ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಬಿಜೆಪಿ ‘ಪ್ರತಾಪ’

Last Updated 16 ಮೇ 2014, 19:30 IST
ಅಕ್ಷರ ಗಾತ್ರ

ಮೈಸೂರು: ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರು– ಕೊಡಗು ಮತ್ತು ನೆರೆಯ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸೋಲಿನ ಬಿಸಿ ತಟ್ಟಿದೆ. ಮೈಸೂರಿ­­ನಲ್ಲಂತೂ ಇದು ಸಿದ್ದ­ರಾಮಯ್ಯ ಪಾಲಿಗೆ ಅರಗಿಸಿಕೊಳ್ಳ­ಲಾಗದ ಮುಖಭಂಗ.

40 ವರ್ಷ ರಾಜಕೀಯದ ಅನುಭವವುಳ್ಳ ಕಾಂಗ್ರೆಸ್‌ನ ಅಡಗೂರು ಎಚ್‌. ವಿಶ್ವನಾಥ್‌ ಎದುರು ಚೊಚ್ಚಲ ಸ್ಪರ್ಧೆಯಲ್ಲೇ ಪತ್ರಕರ್ತ, ಬಿಜೆಪಿಯ ಪ್ರತಾಪ್‌ ಸಿಂಹ 31,608 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಎದುರಾಳಿಗಳಷ್ಟೇ ಅಲ್ಲದೆ  ಬಿಜೆ­ಪಿಯ ಪಾಳೆಯದಲ್ಲೂ ಅಚ್ಚರಿ ಮೂಡಿಸಿದ್ದಾರೆ!

ವಿಶ್ವನಾಥ್‌ ಎದುರು ಹೊಸ ಮುಖ ಪ್ರತಾಪ್‌ ಸಿಂಹ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದಾಗ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿತ್ತು. ಕುರುಬ ಸಮುದಾ­ಯದ ವಿಜಯಶಂಕರ್‌ ಅವರಿಗೆ ಟಿಕೆಟ್‌ ತಪ್ಪಿಸಿ, ರಾಜ­ಕೀಯಕ್ಕೆ ಹೊಸಬರಾದ  ಪ್ರತಾಪ ಅವರನ್ನು ಸ್ಪರ್ಧೆಗೆ ಇಳಿಸಿ­ದ್ದರಿಂದ ಗೆಲುವಿನ ಹಾದಿ ಸುಗಮ­ವಾ­ಯಿತು ಎಂದು ಕಾಂಗ್ರೆಸ್‌ ಸಹ ನಿರಾಳ­ವಾಗಿತ್ತು.

ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಶಾಸಕ ಅಪ್ಪಚ್ಚು ರಂಜನ್‌ ಅವರು ಮಾಧ್ಯಮದವರ ಬಳಿ ‘ಪ್ರತಾಪ್‌ ಸಿಂಹ ಯಾರು?’ ಎಂದು ಪ್ರಶ್ನಿಸಿದ್ದರು. ಬಿಜೆಪಿ­ಯೊ­ಳಗಿನ ಇಂಥ ಅಸಮಾಧಾನದ ಹೊಗೆ ವರದಾನವಾ­ಗಲಿದೆ ಎಂದು ಕಾಂಗ್ರೆಸ್‌ ನಂಬಿತ್ತು. ಆದರೆ, ಆ ಲೆಕ್ಕಾ­ಚಾರ ತಲೆಕೆಳಗು ಮಾಡಿ ಪ್ರತಾಪ್‌ ಗೆದ್ದಿದ್ದಾರೆ.

ದಡ ಮುಟ್ಟಿಸಿದ ಒಕ್ಕಲಿಗ ಮತಗಳು: ಆರಂಭ­ದಲ್ಲಿ ಎದುರಾಳಿ ಮತ್ತು ತಮ್ಮ ಪಕ್ಷದವರಿಗೂ ‘ದುರ್ಬಲ’­ರಂತೆ ಕಂಡ ಪ್ರತಾಪ್‌, ದಿನಗಳು ಉರುಳು­ತ್ತಿದ್ದಂತೆಯೇ ಪಕ್ಷದ ಆಂತರಿಕ ಭಿನ್ನಾ­ಭಿಪ್ರಾಯ ನಿವಾರಿಸಿಕೊಂಡು, ಎದು­ರಾಳಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮನ್ನು ನಿರ್ಲಕ್ಷ್ಯ ಮಾಡು­­ವಂತಿಲ್ಲ ಎಂಬ ಸಂದೇಶ ರವಾನಿ­ಸಿದರು. ಆದರೆ, ಅವ­ರನ್ನು ‘ಗೆಲುವಿನ ದಡ ಮುಟ್ಟಿಸಿದ್ದು ಮೋದಿ ಅಲೆಯ ಜತೆ ಒಕ್ಕ­ಲಿಗ ಸಮುದಾಯದ ಮತಗಳು’ ಎಂದು ಹೇಳಲಾಗುತ್ತಿದೆ.

ಭಾಗವಹಿಸಿದ ಸಭೆ–ಸಮಾರಂಭ­ಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಜೆಡಿಎಸ್ ವರಿಷ್ಠ ಹಾಗೂ ಒಕ್ಕಲಿಗ ಸಮು­ದಾ­ಯದ ನಾಯಕ ಎಚ್.ಡಿ. ದೇವೇ­ಗೌಡ ಮತ್ತು ಅವರ ಕುಟುಂಬದ ಸದ­ಸ್ಯರನ್ನು ಲೇವಡಿ ಮಾಡುವ ಪರಿ­ಪಾಠ­­ದಿಂದ ಒಕ್ಕಲಿಗ ಸಮುದಾ­ಯದಲ್ಲಿ ವಿಶ್ವ­ನಾಥ್  ಬಗ್ಗೆ ಆಕ್ರೋಶ ಮಡುಗ­ಟ್ಟಿತ್ತು.

ಈ ಚುನಾವಣೆಯಲ್ಲಿ ಜೆಡಿಎಸ್ ಅಧಿಕೃತ ಅಭ್ಯರ್ಥಿ (ಚಂದ್ರಶೇಖರಯ್ಯ) ಒಕ್ಕಲಿಗರಾದರೂ, ‘ಗೆಲ್ಲುವ ಅಭ್ಯರ್ಥಿ’­ಯಲ್ಲ ಎಂಬ ಕಾರಣದಿಂದ ಈ ಸಮು­ದಾಯ ವಿಶ್ವನಾಥ್ ಅವರನ್ನು ಹಣಿ­ಯಲು ಕಣದಲ್ಲಿದ್ದ ತಮ್ಮದೇ ಸಮು­ದಾ­ಯದ ಬಿಜೆಪಿಯ ಪ್ರತಾಪ್‌ ಸಿಂಹ ಅವರನ್ನು ಬಳಸಿಕೊಂಡಿತು. ಇದಕ್ಕೆ ಜೆಡಿಎಸ್ ನಾಯಕಗಣವೂ ಪರೋಕ್ಷ­ವಾಗಿ ‘ಒತ್ತಾಸೆ’ಯಾಗಿ ನಿಂತಿತ್ತು ಎಂಬ ಊಹಾ­ಪೋಹವನ್ನು ಪ್ರತಾಪ್‌ ಗೆಲುವು ಖಚಿತಪಡಿಸಿದಂತಿದೆ.

ಹಾಸನ
ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರು ಕಾಂಗ್ರೆಸ್‌ ಪ್ರತಿಸ್ಪರ್ಧಿ ಎ. ಮಂಜು (ಕಾಂಗ್ರೆಸ್‌) ಅವರನ್ನು 1,00,462 ಮತಗಳ ಅಂತರದಿಂದ ಸೋಲಿಸಿ, ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಇದರೊಂದಿಗೆ ದೇವೇಗೌಡರು ಹಾಸನ­ದಲ್ಲಿ ಐದು ಗೆಲುವು ಹಾಗೂ ಒಮ್ಮೆ ಸೋಲು ದಾಖಲಿಸಿದಂತಾಗಿದೆ.

ಇಲ್ಲಿ ಸಿದ್ದರಾಮಯ್ಯ ಮತ್ತು ದೇವೇಗೌಡರ ನಡು­ವಿನ ಹೋರಾಟ ಎಂದೇ ಈ ಚುನಾವಣೆಯನ್ನು ನೋಡ­ಲಾ­ಗುತ್ತಿತ್ತು.  ‘ನಮ್ಮ ಮುಂದಿನ ಗುರಿ ಹಾಸನ’ ಎಂದು ಸಿದ್ದರಾಮಯ್ಯ ಗುಡುಗಿದ್ದರು. ಹಾಗಾಗಿ ಇದು ಪ್ರತಿಷ್ಠಿತ ಕಣವಾಗಿ ಗಮನ ಸೆಳೆದಿತ್ತು. ಆದರೆ ಗೆಲುವಿನ ಅಂತರ ಕಡಿಮೆಯಾಗಿದೆ. ಕಳೆದ ಚುನಾವಣೆಯಲ್ಲಿ ಗೌಡರು ಗೆದ್ದಿದ್ದು 3 ಲಕ್ಷ ಮತಗಳಿಂದ.

ಚಾಮರಾಜನಗರ
ಚಾಮರಾಜನಗರ  ಕ್ಷೇತ್ರ ಮತ್ತೆ ‘ಕೈ’ ವಶವಾಗಿದೆ. ಕಾಂಗ್ರೆಸ್‌ನ ಆರ್‌. ಧ್ರುವನಾರಾಯಣ ಅವರು ಬಿಜೆಪಿಯ ಎ.ಆರ್‌. ಕೃಷ್ಣಮೂರ್ತಿ ವಿರುದ್ಧ 1,41,182 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಸಂಸದರ ನಿಧಿಯಡಿ ಲಭಿಸಿದ ಅನುದಾನವನ್ನು ಸಮರ್ಥ­ವಾಗಿ ಬಳಕೆ ಮಾಡಿಕೊಂಡ ಹೆಗ್ಗಳಿಕೆ ಧ್ರುವನಾರಾಯಣ ಅವರದ್ದು.
ತಳಮಟ್ಟದ ಕಾರ್ಯ­ಕರ್ತ­ರಿಂದ ಹಿಡಿದು ಎಲ್ಲ ವರ್ಗದ ಜನರೊಂದಿಗೆ ಸಾಮರಸ್ಯ ಕಾಯ್ದುಕೊಂಡಿದ್ದು ಅವರ ಗೆಲುವಿಗೆ ಸಹಕಾರಿಯಾಯಿತು. ಹಾಗಾಗಿ, ಕೃಷ್ಣಮೂರ್ತಿ ಅವರ ಬೆನ್ನಿಗಿದ್ದ ‘ಅನುಕಂಪ’ದ ಅಸ್ತ್ರ ಕೂಡ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT