ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಇನ್ಫೋಸಿಸ್ ಆವರಣದಲ್ಲಿ ಚಿರತೆ ಪ್ರತ್ಯಕ್ಷ

Last Updated 9 ಮಾರ್ಚ್ 2011, 18:30 IST
ಅಕ್ಷರ ಗಾತ್ರ

ಮೈಸೂರು: ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ಇನ್ಫೋಸಿಸ್ ಆವರಣದಲ್ಲಿ ಬುಧವಾರ ಮುಂಜಾನೆ ನಾಲ್ಕು ವರ್ಷ ಪ್ರಾಯದ ಚಿರತೆ ಕಾಣಿಸಿಕೊಂಡಿತು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸತತ ಪ್ರಯತ್ನದಿಂದ ಕೊನೆಗೂ ಚಿರತೆ ಬಲೆಗೆ ಬಿತ್ತು.

ಇನ್ಫೋಸಿಸ್ ಉತ್ತರ ಭಾಗದ ದ್ವಾರದಲ್ಲಿ ಮುಂಜಾನೆ 2.30ರ ಸುಮಾರಿನಲ್ಲಿ ಭದ್ರತಾ ಸಿಬ್ಬಂದಿಯ ಕಣ್ಣಿಗೆ ಚಿರತೆ ಕಾಣಿಸಿಕೊಂಡು ನಾಪತ್ತೆಯಾಯಿತು. ಇನ್ಫೋಸಿಸ್‌ಗೆ ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದ್ದು, ಚಿರತೆಯ ಇರುವಿಕೆಯನ್ನು ಪತ್ತೆ ಮಾಡಲು ಸುಮಾರು 3 ಗಂಟೆಗಳ ಕಾಲ ಪ್ರಯತ್ನಪಟ್ಟರೂ ಅದು ಸಾಧ್ಯವಾಗಲಿಲ್ಲ.

ಬೆಳಿಗ್ಗೆ 8 ಗಂಟೆ ಸುಮಾರಿನಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಶೆಡ್‌ಗಳ ಬಳಿ ಚಿರತೆ ಪ್ರತ್ಯಕ್ಷವಾಯಿತು. ಚಿರತೆ ಇದ್ದ ಸ್ಥಳದಲ್ಲಿ ಯಾರೂ ಸುಳಿಯದಂತೆ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಎಚ್ಚರ ವಹಿಸಿದ್ದರು.

ವಿಷಯ ತಿಳಿದ ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಿನಾಥ್, ಚಾಮರಾಜೇಂದ್ರ ಮೃಗಾಲಯ ಸುರೇಶ್‌ಕುಮಾರ್, ಪಶು ವೈದ್ಯಾಧಿಕಾರಿ ಡಾ.ನಾಗರಾಜ್ ಸ್ಥಳಕ್ಕೆ ಆಗಮಿಸಿದರು.

ಬೆಳಿಗ್ಗೆ 8.45ರ ಸುಮಾರಿನಲ್ಲಿ ದೂರದಲ್ಲಿದ್ದ ಚಿರತೆಯ ಛಾಯಾಚಿತ್ರವನ್ನು ತೆಗೆಯಲು ಹೋದ ಇನ್ಫೋಸಿಸ್‌ನ ಛಾಯಾಚಿತ್ರಗಾಹಕ ಪ್ರಶಾಂತ್ ಮತ್ತು ಪತ್ರಿಕಾ ಛಾಯಾಗ್ರಾಹಕರ ಮೇಲೆ ದಾಳಿ ನಡೆಸಿತು. ಇದರಿಂದ ಪ್ರಶಾಂತ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಅರಿವಳಿಕೆ ಮದ್ದು ಇದ್ದ ಗುಂಡನ್ನು ಹಾರಿಸಿದಾಗ ಚಿರತೆ ಪ್ರಜ್ಞೆತಪ್ಪಿ  ಬಿತ್ತು. ಕೂಡಲೇ ಅದನ್ನು ಬಲೆಯಲ್ಲಿ ಹಾಕಿಕೊಂಡು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂತರಸಂತೆ ಪೂಜಾ ಕಲ್ಲು ಬಳಿ ಮಧ್ಯಾಹ್ನದ ವೇಳೆಗೆ ಬಿಡಲಾಯಿತು.

ಇನ್ಫೋಸಿಸ್‌ನ ಸುತ್ತ 11 ಅಡಿ ಎತ್ತರದ ಕಾಂಪೌಂಡ್ ನಿರ್ಮಿಸಿ ಸೋಲಾರ್ ತಂತಿಯನ್ನು ಅಳವಡಿಸಲಾಗಿದೆ. ಆದರೆ ಇಷ್ಟು ಎತ್ತರದ ಗೋಡೆಯನ್ನು ಚಿರತೆ ಹಾರಿ ಒಳಪ್ರವೇಶಿಸಿದ್ದು ಹೇಗೆ ಎಂಬುದು ಸ್ಥಳದಲ್ಲಿ ಚರ್ಚೆಯ ವಿಷಯವಾಗಿತ್ತು. ಚಿರತೆ ಪ್ರತ್ಯಕ್ಷವಾಗಿದ್ದ ಸುದ್ದಿ ತಿಳಿದ ಇನ್ಫೋಸಿಸ್ ಸಿಬ್ಬಂದಿಯಲ್ಲಿ ಆತಂಕ ಮನೆಮಾಡಿತ್ತು. ಆದರೆ ಚಿರತೆ ಬಲೆಗೆ ಬಿದ್ದಾಗ ಎಲ್ಲರೂ ನಿಟ್ಟುಸಿರು ಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT