌, ಮುಖ್ಯ ಎಂಜಿನಿಯರ್‌ ಕೃಷ್ಣಯ್ಯ, ನೌಕರರ ಯೂನಿಯನ್‌ ಅಧ್ಯಕ್ಷ ರಾಜು, ಕಾರ್ಯದರ್ಶಿ ಸಿದ್ದೇಗೌಡ, ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್‌.ಕೃಷ್ಣ, ಕಾಂಗ್ರೆಸ್‌ ಯುವ ಜಿಲ್ಲಾ ಘಟಕ ಅಧ್ಯಕ್ಷ ಎಂ.ಎಸ್‌.ಚಿದಂಬರ್‌, ಮುಖಂಡರಾದ ಅಮರಾವತಿ ಚಂದ್ರಶೇಖರ್‌, ಹನಕೆರೆ ಶಶಿಕುಮಾರ್‌ ಮತ್ತಿತರರು ಹಾಜರಿದ್ದರು.

ಸನ್ಮಾನ ನಾಳೆ
ಮಂಡ್ಯ: ಜಿಲ್ಲೆಯ ಪರವಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ. ಅಮರನಾರಾಯಣ ಅವರಿಗೆ ಸೆ. 27ರಂದು ಮಧ್ಯಾಹ್ನ 3.30ಕ್ಕೆ ನಗರದ ರೈತ ಸಭಾಂಗಣದಲ್ಲಿ ನಾಗರಿಕ ಸನ್ಮಾನ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ತಾ.ಪಂ. ಮಾಜಿ ಅಧ್ಯಕ್ಷ ತ್ಯಾಗರಾಜು, ರಾಜಣ್ಣ, ಗೂಳೀಗೌಡ, ದೇವರಾಜು, ಜಯರಾಮು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT