ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಮೈರಾ ಬಿಜಿನೆಸ್ ಸ್ಕೂಲ್

Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಸಾಂಸ್ಕೃತಿಕ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರು, ಶೈಕ್ಷಣಿಕ ಕ್ಷೇತ್ರದಲ್ಲೂ ಹೆಜ್ಜೆ ಗುರುತು ಮೂಡಿಸಿದೆ. 96 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಮೈಸೂರು ವಿಶ್ವವಿದ್ಯಾಲಯ, ಮಹಾರಾಜ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು, ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ  ಹೆಸರು ಮಾಡಿವೆ. ಇದೀಗ ಇದೇ ಪರಂಪರೆಯ ಹೊಸ ಸೇರ್ಪಡೆಯಾಗಿ ಅರಮನೆ ನಗರದಲ್ಲಿ ಮೈರಾ ಬಿಜಿನೆಸ್ ಸ್ಕೂಲ್ ಆರಂಭಗೊಳ್ಳಲಿದೆ. 

`ಮೈರಾ' ಬಿ-ಸ್ಕೂಲ್ ಎರಡು ವರ್ಷಗಳ ಹಿಂದೆ ಆರಂಭಗೊಂಡ ಮೈಸೂರು ರಾಯಲ್ ಅಕಾಡೆಮಿಯ (ಮೈರಾ) ಕನಸಿನ ಕೂಸು. ಅಂತರ ರಾಷ್ಟ್ರೀಯ ಗುಣಮಟ್ಟದ `ಆಡಳಿತ ನಿರ್ವಹಣೆ' ಸಂಸ್ಥೆಯನ್ನು ದೇಶದಲ್ಲಿ ಸ್ಥಾಪಿಸುವುದು ಅಕಾಡೆಮಿಯ ಬಯಕೆಯಾಗಿತ್ತು. ನವೆಂಬರ್ ನಾಲ್ಕರಂದು ಈ ಗುರಿ ಈಡೇರಿದೆ, ಮೈರಾ ಇದರ ಸಾಕಾರ ರೂಪ.' ಎನ್ನುತ್ತಾರೆ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಶಾಲಿನಿ ಅರಸ್.

`ದೇಶದಲ್ಲಿ ಸುಮಾರು 4000 `ಬಿ-ಸ್ಕೂಲ್'ಗಳಿವೆ. ಆದರೆ ಶಿಕ್ಷಣದ ಗುಣಮಟ್ಟ ಉತ್ತಮವಾಗಿಲ್ಲ. ಹೆಚ್ಚಿನ ಕಾಲೇಜುಗಳು ಉತ್ತಮ ಬೋಧಕರ ಕೊರತೆ ಎದುರಿಸುತ್ತಿವೆ. ಗುಣಮಟ್ಟದ ಬೋಧಕ ವರ್ಗ ನಮ್ಮ ಸಂಸ್ಥೆಯ ವೈಶಿಷ್ಟ್ಯ' ಎಂದು ಹೇಳುವ ಶಾಲಿನಿ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ 35 ವರ್ಷಗಳ ಸುದೀರ್ಘ ಅನುಭವ ಇದೆ.

ಭಾರತ ಹೊರತಾಗಿ ಅಮೆರಿಕ, ಯೂರೋಪ್ ಸೇರಿದಂತೆ ಇತರ ದೇಶಗಳ ಪ್ರಮುಖ ಬಿಜಿನೆಸ್ ಸ್ಕೂಲ್‌ಗಳ ಉಪನ್ಯಾಸಕರು, ಪ್ರಾಧ್ಯಾಪಕರು ಮೈರಾ ಸಂಸ್ಥೆಯ ಬೋಧಕ ವೃಂದದಲ್ಲಿ ಇದ್ದಾರೆ.    

`ಇತರ ಬಿ-ಸ್ಕೂಲ್‌ಗಳಿಗಿಂತ ನಮ್ಮ ಸಂಸ್ಥೆ ವಿಭಿನ್ನವಾಗಿರಲಿದೆ. ಸಂಶೋಧನೆ ಆಧಾರಿತ ಅಧ್ಯಯನ ನಮ್ಮ ವಿಶೇಷ' ಎಂದು ಹೇಳುತ್ತಾರೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ಅಭಿನಂದ ಸರ್ಕಾರ್.

ಪಠ್ಯಕ್ಕೆ ಮಾತ್ರ ಜೋತು ಬೀಳದೆ, ಆಡಳಿತ ನಿರ್ವಹಣೆಗೆ ಸಂಬಂಧಿಸಿದ ಪ್ರತಿ ವಿಚಾರವನ್ನೂ ವಿದ್ಯಾರ್ಥಿಗಳಿಗೆ ಪ್ರಯೋಗಗಳ ಮೂಲಕ ವಿವರಿಸುವ ಮತ್ತು ವೃತ್ತಿಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಮಾರ್ಗದರ್ಶನ ನೀಡುವ ಭರವಸೆಯನ್ನು ಅವರು ನೀಡುತ್ತಾರೆ.

`ಕಾರ್ಪೊರೇಟ್ ಕಂಪೆನಿಗಳು ಉತ್ತಮ ಸಂವಹನ ಕಲೆಯನ್ನು ಹೊಂದಿರುವ, ಕಚೇರಿ ವಾತಾವರಣದಲ್ಲಿ ಚೆನ್ನಾಗಿ ಕೆಲಸ ಮಾಡುವ ಹಾಗೂ ಕಂಪೆನಿಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಸಾಮರ್ಥ್ಯವಿರುವ ಅಭ್ಯರ್ಥಿಗಳ ಹುಡುಕಾಟದಲ್ಲಿ ಇರುತ್ತವೆ. ಅಂಥವರಿಗೆ ಹೆಚ್ಚು ವೇತನ ನೀಡಲು ಕಂಪೆನಿಗಳು ಸಿದ್ಧವಿರುತ್ತವೆ. ಅಂಥ ಅಭ್ಯರ್ಥಿಗಳನ್ನು ಸೃಷ್ಟಿಸುವುದು ನಮ್ಮ ಗುರಿ' ಎಂದು ಸಂಸ್ಥೆಯ ಉದ್ದೇಶವನ್ನು ವಿವರಿಸುತ್ತಾರೆ ಸರ್ಕಾರ್.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಅನುಮೋದನೆ ಪಡೆದಿರುವ ಈ ಸಂಸ್ಥೆಯಲ್ಲಿ ಎರಡು ಕೋರ್ಸ್‌ಗಳು ಲಭ್ಯವಿವೆ. ಪದವಿ ವಿದ್ಯಾರ್ಥಿಗಳಿಗಾಗಿ ಎರಡು ವರ್ಷಗಳ ಪಿಜಿಡಿಎಂ (ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್) ಹಾಗೂ ವೃತ್ತಿನಿರತ ಅನುಭವಿಗಳಿಗಾಗಿ ಒಂದು ವರ್ಷದ ಪಿಜಿಪಿಎಕ್ಸ್. (ಪೋಸ್ಟ್ ಗ್ರಾಜುಯೇಟ್ ಪ್ರೋಗ್ರಾಂ ಫಾರ್ ಎಕ್ಸಿಕ್ಯುಟಿವ್ಸ್)

(ಎರಡು ವರ್ಷದ ಕೋರ್ಸ್‌ಗೆ ವರ್ಷಕ್ಕೆ ತಲಾ ಐದು ಲಕ್ಷ ರೂಪಾಯಿ ಹಾಗೂ ಒಂದು ವರ್ಷದ ಕೋರ್ಸ್‌ಗೆ 10 ಲಕ್ಷ ರೂಪಾಯಿ ಶುಲ್ಕ ಇದೆ.)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT