ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ:ಪರಿಸ್ಥಿತಿ ಉದ್ವಿಗ್ನ, ಲಾಠಿ ಪ್ರಹಾರ, ಅಶ್ರುವಾಯು

Last Updated 11 ಮೇ 2012, 19:30 IST
ಅಕ್ಷರ ಗಾತ್ರ

ಮೈಸೂರು: ನಗರದ ಹೃದಯ ಭಾಗವಾದ ಮೈಸೂರು-ಬೆಂಗಳೂರು ರಸ್ತೆಯ ಬಾಬಾ ಸಾಹೇಬ್ ಅಂಬೇಡ್ಕರ್ (ಎಫ್‌ಟಿಎಸ್) ವೃತ್ತದಲ್ಲಿರುವ ಡಾ.  ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಶುಕ್ರವಾರ ಬೆಳಗಿನ ಜಾವ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಅಂಬೇಡ್ಕರ್ ಭಾವಚಿತ್ರವುಳ್ಳ     ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದವರ ವಿರುದ್ಧ ಆಕ್ರೋಶಗೊಂಡ ದಲಿತ ಸಮುದಾಯದ ಕಾರ್ಯಕರ್ತರು, ಗಾಂಧಿನಗರದ ನಿವಾಸಿಗಳು ವೃತ್ತದ ನಾಲ್ಕೂ ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ, ರಸ್ತೆ ತಡೆ ನಡೆಸಿದರು. ಇದರಿಂದಾಗಿ ಮೈಸೂರು-ಬೆಂಗಳೂರು ನಡುವೆ ಕೆಲಹೊತ್ತು ಬಸ್ ಸಂಚಾರ ಸ್ಥಗಿತಗೊಂಡಿತ್ತು.

ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರತಿಭಟನೆಗೆ ಮುಂದಾದಾಗ ಪರಿಸ್ಥಿತಿ ನಿಯಂತ್ರಣ ತಪ್ಪಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು, ಆರೋಪಿಗಳನ್ನು ಗಡಿಪಾರು ಮಾಡಬೇಕು.

ಮೈಸೂರು ಮಹಾನಗರ ಪಾಲಿಕೆ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ರೂ 18 ಲಕ್ಷ  ಮೀಸಲಿಟ್ಟಿದೆ. ಆ ಹಣ ಬಳಸಿಕೊಂಡು ಕೂಡಲೇ ಶಾಶ್ವತವಾದ ಪ್ರತಿಮೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು, ಮೇಯರ್ ಎಂ.ಸಿ.ರಾಜೇಶ್ವರಿ ಪುಟ್ಟಸ್ವಾಮಿ, ಮಾಜಿ ಮೇಯರ್ ಪುರುಷೋತ್ತಮ್ ಅವರು ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು.
 
ಆದರೆ, ಅದಕ್ಕೆ ಪ್ರತಿಭಟನಾಕಾರರು ಮನ್ನಣೆ ನೀಡಲಿಲ್ಲ. ಕಿಡಿಗೇಡಿಗಳು ಯಾರೇ ಆಗಿದ್ದರೂ ಬಂಧಿಸುವುದಾಗಿ ಪೊಲೀಸ್ ಆಯುಕ್ತ ಕೆ.ಎಲ್.ಸುಧೀರ್ ಭರವಸೆ ನೀಡಿದರೂ ಪ್ರತಿಭಟನಾಕಾರರು ಸೊಪ್ಪು ಹಾಕದೇ ಆರೋಪಿಗಳನ್ನು ಬಂಧಿಸುವಂತೆ ಪಟ್ಟು ಹಿಡಿದರು.

ರಸ್ತೆ ತಡೆಯಿಂದಾಗಿ ಎರಡು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯವಸ್ಥಗೊಂಡಿತು.ಪೊಲೀಸರು ಪ್ರತಿಭಟನಾನಿರತರನ್ನು ಸ್ಥಳದಿಂದ ಚದುರಿಸಲು ಮುಂದಾದಾಗ ಉದ್ರಿಕ್ತ ಸಾರ್ವಜನಿಕರು ಹಾಗೂ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದಾಗಿ 15 ಮಂದಿ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಹಾಗೂ ರಬ್ಬರ್ ಬುಲೆಟ್ ಬಳಸಿ ಜನರನ್ನು ಚದುರಿಸಿದರು.

`ಘಟನೆಗೆ ಸಂಬಂಧಿಸಿದಂತೆ ವೈಜ್ಞಾನಿಕ ತನಿಖೆಗೆ ಆದೇಶ ನೀಡಲಾಗುವುದು. 24 ಗಂಟೆಯೂ ಕೆಲಸ ನಿರ್ವಹಿಸುವ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. 24 ಗಂಟೆಯೂ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು~ ಎಂದು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಬಸವರಾಜ ಮಾಲಗತ್ತಿ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.

ಘಟನೆಯಲ್ಲಿ ಬಸವರಾಜ ಮಾಲಗತ್ತಿ ಅವರ ಕಾಲಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಹಾಗೂ ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ತಕ್ಷಣವೇ ಕಿಡಿಗೇಡಿಗಳನ್ನು ಪತ್ತೆ ಹಚ್ಚುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕೆಎಸ್‌ಆರ್‌ಪಿ ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT