ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಿಂದ ವಿಮಾನ ಹಾರಾಟ ಮತ್ತೆ ಆರಂಭ

Last Updated 14 ಜನವರಿ 2013, 19:59 IST
ಅಕ್ಷರ ಗಾತ್ರ

ಮೈಸೂರು: ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ವಿಮಾನ ಹಾರಾಟ ಸೋಮವಾರದಿಂದ ಮತ್ತೆ ಆರಂಭವಾಯಿತು.
ನಗರದ ಹೊರವಲಯದ ಮಂಡಕಳ್ಳಿ ಬಳಿ ಇರುವ ಮೈಸೂರು ವಿಮಾನ ನಿಲ್ದಾಣಕ್ಕೆ ಸ್ಪೈಸ್ ಜೆಟ್ ಸಂಸ್ಥೆಯ ಮೊದಲ ವಿಮಾನ ಮಧ್ಯಾಹ್ನ ಬಂದಿಳಿಯಿತು. ಚೆನ್ನೈನಿಂದ ಪ್ರಯಾಣ ಬೆಳೆಸಿ ಮೈಸೂರಿಗೆ ಬಂದಿಳಿದ 17 ಮಂದಿ ಪ್ರಯಾಣಿಕರಿಗೆ ಸ್ಪೈಸ್ ಜೆಟ್ ಮತ್ತು ಜಸ್ಟ್ ಡು ಇಟ್ ಮೈಸೂರು ಸಂಸ್ಥೆಯ ಪ್ರತಿನಿಧಿಗಳು ಗುಲಾಬಿ ಹೂ, ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಳ್ಳು-ಬೆಲ್ಲ ಕೊಟ್ಟು ಸ್ವಾಗತಿಸಿ, ಬರಮಾಡಿಕೊಂಡರು.

ಸ್ಪೈಸ್ ಜೆಟ್ ಸಂಸ್ಥೆಯ ಉಪಾಧ್ಯಕ್ಷ ಕಮಲ್ ಇಂಗ್ರಾನಿ ಅವರು ಪ್ರಯಾಣಿಕರೊಂದಿಗೆ ವಿಮಾನದಲ್ಲಿ ಮೈಸೂರಿಗೆ ಬಂದರು. ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಬರಬೇಕಿದ್ದ ವಿಮಾನ ಹತ್ತು ನಿಮಿಷ ಮುಂಚಿತವಾಗಿಯೇ ನಿಲ್ದಾಣಕ್ಕೆ ಬಂದಿಳಿಯಿತು. ಮಧ್ಯಾಹ್ನ 1.30ಕ್ಕೆ ಬೆಂಗಳೂರು ಮೂಲಕ ಚೆನ್ನೈಗೆ ಹೊರಟ ವಿಮಾನದಲ್ಲಿ 22 ಮಂದಿ ಮೈಸೂರಿನಿಂದ ಪ್ರಯಾಣ ಬೆಳೆಸಿದರು. ವಿಮಾನ ಹಾರಾಟ ಸ್ಥಗಿತಗೊಂಡಿದ್ದರಿಂದ ಇಷ್ಟು ದಿನ ಬಣಗುಡುತ್ತಿದ್ದ ಮೈಸೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಕಂಡುಬಂದರು. ತಳಿರು-ತೋರಣಗಳಿಂದ ಸಿಂಗರಿಸಲಾಗಿದ್ದ ವಿಮಾನ ನಿಲ್ದಾಣದಲ್ಲಿ ಹಬ್ಬದ ವಾತಾವರಣ ಕಂಡುಬಂತು.

ವಾರದಲ್ಲಿ ಮೂರು ದಿನ ಹಾರಾಟ: ಸೋಮವಾರ, ಬುಧವಾರ ಮತ್ತು ಶುಕ್ರವಾರ ಮೈಸೂರಿನಿಂದ ಸ್ಪೈಸ್ ಜೆಟ್ ವಿಮಾನ ಹೊರಡಲಿದೆ. ಮಧ್ಯಾಹ್ನ 1.30ಕ್ಕೆ ಹೊರಡುವ ವಿಮಾನ ಬೆಂಗಳೂರಿನ ಮೂಲಕ ಚೆನ್ನೈ, ನವದೆಹಲಿ ಮತ್ತು ಮುಂಬೈಗೆ ಸಂಪರ್ಕ ಕಲ್ಪಿಸಲಿದೆ. ಆನ್‌ಲೈನ್, ಏಜೆನ್ಸಿಗಳ ಮುಖೇನ ಮೈಸೂರಿನಿಂದ ಹೊರಡುವ ಸ್ಪೈಸ್ ಜೆಟ್ ವಿಮಾನಕ್ಕೆ ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು. ಮೈಸೂರು ವಿಮಾನ ನಿಲ್ದಾಣದಲ್ಲೂ ಸ್ಪೈಸ್ ಜೆಟ್ ಸಂಸ್ಥೆ ಟಿಕೆಟ್ ಕೌಂಟರ್‌ಗಳನ್ನು ತೆರೆದಿದ್ದು, ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕೌಂಟರ್ ತೆರೆದಿರುತ್ತದೆ.

ಮೈಸೂರಿನಿಂದ ಬೆಂಗಳೂರು ಮತ್ತು ಚೆನ್ನೈಗೆ ಹೋಗುವ ವಿಮಾನಕ್ಕೆ ಟಿಕೆಟ್‌ಗೆರೂ2,825, ಮುಂಬೈಗೆರೂ3,014 ಹಾಗೂ ನವದೆಹಲಿಗೆರೂ8,303 ದರ ನಿಗದಿ ಮಾಡಲಾಗಿದೆ. ಟಿಕೆಟ್ ಮುಂಗಡವಾಗಿ ಕಾದಿರಿಸಿದರೆ ಈ ದರ ಇನ್ನೂ ಕಡಿಮೆಯಾಗಲಿದೆ ಎಂದು ಸ್ಪೈಸ್ ಜೆಟ್ ಸಂಸ್ಥೆ ಅಧಿಕಾರಿ ತಿಳಿಸಿದರು.

ಸ್ಪೈಸ್ ಜೆಟ್ ಸಂಸ್ಥೆಯ ವಿಮಾನ ಸುರಕ್ಷತಾ ಅಧಿಕಾರಿ ಕೆ.ರವೀಂದ್ರನ್ ಮಾತನಾಡಿ, 'ವಿಮಾನ ನಿಲ್ದಾಣದ ಸುರಕ್ಷತೆ ಬಗ್ಗೆ ಈಗಾಗಲೇ ಪರಿಶೀಲನೆ ಮಾಡಿದ್ದೇನೆ. ಏನಾದರೂ ಬದಲಾವಣೆ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು' ಎಂದು ತಿಳಿಸಿದರು.

`ಸ್ಪೈಸ್ ಜೆಟ್ ಸಂಸ್ಥೆ ವಾರದಲ್ಲಿ ಮೂರು ದಿನ ವಿಮಾನ ಸೇವೆ ಆರಂಭಿಸಿದೆ. ಪ್ರತಿದಿನ ಹಾಗೂ ಬೆಳಗಿನ ವೇಳೆ ವಿಮಾನ ಹಾರಾಟ ಆರಂಭಿಸಬೇಕೆಂದು ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ಬೇಡಿಕೆ ಇದೆ. ಪ್ರತಿ ದಿನ ವಿಮಾನ ಸೇವೆ ಆರಂಭಿಸುವ ಕುರಿತು ಸ್ಪೈಸ್ ಜೆಟ್ ಸಂಸ್ಥೆ ಪರಿಶೀಲನೆ ನಡೆಸಲಿದೆ' ಎಂದು ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT