ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನ ಅಂತಃಕರಣ ಮತ್ತು ಅರಮನೆ ದಹನ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮನುಷ್ಯ ಪ್ರೀತಿ ಅಂದ್ರು ಆ ದಿನ. ಮಾನವೀಯತೆ ಅಂದ್ರು ಆ ದಿನ. ವಿಧೇಯತೆ ಅಂದ್ರು ಆ ದಿನ. ವಿಶ್ವಾಸ ಅಂದ್ರು ಆ ದಿನ.

ಭೌತಿಕ ಅರಮನೆ ಸುಟ್ಟು ಕರಕಲಾಗುತ್ತಿದ್ದರೂ ಅರಮನೆಯ ಅಂಗಳದಲ್ಲಿಯೇ ಮೈಸೂರು ಮಂದಿ ಹೃದಯದರಮನೆಯ ಬಾಗಿಲನ್ನು ತೆರೆದರು. ಮಹಾರಾಜರನ್ನು ಅದರಲ್ಲಿಯೇ ಕುಳ್ಳಿರಿಸಿದರು. ರಾಜಮಾತೆಗೆ ಮಾನಸಿಕ ಧೈರ್ಯ ತುಂಬಿದರು. ಮೈಸೂರೆಂದರೆ ಮಾನವೀಯತೆ ಎಂದು ಮೆರೆದರು.

ಅದು 1897ರ ಫೆಬ್ರುವರಿ 28, ಭಾನುವಾರ. ರಾಜಮಾತೆ ಕೆಂಪನಂಜಮ್ಮಣ್ಣಿ-ವಾಣಿ ವಿಲಾಸ ಸನ್ನಿಧಾನದ ಮೇಲ್ವಿಚಾರಣೆಯಲ್ಲಿ ಮಹಾರಾಜಕುಮಾರಿ ಜಯಲಕ್ಷ್ಮಮ್ಮಣ್ಣಿ ಅವರ ವಿವಾಹದ ದಿನ.

ಸರ್ದಾರ್ ಎಂ.ಕಾಂತರಾಜೇ ಅರಸ್ ಅವರೊಂದಿಗೆ ವಿವಾಹ. ಮೊದಲೇ ಭವ್ಯವಾದ ಅರಮನೆ. ಈಗಂತೂ ಮದುವೆಯ ಸಂಭ್ರಮ. ಇಡೀ ಅರಮನೆ ಕಂಗೊಳಿಸುತ್ತಿತ್ತು. ಕೋಟೆ ಕೊತ್ತಲಗಳೆಲ್ಲಾ ಸಂತಸದಿಂದ ತುಂಬಿ ಹೋಗಿದ್ದವು. ಇಡೀ ಮೈಸೂರೇ ಮದುವೆಯ ಮಂಟಪವಾಗಿತ್ತು.
 
ಎಲ್ಲಿ ನೋಡಿದರೂ ಸಂತಸದ ಬುಗ್ಗೆ.ಮೈಸೂರು ಸಂಸ್ಥಾನದ ಎಲ್ಲ ಕಡೆಗಳಿಂದ ಅತಿಥಿಗಳು ಬಂದು ಸೇರಿದ್ದರು. ಹೊರಗಡೆಯಿಂದಲೂ ಗಣ್ಯರು ಆಗಮಿಸಿದ್ದರು. ಮೈಸೂರಿನ ಜನರು ಮದುವೆ ಸಂಭ್ರಮವನ್ನು ನೋಡಿ ಆನಂದಿಸಿದ್ದರು. ಇಂತಹ ಆನಂದದ ತುತ್ತ ತುದಿಯಲ್ಲಿರುವಾಗಲೇ ದುರಂತವೊಂದು ಸಂಭವಿಸಿತು.

ಜ್ಯೋತಿ ಬೆಳಗುತ್ತಿದ್ದ ಸಾಲು ದೀಪಗಳು ಉರುಳಿಯೋ, ಹೋಮಕುಂಡದ ಅಗ್ನಿ ಚಿಮ್ಮಿಯೋ, ಅರಮನೆಯ ಅವ್ವೆಯರು ಅಜಾಗರೂಕತೆಯಿಂದ ಕೆಂಡವಿದ್ದ ಬೂದಿಯನ್ನು ಎರಚಿದ್ದ ಕಾರಣಕ್ಕೋ ಅಂತೂ ಅರಮನೆಗೆ ಬೆಂಕಿ ಹತ್ತಿಕೊಂಡಿತು. ವಿವಾಹ ಮಂಟಪದ ಕಂಬವೊಂದಕ್ಕೆ ಮೊದಲು ಹೊತ್ತಿಕೊಂಡ ಬೆಂಕಿ ವಿವಾಹ ಮಂಟಪವನ್ನು ನಾಶ ಮಾಡಿತು.

ಇಡೀ ಅರಮನೆ ಮರದಿಂದ ನಿರ್ಮಿಸಿದ್ದಾಗಿದ್ದರಿಂದ ಬಹುಬೇಗ ಬೆಂಕಿ ಅರಮನೆಯನ್ನು ಆವರಿಸಿಕೊಂಡಿತು. ಅರಗೂ ಸೇರಿಕೊಂಡಿದ್ದರಿಂದ ನೋಡ ನೋಡುತ್ತಿದ್ದಂತೆಯೇ ಅರಮನೆ ಖಾಂಡವವನದಂತೆ ಉರಿಯತೊಡಗಿತು.

ಮದುವೆ ಮನೆ ಸಂಪೂರ್ಣ ಗೊಂದಲದ ಗೂಡಾಯಿತು. ಅರಮನೆಯ ಒಳಗಿದ್ದ ಜನ ಚದುರಿ ಹೋದರು. ಕೂಗು, ಉದ್ಗಾರಗಳಿಂದ ತುಂಬಿ ಹೋಯಿತು. ಗಡಿಬಿಡಿಯಿಂದ ಎಲ್ಲರೂ ಅರಮನೆಯ ಅಂಗಳಕ್ಕೆ ಬಂದು ನಿಂತರು. `ಬೆಂಕಿ, ಬೆಂಕಿ~, `ನೀರು, ನೀರು~ ಎಂಬ ಕೂಗಾಟ ದಶ ದಿಕ್ಕುಗಳಲ್ಲಿ ಪ್ರತಿಧ್ವನಿಸಿತು. ದುರದೃಷ್ಟಕ್ಕೆ ಆ ದಿನ ನಲ್ಲಿಯಲ್ಲಿ ನೀರು ನಿಂತುಹೋಗಿತ್ತು. ಅರಮನೆಯ ಮುಂದೆ ಇರುವ ದೊಡ್ಡಕೆರೆಯಲ್ಲಿಯೂ ನೀರು ಇರಲಿಲ್ಲ.

ಮಹಾರಾಜರಿಂದ ಹಿಡಿದು ಸೈನಿಕರವರೆಗೆ, ದಿವಾನರಿಂದ ಜವಾನನವರೆಗೆ ಎಲ್ಲರೂ ದೊಡ್ಡ ಕೆರೆಯಿಂದ ಕೆಸರು ಮಣ್ಣನ್ನು ತಂದು ಅರಮನೆಗೆ ಎರಚಿ ಬೆಂಕಿಯನ್ನು ನಂದಿಸಲು ಯತ್ನಿಸಿದರು. ಆಗ ಮೈಸೂರಿನಲ್ಲಿ ಅಗ್ನಿಶಾಮಕ ದಳ ಇರಲಿಲ್ಲ. ಬೆಂಗಳೂರಿನಿಂದ ಅಗ್ನಿ ಶಾಮಕ ದಳದವರು ಬಂದು ಅರಮನೆಗೆ ನೀರು ರಾಚುವುದಕ್ಕೆ ಮೊದಲೇ ಇಡೀ ಅರಮನೆ ಸುಟ್ಟುಹೋಗಿತ್ತು.

ಸೂಪರಿಂಟೆಂಡೆಂಟ್ ಎಂಜಿನಿಯರ್ ಮೆಕಚಿನ್, ಎ.ವೆಂಕಟರಾವ್, ಚೆಂಗಯ್ಯ ಶೆಟ್ಟಿ ಮುಂತಾದವರು ಬೆಂಕಿ ಆರಿಸಲು ನಡೆಸಿದ ಯತ್ನ ವಿಫಲವಾಯಿತು. ಅರಮನೆಗೆ ಬೆಂಕಿ ಹೊತ್ತಿ ಉರಿಯುತ್ತಿರುವಾಗ ಅರಮನೆಯಲ್ಲಿದ್ದ ವಾಣಿ ವಿಲಾಸ ಸನ್ನಿಧಾನ ಮತ್ತು ಇತರ ರಾಜ ಬಂಧುಗಳನ್ನು ಜಗನ್ಮೋಹನ ಅರಮನೆಗೆ ಕಳುಹಿಸಲಾಯಿತು. ಆಗ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇನ್ನೂ 13 ವರ್ಷದ ಬಾಲಕ.

ಅರಮನೆಗೆ ಬೆಂಕಿ ತಗುಲಿದ ವಿಷಯ ಇಡೀ ಮೈಸೂರಿಗೆ ಹಬ್ಬಿತು. ಸಾಗರದಂತೆ ಸಾವಿರಾರು ಜನರು ಅರಮನೆಯತ್ತ ಧಾವಿಸಿದರು. ಸಿಂಹಾಸನ, ವೈರಮುಡಿ, ಪಟ್ಟದ ಕತ್ತಿ ಮುಂತಾದವುಗಳನ್ನು ಜಗನ್ಮೋಹನ ಅರಮನೆಗೆ ಸಾಗಿಸಲಾಯಿತು. ಅಷ್ಟರಲ್ಲಿಯೇ ಕುದುರೆ ತೊಟ್ಟಿ, ಕನ್ನಡಿ ತೊಟ್ಟಿ, ಸರಸ್ವತಿ ಭಂಡಾರ, ಮದನ ವಿಲಾಸ ತೊಟ್ಟಿ, ಬಾಲಖಾನೆ, ಅಂಬಾ ವಿಲಾಸ, ರಮಾ ವಿಲಾಸ, ಸಜ್ಜೆ ಮುಂತಾದವುಗಳು ಬೆಂಕಿಗೆ ಆಹುತಿಯಾಗಿದ್ದವು.

ಬೆಂಕಿಯ ಜ್ವಾಲೆಯನ್ನೂ ಲೆಕ್ಕಿಸದೆ ಅರಮನೆಯ ಒಳಕ್ಕೆ ನುಗ್ಗಿದ ಸಾಮಾನ್ಯ ಜನರು ಅರಮನೆಯಲ್ಲಿದ್ದ ಬಂಗಾರ ಬೆಳ್ಳಿ ಒಡವೆಗಳು, ಗ್ರಂಥಗಳು, ಮುಖ್ಯ ಪೀಠೋಪಕರಣಗಳು, ಆಭರಣ, ರೇಷ್ಮೆ ವಸ್ತುಗಳು, ಇತರ ಅಮೂಲ್ಯ ವಸ್ತುಗಳನ್ನು ಕೈಯಿಂದ ಕೈಗೆ ದಾಟಿಸುತ್ತಾ ಅರಮನೆಯ ಅಂಗಳದಲ್ಲಿ ರಾಶಿ ಹಾಕಿದರು.

ಒಡವೆ, ವಸ್ತ್ರ, ರಾಜ ಪೋಷಾಕು, ಹಾರ, ತುರಾಯಿ ಎಲ್ಲವೂ ಅಂಗಳದಲ್ಲಿಯೇ ಅನಾಥವಾಗಿ ಬಿದ್ದಿದ್ದವು. ಎರಡು ರಾತ್ರಿ ಎರಡು ಹಗಲು ಈ ಎಲ್ಲ ಬೆಲೆ ಬಾಳುವ ವಸ್ತುಗಳು ಅರಮನೆಯ ಅಂಗಳದಲ್ಲಿಯೇ ಇದ್ದವು. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಅರಮನೆಯ ಅಂಗಳದಲ್ಲಿ ನಿಂತು ರೋದಿಸಿದರೇ ವಿನಾ ಬೆಲೆ ಬಾಳುವ ವಸ್ತುಗಳನ್ನು ಮುಟ್ಟಲಿಲ್ಲ. ಅರಮನೆಗೆ ಸಂಬಂಧಿಸಿದ ವಸ್ತುಗಳೆಲ್ಲವೂ ತಮ್ಮದೇ ವಸ್ತುಗಳು ಎಂದು ಜೋಪಾನವಾಗಿ ಕಾಯ್ದರು.

ಬಾಲಕ ನಾಲ್ವಡಿ ಕೃಷ್ಣರಾಜ ಅರಸರು ಕೂಡ ತಾಯಿಯರಿಗೆ, ಸಹೋದರಿಯರಿಗೆ ಸಮಾಧಾನ ಹೇಳಿದರು. `ಅಳಬೇಡಿ ಸುಮ್ಮನಿರಿ. ಬಂದುದನ್ನು ಎದುರಿಸೋಣ~ ಎಂದು ಸಮಾಧಾನ ಹೇಳಿದರು. ಮೈಸೂರಿನ ಜನರೂ ಕೂಡ ಇಡೀ ರಾಜ ಬಂಧುಗಳಿಗೆಲ್ಲಾ ಸಾಂತ್ವನ ಹೇಳಿದರು.

ಒಂದು ಅರಮನೆ ಸುಟ್ಟು ಹೋದರೇನಂತೆ, ಇಂತಹ ನೂರು ಅರಮನೆಯನ್ನು ಕಟ್ಟುವ ಭರವಸೆಯನ್ನು ನೀಡಿದರು. ಅಷ್ಟರಲ್ಲಾಗಲೇ ಮೈಸೂರಿನ ಸಾಮಾನ್ಯ ಜನರು ರಾಜ ಪರಿವಾರದವರ ಹೃದಯದಲ್ಲಿ ಹೊಸ ಅರಮನೆಯನ್ನು ಕಟ್ಟಿಯಾಗಿತ್ತು.

ಸುಮಾರು 95 ವರ್ಷಗಳಷ್ಟು ಹಳೆಯದಾಗಿದ್ದ, ಸಂಪೂರ್ಣ ಮರದಿಂದಲೇ ನಿರ್ಮಾಣವಾಗಿದ್ದ ಅರಮನೆ ರಾಜ ಪರಿವಾರದವರು, ಮೈಸೂರಿನ ಸಾಮಾನ್ಯ ಜನರ ಎದುರೇ ಸುಟ್ಟು ಭಸ್ಮವಾದರೂ ರಾಜಮಾತೆಯ ಹೃದಯದಲ್ಲಿ ಅಧೈರ್ಯದ ಮಾತೇ ಇರಲಿಲ್ಲ. ದಳ್ಳುರಿಯ ಆತಂಕಕ್ಕೆ ಅವರು ಅಂಜಲಿಲ್ಲ. ಸುಟ್ಟು ಹೋದ ಅರಮನೆಯ ಬುನಾದಿಯ ಮೇಲೆ ಮತ್ತೊಂದು ಭವ್ಯ ಅರಮನೆ ಎದ್ದು ನಿಂತಿತು.
 
1897 ಫೆಬ್ರುವರಿ 28ಕ್ಕೆ ಹಳೆ ಅರಮನೆ ಬೆಂಕಿಗೆ ಆಹುತಿಯಾದರೆ, 1897ರ ಅಕ್ಟೋಬರ್ ತಿಂಗಳಿನಲ್ಲಿಯೇ ಹೊಸ ಅರಮನೆಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಿತು. 15 ವರ್ಷಗಳ ಶ್ರಮದ ನಂತರ 1912ರಲ್ಲಿ ಹೊಸ ಅರಮನೆ ಪೂರ್ಣಗೊಂಡಿತು. ನಲವತ್ತೊಂದು ಲಕ್ಷ ನಲವತ್ತೇಳು ಸಾವಿರ ಒಂಬೈನೂರ ಹದಿಮೂರು ರೂಪಾಯಿಗಳಲ್ಲಿ ಹೊಸ ಅರಮನೆ ಸಿದ್ಧವಾಯಿತು.

ಹಳೆಯ ಅರಮನೆ ಅಗ್ನಿಗೆ ಆಹುತಿಯಾಗಿದ್ದರಿಂದ ಹೊಸ ಅರಮನೆ ಕಟ್ಟುವಾಗ ಅಗ್ನಿ ನಿರೋಧಕ ಸಾಧನ ವಿಧಾನಗಳನ್ನು ಅಳವಡಿಸಿ ಕಟ್ಟಲಾಯಿತು. ಇಡೀ ವಿಶ್ವದಲ್ಲಿಯೇ ಇಂತಹ ಮತ್ತೊಂದು ಅರಮನೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಹೊಸ ಅರಮನೆ ಶೋಭಿಸತೊಡಗಿತು. ಕಳೆದ ಒಂದು ಶತಮಾನದಿಂದ ಈ ಅರಮನೆ ಜಗದ್ವಿಖ್ಯಾತವಾಗಿ ಕಂಗೊಳಿಸುತ್ತಿದೆ.

ಮೈಸೂರು ಜನರ ಔದಾರ್ಯವೆಂದರೆ ಹಾಗೆ. ಮಾನವೀಯತೆ ಎಂದರೆ ಹಾಗೆ. ಬೂದಿಯಲ್ಲಿಯೂ ಅರಮನೆ ಕಟ್ಟಬಲ್ಲವರು ಅವರು. ನೋವಿಗೆ ಮಿಡಿಯಬಲ್ಲರು. ಅಂಗೈಯಲ್ಲಿಯೇ ಅರಮನೆ ಕಟ್ಟಿ ನೂರು ವರ್ಷ ಅದನ್ನು ಜತನದಿಂದ ಕಾಪಾಡಬಲ್ಲರು. ಅದಕ್ಕೇ ಮೈಸೂರೆಂದರೆ ಎಲ್ಲರಿಗೂ ಇಷ್ಟ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT