ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಟಿಕೆಟ್‌ ಯಾರಿಗೆ?

ಬಿಜೆಪಿ ಎರಡನೇ ಪಟ್ಟಿ ದೆಹಲಿಗೆ: ತೇಜಸ್ವಿನಿ ಕಮಲದ ತೆಕ್ಕೆಗೆ
Last Updated 12 ಮಾರ್ಚ್ 2014, 20:16 IST
ಅಕ್ಷರ ಗಾತ್ರ

ಬೆಂಗಳೂರು: ಬಾಕಿ ಇದ್ದ ಎಂಟು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು­ಗಳನ್ನು ಬಿಜೆಪಿಯ ಪ್ರಮುಖರ ಸಭೆ ಬುಧವಾರ  ಅಂತಿಮಗೊಳಿಸಿ, ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಿದೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಯಡಿಯೂರಪ್ಪ, ಅನಂತ­ಕುಮಾರ್‌, ಆರ್‌.ಅಶೋಕ ಮತ್ತಿತ­ರರು ಪಟ್ಟಿ ಸಮೇತ ದೆಹಲಿಗೆ ತೆರಳಿದರು.

ಪಕ್ಷದ ಕೇಂದ್ರ ಚುನಾವಣಾ ಸಮಿತಿ ದೆಹಲಿಯಲ್ಲಿ ಗುರುವಾರ ಸಭೆ ಸೇರಲಿದ್ದು, ಅದು ಒಪ್ಪಿಗೆ ಕೊಟ್ಟ ನಂತರ ಪಟ್ಟಿ ಹೊರಬೀಳಲಿದೆ ಎಂದು ಜೋಶಿ ಸುದ್ದಿಗಾರರಿಗೆ ತಿಳಿಸಿದರು.

ಉಡುಪಿ– ಚಿಕ್ಕಮಗಳೂರು ಕ್ಷೇತ್ರದಿಂದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಕಣಕ್ಕೆ ಇಳಿಸಲು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ. ಈ ಕ್ಷೇತ್ರದ ಟಿಕೆಟ್‌ಗಾಗಿ ಪಟ್ಟು­­ಹಿಡಿದಿದ್ದ ಪತ್ರಕರ್ತ ಪ್ರತಾಪ್‌ ಸಿಂಹ ಅವರಿಗೆ ಮೈಸೂರಿನ
ಟಿಕೆಟ್‌ ನೀಡಲು ಶಿಫಾರಸು ಮಾಡಲಾಗಿದೆ.

ಪಕ್ಷದ ಪ್ರಮುಖರ ಸಭೆಯ ಈ ತೀರ್ಮಾನ ವಿಧಾನ ಪರಿಷತ್‌ ಸದಸ್ಯ ಸಿ.ಎಚ್‌.ವಿಜಯಶಂಕರ್‌ ಅವರ ಅಸಮಾಧಾನಕ್ಕೂ ಕಾರಣವಾಗಿದೆ. ವಿಜಯಶಂಕರ್‌ ಅವರಿಗೆ ಹಾಸನದಿಂದ ಸ್ಪರ್ಧಿಸಲು ಸಲಹೆ ಮಾಡಿದ್ದು, ಅದನ್ನು ಅವರು ತಿರಸ್ಕರಿಸಿದ್ದಾರೆ ಎಂದು ಗೊತ್ತಾಗಿದೆ.

ಪ್ರತಾಪ್‌ ಸಿಂಹಗೆ ಟಿಕೆಟ್‌ ನೀಡಿದರೆ ತಾವು ಬಂಡೇಳುವುದಾಗಿಯೂ ಎಚ್ಚರಿಸಿದ್ದಾರೆ. ಹಾಸನದಿಂದ ಯಾವುದೇ ಕಾರಣಕ್ಕೆ ಸ್ಪರ್ಧಿಸುವುದಿಲ್ಲ. ಕೊಟ್ಟರೆ ಮೈಸೂರಿನ ಟಿಕೆಟ್‌ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ತುಮಕೂರು ಕ್ಷೇತ್ರದಿಂದ ಯಡಿ­ಯೂರಪ್ಪ ಬೆಂಬಲಿಗರಾದ ಜಿ.ಎಸ್.­ಬಸವರಾಜು ಅವರಿಗೇ ಟಿಕೆಟ್‌ ನೀಡುವ ಸಾಧ್ಯತೆ ಇದೆ. ಅವರ ವಿರುದ್ಧದ ಅಮಾನತು ಆದೇಶವನ್ನು ಹಿಂದಕ್ಕೆ ಪಡೆದ ಬಳಿಕ ಬಿ–ಫಾರಂ ನೀಡಲಾಗುತ್ತದೆ ಎಂದು ಗೊತ್ತಾಗಿದೆ.

ಬೀದರ್‌ ಕ್ಷೇತ್ರದಿಂದ ಗುರುಪಾದಪ್ಪ ನಾಗಮಾರಪಲ್ಲಿ ಅವರ ಪುತ್ರ ಸೂರ್ಯ­ಕಾಂತ ನಾಗಮಾರಪಲ್ಲಿ ಅವರನ್ನು ಕಣಕ್ಕೆ ಇಳಿಸಲು ತೀರ್ಮಾನಿ­ಸಲಾಗಿದೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಯ ಮಾಜಿ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಅವರನ್ನು ಮಂಡ್ಯದಿಂದ ಕಣಕ್ಕೆ ಇಳಿಸಲು  ನಿರ್ಧರಿಸಲಾಗಿದೆ.

ಕೋಲಾರದ ಟಿಕೆಟ್‌ ಡಿ.ಎಸ್.ವೀರಯ್ಯ ಅವರಿಗೆ ಕೈತಪ್ಪುವುದು ಬಹುತೇಕ ಖಚಿತ. ಅವರ ಬದಲಿಗೆ, ಬೇತಮಂಗಲದ ಎಂ.ನಾರಾಯಣಸ್ವಾಮಿ ಅವರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ.

ಶ್ರೀರಾಮುಲು ನೇತೃತ್ವದ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಬೇಕೆ ಅಥವಾ ಎನ್‌ಡಿಎ ಅಂಗಪಕ್ಷವಾಗಿ ಅಂಗೀಕರಿಸಬೇಕೆ ಎನ್ನುವ ವಿಚಾರದಲ್ಲಿ ಗೊಂದಲ ಮುಂದುವರಿದಿದೆ. ದೆಹಲಿಯಲ್ಲಿ ಈ ಗೊಂದಲ ಬಗೆಹರಿಯಲಿದ್ದು, ಅದರ ನಂತರವೇ ಬಳ್ಳಾರಿ ಟಿಕೆಟ್‌ ಯಾರಿಗೆ ಎನ್ನುವುದು ಗೊತ್ತಾಗಲಿದೆ. ಮೂಲಗಳ ಪ್ರಕಾರ ಶ್ರೀರಾಮುಲು ಅವರಿಗೇ ಟಿಕೆಟ್‌ ನೀಡುವುದು ಬಹುತೇಕ ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT