ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಷುಗರ್‌ನಿಂದ ರೂ. 7 ಕೋಟಿ ಹಿಂತಿರುಗಿಸಲು ಆಗ್ರಹ

Last Updated 15 ಫೆಬ್ರುವರಿ 2012, 5:30 IST
ಅಕ್ಷರ ಗಾತ್ರ

ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆಗೆ ಪಾಂಡವಪುರ ಸಕ್ಕರೆ ಕಾರ್ಖಾನೆಯಿಂದ ರೂ. 7 ಕೋಟಿ ವರ್ಗಾವಣೆಯಾಗಿದೆ ಎಂದು ದೂರಿರುವ ಆ ಭಾಗದ ರೈತರು, ಇದನ್ನು ಕೂಡಲೇ ವಾಪಸು ಕಳುಹಿಸಿ ಬೆಳೆಗಾರರ ಬಾಕಿ ಪಾವತಿಸಬೇಕು ಎಂದು ಆಗ್ರಹ ಪಡಿಸಿದ್ದಾರೆ.

ಇದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಪಡಿಸಿ ಪಾಂಡವಪುರ ಪುರಸಭೆಯ ಅಧ್ಯಕ್ಷಹೊನ್ನಗಿರಿ ಗೌಡ ಮತ್ತು ಇತರರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಪ್ರತಿಭಟನೆಯನ್ನು ನಡೆಸಿದರು.

ಕಾರ್ಖಾನೆಯ ಆಡಳಿತವನ್ನು ಮೈಷುಗರ್ ಕಾರ್ಖಾನೆಯ ಅಧ್ಯಕ್ಷರಿಗೇ ಒಪ್ಪಿಸಿದ ಬಳಿಕ ಆಡಳಿತದಲ್ಲಿ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ನಿರ್ವಹಣೆ, ಪರಿಶೀಲನೆಗಾಗಿ ಪಿಎಸ್‌ಎಸ್‌ಕೆ ಸ್ಥಾಪಕ ಸಮಿತಿಯ ಮಾದರಿಯಲ್ಲಿ ವಿಭಾಗೀಯ ಕಮೀಷನರ್ ನೇತೃತ್ವದಲ್ಲಿ ಸಮಿತಿಯನ್ನು ನೇಮಕ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಾರ್ಖಾನೆಯ ಉಳಿವು ಆ ಭಾಗದ ರೈತರ ಹಿತದೃಷ್ಟಿಯಿಂದ ಅಗತ್ಯ. ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಅಲ್ಲದೆ, ಸರ್ಕಾರ ಕಾರ್ಖಾನೆಗಾಗಿ 35 ಕೋಟಿ ರೂಪಾಯಿ ನೀಡಿದ್ದು, ಅದನ್ನು ಸರ್ಕಾರದ ನಿಯಂತ್ರಣದಲ್ಲಿ ಇರುವಂತೆ ಠೇವಣಿ ಇರಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಈ ಬೇಡಿಕೆಗಳನ್ನು ಗಮನಿಸಿ ಕ್ರಮ ಜರುಗಿಸಬೇಕು. ಕಾರ್ಖಾನೆ ಉಳಿಸಲು ಒತ್ತು ನೀಡಬೇಕು ಎಂದು ಕೋರಿದ್ದಾರೆ. ಈ ಕುರಿತ ಮನವಿಗೆ ಚಿಕ್ಕಪಾಪೇಗೌಡ, ಶಿವಣ್ಣ, ನಂಜೇಗೌಡ, ಕೃಷ್ಣ, ಗೋವಿಂದೇಗೌಡ ಸಹಿ ಹಾಕಿದ್ದಾರೆ.

ಪದವಿ ಕಾಲೇಜಿಗೆ ಶಾಸಕ ಭೇಟಿ: ಚರ್ಚೆ
ಕೃಷ್ಣರಾಜಪೇಟೆ: ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮೂಲ ಸೌಕರ್ಯಗಳ ಕೊರತೆ ವಿರೋಧಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಶಾಸಕ ಕೆ.ಬಿ.ಚಂದ್ರಶೇಖರ್ ಮತ್ತು ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜ್ ಸೋಮವಾರ ಕಾಲೇಜಿಗೆ ಭೇಟಿ ನೀಡಿ ಅವ್ಯವಸ್ಥೆ ಪರಿಶೀಲಿಸಿದರು.

ಶಾಸಕರು ಕಾಲೇಜಿಗೆ ಭೇಟಿ ನೀಡಿದಾಗ ಅಲ್ಲಲ್ಲಿ ಬಿದ್ದಿದ್ದ ಕಸ ಮತ್ತು ಕಾಗದದ ರಾಶಿ ಅವರನ್ನು ಸ್ವಾಗತಿಸಿತು. ಇದರಿಂದ ಸಿಡಿಮಿಡಿಗೊಂಡರಲ್ಲದೇ, ಸ್ವಚ್ಛತೆಗೆ ಗಮನ ನೀಡಲು ಆದ್ಯತೆ ನೀಡುವಂತೆ ಪ್ರಾಚಾರ್ಯ ಪ್ರೊ.ಕೆ.ಆರ್.ಕುಮಾರ್‌ಗೆ ತಾಕೀತು ಮಾಡಿದರು.

ತಹಶೀಲ್ದಾರ್ ಡಾ.ನಾಗರಾಜ್, ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಉಪನ್ಯಾಸಕರಾದ ರಮೇಶ್, ಜಾನೇಗೌಡ, ಜವರೇಗೌಡ, ಧನಂಜಯ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT