ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ರಸ್ತೆ- ಕಾರ್ಡ್ ರಸ್ತೆ ಜಂಕ್ಷನ್

Last Updated 2 ಫೆಬ್ರುವರಿ 2011, 20:10 IST
ಅಕ್ಷರ ಗಾತ್ರ


ಬೆಂಗಳೂರು: ಮೈಸೂರು ರಸ್ತೆ ಮತ್ತು ಪಶ್ಚಿಮ ಕಾರ್ಡ್ ರಸ್ತೆ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಏಕಮುಖ ಸಂಚಾರದ ವ್ಯವಸ್ಥೆ ಮಾಡುವ ಯೋಜನೆಯೊಂದು ಸದ್ಯದಲ್ಲೇ ಜಾರಿಯಾಗಲಿದೆ.ಈ ಜಂಕ್ಷನ್‌ನಲ್ಲಿಯೇ ‘ನೈಸ್’ ಸಂಸ್ಥೆಯ ಲಿಂಕ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯೊಂದು ನಿರ್ಮಾಣವಾಗುತ್ತಿದ್ದು, ಅದರಿಂದ ಹಲವು ಪ್ರದೇಶಗಳಿಗೆ ಸುಲಭ ಸಂಪರ್ಕ ಸೌಕರ್ಯ ಏರ್ಪಡಲಿದೆ.

ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ಕರ್ನಾಟಕ ವಿದ್ಯುತ್ ಕಾರ್ಖಾನೆಗಳ ಹಿಂದೆ ವೃಷಭಾವತಿ ಕಾಲುವೆ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಮಿಸುತ್ತಿರುವ ಮೇಲ್ಸೇತುವೆಯನ್ನು ಉಪಯೋಗಿಸಿಕೊಂಡು ಈ ಭಾಗದಲ್ಲಿ ಮಹಾ ವೃತ್ತವೊಂದನ್ನು ರಚಿಸುವ ಕಾರ್ಯ ಅಂತಿಮ ಹಂತದಲ್ಲಿದೆ.

ಕಾರ್ಡ್‌ರಸ್ತೆಯಲ್ಲಿ ಬೆಂಗಳೂರು- ಮೈಸೂರು ರೈಲ್ವೆ ಮಾರ್ಗದ ಮೇಲಿನ ಮೇಲು ಸೇತುವೆ ಪಕ್ಕದಿಂದ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಮೈಸೂರು ರಸ್ತೆಯನ್ನು ಸಂಪರ್ಕಿಸುವ ಹಾಗೆ ಹೊಸ ಮೇಲ್ಸೇತುವೆ ನಿರ್ಮಾಣಗೊಳ್ಳುತ್ತಿದೆ.

ಕಾರ್ಡ್ ರಸ್ತೆ ಕಡೆಯಿಂದ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಮೇಲು ಸೇತುವೆ ಕಾಮಗಾರಿ ಮುಕ್ಕಾಲು ಭಾಗ ಮುಗಿದಿದೆ. ಉಳಿದ ಕಾಮಗಾರಿ ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಅದು ಪೂರ್ಣಗೊಂಡ ಬಳಿಕ ಕಾರ್ಡ್ ರಸ್ತೆಯಿಂದ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಕಡೆಗೆ ವಾಹನ ಸಂಚಾರಕ್ಕೆ ಅವಕಾಶ ಕೊಡಲಾಗುವುದು ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಕಾರ್ಡ್ ರಸ್ತೆ ಕಡೆಯಿಂದಲೇ ಮೇಲು ಸೇತುವೆಗೆ ಮತ್ತೊಂದು ರ್ಯಾಂಪ್ ನಿರ್ಮಿಸುವ ಕಾರ್ಯ ನೆನೆಗುದಿಗೆ ಬಿದ್ದಿದೆ. ಉದ್ದೇಶಿತ ರ್ಯಾಂಪ್ ವ್ಯಾಪ್ತಿಯಲ್ಲಿ ವಾಸವಿರುವ ಕುಟುಂಬಗಳು ತಮ್ಮ ಮನೆಗಳನ್ನು ತೆರವು ಮಾಡದೇ, ಕೋರ್ಟ್ ಮೊರೆ ಹೋಗಿವೆ. ಈ ಮನೆಗಳ ತೆರವಿಗೆ ನೀಡಬೇಕಾದ ಪರಿಹಾರದ ಹಣವನ್ನು ಪಾಲಿಕೆಯು ಕೋರ್ಟ್‌ನಲ್ಲಿ ಠೇವಣಿ ಇರಿಸಿದೆ.

ಪ್ರಕರಣ ಇತ್ಯರ್ಥವಾಗಿ, ಮನೆಗಳು ತೆರವು ಆದ ಕೂಡಲೇ ರ್ಯಾಂಪ್ ನಿರ್ಮಾಣ ಕಾಮಗಾರಿ ಆರಂಭಿಸಿ,  ಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಪಾಲಿಕೆ ಮುಖ್ಯ ಎಂಜಿನಿಯರ್ (ಮೂಲಸೌಕರ್ಯ) ಬಿ.ಟಿ.ರಮೇಶ್ ತಿಳಿಸಿದರು.ಈ ಮೇಲು ಸೇತುವೆ ನಿರ್ಮಾಣ ಕಾರ್ಯ ಸಂಪೂರ್ಣಗೊಂಡ ಮೇಲೆ ಏಕಮುಖ ಸಂಚಾರದ ಯೋಜನೆ ಜಾರಿಗೆ ಬರಲಿದೆ.

ವಿಜಯನಗರದ ಕಡೆಯಿಂದ ಬರುವ ವಾಹನಗಳು ಮೇಲುಸೇತುವೆ ಮೂಲಕ ಸಾಗಿ ಮೈಸೂರು ರಸ್ತೆ ಸೇರಿ ಎಡ ಅಥವಾ ಬಲಕ್ಕೆ ಮುಕ್ತವಾಗಿ ಸಂಚರಿಸಬಹುದು. ಸಿರ್ಸಿ ವೃತ್ತದ ಕಡೆಯಿಂದ ಬರುವ ವಾಹನಗಳು ಈಗಿರುವಂತೆ ದೀಪಾಂಜಲಿನಗರ ವೃತ್ತದ ಮೂಲಕವೇ ಕಾರ್ಡ್ ರಸ್ತೆ ಪ್ರವೇಶಿಸಿ ಮುಂದುವರೆಯಬೇಕು.

ಇನ್ನು ಮೈಸೂರು ಕಡೆಯಿಂದ ಬರುವವರು ಕಾರ್ಡ್ ರಸ್ತೆಗೆ ತಿರುಗಿ ಮೇಲು ಸೇತುವೆ ಮೂಲಕ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ತಲುಪಿ ಅಲ್ಲಿಂದ ಸಿರ್ಸಿ ವೃತ್ತದ ಕಡೆಗೆ ಸಾಗಬಹುದು.ಈ ಯೋಜನೆ ಜಾರಿಗೆ ಬರುವ ಹೊತ್ತಿಗೆ ಮೈಸೂರು ರಸ್ತೆಯ ವಿಸ್ತರಣೆ ಕಾರ್ಯವೂ ಬಹುತೇಕ ಮುಕ್ತಾಯವಾಗುವ ಸಾಧ್ಯತೆ ಇದೆ.ರಸ್ತೆ ವಿಸ್ತರಣೆ, ಏಕಮುಖ ಸಂಚಾರ ಯೋಜನೆಯ ಪರಿಣಾಮವಾಗಿ ಮೈಸೂರು ರಸ್ತೆಯ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಪಾಲಿಕೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕಾರ್ಡ್ ರಸ್ತೆ ತನಕ  ‘ನೈಸ್’ ಲಿಂಕ್
ಬೆಂಗಳೂರು: ಮೈಸೂರು ರಸ್ತೆಯ ದೀಪಾಂಜಲಿ ನಗರದ ಬಳಿಯಿಂದಲೇ ‘ನೈಸ್’ ಲಿಂಕ್ ರಸ್ತೆಗೆ ನೇರ ಸಂಪರ್ಕ ಕಲ್ಪಿಸುವ ಒಂದೂವರೆ ಕಿ.ಮೀ. ಉದ್ದದ ಹೊಸ ರಸ್ತೆಯೊಂದು ಸಿದ್ಧವಾಗುತ್ತಿದೆ.

ವರ್ತುಲ ರಸ್ತೆಯಲ್ಲಿ ಪಿಇಎಸ್ ಕಾಲೇಜು ಸಮೀಪದಲ್ಲಿರುವ ನೈಸ್ ಟೋಲ್‌ಗೇಟ್‌ನಿಂದ ಉತ್ತರಾಭಿಮುಖವಾಗಿ ನಿರ್ಮಾಣವಾಗುತ್ತಿರುವ ಈ ರಸ್ತೆಯು ಮೈಸೂರು ರಸ್ತೆಯನ್ನು ಕಾರ್ಡ್ ರಸ್ತೆ ಅಂತ್ಯವಾಗುವಲ್ಲಿ ಕೂಡಿಕೊಳ್ಳಲಿದೆ.ಉದ್ದೇಶಿತ ರಸ್ತೆಯ ನಿರ್ಮಾಣ ಕಾರ್ಯ ಶೇಕಡಾ 70ರಷ್ಟು ಪೂರ್ಣಗೊಂಡಿದೆ. ವರ್ತುಲ ರಸ್ತೆಯಿಂದ ಸ್ವಲ್ಪ ದೂರದಲ್ಲಿ ಜಮೀನಿನ ಸ್ವಾಧೀನಕ್ಕೆ ಸಂಬಂಧಿಸಿದ ವಿಚಾರವು ಕೋರ್ಟ್‌ನಲ್ಲಿ ಇದೆ. ಹೀಗಾಗಿ ಅಲ್ಲಿ ನೂರು ಮೀಟರ್‌ನಷ್ಟು ಉದ್ದದ ರಸ್ತೆಯ ಭಾಗದ ನಿರ್ಮಾಣ ಕಾರ್ಯ  ನೆನೆಗುದಿಗೆ ಬಿದ್ದಿದೆ.

ಇನ್ನು ಮೈಸೂರು ರಸ್ತೆಗೆ ಸನಿಹದಲ್ಲಿ ನೂರಿನ್ನೂರು ಮೀಟರ್‌ನಷ್ಟು ಉದ್ದದ ರಸ್ತೆ ನಿರ್ಮಾಣವಾಗುವ ಕಾರ್ಯ ಬಾಕಿ ಉಳಿದಿದೆ. ಇಲ್ಲಿ ವೃಷಭಾವತಿ ಕಾಲುವೆಗೆ ಸೇತುವೆ ನಿರ್ಮಾಣವಾಗಬೇಕಿದೆ.‘ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾದ ಕೂಡಲೇ ನೆನೆಗುದಿಗೆ ಬಿದ್ದಿರುವ ರಸ್ತೆಯ ಭಾಗವನ್ನು ಎರಡು ವಾರಗಳ ಒಳಗೆ ನಿರ್ಮಿಸಲಾಗುವುದು. ವೃಷಭಾವತಿ ಕಾಲುವೆಗೆ 45ರಿಂದ 60 ದಿನಗಳಲ್ಲಿ ಸೇತುವೆ ನಿರ್ಮಿಸಬಹುದು.

ಒಟ್ಟಾರೆ ಏಪ್ರಿಲ್ ಅಂತ್ಯದೊಳಗೆ ಈ ರಸ್ತೆಯನ್ನು ವಾಹನ ಸಂಚಾರಕ್ಕೆ ಅಣಿಗೊಳಿಸಲಾಗುವುದು’ ಎಂದು ‘ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್’ನ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ನಾಯ್ಕರ್ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT