ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಮೃಗಾಲಯಕ್ಕೆ ಅನಕೊಂಡ

Last Updated 23 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ವಿಶ್ವದಲ್ಲಿರುವ ಹೆಬ್ಬಾವುಗಳಲ್ಲಿಯೇ ಅತ್ಯಂತ ದೊಡ್ಡದಾದ ಅನಕೊಂಡಗಳು ಮಂಗಳವಾರ ತಡರಾತ್ರಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಆಗಮಿಸಿವೆ.

ದೇಶದಲ್ಲಿಯೇ ಅನಕೊಂಡ ಹೆಬ್ಬಾವುಗಳನ್ನು ಪಾಲನೆ ಮಾಡುತ್ತಿರುವ ಮೊಟ್ಟಮೊದಲ ಮೃಗಾಲಯ ಇದಾಗಿದ್ದು, ಸದ್ಯ ಐದು ಹಸಿರು ಅನಕೊಂಡಗಳು ಬಂದಿವೆ. ಶ್ರೀಲಂಕಾದ ರಾಷ್ಟ್ರೀಯ ಮೃಗಾಲಯದಿಂದ ಮಂಗಳವಾರ ಬೆಳಿಗ್ಗೆ 8.50ಕ್ಕೆ ಶ್ರೀಲಂಕಾ ಏರ್‌ಲೈನ್ಸ್ ಮೂಲಕ ಚೆನ್ನೈಗೆ ಈ ಅನಕೊಂಡ ತರಲಾಯಿತು.

ಜಯಚಾಮರಾಜೇಂದ್ರ ಮೃಗಾಲಯದ ಪ್ರಾಣಿಪಾಲಕರು ಮತ್ತು ಪಶುವೈದ್ಯರ ತಂಡದ ಸುಪರ್ದಿಯಲ್ಲಿ ರಸ್ತೆ ಮೂಲಕವಾಗಿ ಚೆನ್ನೈನಿಂದ ಮೈಸೂರಿಗೆ ಸುರಕ್ಷಿತವಾಗಿ ತರಲಾಯಿತು.

ಪ್ರತಿಯೊಂದು ಅನಕೊಂಡ ಮರಿ 3-5 ಅಡಿ ಉದ್ದವಿದ್ದು, 400 ರಿಂದ 1500 ಗ್ರಾಮ್ ತೂಕ ಇವೆ. ಇವು 30 ಅಡಿ ಉದ್ದ ಮತ್ತು 227 ಕೆಜಿ ತೂಕದವರೆಗೆ ಬೆಳೆಯಬಲ್ಲವು. ಹೆಬ್ಬಾವಿನ ಜಾತಿಗೆ ಇವು ಸೇರಿರುವ ಈ ಹಾವುಗಳು ವಿಷಕಾರಿಯಲ್ಲ. ಆದರೆ ತಮ್ಮ ಬೇಟೆಯ ದೇಹಕ್ಕೆ ಬಿಗಿಯಾಗಿ ಸುತ್ತಿಕೊಂಡು ಉಸಿರುಗಟ್ಟಿಸಿ ಸಾಯಿಸುತ್ತವೆ.

ಹೆಣ್ಣು ಅನಕೊಂಡಗಳು ಗಾತ್ರದಲ್ಲಿ ಗಂಡು ಅನಕೊಂಡಗಿಂತಲೂ ದೊಡ್ಡದಾಗಿರುತ್ತವೆ. ಇವುಗಳು ಬಹುತೇಕ ಜಲಚರಗಳಾಗಿದ್ದು, ನಿಧಾನವಾಗಿ ಹರಿಯುವ ನದಿಗಳು, ಹೊಂಡಗಳು ಮತ್ತು ಸರೋವರಗಳಲ್ಲಿ ವಾಸಿಸುತ್ತವೆ. ಬಹಳಷ್ಟು ಪ್ರಮಾಣದ ಮಳೆ ಸುರಿಯುವ ಅಮೆಜಾನ್ ಮತ್ತು ಒರಿನೊಕೊ ಕಣಿವೆಗಳಲ್ಲಿ ಇವು ಹೆಚ್ಚು.

ನೀರಿನಲ್ಲಿಯೇ ವಾಸಿಸಲು ಇಷ್ಟಪಟ್ಟರೂ, ಆಹಾರ ಬೇಟೆಯಾಡಲು ಮಾತ್ರ ದಡಕ್ಕೆ ಬರುತ್ತವೆ. ರಾತ್ರಿ ವೇಳೆಯಲ್ಲಿಯೇ ಬೇಟೆಯಾಡುವ ಅನಕೊಂಡ ನೋಡಲು ದೊಡ್ಡ ಆಕಾರವಾದರೂ ಚುರುಕಾಗಿ ಚಲಿಸುತ್ತವೆ.

ಜಲಮೂಲಗಳಿಗೆ ನೀರು ಕುಡಿಯಲು ಬರುವ ಪ್ರಾಣಿಗಳೇ ಇವುಗಳಿಗೆ ಆಹಾರ. ಚೂಪಾದ ಹಲ್ಲುಗಳು ಮತ್ತು ಚುರುಕಾದ ದೇಹ ಚಲನೆಯು ಬೇಟೆಗೆ ಸಹಾಯ ಮಾಡುತ್ತವೆ. ಕಾಡುಹಂದಿ, ಜಿಂಕೆ, ಚಿರತೆ, ಪಕ್ಷಿಗಳು, ಆಮೆ ಮತ್ತಿತರ ಪ್ರಾಣಿಗಳು ಇದಕ್ಕೆ ಆಹಾರ.

ಹೆಣ್ಣು ಅನಕೊಂಡಗಳು ತತ್ತಿಗಳನ್ನು ಇಟ್ಟು ಕಾವು ಕೊಡುತ್ತವೆ. ಒಂದು ಸಲಕ್ಕೆ 24-36 ಮರಿಗಳು ಜನಿಸುತ್ತವೆ. ಮರಿ ಅನಕೊಂಡಗಳು ಸುಮಾರು ಎರಡು ಅಡಿ ಇರುತ್ತದೆ. ಹುಟ್ಟಿದ ಕೂಡಲೇ ನೀರಿನಲ್ಲಿ ಈಜಲು, ಬೇಟೆಯಾಡಲು ಸಾಧ್ಯ. ಇವು ಹತ್ತರಿಂದ ಇಪ್ಪತ್ತು ವರ್ಷಗಳವರೆಗೆ ಬದುಕುತ್ತವೆ. ಈಗಾಗಲೇ ಇರುವ ಹೆಬ್ಬಾವು ವಾಸಸ್ಥಾನದ ಸಮೀಪದಲ್ಲಿಯೇ ಹಸಿರು ಅನಕೊಂಡಗಳನ್ನು ಸದ್ಯಕ್ಕೆ ಪ್ರದರ್ಶನಕ್ಕೆ ಇಡಲಾಗಿದೆ.  ಈ ಮೃಗಾಲಯದಲ್ಲಿ ಅನಕೊಂಡಗಳಿಗಾಗಿಯೇ ಒಂಬತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ 800 ಚದರಡಿ ಜಾಗದಲ್ಲಿ ವಾಸಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. ಈ ವರ್ಷಾಂತ್ಯದ ವೇಳೆಗೆ ಕಾಮಗಾರಿಯು ಪೂರ್ಣಗೊಳ್ಳಲಿದೆ. ಗಾಜಿನ ಗೋಡೆಗಳನ್ನು ಸುತ್ತಲೂ ಅಳವಡಿಸಲಾಗುತ್ತಿದೆ. ನೀರಿನ ಹೊಂಡವನ್ನು ನಿರ್ಮಿಸಿ ಅನಕೊಂಡಗಳಿಗೆ ಸಹಜವಾದ ವಾತಾವರಣ ನಿರ್ಮಿಸಲಾಗುತ್ತಿದೆ.

ಮೃಗಾಲಯದಲ್ಲಿ ಈಗಾಗಲೇ ಕಾಳಿಂಗ, ನಾಗರಹಾವು, ಸ್ಟ್ರೈಪಡ್ ಕೀಲ್ ಬ್ಯಾಕ್, ಮೂಷಿಕ ಹಾವು, ಇಂಡಿಯನ್ ಸ್ಯಾಂಡ್ ಬೋವಾ, ರಫ್ ಸ್ಕೇಲ್ಡ್ ಸ್ಯಾಂಡ್ ಬೋವಾ, ರ‌್ಯಾಟಿಕ್ಯುಲೇಟೆಡ್ ಪೈಥಾನ್, ರಾಕ್ ಪೈಥಾನ್, ರಸೆಲ್ ವೈಪರ್‌ಗಳು ಇವೆ ಎಂದು ಮೈಸೂರಿನ ಮೃಗಾಲಯದ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT