ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ

Last Updated 5 ಡಿಸೆಂಬರ್ 2012, 8:26 IST
ಅಕ್ಷರ ಗಾತ್ರ

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಘಟನೆಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದವು.
ಔಷಧ ಮಾರಾಟ ಪ್ರತಿನಿಧಿಗಳಿಗೆ ಕೈಗಾರಿಕಾ ತ್ರಿಸದಸ್ಯ ರಚಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿತು.

ಎಸ್‌ಪಿಇ ಕಾಯ್ದೆ ಅನ್ವಯ ಔಷಧ ಮಾರಾಟ ಪ್ರತಿನಿಧಿಗಳಿಗೆ ಶಾಸನಬದ್ಧ ಕೆಲಸದ ನಿಯಮ ರೂಪಿಸಬೇಕು. ಎಸ್‌ಪಿಇ ಕಾಯ್ದೆಯನ್ನು ಔಷಧ ಮಾರಾಟವಲ್ಲದ, ಮಾರಾಟ ಪ್ರತಿನಿಧಿಗಳಿಗೂ ವಿಸ್ತರಿಸಬೇಕು. ಮಹಿಳಾ ಔಷಧ ಮಾರಾಟ ಪ್ರತಿನಿಧಿಗಳಿಗೆ 6 ತಿಂಗಳ ಮೆಟರ್ನಿಟಿ ರಜೆ ಘೋಷಿಸಬೇಕು.

ಮಾರಾಟ ಪ್ರತಿನಿಧಿಗಳಿಗೆ 8 ಗಂಟೆಗಳ ಕಾಲ ಕೆಲಸದ ಅವಧಿಯ ಅಧಿಸೂಚನೆ ನೀಡಬೇಕು. ಆಸ್ಪತ್ರೆಗಳು, ಕ್ಲಿನಿಕ್‌ಗಳು, ವೈದ್ಯಕೀಯ ಸಂಸ್ಥೆಗಳಲ್ಲಿ ಮಾರಾಟ ಪ್ರತಿನಿಧಿಗಳು ಕಾನೂನು ಬದ್ಧವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸಂಘದ ಕಾರ್ಯದರ್ಶಿ ಲಕ್ಷ್ಮೀಶ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕರ್ನಾಟಕ ಕ್ರಾಂತಿ ಪಡೆ
ಚಾಮುಂಡಿ ಬೆಟ್ಟದ ತಪ್ಪಲಿನ ಭೂ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಕ್ರಾಂತಿ ಪಡೆ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ಭೂ ಹಗರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿರುವುದು ಕಣ್ಣೊರೆಸುವ ತಂತ್ರವಾಗಿದೆ. ವ್ಯವಸಾಯದ ಭೂಮಿ ಬಂಡವಾಳಶಾಹಿಗಳ ಪಾಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಭವಿಷ್ಯದಲ್ಲಿ ಅನ್ನ ತಿನ್ನಲು ಪರದಾಡುವ ಸ್ಥಿತಿ ತಲೆದೋರುತ್ತದೆ. ಹಾಗಾಗಿ ನಗರದ ಸುತ್ತಮುತ್ತ ಇರುವ ವ್ಯವಸಾಯ ಭೂಮಿಯನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕು.

ಭೂಮಿಯನ್ನು ಕಬಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಪರೋಕ್ಷವಾಗಿ ಹುನ್ನಾರ ನಡೆಸುತ್ತಿದ್ದಾರೆ. ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಭೂ ಹಗರಣದಲ್ಲಿ ಭಾಗಿಯಾದ ವರನ್ನು ಬಂಧಿಸಬೇಕು. ರೈತರು ಮತ್ತು ಸಾಮಾನ್ಯ ವರ್ಗದ ಜನರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾ ಯಿಸಿದರು. ಕ್ರಾಂತಿಪಡೆ ರಾಜ್ಯಾಧ್ಯಕ್ಷೆ ಆರ್. ಮಧುಮತಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಬಹಿಷ್ಕಾರ ಆರೋಪ: ಧರಣಿ
ಕುಟುಂಬದವರ ಮೇಲೆ ದೌರ್ಜನ್ಯ ಎಸಗಿ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂದು ಆರೋಪಿಸಿ ನಂಜನಗೂಡು ಪಟ್ಟಣದ ಅಶೋಕ ಪುರಂ ನಿವಾಸಿ ಕೆಂಪಯ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ನಂಜನಗೂಡಿನ ಅಶೋಕಪುರಂನಲ್ಲಿ ಸುಮಾರು 30 ವರ್ಷಗಳಿಂದ ನನ್ನ ಕುಟುಂಬ ನೆಲೆಸಿದೆ. ಆದರೆ ಸುತ್ತಲಿನ ಜನರು ನನ್ನ ಕುಟುಂಬದವರ ವಿರುದ್ಧ ದೌರ್ಜನ್ಯ ಎಸಗಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಕುಟುಂಬವನ್ನು ಒಕ್ಕಲೆಬ್ಬಿಸಲು ಯತ್ನ ನಡೆಯುತ್ತಿದೆ. ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT