ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮನಃ ಪರಿವರ್ತನ ದಸರಾ

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ನಡೆಯುತ್ತಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಗರಿಕರು ಸಂಭ್ರಮಿಸುವುದು ಮಾಮೂಲು. ಆದರೆ ಈ ಬಾರಿ ದಸರಾವನ್ನು ಕೇಂದ್ರ ಕಾರಾಗೃಹಕ್ಕೂ ವಿಸ್ತರಿಸಲಾಗಿದೆ. ಮಹಿಳಾ ಕೈದಿಗಳಿಗೆ ಬಾಗಿನ ಅರ್ಪಿಸಿ, ಗಣ್ಯರು ಕೈದಿಗಳೊಂದಿಗೆ ಮಂಗಳವಾರ ಸಹ ಭೋಜನ ಮಾಡಿ `ಮನ ಪರಿವರ್ತನಾ ದಸರಾ~ಕ್ಕೆ ಚಾಲನೆ ನೀಡಿದರು.

ಕಾರಾಗೃಹದ ಒಳಗೆ ಹಬ್ಬದ ಸಂಭ್ರಮ ಮನೆ ಮಾಡಿತ್ತು. ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಮಹಿಳಾ ಕೈದಿಗಳು ಬಿಡಿಸಿದ್ದ ಬಣ್ಣದ ರಂಗೋಲಿಗಳು ಕಣ್ಮನ ಸೆಳೆದವು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಮತ್ತು ಗಣ್ಯರ ಸಮ್ಮುಖದಲ್ಲಿ ಐವರು ಮುತ್ತೈದೆಯರು ಮಹಿಳಾ ಕೈದಿಗಳಿಗೆ ಬಾಗಿನ ಅರ್ಪಿಸಿದರು. ಅರಿಶಿನ-ಕುಂಕುಮ, ಹೂವು ಹಾಗೂ ಚಾಮುಂಡಿ ಬೆಟ್ಟದ ಪ್ರಸಾದವನ್ನು ನೀಡಿದರು.

ನಂತರ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಮದಾಸ್ `ಜೀವನದಲ್ಲಿ ದುಡುಕಿದ್ದರಿಂದ ಕೈದಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ. ದಸರಾ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಅದರಲ್ಲಿ ಎಲ್ಲರು ಭಾಗವಹಿಸಿ ಸಂಭ್ರಮಿಸುತ್ತಿದ್ದಾರೆ. ಆದರೆ ಕೈದಿಗಳು ಇವೆಲ್ಲದ್ದರಿಂದ ವಂಚಿತರಾಗಿ ಕಾರಾಗೃಹದಲ್ಲಿ ಕೊರಗುತ್ತಿದ್ದಾರೆ. ಕೈದಿಗಳು ಸಹ ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಮನ ಪರಿವರ್ತನಾ ದಸರಾ ಆಚರಿಸಲಾಗುತ್ತಿದೆ~ ಎಂದು ಹೇಳಿದರು.

`ಜೀವನದಲ್ಲಿ ಮತ್ತೆ ತಪ್ಪು ಮಾಡದಿರಲು ಕೈದಿಗಳು ಸಂಕಲ್ಪ ತೊಡಬೇಕು. ವರ್ಷ ಕಳೆದಂತೆ ಕಾರಾಗೃಹಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಬೇಕು. ಜೀವಾವಧಿ ಶಿಕ್ಷೆಗೆ ಗುರಿಯಾದವರ ಸನ್ನಡತೆ ಆಧರಿಸಿ ಬಿಡುಗಡೆಗೆ ರಾಜ್ಯಪಾಲರ ಗಮನಕ್ಕೆ ತರುತ್ತೇನೆ. ಕಾರಾಗೃಹದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗುವುದು. 10 ಕಂಪ್ಯೂಟರ್‌ಗಳನ್ನು ಕೊಡಿಸಿ ತರಬೇತಿ ಶಿಕ್ಷಕನನ್ನು ನೇಮಿಸಲಾಗುವುದು. ಕೈದಿಗಳು ಕೂತಲ್ಲೇ  ಬಾಹ್ಯ ಪ್ರಪಂಚದ ಆಗು-ಹೋಗುಗಳ ಬಗ್ಗೆ ತಿಳಿಯಬಹುದು~ ಎಂದು ಹೇಳಿದರು.

ಕಾರಾಗೃಹದ ಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳಿಗೆ ದಸರಾ ಪ್ರಯುಕ್ತ ವಿವಿಧ ಕ್ರೀಡೆ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಗಣ್ಯರು ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರಾಮದಾಸ್ ಮತ್ತು ಗಣ್ಯರು ಕೈದಿಗಳೊಂದಿಗೆ ಸಹಪಂಕ್ತಿ ಭೋಜನ ಮಾಡಿದರು.

ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್, ಪೊಲೀಸ್ ಕಮಿಷನರ್ ಸುನಿಲ್ ಅಗರವಾಲ್, ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ನಗರಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್, ಕೇಂದ್ರ ಕಾರಾಗೃಹ ಮುಖ್ಯ ಸೂಪರಿಂಟೆಂಡೆಂಟ್ ಜಯಸಿಂಹ, ಸೂಪರಿಂಟೆಂಡೆಂಟ್ ಮಲ್ಲೇಶ್ ಉಪಸ್ಥಿತರಿದ್ದರು.

401ನೇ ದಸರಾ ಮಹೋತ್ಸವದ ಸವಿನೆನಪು
ಚಿನ್ನ, ಬೆಳ್ಳಿ ನಾಣ್ಯ ಬಿಡುಗಡೆ
ಪ್ರಜಾವಾಣಿ ವಾರ್ತೆ
ಮೈಸೂರು:
ನಾಡಹಬ್ಬ ದಸರಾ ಮಹೋತ್ಸವದ 401ನೇ ವರ್ಷಾಚರಣೆ ಅಂಗವಾಗಿ ಜಿಲ್ಲಾಡಳಿತ ಹೊರತಂದಿರುವ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಇಲ್ಲಿ ಬಿಡುಗಡೆ ಮಾಡಿದರು.

`10 ಗ್ರಾಂ ಚಿನ್ನದ ನಾಣ್ಯಕ್ಕೆ ರೂ. 29,980 (ಒಂದಕ್ಕೆ), 25 ಗ್ರಾಂ ಬೆಳ್ಳಿಯ ನಾಣ್ಯಕ್ಕೆ ರೂ. 1,750, 50 ಗ್ರಾಂಗೆ ರೂ. 3,500 ಹಾಗೂ 100 ಗ್ರಾಂ ನಾಣ್ಯಕ್ಕೆ ರೂ. 7,000 ದರ ನಿಗದಿ ಪಡಿಸಲಾಗಿದೆ. ಈ ನಾಣ್ಯಗಳು ಮೈಸೂರು ಮಹಾನಗರ ಪಾಲಿಕೆಯ ಸ್ಟೇಟ್ ಬ್ಯಾಂಕ್ ಮೈಸೂರು ಶಾಖೆಯಲ್ಲಿ ಮಾರಾಟಕ್ಕೆ ಲಭ್ಯ ಇವೆ~ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

`ದಸರಾ ಮಹೋತ್ಸವದ 401ನೇ ವರ್ಷ ಹಾಗೂ ಮೈಸೂರು ಅರಮನೆ 100 ರ ಹೊಸ್ತಿಲಿನಲ್ಲಿ ಇರುವುದರಿಂದ ಈ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದೆ~ ಎಂದರು.

`ಅ. 6ರಂದು ನಡೆಯಲಿರುವ ಜಂಬೂ ಸವಾರಿಯಲ್ಲಿ 30 ಜಿಲ್ಲೆಗಳ ಸ್ತಬ್ಧಚಿತ್ರ ಹಾಗೂ ಪ್ರವಾಸೋದ್ಯಮ, ವಾರ್ತಾ ಇಲಾಖೆ, ಕಾವೇರಿ ನೀರಾವರಿ ನಿಗಮ ಮತ್ತು ಸ್ತಬ್ಧಚಿತ್ರ ಉಪಸಮಿತಿ ತಯಾರಿಸಿರುವ ಸ್ತಬ್ಧಚಿತ್ರಗಳಿಗೂ ಅವಕಾಶ ಕಲ್ಪಿಸಲಾಗಿದೆ. ಆಯಾ ಜಿಲ್ಲೆಗಳ ಸಾಹಿತ್ಯ, ಸಂಸ್ಕೃತಿ ಹಾಗೂ ಪ್ರಸಿದ್ಧ ಕವಿ, ಸಾಹಿತಿಗಳ ವ್ಯಕ್ತಿತ್ವ ಸಾರುವ ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸಲಾಗಿದೆ~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT